- Kannada News Photo gallery Cricket photos Court Directs Mumbai Police To Investigate sapna gill Allegations against Prithvi Shaw
ಸೆಲ್ಫಿ ಗಲಾಟೆ: ಪೃಥ್ವಿ ಶಾಗೆ ಎದುರಾಯ್ತು ಸಂಕಷ್ಟ; ತನಿಖೆಗೆ ಕೋರ್ಟ್ ಆದೇಶ..!
Sapna Gill vs Prithvi Shaw: ಐಪಿಎಲ್ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾಗೆ ಸಂಕಷ್ಟ ಎದುರಾಗಿದೆ. ಕಳೆದ ವರ್ಷ ನಡೆದಿದ್ದ ಸೆಲ್ಫಿ ಗಲಾಟೆ ಪ್ರಕರಣಕ್ಕೆ ಕುರಿತಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಮುಂಬೈ ಕೋರ್ಟ್ ಪ್ರಕರಣವನ್ನು ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದೆ.
Updated on: Apr 04, 2024 | 8:28 PM

ಐಪಿಎಲ್ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾಗೆ ಸಂಕಷ್ಟ ಎದುರಾಗಿದೆ. ಕಳೆದ ವರ್ಷ ನಡೆದಿದ್ದ ಸೆಲ್ಫಿ ಗಲಾಟೆ ಪ್ರಕರಣಕ್ಕೆ ಕುರಿತಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಮುಂಬೈ ಕೋರ್ಟ್ ಪ್ರಕರಣವನ್ನು ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದೆ.

ವಾಸ್ತವವಾಗಿ ಕಳೆದ ವರ್ಷ ಪೃಥ್ವಿ ಶಾ ಹಾಗೂ ಭೋಜ್ಪುರಿ ನಟಿ ಸಪ್ನಾ ಗಿಲ್ ಸೆಲ್ಫಿ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಆ ಪ್ರಕರಣದಲ್ಲಿ ಪೃಥ್ವಿ ಶಾ ವಿರುದ್ಧ ಸಪ್ನಾ ಐಪಿಸಿಯ 10 ಕ್ಕೂ ಹೆಚ್ಚು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಇತ್ತ ಪೃಥ್ವಿ ಶಾ ಕೂಡ ಸಪ್ನಾ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದರೆ, ಮತ್ತೊಂದೆಡೆ ಪೃಥ್ವಿ ವಿರುದ್ಧ ಸಪ್ನಾ ಗಿಲ್ ಕಿರುಕುಳದ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ಇದೀಗ ನ್ಯಾಯಾಲಯವು ಪೃಥ್ವಿ ಶಾ ವಿರುದ್ಧ ಸಪ್ನಾ ಗಿಲ್ ಅವರ ಕಿರುಕುಳದ ದೂರಿನ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದೆ.

ಅಲ್ಲದೆ ಜೂನ್ 19 ರೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್‌ಸಿ ಟೇಡೆ ಪೊಲೀಸರಿಗೆ ಸೂಚಿಸಿದ್ದಾರೆ. ಆದಾಗ್ಯೂ, ಪೃಥ್ವಿ ಶಾ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸದ ಪೊಲೀಸರ ವಿರುದ್ಧ ಕ್ರಮಕ್ಕಾಗಿ ಗಿಲ್ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಕಳೆದ ವರ್ಷ, ಅಂದರೆ 2023ರ ಫೆಬ್ರವರಿಯಲ್ಲಿ ಪೃಥ್ವಿ ಶಾ ತನ್ನ ಸ್ನೇಹಿತನೊಂದಿಗೆ ಹೋಟೆಲ್‌ಗೆ ಹೋಗಿದ್ದರು. ಈ ವೇಳೆ ಸಪ್ನಾ ತನ್ನ ಸ್ನೇಹಿತನೊಂದಿಗೆ ಪೃಥ್ವಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಪದೇ ಪದೇ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಸಿಟ್ಟಾದ ಶಾ ಹೋಟೆಲ್ ಮ್ಯಾನೇಜರ್‌ಗೆ ಈ ಇಬ್ಬರನ್ನು ಹೋಟೆಲ್ನಿಂದ ಹೊರ ಹಾಕುವಂತೆ ಹೇಳಿದ್ದಾರೆ.

ಇದರಿಂದ ಬೇಸರಗೊಂಡ ಸಪ್ನಾ ಮತ್ತು ಆಕೆಯ ಸ್ನೇಹಿತ, ಪೃಥ್ವಿ ಹೋಟೆಲ್ನಿಂದ ಹೊರಬರಲು ಸುಮಾರು 25 ನಿಮಿಷಗಳ ಕಾಲ ಕಾದು ಕುಳಿತು, ಪೃಥ್ವಿ ಶಾ ಹೋಟೆಲ್ನಿಂದ ಹೊರಬರುತ್ತಲೆ ಕಾರನ್ನು ಹಿಂಬಾಲಿಸಿ ದಾಳಿಗೆ ಯತ್ನಿಸಿದ್ದರು.

ಸಪ್ನಾ ಕೂಡ ಪೃಥ್ವಿ ಮೇಲೆ ಹಲ್ಲೆಗೆ ಯತ್ನಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಾದ ನಂತರ ಶಾ ಅವರ ಸ್ನೇಹಿತ ಆಶಿಶ್, ಸಪ್ನಾ ಮತ್ತು ಆಕೆಯ ಸ್ನೇಹಿತರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಮರುದಿನ, ಶಾ ಮೇಲೆ ಹಲ್ಲೆ ಮತ್ತು ಬೆದರಿಕೆ ಹಾಕಿರುವ ಆರೋಪದ ಮೇಲೆ ಓಶಿವಾರ ಪೊಲೀಸರು ಸಪ್ನಾ ಅವರನ್ನು ಬಂಧಿಸಿದ್ದರು.

ಆ ನಂತರ ಜಾಮೀನು ಪಡೆದು ಹೊರಬಂದಿದ್ದ ಸಪ್ನಾ, ಪೃಥ್ವಿ ಶಾ ಹಾಗೂ ಅವರ ಸ್ನೇಹಿತ ಆಶಿಶ್ ಯಾದವ್ ಮತ್ತು ಇತರರ ವಿರುದ್ಧ ದೂರು ನೀಡಲು ಅಂಧೇರಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿದ್ದಾಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದರು.




