ಕೆಕೆಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 106 ರನ್‌ಗಳ ಸೋಲಿನ ಬಗ್ಗೆ ಮಾತನಾಡಿರುವ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಬಹಿರಂಗವಾಗಿಯೇ ತಂಡದ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಈ ಬಗ್ಗೆ ತಂಡದ ಮೀಟಿಂಗ್ನಲ್ಲಿ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.
ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಂಟಿಂಗ್, ಪಂದ್ಯದ ಮೊದಲಾರ್ಧದಲ್ಲಿ ತಮ್ಮ ತಂಡದ ಪ್ರದರ್ಶನವನ್ನು ನೋಡಿದ ನಂತರ ನನಗೆ ಮುಜುಗರವಾಯಿತು. ಸದ್ಯಕ್ಕೆ ತಂಡದ ಸೋಲಿನ ಬಗ್ಗೆ ವಿವರವಾಗಿ ಹೇಳುವುದು ಕಷ್ಟ. ಇಷ್ಟು ರನ್ ನೀಡುವುದು ಗ್ರಹಿಕೆಗೆ ನಿಲುಕದ್ದು.
ನಾವು ಈ ಪಂದ್ಯದಲ್ಲಿ ಬರೋಬ್ಬರಿ 17 ವೈಡ್‌ಗಳನ್ನು ಬೌಲ್ ಮಾಡಿದ್ದೇವೆ. ಹೀಗಾಗಿ ನಿಗದಿತ ಸಮಯಕ್ಕೆ ಓವರ್ಗಳನ್ನು ಮುಗಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 20 ಓವರ್ಗಳನ್ನು ಮುಗಿಸಲು ನಾವು ಎರಡು ಗಂಟೆಗಳನ್ನು ತೆಗೆದುಕೊಂಡಿದ್ದೇವೆ. ಪರಿಣಾಮವಾಗಿ, ನಾವು ಮತ್ತೆ ಎರಡು ಓವರ್ ಹಿಂದೆ ಉಳಿದೆವು. ಅಂದರೆ ಕೊನೆಯ ಎರಡು ಓವರ್‌ಗಳಲ್ಲಿ 30 ಯಾರ್ಡ್ ಸರ್ಕಲ್ನಿಂದ ಕೇವಲ ನಾಲ್ಕು ಫೀಲ್ಡರ್‌ಗಳು ಮಾತ್ರ ಫೀಲ್ಡಿಂಗ್ ಮಾಡಬೇಕಾಯಿತು.
ಈ ಪಂದ್ಯದಲ್ಲಿ ಸಾಕಷ್ಟು ತಪ್ಪುಗಳನ್ನು ನಮ್ಮ ತಂಡ ಮಾಡಿದೆ ಅದು ಸ್ವೀಕಾರಾರ್ಹವಲ್ಲ. ನಾವು ಇದನ್ನು ತಂಡದೊಳಗೆ ಚರ್ಚಿಸುತ್ತೇವೆ ಮತ್ತು ಶೀಘ್ರದಲ್ಲೇ ಸುಧಾರಿಸುತ್ತೇವೆ. ಮುಕ್ತವಾಗಿ ತಂಡದೊಂದಿಗೆ ಮಾತನಾಡುವುದು ನಡೆಸುವುದು ಮುಖ್ಯ. ಬೌಲಿಂಗ್, ಫೀಲ್ಡ್ ಪ್ಲೇಸ್‌ಮೆಂಟ್, ಎಲ್ಲದರ ಬಗ್ಗೆ ಚರ್ಚೆ ನಡೆಸಬೇಕಾಗುತ್ತದೆ ಎಂದರು.
ವಾಸ್ತವವಾಗಿ ಆಟಗಾರರ ಪ್ರದರ್ಶನದ ಬಗ್ಗೆ ಪಾಂಟಿಂಗ್ ಗರಂ ಆಗಲು ಕಾರಣಗಳಿವೆ. ಅದರಲ್ಲಿ ಪ್ರಮುಖವಾದದ್ದು, ನಾಯಕ ಪಂತ್ ಡಿಆರ್ಎಸ್ಗಳನ್ನು ಸರಿಯಾಗಿ ಬಳಸದೆ ಇರುವುದು. ಈ ಪಂದ್ಯದಲ್ಲಿ ಪಂತ್, ಸುನಿಲ್ ನರೈನ್ ಹಾಗೂ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಬಗ್ಗೆ ಬೌಲರ್ಗಳು ಡಿಆರ್ಎಸ್ಗಾಗಿ ಮನವಿ ಮಾಡಿದರೂ ಪಂತ್, ಆ ಮನವಿಯನ್ನು ತಿರಸ್ಕರಿಸಿದರು.
ಇದು ತಂಡಕ್ಕೆ ತುಂಬಾ ದುಬಾರಿಯಾಯಿತು. ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಸುನಿಲ್ ನರೈನ್ 85 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಅಯ್ಯರ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು.ಇದಲ್ಲದೆ ಪಂತ್ ಬೌಲರ್ಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಹೀಗಾಗಿ ಕೆಕೆಆರ್ ತಂಡ ಸರಾಗವಾಗಿ ರನ್ ಕಲೆಹಾಕಿತು.
Published On - 5:01 pm, Thu, 4 April 24