
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ನ (Women’s Premier League) 9ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ (RCB vs Gujarat Giants) ತಂಡಗಳು ಮುಖಾಮುಖಿಯಾದ್ದವು. ಬಲಿಷ್ಠ ತಂಡಗಳ ನಡುವಿನ ಈ ಕಾಳಗ ಸಾಕಷ್ಟು ಕುತೂಹಲ ಕೆರಳಿಸಿತ್ತು. ಅಂತಿಮವಾಗಿ ಸ್ಮೃತಿ ಮಂಧಾನ ಪಡೆ, ಗುಜರಾತ್ ತಂಡವನ್ನು ಮಣಿಸಿ ಈ ಆವೃತ್ತಿಯಲ್ಲಿ ಸತತ ಮೂರನೇ ಜಯ ದಾಖಲಿಸಿದೆ. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಆವೃತ್ತಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಆರ್‌ಸಿಬಿ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 183 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಕನ್ನಡತಿ ಶ್ರೇಯಾಂಕ ಪಾಟೀಲ್ ಅವರ ಮಾರಕ ದಾಳಿಗೆ ನಲುಗಿ 150 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಆರ್‌ಸಿಬಿ ಈ ಪಂದ್ಯವನ್ನು 32 ರನ್‌ಗಳಿಂದ ಗೆದ್ದುಕೊಂಡಿತು.
ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಇತ್ತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಕಳಪೆ ಆರಂಭವನ್ನೇ ಪಡೆಯಿತು. ಪವರ್‌ಪ್ಲೇನಲ್ಲಿ, ಆರ್‌ಸಿಬಿ ಕೇವಲ 45 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ರಾಧಾ ಯಾದವ್ ಮತ್ತು ರಿಚಾ ಘೋಷ್ ಐದನೇ ವಿಕೆಟ್‌ಗೆ ಅದ್ಭುತ ಪಾಲುದಾರಿಕೆಯನ್ನು ನಿರ್ಮಿಸಿದರು. ರಾಧಾ ಯಾದವ್ 47 ಎಸೆತಗಳಲ್ಲಿ 66 ರನ್ ಗಳಿಸಿದರೆ, ರಿಚಾ ಘೋಷ್ 28 ಎಸೆತಗಳಲ್ಲಿ 44 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಇಬ್ಬರು ಆಟಗಾರ್ತಿಯರು 66 ಎಸೆತಗಳಲ್ಲಿ ಐದನೇ ವಿಕೆಟ್‌ಗೆ 105 ರನ್ ಸೇರಿಸಿದರು. ನಂತರ ನಾಡಿನ್ ಡಿ ಕ್ಲರ್ಕ್ 12 ಎಸೆತಗಳಲ್ಲಿ 26 ರನ್ ಗಳಿಸಿದರು. ಈ ಮೂವರ ಆಟಗದಿಂದಾಗಿ ತಂಡದ ಸ್ಕೋರ್ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 182 ರನ್‌ಗಳಿಗೆ ತಲುಪಿತು. ಇತ್ತ ಗುಜರಾತ್ ಜೈಂಟ್ಸ್ ಪರ ಸೋಫಿ ಡಿವೈನ್ ಮೂರು ವಿಕೆಟ್ ಪಡೆದರೆ, ಕಾಶ್ವಿ ಗೌತಮ್ ಎರಡು ವಿಕೆಟ್ ಪಡೆದರು. ರೇಣುಕಾ ಸಿಂಗ್ ಮತ್ತು ಜಾರ್ಜಿಯಾ ವೇರ್ಹ್ಯಾಮ್ ಕೂಡ ತಲಾ ಒಂದು ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ತಂಡವು ಉತ್ತಮ ಆರಂಭ ಪಡೆದುಕೊಂಡಿತು. ಆದಾಗ್ಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳು ಎದುರಾಳಿ ತಂಡದ ಬ್ಯಾಟರ್ಗಳನ್ನು ಹೆಚ್ಚು ಹೊತ್ತು ನಿಯಂತ್ರಣದಲ್ಲಿಟ್ಟು ಪಂದ್ಯವನ್ನು ಗುಜರಾತ್‌ನಿಂದ ದೂರ ಸರಿಸಿದರು. ಈ ಅವಧಿಯಲ್ಲಿ ಶ್ರೇಯಾಂಕಾ ಪಾಟೀಲ್ ಅದ್ಭುತ ಬೌಲಿಂಗ್ ಮಾಡಿದರು. ಅವರು 3.5 ಓವರ್‌ಗಳಲ್ಲಿ ಕೇವಲ 23 ರನ್‌ಗಳನ್ನು ಬಿಟ್ಟುಕೊಟ್ಟು 5 ವಿಕೆಟ್‌ಗಳನ್ನು ಪಡೆದರು. ಪರಿಣಾಮವಾಗಿ, ಗುಜರಾತ್ 18.5 ಓವರ್‌ಗಳಲ್ಲಿ 150 ರನ್‌ಗಳಿಗೆ ಆಲೌಟ್ ಆಯಿತು, ಇದರಿಂದಾಗಿ ಆರ್‌ಸಿಬಿ ಪಂದ್ಯವನ್ನು 32 ರನ್‌ಗಳಿಂದ ಗೆದ್ದುಕೊಂಡಿತು.
6 ಬೌಂಡರಿ, 3 ಸಿಕ್ಸರ್, 66 ರನ್..! ಚೊಚ್ಚಲ ಅರ್ಧಶತಕ ಚಚ್ಚಿದ ರಾಧಾ ಯಾದವ್
ಶ್ರೇಯಂಕಾ ಪಾಟೀಲ್ ಜೊತೆಗೆ, ಲಾರೆನ್ ಬೆಲ್ ಮತ್ತೊಮ್ಮೆ ಮಿಂಚಿದರು. ಈ ಪಂದ್ಯದಲ್ಲಿ, ಲಾರೆನ್ ಬೆಲ್ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 23 ರನ್‌ಗಳನ್ನು ಬಿಟ್ಟುಕೊಟ್ಟು ಮೂರು ವಿಕೆಟ್‌ಗಳನ್ನು ಉರುಳಿಸಿದರು. ಅರುಂಧತಿ ರೆಡ್ಡಿ ಮತ್ತು ನಾಡಿನ್ ಡಿ ಕ್ಲರ್ಕ್ ಕೂಡ ತಲಾ ಒಂದು ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಪರಿಣಾಮವಾಗಿ, ಆರ್‌ಸಿಬಿ ಮೂರು ಗೆಲುವುಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 pm, Fri, 16 January 26