
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ( World Test Championship) ಗೆಲ್ಲುವ ಭಾರತದ ಕನಸು ಇನ್ನೂ ನೆರವೇರಿಲ್ಲ. ಈ ವರ್ಷ, ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಆದಾಗ್ಯೂ, ಈ ಆವೃತ್ತಿಯಲ್ಲಿ ಫೈನಲ್ ತಲುಪುವ ಕನಸು ಕೂಡ ಭಗ್ನಗೊಳ್ಳುವ ಅಪಾಯದಲ್ಲಿದೆ. ಮೊದಲ ಮತ್ತು ಎರಡನೇ ಆವೃತ್ತಿಗಳಲ್ಲಿ ಭಾರತ ಫೈನಲ್ ತಲುಪಿತ್ತು. ಆದರೆ ಎರಡೂ ಬಾರಿ ಸೋಲನ್ನು ಎದುರಿಸಬೇಕಾಯಿತು. ಮೂರನೇ ಆವೃತ್ತಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು 3-0 ಅಂತರದಿಂದ ಕಳೆದುಕೊಂಡಿದ್ದ ಟೀಂ ಇಂಡಿಯಾ (Team India) ಫೈನಲ್ ರೇಸ್ನಿಂದ ಹೊರಬಿದಿತ್ತು. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಸೋತಿರುವ ಟೀಂ ಇಂಡಿಯಾ ಈ ಬಾರಿ ಫೈನಲ್ ಆಡಬೇಕೆಂದರೆ ಮುಂದಿನ ಪಂದ್ಯಗಳನ್ನು ಶತಾಯಗತಾಯ ಗೆಲ್ಲಲೇಬೇಕಿದೆ.
ಇಲ್ಲಿಯವರೆಗೆ ಭಾರತ ಆಡಿರುವ ಮೂರು ಸರಣಿಗಳಲ್ಲಿ ಒಟ್ಟು 9 ಪಂದ್ಯಗಳನ್ನು ಆಡಿದೆ. ಇಂಗ್ಲೆಂಡ್ ವಿರುದ್ಧ 5, ವೆಸ್ಟ್ ಇಂಡೀಸ್ ವಿರುದ್ಧ 2 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳನ್ನು ಆಡಿರುವ ಭಾರತ ಈ ಒಂಬತ್ತು ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿದ್ದು, 4 ಪಂದ್ಯಗಳನ್ನು ಸೋತಿದೆ ಮತ್ತು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಹೀಗಾಗಿ ಟೀಂ ಇಂಡಿಯಾದ ಗೆಲುವಿನ ಶೇಕಡಾವಾರು ಕುಸಿದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಆದ್ದರಿಂದ ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯಲು ಟೀಂ ಇಂಡಿಯಾ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬ ಲೆಕ್ಕಾಚಾರ ಇಲ್ಲಿದೆ.
2025-2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಂ ಇಂಡಿಯಾ ಒಟ್ಟು 9 ಪಂದ್ಯಗಳನ್ನು ಆಡಬೇಕಾಗಿದೆ. ಇದರಲ್ಲಿ, ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳನ್ನು ಆಡಲಾಗುತ್ತದೆ. ನಂತರ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಸರಣಿ ಮತ್ತು ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳ ಸರಣಿಯನ್ನು ಆಡಲಿದೆ. ಆದ್ದರಿಂದ, ಉಳಿದ ಒಂಬತ್ತು ಪಂದ್ಯಗಳಲ್ಲಿ ಭಾರತ ತನ್ನ ಗೆಲುವಿನ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ. ಇದಕ್ಕಾಗಿ, ಉಳಿದ 9 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಯಾವುದೇ ಬೆಲೆ ತೆತ್ತಾದರು ಗೆಲ್ಲಬೇಕಾಗುತ್ತದೆ. ಭಾರತ 7 ಪಂದ್ಯಗಳನ್ನು ಗೆದ್ದರೆ, ಅದರ ಗೆಲುವಿನ ಶೇಕಡಾವಾರು 62.66 ಪ್ರತಿಶತವಾಗಲಿದೆ. 8 ಪಂದ್ಯಗಳನ್ನು ಗೆದ್ದರೆ, ಗೆಲುವಿನ ಶೇಕಡಾವಾರು 68.52 ಪ್ರತಿಶತವಾಗಿರುತ್ತದೆ. ಇದರ ಜೊತೆಗೆ ಪಾಯಿಂಟ್ ಪಟ್ಟಿಯಲ್ಲಿ ಭಾರತಕ್ಕಿಂತ ಮೇಲಿರುವ ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ಪ್ರದರ್ಶನವು ಪ್ರಮುಖ ಪಾತ್ರವಹಿಸುತ್ತದೆ.
ಈ ವರ್ಷ ಭಾರತ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಹೊಂದಿಲ್ಲ. ಈಗ ಭಾರತ ತಂಡವು ಮುಂದಿನ ವರ್ಷ ಅಂದರೆ ಆಗಸ್ಟ್ 2026 ರಲ್ಲಿ ನೇರವಾಗಿ ಟೆಸ್ಟ್ ಸರಣಿಯನ್ನು ಆಡಲು ಹೋಗಲಿದೆ. ಈ ಬಾರಿ ಭಾರತ ತಂಡವು ಮೊದಲ ಬಾರಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಭಾರತದ ಮುಂದಿನ ಲೆಕ್ಕಾಚಾರ ಏನೆಂಬುದು ಈ ಪ್ರವಾಸದ ಸಮಯದಲ್ಲಿ ಸ್ಪಷ್ಟವಾಗುತ್ತದೆ. ಈ ಸರಣಿಯಲ್ಲಿ ಭಾರತ ಎರಡೂ ಪಂದ್ಯಗಳನ್ನು ಸೋತರೆ, ಅಂತಿಮ ಸುತ್ತಿನ ಲೆಕ್ಕಾಚಾರ ಫಲಿಸುವುದಿಲ್ಲ. ಮತ್ತೊಂದೆಡೆ, ನ್ಯೂಜಿಲೆಂಡ್‌ಗೆ ಹೋಗಿ ಅವರ ಸ್ವಂತ ನೆಲದಲ್ಲಿ 2-0 ಅಂತರದಿಂದ ಸೋಲಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಆ ನಂತರ ಆಸ್ಟ್ರೇಲಿಯಾ ಭಾರತಕ್ಕೆ ಬರುತ್ತಿದ್ದು ಈ ಸರಣಿಯನ್ನು ಭಾರತ 5-0 ಅಂತರದಿಂದ ಸರಣಿಯನ್ನು ಗೆಲ್ಲಬೇಕು. ಇದು ಕೊಂಚ ಅಸಾಧ್ಯವಾಗಿರುವುದರಿಂದ ಈ ವರ್ಷವೂ ಭಾರತ ಫೈನಲ್ ಆಡುವುದು ಕಷ್ಟವೆಂದು ತೋರುತ್ತಿದೆ.
Published On - 5:02 pm, Thu, 27 November 25