
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಗೆ ಮೂರು ತಂಡಗಳನ್ನು ಸೇರ್ಪಡೆಗೊಳಿಸಲಾಗಿದೆ. ಪ್ರಸ್ತುತ ಇರುವ 9 ತಂಡಗಳೊಂದಿಗೆ ಅಫ್ಘಾನಿಸ್ತಾನ್, ಝಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಕೂಡ 2027 ರಿಂದ ಶುರುವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಕಣಕ್ಕಿಳಿಯಲಿದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.
2025 ರಿಂದ 2027 ರ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಒಟ್ಟು 9 ತಂಡಗಳೇ ಕಣಕ್ಕಿಳಿಯುತ್ತಿದ್ದು, ಇದಾಗ್ಯೂ ಐದನೇ ಸೀಸನ್ಗೆ (WTC 2027) ಮೂರು ತಂಡಗಳನ್ನು ಸೇರ್ಪಡೆಗೊಳಿಸಲು ಐಸಿಸಿ ನಿರ್ಧರಿಸಿದೆ. ಅದರಂತೆ ಅಫ್ಘಾನಿಸ್ತಾನ್, ಐರ್ಲೆಂಡ್ ಹಾಗೂ ಝಿಂಬಾಬ್ವೆ ತಂಡಗಳು ಚೊಚ್ಚಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿ ಆಡಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿ ಎಂಬುದು ಟೆಸ್ಟ್ ತಂಡಗಳ ನಡುವಣ ಐಸಿಸಿ ಕ್ರಿಕೆಟ್ ಪಂದ್ಯಾವಳಿ. 2021 ರಿಂದ ಶುರುವಾದ ಈ ಸರಣಿಯಲ್ಲಿ ಫೈನಲ್ ಪಂದ್ಯದ ಮೂಲಕ ಚಾಂಪಿಯನ್ ತಂಡವನ್ನು ನಿರ್ಧರಿಸಲಾಗುತ್ತದೆ. ಸದ್ಯ 9 ಟೆಸ್ಟ್ ಆಡುವ ರಾಷ್ಟ್ರಗಳು ಈ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದರಂತೆ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿದೆ.
ಆದರೆ ಇಲ್ಲಿ ಗೆಲುವಿನ ಶೇಕಡಾವಾರು (ಪರ್ಸಂಟೇಜ್) ಮೇಲೆ ಪಾಯಿಂಟ್ಸ್ ಟೇಬಲ್ನಲ್ಲಿ ಸ್ಥಾನ ನಿರ್ಧಾರವಾಗುತ್ತದೆ. ಅದರಂತೆ ಗೆಲುವುಗಳ ಸಂಖ್ಯೆ, ಡ್ರಾ ಪಂದ್ಯಗಳ ಸಂಖ್ಯೆ ಕೂಡ ಇಲ್ಲಿ ಗಣನೆಗೆ ಬರಲಿದೆ. ಇದರಿಂದ ಹೆಚ್ಚು ಪಂದ್ಯ ಗೆದ್ದ ತಂಡ ಅಧಿಕ ಪಾಯಿಂಟ್ ಪಡೆದರೂ, ಗೆಲುವು ಹಾಗೂ ಡ್ರಾ ಸಾಧಿಸಿದ ತಂಡ ಪಾಯಿಂಟ್ ಟೇಬಲ್ನಲ್ಲಿ ಮೇಲೇರಲು ಅವಕಾಶವಿದೆ.
ಅಂದರೆ ಇಲ್ಲಿ ಪ್ರತಿ ಪಂದ್ಯಕ್ಕೆ 12 ಅಂಕ ನಿಗದಿಪಡಿಸಲಾಗಿದೆ. ಹಾಗೆಯೇ ಪಂದ್ಯ ಟೈ ಆದರೆ 6 ಅಂಕ ಹಾಗೂ ಪಂದ್ಯ ಡ್ರಾ ಆದರೆ 4 ಅಂಕ ನೀಡಲಾಗುತ್ತದೆ. ಇದರಿಂದ ಸರಣಿಗಳ ಪಂದ್ಯಾವಳಿಯ ಲೆಕ್ಕಚಾರ ಸಮಗೊಳ್ಳಲಿದೆ. ಇಲ್ಲಿ ಗೆದ್ದ ಪಂದ್ಯಗಳಿಗೆ ಮತ್ತು ಡ್ರಾ ಪಂದ್ಯಗಳಿಗೆ ಅನುಸಾರವಾಗಿ ಶೇಕಡಾವಾರಿನಂತೆ ತಂಡಗಳು ಪಾಯಿಂಟ್ಸ್ ಟೇಬಲ್ನಲ್ಲಿ ರ್‍ಯಾಂಕ್ ಪಡೆದುಕೊಳ್ಳುತ್ತವೆ.
ಇದರಿಂದ ಪಂದ್ಯಗಳಿಗೆ ಅಥವಾ ಸರಣಿಗೆ ಅನುಸಾರವಾಗಿ ಶ್ರೇಯಾಂಕ ಪಟ್ಟಿ ಬದಲಾಗಬಹುದು. ಅಲ್ಲದೆ ಪಾಯಿಂಟ್ ಟೇಬಲ್ನಲ್ಲೂ ಪಂದ್ಯಕ್ಕನುಸಾರವಾಗಿ ಪೈಪೋಟಿ ಕಂಡು ಬರಲಿದೆ. ಅಂತಿಮವಾಗಿ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆಯುವ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವಾಡಲಿದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯು ಟೆಸ್ಟ್ ಪಂದ್ಯಗಳ ಒಂದು ಸೈಕಲ್ ಎಂಬುದು. ಅಂದರೆ ಈ ಹಿಂದಿನಂತೆ ಎಲ್ಲಾ ತಂಡಗಳು ಟೆಸ್ಟ್ ಸರಣಿಯನ್ನು ಆಡುತ್ತವೆ. ಆದರೆ ಈ ಸರಣಿಗಳ ಪಂದ್ಯಗಳ ಗೆಲುವು, ಸೋಲು ಮತ್ತು ಡ್ರಾಗಳ ಲೆಕ್ಕಾಚಾರಗಳನ್ನು ಮಾತ್ರ ಐಸಿಸಿ ತೆಗೆದುಕೊಳ್ಳುತ್ತದೆ. ಈ ಮೂಲಕ ಪಾಯಿಂಟ್ಸ್ ಟೇಬಲ್ಗಳಲ್ಲಿ ತಂಡಗಳ ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ಅನಗತ್ಯ ದಾಖಲೆ ಸರಿಗಟ್ಟಿದ ಬಾಬರ್ ಆಝಂ
ಹಾಗೆಯೇ ಈ ಸರಣಿಗಳನ್ನು ಆಯಾ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಾರೆ. ಆದರೆ ಫೈನಲ್ ಪಂದ್ಯವನ್ನು ಆಯೋಜಿಸುವುದು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್. ಅಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಗಳನ್ನು ಆಯಾ ಕ್ರಿಕೆಟ್ ಬೋರ್ಡ್ ಆಯೋಜಿಸಿದರೂ, ಚಾಂಪಿಯನ್ ಪಟ್ಟಕ್ಕಾಗಿ ನಡೆಯಲಿರುವ ಫೈನಲ್ ಪಂದ್ಯದ ಆಯೋಜನೆಯ ಹಕ್ಕು ಐಸಿಸಿ ಬಳಿ ಇದೆ. ಹೀಗಾಗಿಯೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯನ್ನು ಸಹ ಐಸಿಸಿ ಟೂರ್ನಿ ಎಂದು ಪರಿಗಣಿಸಲಾಗುತ್ತಿದೆ.