SA vs AUS ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ಯಾರು ಗೆಲ್ಲಬೇಕು?

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು 2027ರ ಜೂನ್ 9 ರಿಂದ ಜೂನ್ 13 ರವರೆಗೆ ಲಂಡನ್‌ನ ಐತಿಹಾಸಿಕ 'ದಿ ಓವಲ್' ಮೈದಾನದಲ್ಲಿ ನಡೆಯಲಿದ್ದು, ಜೂನ್ 14 ಅನ್ನು ಮೀಸಲು ದಿನವಾಗಿ ಕಾಯ್ದಿರಿಸಲಾಗಿದೆ. ಅಂಕ ಪಟ್ಟಿಯ ಅಗ್ರ ಎರಡು ತಂಡಗಳ ನಡುವೆ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಈಗಲೇ ಲೆಕ್ಕಾಚಾರಗಳು ಶುರುವಾಗಿದೆ.

SA vs AUS ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ಯಾರು ಗೆಲ್ಲಬೇಕು?
Shubman Gill
Image Credit source: GettyImages

Updated on: Oct 26, 2026 | 2:37 PM

ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯವು ಅಕ್ಟೋಬರ್ 27 ರಿಂದ ಆರಂಭವಾಗಲಿದೆ. ಕೇಪ್​ ಟೌನ್​ನಲ್ಲಿ ನಡೆಯಲಿರುವ ಈ ಪಂದ್ಯದ ಫಲಿತಾಂಶ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಭಾರತ ತಂಡಕ್ಕೂ ಇದೆ. ಇದಕ್ಕೆ ಮುಖ್ಯ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್‌ನ ಲೆಕ್ಕಾಚಾರ.

WTC ಅಂಕಪಟ್ಟಿ ಹೇಗಿದೆ?

ಸೌತ್ ಆಫ್ರಿಕಾ ತಂಡವು ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಇನಿಂಗ್ಸ್ ಜಯ ಸಾಧಿಸಿ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದೆ. ಇದರಿಂದ ಅಂಕಪಟ್ಟಿಯ ಅಗ್ರಸ್ಥಾನಗಳಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ:

  1.  ಆಸ್ಟ್ರೇಲಿಯಾ: 75.00% PCT (ಅಗ್ರಸ್ಥಾನ)
  2. ನ್ಯೂಝಿಲೆಂಡ್ 72.22% PCT (ಎರಡನೇ ಸ್ಥಾನ)
  3.  ಸೌತ್ ಆಫ್ರಿಕಾ: 66.67% PCT (ಮೂರನೇ ಸ್ಥಾನ)
  4.  ಭಾರತ 51.52% PCT (ಐದನೇ ಸ್ಥಾನ)

ಟೀಮ್ ಇಂಡಿಯಾ ಪಾಲಿಗೆ ಯಾರು ಗೆಲ್ಲಬೇಕು?

ಸೌತ್ ಆಫ್ರಿಕಾ ಮತ್ತುಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ಆಸೀಸ್ ಪಡೆ ಗೆಲ್ಲಬೇಕು. ಅಂದರೆ ಆಸ್ಟ್ರೇಲಿಯಾ ತಂಡ ಗೆದ್ದರೆ ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಹಾದಿ ಸುಗಮವಾಗಲಿದೆ.

ಆಸ್ಟ್ರೇಲಿಯಾ ಗೆಲುವಿನಿಂದ ಭಾರತಕ್ಕಾಗುವ ಲಾಭಗಳೇನು?

ಸೌತ್ ಆಫ್ರಿಕಾ ಪ್ರಸ್ತುತ 66.67% ಅಂಕಗಳೊಂದಿಗೆ ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿದೆ. ಒಂದು ವೇಳೆ ಅವರು 3ನೇ ಟೆಸ್ಟ್ ಪಂದ್ಯವನ್ನು ಗೆದ್ದರೆ, ಅವರ ಪಾಯಿಂಟ್ಸ್ ಶೇಕಡಾವಾರು (PCT) ಮತ್ತಷ್ಟು ಜಿಗಿತ ಕಂಡು ಭಾರತಕ್ಕೆ ಲಭ್ಯವಿರುವ ಗರಿಷ್ಠ 66.6% ಮಿತಿಯನ್ನು ಮೀರಿ ನಿಲ್ಲುತ್ತಾರೆ. ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆದ್ದರೆ ಮಾತ್ರ ಸೌತ್ ಆಫ್ರಿಕಾದ ಅಂಕಗಳು ಕಡಿತಗೊಂಡು ಭಾರತಕ್ಕೆ ಅವರನ್ನು ಹಿಂದಿಕ್ಕಲು ಅವಕಾಶ ಸಿಗುತ್ತದೆ.

ಆಸ್ಟ್ರೇಲಿಯಾ ಈಗಾಗಲೇ 75% ರಷ್ಟು ಗರಿಷ್ಠ ಅಂಕಗಳನ್ನು ಹೊಂದಿರುವುದರಿಂದ ಅವರು ಈ ಪಂದ್ಯ ಗೆದ್ದರೂ ಭಾರತಕ್ಕೆ ಯಾವುದೇ ನೇರ ನಷ್ಟವಿಲ್ಲ. ಏಕೆಂದರೆ ಭಾರತ ತಂಡವು ಮುಂಬರುವ ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಸ್ವದೇಶದಲ್ಲಿ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯನ್ನು ಆಡಬೇಕಿದೆ. ಆ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ನೇರವಾಗಿ ಸೋಲಿಸುವ ಮೂಲಕ ಭಾರತ ಅವರ ಅಂಕಗಳನ್ನು ತಗ್ಗಿಸಬಹುದು. ಆದರೆ ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಮತ್ತೆ ಪಂದ್ಯಗಳಿಲ್ಲದ ಕಾರಣ, ಆಸ್ಟ್ರೇಲಿಯಾ ತಂಡವೇ ಅವರನ್ನು ಸೋಲಿಸುವುದು ಭಾರತಕ್ಕೆ ಇರುವ ಏಕೈಕ ಆಯ್ಕೆ.

ಟೀಮ್ ಇಂಡಿಯಾಕ್ಕೆ ಹೆಚ್ಚುವರಿ ಲೈಫ್‌ಲೈನ್:

ಭಾರತ ತಂಡವು ಫೈನಲ್ ತಲುಪಬೇಕಾದರೆ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಅಥವಾ ಸೌತ್ ಆಫ್ರಿಕಾ ತಂಡಗಳ ಪೈಕಿ ಕನಿಷ್ಠ ಇಬ್ಬರು ಮುಂಬರುವ ಪಂದ್ಯಗಳಲ್ಲಿ ಪಾಯಿಂಟ್ಸ್ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಆಸ್ಟ್ರೇಲಿಯಾ ತಂಡವು ಪ್ರೋಟೀಸ್ ಪಡೆಯನ್ನು 3ನೇ ಟೆಸ್ಟ್‌ನಲ್ಲಿ ಮಣಿಸಿದರೆ, ಭಾರತಕ್ಕೆ ಅದು ಪ್ಲಸ್ ಪಾಯಿಂಟ್ ಆಗಲಿದೆ.

ಭಾರತ ಫೈನಲ್​ ತಲುಪುದು ಹೇಗೆ?

ಬಾಹ್ಯ ಫಲಿತಾಂಶಗಳು ಭಾರತಕ್ಕೆ ಪೂರಕವಾಗಬೇಕಾದರೆ, ಮೊದಲು ಭಾರತ ತನ್ನದೇ ಆದ ಪಂದ್ಯಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಬೇಕಿದೆ. ಭಾರತ ತಂಡ ಮುಂದೆ ಇನ್ನೂ 7 ಟೆಸ್ಟ್ ಪಂದ್ಯಗಳಿವೆ.

  • ನ್ಯೂಝಿಲೆಂಡ್ ವಿರುದ್ಧ 2 ಟೆಸ್ಟ್
  • ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್

ಟೀಮ್ ಇಂಡಿಯಾ ನೇರವಾಗಿ ಫೈನಲ್ ತಲುಪಲು ಕನಿಷ್ಠ 5 ರಿಂದ 6 ಪಂದ್ಯಗಳನ್ನು ಗೆಲ್ಲಲೇಬೇಕಾದ ಕಠಿಣ ಸವಾಲು ಶುಭ್​​ಮನ್ ಗಿಲ್ ಪಡೆಯ ಮುಂದಿದೆ. ಹೀಗಾಗಿ ಮುಂಬರುವ ಟೆಸ್ಟ್ ಪಂದ್ಯಗಳು ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯಗಳು ಎಂದೇ ಹೇಳಬಹುದು.

ಇದನ್ನೂ ಓದಿ: ಕೇವಲ ಐದೇ 5 ಎಸೆತಗಳಲ್ಲಿ ವಿಶ್ವ ದಾಖಲೆಯ ಚೇಸಿಂಗ್!

ಅದಕ್ಕೂ ಮುನ್ನ ಟೀಮ್ ಇಂಡಿಯಾ ತನ್ನ ಹಾದಿಯನ್ನು ಸುಗಮಗೊಳಿಸಲು, ಆಸ್ಟ್ರೇಲಿಯಾ ವಿರುದ್ಧ ಸೌತ್ ಆಫ್ರಿಕಾ ತಂಡದ ಸೋಲನ್ನು ಎದುರು ನೋಡಬೇಕು. ಇಲ್ಲದಿದ್ದರೆ, ನ್ಯೂಝಿಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಕನಿಷ್ಠ 4 ಮ್ಯಾಚ್​​ಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us