WTC Final: ಹೀಗಾದಲ್ಲಿ ಭಾರತ vs ಸೌತ್ ಆಫ್ರಿಕಾ ನಡುವೆ WTC ಫೈನಲ್ ಪಂದ್ಯ
WTC final 2025: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿದೆ. ಇದೀಗ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದ್ದರೆ, ಸೌ್ತ್ ಆಫ್ರಿಕಾ ತಂಡ ದ್ವಿತೀಯ ಸ್ಥಾನದಲ್ಲಿದೆ. ಉಭಯ ತಂಡಗಳು ಮುಂದಿನ ಎಲ್ಲಾ ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ ಫೈನಲ್ ಆಡುವುದು ಖಚಿತ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ರೇಸ್ ಪೈಪೋಟಿ ಮುಂದುವರೆದಿದೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 233 ರನ್ಗಳ ಅಮೋಘ ಗೆಲುವು ದಾಖಲಿಸಿ ಇದೀಗ ಸೌತ್ ಆಫ್ರಿಕಾ ತಂಡವು WTC ಪಾಯಿಂಟ್ಸ್ ಟೇಬಲ್ನಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಅತ್ತ 2ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ತಂಡವು ಮೂರನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದ್ದು, ಫೈನಲ್ ರೇಸ್ನಲ್ಲೂ ಮುಂಚೂಣಿಯಲ್ಲಿದೆ.
ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಮುಂದಿನ ಮೂರು ಪಂದ್ಯಗಳಲ್ಲಿ ಸೋಲಿಸಿ, ಒಂದು ಮ್ಯಾಚ್ ಅನ್ನು ಡ್ರಾ ಮಾಡಿಕೊಂಡರೆ ನೇರವಾಗಿ ಫೈನಲ್ಗೇರಬಹುದು. ಅತ್ತ ಸೌತ್ ಆಫ್ರಿಕಾ ತಂಡ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಬೇಕಿದ್ದರೆ, ಶ್ರೀಲಂಕಾ ವಿರುದ್ಧದದ 1 ಪಂದ್ಯದಲ್ಲಿ ಹಾಗೂ ಪಾಕಿಸ್ತಾನ್ ವಿರುದ್ಧದ 2 ಪಂದ್ಯಗಳಲ್ಲಿ ಜಯ ಸಾಧಿಸಬೇಕು.
ಒಂದು ವೇಳೆ ಸೌತ್ ಆಫ್ರಿಕಾ ತಂಡವು ಮುಂದಿನ ಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೆ WTC ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಈ ಮೂಲಕ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.
ಇತ್ತ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು 4-0 ಅಥವಾ 5-0 ಅಂತರದಿಂದ ಸೋಲಿಸಿದರೆ 2ನೇ ಸ್ಥಾನದೊಂದಿಗೆ ಫೈನಲ್ಗೆ ಎಂಟ್ರಿ ಕೊಡುವುದು ಖಚಿತ. ಇನ್ನು ಭಾರತ ತಂಡದ 4-0 ಅಂತರದ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕನಸು ಕಮರಲಿದೆ. ಅಂದರೆ ಆಸೀಸ್ ಪಡೆ ಫೈನಲ್ ರೇಸ್ನಿಂದ ಹೊರಬೀಳಲಿದೆ.
- ಭಾರತ ತಂಡವು ಆಸ್ಟ್ರೇಲಿಯಾವನ್ನು 4-0 ಅಂತರದಿಂದ ಸೋಲಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಪ್ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಶೇಕಡಾವಾರು ಅಂಕ 65.79 ಕ್ಕೆ ತಲುಪಲಿದೆ.
- ಮತ್ತೊಂದೆಡೆ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ನ್ಯೂಝಿಲೆಂಡ್ ತಂಡವು 3-0 ಅಂತರದಿಂದ ಗೆದ್ದುಕೊಂಡರೂ ಶೇಕಡಾವಾರು ಅಂಕ 64.29 ಕ್ಕೆ ಬಂದು ನಿಲ್ಲಲಿದೆ.
- ಇನ್ನು ಸೌತ್ ಆಫ್ರಿಕಾ ತಂಡವು ಪಾಕಿಸ್ತಾನ್ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡರೆ ಒಟ್ಟು 69.44 ಶೇಕಡಾವಾರು ಅಂಕ ಪಡೆಯಲಿದೆ.
ಅಂದರೆ ಇಲ್ಲಿ ಸೌತ್ ಆಫ್ರಿಕಾ ತಂಡವು 69.44% ಅಂಕಗಳೊಂದಿಗೆ ಫೈನಲ್ಗೆ ಪ್ರವೇಶಿಸಲು ಉತ್ತಮ ಅವಕಾಶವಿದೆ. ಇದಾದ ಬಳಿಕ ಅತ್ಯಧಿಕ ಶೇಕಡಾವಾರು ಅಂಕಗಳನ್ನು ಪಡೆಯುವ ಅವಕಾಶ ಇರುವುದು ಟೀಮ್ ಇಂಡಿಯಾಗೆ.
ಇದನ್ನೂ ಓದಿ: 120 ವರ್ಷಗಳ ಬಳಿಕ ಟೆಸ್ಟ್ನಲ್ಲಿ ಮಿಂಚಿನ ದಾಳಿ
ಭಾರತ ತಂಡವು ಮುಂದಿನ 4 ಪಂದ್ಯಗಳಲ್ಲಿ ಗೆಲುವು ದಾಖಲಿಸಿ, ಒಂದು ಮ್ಯಾಚ್ ಡ್ರಾ ಮಾಡಿಕೊಂಡರೂ ಒಟ್ಟು 65.79% ಅಂಕಗಳೊಂದಿಗೆ ಫೈನಲ್ಗೆ ಅರ್ಹತೆ ಪಡೆಯಲಿದೆ. ಈ ಮೂಲಕ ಸೌತ್ ಆಫ್ರಿಕಾ ಮತ್ತು ಭಾರತ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಮುಖಾಮುಖಿಯಾಗಬಹುದು.