‘ಪುಷ್ಪ 2’ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ಕೊಟ್ಟ ತೆಲಂಗಾಣ ಸರ್ಕಾರ, ಷರತ್ತುಗಳು ಏನೇನು?
Pushpa 2: ಪುಷ್ಪ 2 ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟಿಕೆಟ್ ದರ ಹೆಚ್ಚಳ ಮತ್ತು ಹೆಚ್ಚುವರಿ ಶೋ ಪ್ರದರ್ಶಿಸಲು ತೆಲಂಗಾಣ ಸರ್ಕಾರ ಷರತ್ತು ಸಹಿತ ಅನುಮತಿ ನೀಡಿದೆ.
ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಇನ್ನೊಂದು ವಾರದಲ್ಲಿ ತೆರೆಗೆ ಬರಲಿದೆ. ಸಿನಿಮಾಕ್ಕೆ ಸಿಬಿಎಫ್ಸಿಯಿಂದ ಯು/ಎ ಪ್ರಮಾಣ ಪತ್ರ ದೊರೆತಿದೆ. ಸಿನಿಮಾ ಬಿಡುಗಡೆ ಆಗಲಿರುವ ಚಿತ್ರಮಂದಿರಗಳ ಪಟ್ಟಿಯೂ ಬಂದಾಗಿದೆ. ನಿನ್ನೆ, ತೆಲಂಗಾಣ ಸರ್ಕಾರವು, ‘ಪುಷ್ಪ 2’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಜೊತೆಗೆ ಸಿನಿಮಾದ ಹೆಚ್ಚುವರಿ ಶೋಗಳನ್ನು ಪ್ರದರ್ಶಿಸಲು ಸಹ ಅನುಮತಿಯನ್ನು ಸರ್ಕಾರ ನೀಡಿದೆ. ಆದರೆ ಕೆಲವು ಷರತ್ತುಗಳನ್ನು ಸಹ ವಿಧಿಸಲಾಗಿದೆ.
‘ಪುಷ್ಪ 2’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ಹಾಗೂ ಹೆಚ್ಚುವರಿ ಶೋ ಪ್ರದರ್ಶಿಸಲು ಅವಕಾಶ ನೀಡಲಾಗದೆಯಾದರೂ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಡಿಸೆಂಬರ್ 04 ರಂದು ರಾತ್ರಿ 9:30 ಗೆ ಬೆನಿಫಿಟ್ ಶೋಗಳನ್ನು ತೆಲಂಗಾಣ ರಾಜ್ಯದಾದ್ಯಂತ ಪ್ರದರ್ಶಿಸಲು ಅನುಮತಿ ನೀಡಲಾಗಿದ್ದು, ಈ ಶೋನ ಟಿಕೆಟ್ ದರ 800 ರೂಪಾಯಿಗಳಿಗಿಂತಲೂ ಹೆಚ್ಚಿಗೆ ಇರಿಸುವಂತಿಲ್ಲ ಎಂದು ಸರ್ಕಾರ ಹೇಳಿದೆ.
ಸಿನಿಮಾ ಬಿಡುಗಡೆ ಆದ ದಿನ ಅಂದರೆ ಡಿಸೆಂಬರ್ 05 ರಂದು ತೆಲಂಗಾಣದ ಎಲ್ಲ ಚಿತ್ರಮಂದಿರಗಳಲ್ಲಿ ಎರಡು ಹೆಚ್ಚುವರಿ ಶೋ ಪ್ರದರ್ಶನ ಮಾಡಲು ಸಹ ಸರ್ಕಾರ ಅನುಮತಿ ನೀಡಿದೆ. ಮಧ್ಯರಾತ್ರಿ 1 ಗಂಟೆಗೆ ಹಾಗೂ ಬೆಳಗಿನ ಜಾವ 4 ಗಂಟೆಗೆ ಈ ಶೋ ಪ್ರದರ್ಶನ ಮಾಡಬಹುದಾಗಿದೆ. ಇದರ ಟಿಕೆಟ್ ದರವೂ ಸಹ 800 ರೂಪಾಯಿ ಮೀರುವಂತಿಲ್ಲ.
ಇದನ್ನೂ ಓದಿ:‘ಪುಷ್ಪ 2’ ಸಿನಿಮಾದಿಂದ ಬದಲಾಗಲಿದೆ ರಶ್ಮಿಕಾ ವೃತ್ತಿ ಜೀವನದ ದಿಕ್ಕು
ಸಿನಿಮಾ ಬಿಡುಗಡೆ ಆಗುವ ಡಿಸೆಂಬರ್ 05 ರಿಂದ ಡಿಸೆಂಬರ್ 08ನೇ ತಾರೀಖಿನ ವರೆಗೆ ಸಿಂಗಲ್ ಸ್ಕ್ರೀನ್ಗಳಲ್ಲಿ ಟಿಕೆಟ್ ದರವನ್ನು 150 ರೂಪಾಯಿ ವರೆಗೆ ಹೆಚ್ಚಳ ಮಾಡಬಹುದಾಗಿದೆ. ಅದಾದ ಬಳಿಕ ಅಂದರೆ ಡಿಸೆಂಬರ್ 09 ರಿಂದ ಡಿಸೆಂಬರ್ 16ರ ವರೆಗೆ 105 ರೂಪಾಯಿ ಹೆಚ್ಚುವರಿ ವಸೂಲಿ ಮಾಡಬಹುದಾಗಿದೆ. ಡಿಸೆಂಬರ್ 17 ರಿಂದ ಡಿಸೆಂಬರ್ 23 ರ ವರೆಗೆ 20 ರೂಪಾಯಿ ಮಾತ್ರವೇ ಹೆಚ್ಚು ವಸೂಲಿ ಮಾಡಬಹುದಾಗಿದೆ. ಇದು ತೆಲಂಗಾಣ ರಾಜ್ಯದ ಎಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೂ ಅನ್ವಯಿಸಲಿದೆ.
ಇನ್ನು ಮಲ್ಟಿಪ್ಲೆಕ್ಸ್ಗಳಲ್ಲಿ ಡಿಸೆಂಬರ್ 05 ರಿಂದ ಡಿಸೆಂಬರ್ 08ನೇ ತಾರೀಖಿನ ವರೆಗೆ 200 ರೂಪಾಯಿ ಹೆಚ್ಚುವರಿ ದರ ವಸೂಲಿ ಮಾಡಬಹುದಾಗಿದೆ. ಡಿಸೆಂಬರ್ 09 ರಿಂದ ಡಿಸೆಂಬರ್ 16ರ ವರೆಗೆ 150 ರೂಪಾಯಿ ಹೆಚ್ಚುವರಿ ದರ ವಿಧಿಸಬಹುದಾಗಿದೆ. ಡಿಸೆಂಬರ್ 17 ರಿಂದ ಡಿಸೆಂಬರ್ 23 ರ 50 ರೂಪಾಯಿ ಹೆಚ್ಚು ಹಣ ವಸೂಲಿ ಮಾಡಬಹುದಾಗಿದೆ. ಚಿತ್ರಮಂದಿರಗಳು ಈ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿವೆಯೇ ಇಲ್ಲವೇ ಎಂಬುದನ್ನು ಸ್ಥಳೀಯ ರೆವಿನ್ಯೂ ಅಧಿಕಾರಿಗಳು, ಪೊಲೀಸರು ಗಮನಿಸಬೇಕಾಗಿರುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:22 am, Sun, 1 December 24