WTC Final 2023: ಟೀಂ ಇಂಡಿಯಾದಿಂದ ಸ್ಟಾರ್ ಬ್ಯಾಟರ್​ಗೆ ಕೋಕ್! ಶ್ರೇಯಸ್ ಬದಲು ಯಾರಿಗೆ ಸ್ಥಾನ..?

|

Updated on: Apr 24, 2023 | 6:11 PM

WTC Final 2023: ಸರಣಿಗೆ 15 ದಿನ ಇರುವಾಗಲೇ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಸಂಪೂರ್ಣ ಕೋಚಿಂಗ್ ಸಿಬ್ಬಂದಿಯೊಂದಿಗೆ ಲಭ್ಯವಿರುವ ಆಟಗಾರರನ್ನು ಮೇ 23-24 ರ ನಡುವೆ ಲಂಡನ್‌ಗೆ ಕಳುಹಿಸಲು ಯೋಚಿಸಿದೆ.

WTC Final 2023: ಟೀಂ ಇಂಡಿಯಾದಿಂದ ಸ್ಟಾರ್ ಬ್ಯಾಟರ್​ಗೆ ಕೋಕ್! ಶ್ರೇಯಸ್ ಬದಲು ಯಾರಿಗೆ ಸ್ಥಾನ..?
ಟೀಂ ಇಂಡಿಯಾ
Follow us on

ಸದ್ಯ ಐಪಿಎಲ್ (IPL 2023)​ 16ನೇ ಆವೃತ್ತಿಯಲ್ಲಿ ಬ್ಯುಸಿಯಾಗಿರುವ ಟೀಂ ಇಂಡಿಯಾ (Team India) ಆ ನಂತರ, ಅಂದರೆ ಜೂನ್ 7 ರಿಂದ 11 ರ ನಡುವೆ ಆಸ್ಟ್ರೇಲಿಯಾ ವಿರುದ್ಧ ಲಂಡನ್‌ನ ಕಿಂಗ್‌ಸ್ಟನ್ ಓವಲ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (World Test Championship) ಫೈನಲ್‌ ಆಡಲಿದೆ. ಹೀಗಾಗಿ ಟೆಸ್ಟ್ ವಿಶ್ವಕಪ್ ಗೆಲ್ಲುವ ಸಲುವಾಗಿ ತಂಡದ ಸಂಯೋಜನೆಯ ಬಗ್ಗೆ ಬಿಸಿಸಿಐ ತಲೆ ಕೆಡಿಸಿಕೊಂಡಿದೆ. ಏಕೆಂದರೆ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಸೇರಿದಂತೆ ಇನ್ನು ಹಲವು ಆಟಗಾರರು ಫಾರ್ಮ್​ ಕೊರತೆಯಿಂದ ಬಳಲುತ್ತಿದ್ದಾರೆ. ಈ ನಡುವೆ ಅಲ್ಲಿನ ವಾತಾವರಣಕ್ಕೆ ಆಟಗಾರರು ಹೊಂದಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿರುವ ಬಿಸಿಸಿಐ (BCCI) ಸರಣಿಗೆ 15 ದಿನ ಇರುವಾಗಲೇ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಹಾಗೂ ಸಂಪೂರ್ಣ ಕೋಚಿಂಗ್ ಸಿಬ್ಬಂದಿಯೊಂದಿಗೆ ಲಭ್ಯವಿರುವ ಆಟಗಾರರನ್ನು ಮೇ 23-24 ರ ನಡುವೆ ಲಂಡನ್‌ಗೆ ಕಳುಹಿಸಲು ಯೋಚಿಸಿದೆ. ಇದರಲ್ಲಿ ಐಪಿಎಲ್ 2023 ರ ಪ್ಲೇಆಫ್ ರೇಸ್‌ನಿಂದ ಹೊರಗುಳಿದ ತಂಡಗಳ ಆಟಗಾರರು ದ್ರಾವಿಡ್ ಅವರೊಂದಿಗೆ ಲಂಡನ್‌ಗೆ ಹೋಗಲಿದ್ದಾರೆ.

ಐಪಿಎಲ್ ಮುಗಿದ ನಂತರ ಇತರ ಆಟಗಾರರು ತಂಡವನ್ನು ಸೇರಿಕೊಳ್ಳಲಿದ್ದಾರೆ. ನಾಯಕ ರೋಹಿತ್ ಶರ್ಮಾ ಮತ್ತು ಇತರ ಆಟಗಾರರು ಜೂನ್ 1 ರಿಂದ ಇಂಗ್ಲೆಂಡ್‌ನಲ್ಲಿ ಸಂಪೂರ್ಣ ತರಬೇತಿ ಪ್ರಾರಂಭಿಸಲಿದ್ದಾರೆ. ಇನ್ನುಳಿದಂತೆ ಮೇ ಕೊನೆಯ ವಾರದಲ್ಲಿ ರಾಹುಲ್ ಲಂಡನ್‌ಗೆ ತೆರಳಲಿದ್ದಾರೆ. ಇತರ ಆಟಗಾರರು ತಮ್ಮ ಐಪಿಎಲ್ ಕಮಿಟ್‌ಮೆಂಟ್‌ಗಳು ಮುಗಿದ ನಂತರ ಇಂಗ್ಲೆಂಡ್‌ಗೆ ಹೋಗಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇನ್ಸೈಡ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

Sachin Tendulkar Birthday: 175 ವರ್ಷಗಳ ಹಳೆಯ ಮೈದಾನದಲ್ಲಿ ರಾರಾಜಿಸಲಿದೆ ಕ್ರಿಕೆಟ್ ದೇವರ ಹೆಸರು..!

ಶ್ರೇಯಸ್ ಅಯ್ಯರ್ ಬದಲಿಗೆ ಯಾರಿಗೆ ಅವಕಾಶ?

ಅಂತಿಮ ಹಂತದ ತಯಾರಿ ಆರಂಭವಾಗುತ್ತಿದ್ದಂತೆ ಚೇತೇಶ್ವರ ಪೂಜಾರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪ್ರಸ್ತುತ ಅವರು ಇಂಗ್ಲೆಂಡ್‌ನ ಸಸೆಕ್ಸ್ ಕೌಂಟಿ ಪರ ಆಡುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಂಡವನ್ನು ಮೇ ಮೊದಲ ವಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಬಾರ್ಡರ್ ಗವಾಸ್ಕರ್ ಸರಣಿಗೆ ಆಸ್ಟ್ರೇಲಿಯಾ ವಿರುದ್ಧ ಆಯ್ಕೆಯಾದ ತಂಡದ ಬಹುತೇಕ ಆಟಗಾರರು ಈ ತಂಡದಲ್ಲೂ ಸ್ಥಾನ ಪಡೆಯಲ್ಲಿದ್ದಾರೆ. ಆದರೆ ಇಂಜುರಿಯಿಂದಾಗಿ ಕ್ರಿಕೆಟ್​ನಿಂದ ದೂರ ಉಳಿದಿರುವ ಶ್ರೇಯಸ್ ಅಯ್ಯರ್ ಬದಲಿಗೆ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ಪ್ರಶ್ನೆಯಾಗಿದೆ. ಈ ಮೊದಲು ಶ್ರೇಯಸ್ ಬದಲು ಸೂರ್ಯಕುಮಾರ್ ಯಾದವ್​ಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಸದ್ಯ ಫಾರ್ಮ್​ ಕೊರತೆಯಿಂದ ಬಳಲುತ್ತಿರುವ ಸೂರ್ಯ ಈ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ. ಅಲ್ಲದೆ ಸೂರ್ಯಕುಮಾರ್ ಯಾದವ್ ಅವರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ ಸಾಕಷ್ಟು ಅನುಭವವಿಲ್ಲ. ಹೀಗಾಗಿ ಆಯ್ಕೆ ಸಮಿತಿಯು ಶ್ರೇಯಸ್ ಬದಲಿಗೆ ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸದ ನಂತರ ಅಜಿಂಕ್ಯ ರಹಾನೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಅದರ ನಂತರ, ಅಜಿಂಕ್ಯ ಕಳಪೆ ಫಾರ್ಮ್​ನಿಂದಾಗಿ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿರಲಿಲ್ಲ. ಪ್ರಸ್ತುತ, ಅಜಿಂಕ್ಯ ರಹಾನೆ ಐಪಿಎಲ್ 2023 ರಲ್ಲಿ ರನ್ ಗಳಿಸುತ್ತಿದ್ದಾರೆ. ಇದಲ್ಲದೇ ವಿದೇಶದಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ ಅಪಾರ ಅನುಭವ ಅಜಿಂಕ್ಯ ಅವರಿಗಿದೆ. ಇವರ ಆಯ್ಕೆಯಿಂದ ಟೀಂ ಇಂಡಿಯಾಕ್ಕೂ ಲಾಭ ಆಗಲಿದೆ.

ಸಲಹೆ ನೀಡಿದ ಆಯ್ಕೆ ಸಮಿತಿ

ಇದಕ್ಕೆ ಪುಷ್ಠಿ ನೀಡುವಂತೆ ಕೆಂಪು ಚೆಂಡಿನಲ್ಲಿ ಅಭ್ಯಾಸ ನಡೆಸುವಂತೆ ಆಯ್ಕೆಗಾರರು ಈಗಾಗಲೇ ಅಜಿಂಕ್ಯಾಗೆ ಸೂಚಿಸಿದ್ದಾರೆ. ಸೂರ್ಯಕುಮಾರ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಅವರು ಇನ್ನೂ ಟ್ಯೂನ್ ಆಗಿಲ್ಲ. ಹೀಗಾಗಿ ಸೂರ್ಯಕುಮಾರ್ ಬದಲು ಅಜಿಂಕ್ಯ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:11 pm, Mon, 24 April 23