ವಿಶ್ವ ಕ್ರಿಕೆಟ್ನ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅವರಿಗೆ ಇಂದು 50 ರ ಸಂಭ್ರಮ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕಗಳ ಶತಕ ಸಿಡಿಸಿದ ಕ್ರಿಕೆಟ್ ದೇವರು ಇದೀಗ ತಮ್ಮ ಬದುಕಿನ ಅರ್ಧಶತಕ ಬಾರಿಸಿದ್ದಾರೆ. ಕ್ರಿಕೆಟ್ ದೇವರ ಈ 50ನೇ ವರ್ಷದ ಹುಟ್ಟು ಹಬ್ಬವನ್ನು ಸ್ಮರಣೀಯಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದ್ದು, ಮಹತ್ವದ ಕೆಲಸಕ್ಕೆ ಮುಂದಾಗಿದೆ.
ವಾಸ್ತವವಾಗಿ, ಸಚಿನ್ ಅವರ 50 ನೇ ಹುಟ್ಟುಹಬ್ಬವನ್ನು ಸ್ಮರಣೀಯಗೊಳಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ 175 ವರ್ಷ ಹಳೆಯದಾದ ಸಿಡ್ನಿ ಕ್ರಿಕೆಟ್ ಮೈದಾನದ ಮುಖ್ಯ ಗೇಟ್ಗೆ ಸಚಿನ್ ತೆಂಡೂಲ್ಕರ್ ಹಾಗೂ ವೆಸ್ಟ್ ಇಂಡೀಸ್ ಮಾಜಿ ದಂತಕತೆ ಬ್ರಿಯಾನ್ ಲಾರಾ ಅವರ ಹೆಸರಿಟ್ಟಿದೆ.
ಈ ಗೇಟಿನ ವಿಶೇಷತೆಯೆಂದರೆ, ಯಾವುದೇ ಆಟಗಾರರು ಮೈದಾನಕ್ಕೆ ಪ್ರವೇಶಿಸಬೇಕೆಂದರೆ ಈ ಗೇಟ್‌ನ ಮೂಲಕವೇ ಹೋಗಬೇಕು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಬ್ರಿಯಾನ್ ಲಾರಾ ಸೃಷ್ಟಿಸಿರುವ ಅಪರೂಪದ ದಾಖಲೆಗಳ ಸ್ಮರಣಾರ್ಥ ಕ್ರಿಕೆಟ್ ಆಸ್ಟ್ರೇಲಿಯಾ ಈ ಲೆಜೆಂಡ್ಗಳಿಗೆ ವಿಶೇಷ ಗೌರವ ಸಲ್ಲಿಸಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಿರುವ ಕ್ರಿಕೆಟ್ ದೇವರು 157ರ ಸರಾಸರಿಯಲ್ಲಿ 785 ರನ್ ಕಲೆಹಾಕಿದ್ದಾರೆ. ಇದೇ ಕಾರಣಕ್ಕೆ ಸಿಡ್ನಿ ಕ್ರಿಕೆಟ್ ಮೈದಾನ ಸಚಿನ್‌ಗೆ ದೊಡ್ಡ ಗೌರವ ನೀಡಿದೆ.
ಇಷ್ಟೇ ಅಲ್ಲದೆ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಸಚಿನ್ ಆಸ್ಟ್ರೇಲಿಯಾ ವಿರುದ್ಧ 39 ಟೆಸ್ಟ್‌ಗಳನ್ನಾಡಿದ್ದು, ಇದರಲ್ಲಿ 55ರ ಸರಾಸರಿಯಲ್ಲಿ 11 ಶತಕ ಮತ್ತು 16 ಅರ್ಧ ಶತಕಗಳು ಒಳಗೊಂಡಂತೆ 3630 ರನ್ ಬಾರಿಸಿದ್ದಾರೆ.
ಹಾಗೆಯೇ ಆಸ್ಟ್ರೇಲಿಯಾದ ಬೌನ್ಸಿ ಪಿಚ್ಗಳಲ್ಲಿ ಶ್ರೇಷ್ಠ ಬ್ಯಾಟಿಂಗ್ ಮಾಡಿರುವ ಸಚಿನ್, ಟೆಸ್ಟ್ ಮಾದರಿಯಲ್ಲಿ 53.20 ಸರಾಸರಿಯಲ್ಲಿ ರನ್ ಪೇರಿಸಿದ್ದು, 6 ಶತಕಗಳೊಂದಿಗೆ 1809 ರನ್ ಬಾರಿಸಿದ್ದಾರೆ.
ಏಕದಿನ ಮಾದರಿಯಲ್ಲೂ ಅಬ್ಬರಿಸಿರುವ ಸಚಿನ್ ಬ್ಯಾಟ್ ಆಸ್ಟ್ರೇಲಿಯಾ ವಿರುದ್ಧ 44.59 ಸರಾಸರಿಯಲ್ಲಿ 9 ಶತಕಗಳೊಂದಿಗೆ 3077 ರನ್ ಸಿಡಿಸಿದ್ದಾರೆ.
Published On - 4:15 pm, Mon, 24 April 23