WTC Final 2023: ‘ನೀವು ಕೊಹ್ಲಿಯನ್ನೇ ಕೇಳಬೇಕು’; ಲೈವ್​ನಲ್ಲೇ ವಿರಾಟ್ ವಿರುದ್ಧ ಕೆಂಡಕಾರಿದ ಗವಾಸ್ಕರ್

WTC Final 2023: ಬೇಡದ ಶಾಟ್ ಆಡಿ ಅಗ್ಗವಾಗಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ ಮೇಲೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ.

WTC Final 2023: ‘ನೀವು ಕೊಹ್ಲಿಯನ್ನೇ ಕೇಳಬೇಕು’; ಲೈವ್​ನಲ್ಲೇ ವಿರಾಟ್ ವಿರುದ್ಧ ಕೆಂಡಕಾರಿದ ಗವಾಸ್ಕರ್
ಕೊಹ್ಲಿ, ಗವಾಸ್ಕರ್

Updated on: Jun 12, 2023 | 11:01 AM

ಐಸಿಸಿ (ICC) ಟೂರ್ನಿಯಲ್ಲಿ ಭಾರತ ತಂಡ ಮತ್ತೊಮ್ಮೆ ಸೋತಿದೆ. ಕಳೆದ ಹತ್ತು ವರ್ಷಗಳಿಂದ ಐಸಿಸಿ ಟ್ರೋಫಿಯ ಬರ ಎದುರಿಸುತ್ತಿರುವ ಭಾರತಕ್ಕೆ ಮತ್ತೊಂದು ಅವಕಾಶ ಕೈತಪ್ಪಿದೆ. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ, ಭಾರತ ಪ್ರತಿ ಐಸಿಸಿ ಪಂದ್ಯಾವಳಿಯಲ್ಲಿಯೂ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಈ ಬಾರಿಯಾದರೂ ಟೀಂ ಇಂಡಿಯಾ (Team India) ಚಾಂಪಿಯನ್ ಪಟ್ಟಕೇರಲಿದೆ ಎಂಬ ನಿರೀಕ್ಷೆ ಇಟ್ಟಿದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಟೀಂ ಇಂಡಿಯಾದ ಈ ವೈಫಲ್ಯಕ್ಕೆ ತಂಡ ಅಗ್ರ 4 ಬ್ಯಾಟ್ಸ್‌ಮನ್‌ಗಳ ವೈಫಲ್ಯವೂ ಪ್ರಮಖ ಕಾರಣವಾಗಿದೆ. ಅದರಲ್ಲೂ ಬೇಡದ ಶಾಟ್ ಆಡಿ ಅಗ್ಗವಾಗಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ (Virat Kohli) ಮೇಲೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 14 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದ್ದ ಕೊಹ್ಲಿ, ಎರಡನೇ ಇನ್ನಿಂಗ್ಸ್​ನಲ್ಲಿ ಕೊಂಚ ಹೋರಾಟದ ಇನ್ನಿಂಗ್ಸ್ ಆಡುವ ಮೂಲಕ 49 ರನ್ ಬಾರಿಸಿದರು. ಆದರೆ ಕೊಹ್ಲಿ ವಿಕೆಟ್ ನೀಡಿದ ರೀತಿಯನ್ನು ಕಂಡು ಟೀಂ ಇಂಡಿಯಾದ ಮಾಜಿ ಆಟಗಾರರು ಕೊಹ್ಲಿ ವಿರುದ್ಧ ಹರಿಹಾಯ್ದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೊಹ್ಲಿ ಮಾಡಿದ ತಪ್ಪನ್ನೇ ಪುನಃ ಪುನಃ ಮಾಡುತ್ತಿದ್ದಾರೆ. ಇದು ಅನುಭವಿಗಳ ಕಣ್ಣುಕುಕ್ಕಿದೆ. ವಾಸ್ತವವಾಗಿ ಕೊಹ್ಲಿ 5,6ನೇ ಸ್ಟಂಪ್​ನಿಂದ ಹೊರಹೋಗುವ ಚೆಂಡುಗಳನ್ನು ಆಡುವ ಯತ್ನದಲ್ಲಿ ವಿಕೆಟ್ ಒಪ್ಪಿಸುವ ಕೆಲಸವನ್ನು ಬಹಳ ವರ್ಷಗಳಿಂದ ಮಾಡುತ್ತಿದ್ದಾರೆ. ಡಬ್ಲ್ಯುಟಿಸಿ ಫೈನಲ್​ನ 2ನೇ ಇನ್ನಿಂಗ್ಸ್​ನಲ್ಲೂ ಕೊಹ್ಲಿ ಇದೇ ತಪ್ಪನ್ನು ಪುನರಾವರ್ತಿಸಿದರು.

WTC Final 2023: ಫೈನಲ್​ಗೂ ಮುನ್ನ ಕ್ರಿಕೆಟ್ ದೇವರು ನೀಡಿದ ಸಲಹೆಯನ್ನು ಕಡೆಗಣಿಸಿದ ಭಾರತಕ್ಕೆ ಸೋಲಿನ ಶಾಕ್..!

ಆರ್ಡಿನರ್ ಶಾಟ್ ಸೆಲೆಕ್ಷನ್

ಕೊಹ್ಲಿಯ ಈ ಕಳಪೆ ಶಾಟ್ ಆಯ್ಕೆಯ ಬಗ್ಗೆ ಅಸಮಾಧಾನ ಹೊರಹಾಕಿರುವ ಭಾರತದ ಮಾಜಿ ಆಟಗಾರ ಸುನೀಲ್ ಗವಾಸ್ಕರ್, ಕೊಹ್ಲಿ ಆಡಿದ ಶಾಟ್ ಸಾಕಷ್ಟು ಸಾಮಾನ್ಯ ಹೊಡೆತವಾಗಿತ್ತು. ಆಫ್ ಸ್ಟಂಪ್‌ನ ಹೊರಗೆ ಹೋಗುವ ಚೆಂಡನ್ನು ಆಡಲು ಹೋಗಿ ಕೊಹ್ಲಿ ಎಡವಿದರು. ಆ ಶಾಟ್ ಆಡುವುದಕ್ಕಿಂತ ಮುಂಚೆ ಈ ರೀತಿಯ ಚೆಂಡುಗಳನ್ನು ಆಡುವ ಗೋಜಿಗೆ ಕೊಹ್ಲಿ ಹೋಗಲಿಲ್ಲ. ಆದರೆ ಅರ್ಧಶತಕದ ಸಮೀಪದಲ್ಲಿದ್ದ ಕೊಹ್ಲಿ, ಕೇವಲ ಒಂದು ರನ್ ಬಾರಿಸಿದರೆ, ಅರ್ಧಶತಕ ಪೂರ್ಣಗೊಳ್ಳಲಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಬಾಲನ್ನು ಆಡಲು ಯತ್ನಿಸಿರಬೇಕು. ಕೆಲವೊಮ್ಮೆ ನೀವು ಯಾವುದಾದರೂ ಅಪರೂಪದ ಕ್ಷಣಕ್ಕೆ ಸಮೀಪದಲ್ಲಿರುವಾಗ ಈ ರೀತಿಯ ಘಟನೆ ಸಂಭವಿಸುತ್ತದೆ ಎಂದು ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್​ನಲ್ಲಿ ಹೇಳಿದ್ದಾರೆ.

ರಹಾನೆ- ಜಡೇಜಾ ಕೂಡ ಅದೇ ತಪ್ಪು ಮಾಡಿದರು

ಜಡೇಜಾ ಹಾಗೂ ರಹಾನೆ ಅವರ ಶಾಟ್ ಆಯ್ಕೆಯನ್ನು ಉದಾಹರಣೆಯಾಗಿ ನೀಡಿದ ಗವಾಸ್ಕರ್, ಮೊದಲ ಇನ್ನಿಂಗ್ಸ್​ನಲ್ಲಿ ಜಡೇಜಾ ಕೂಡ ಇದೇ ತಪ್ಪನ್ನು ಮಾಡಿದರು. 48ರ ಸಮೀಪದಲ್ಲಿದ್ದ ಜಡೇಜಾ ಇನ್ನು 2 ರನ್ ಕದ್ದರೆ ಅರ್ಧಶತಕ ಪೂರ್ಣಗೊಳ್ಳಲಿದೆ ಎಂಬ ಆತುರದಿಂದ ಲಿಯಾನ್ ಬೌಲಿಂಗ್​ನಲ್ಲಿ ಕ್ಯಾಚಿತ್ತು ಔಟಾದರು. ಹಾಗೆಯೇ ರಹಾನೆ ಕೂಡ 46 ರನ್ ಬಾರಿಸಿದ್ದಾಗ ಇಂತಹದ್ದೇ ಯೋಚನೆಯಲ್ಲಿ ವಿಕೆಟ್ ಕೈಚೆಲ್ಲಿದರು. ಅದಕ್ಕೂ ಮುನ್ನ ಈ ಇಬ್ಬರು ಅಂತಹ ಶಾಟ್ ಆಡುವ ಪ್ರಯತ್ನ ಮಾಡಿರಲಿಲ್ಲ. ಆದರೆ ಅರ್ಧಶತಕದ ಬಳಿಗೆ ಬಂದಾಗ ಲಯ ತಪ್ಪಿದರು ಎಂದು ಗವಾಸ್ಕರ್ ಹೇಳಿದ್ದಾರೆ.

ನೀವು ಕೊಹ್ಲಿಯನ್ನೇ ಕೇಳಬೇಕು

ಇನ್ನು ವಿರಾಟ್ ಕೊಹ್ಲಿಯ ವಿಕೆಟ್ ಬಗ್ಗೆ ಮಾತನಾಡಿದ ಗವಾಸ್ಕರ್, ಇದು ಕೆಟ್ಟ ಶಾಟ್ ಆಗಿತ್ತು. ಕೊಹ್ಲಿ ಅವರು ಯಾವ ಶಾಟ್ ಆಡಿದರು ಎಂದು ನೀವೇ ಕೇಳಬೇಕು. ಪಂದ್ಯವನ್ನು ಹೇಗೆ ಗೆಲ್ಲಬೇಕು ಎಂಬುದರ ಕುರಿತು ಸಾಕಷ್ಟು ಮಾತನಾಡುವ ಕೊಹ್ಲಿ, ಈ ಪಂದ್ಯವನ್ನು ಗೆಲ್ಲಬೇಕೆಂದರೆ ನಾನು ಬಿಗ್ ಇನ್ನಿಂಗ್ಸ್ ಆಡಬೇಕು ಎಂಬುದರ ಅರಿವಿಲ್ಲವೇ. ಆಪ್​ ಸ್ಟಂಪ್​ನ ಹೊರಗೆ ಹೋಗುವ ಚೆಂಡುಗಳನ್ನು ಆಡಿದರೆ ಅದು ಹೇಗೆ ಅಂತಹ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತದೆ ಎಂದು ಹೇಳುವ ಮೂಲಕ ಕೊಹ್ಲಿಯ ಶಾಟ್ ಆಯ್ಕೆಯ ಬಗ್ಗೆ ಗವಾಸ್ಕರ್ ಅಸಮಾಧನಗೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ