WTC 2025 Final: ಮೊದಲ ದಿನವೇ 14 ವಿಕೆಟ್ ಪತನ

South Africa vs Australia, Final: ಲಂಡನ್​ನ ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಬೌಲರ್​ಗಳು ಪರಾಕ್ರಮ ಮರೆದಿದ್ದು, ಮೊದಲ ದಿನದಾಟವೇ 14 ವಿಕೆಟ್​ಗಳು ಉರುಳಿದೆ.

WTC 2025 Final: ಮೊದಲ ದಿನವೇ 14 ವಿಕೆಟ್ ಪತನ
Sa Vs Aus

Updated on: Jun 12, 2025 | 7:39 AM

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ (WTC25 Final) ಪಂದ್ಯದ ಮೊದಲ ದಿನದಾಟವೇ ಬೌಲರ್​ಗಳು ಪರಾಕ್ರಮ ಮರೆದಿದ್ದಾರೆ. ಈ ಪರಾಕ್ರಮದಿಂದಾಗಿ ಮೊದಲ ದಿನವೇ 14 ವಿಕೆಟ್​ಗಳು ಉರುಳಿವೆ. ಲಂಡನ್​ನ ಲಾರ್ಡ್ಸ್​​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್​ಗಳು 67 ರನ್​ಗಳಿಗೆ 4 ವಿಕೆಟ್ ಉರುಳಿಸಿದ್ದರು.

ಈ ಹಂತದಲ್ಲಿ ಜೊತೆಗೂಡಿದ ಸ್ಟೀವ್ ಸ್ಮಿತ್ ಹಾಗೂ ಬ್ಯೂ ವೆಬ್​ಸ್ಟರ್  5ನೇ ವಿಕೆಟ್​​ಗೆ 79 ರನ್​ಗಳನ್ನು ಪೇರಿಸಿದರು. ಆದರೆ ತಂಡದ ಮೊತ್ತ 147 ಆಗಿದ್ದ ವೇಳೆ ಸ್ಟೀವ್ ಸ್ಮಿತ್ (66) ವಿಕೆಟ್ ಒಪ್ಪಿಸಿದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ವೆಬ್​ಸ್ಟರ್ 92 ಎಸೆತಗಳಲ್ಲಿ 11 ಫೋರ್​ಗಳೊಂದಿಗೆ 72 ರನ್​ಗಳ ಕೊಡುಗೆ ನೀಡಿದರು. ಆದರೆ ಆ ಬಳಿಕ ಬಂದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 212 ರನ್​ಗಳಿಗೆ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು.

ಸೌತ್ ಆಫ್ರಿಕಾ ಪರ 15.4 ಓವರ್​ಗಳನ್ನು ಎಸೆದ ಕಗಿಸೊ ರಬಾಡ 51 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಮಾರ್ಕೊ ಯಾನ್ಸೆನ್ 3 ವಿಕೆಟ್ ಪಡೆದು ಮಿಂಚಿದರು.

ಸೌತ್ ಆಫ್ರಿಕಾ ಮೊದಲ ಇನಿಂಗ್ಸ್​:

ಮೊದಲ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ಪೇರಿಸಿದ 212 ರನ್​ಗಳಿಗೆ ಉತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಮೊದಲ ಓವರ್​ನಲ್ಲೇ ಐಡೆನ್ ಮಾರ್ಕ್ರಾಮ್ (0) ವಿಕೆಟ್ ಕಬಳಿಸಿ ಮಿಚೆಲ್ ಸ್ಟಾರ್ಕ್​ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಇದರ ಬೆನ್ನಲ್ಲೇ ರಯಾನ್ ರಿಕೆಲ್ಟನ್ (16) ಕೂಡ ಸ್ಟಾರ್ಕ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ವಿಯಾನ್ ಮುಲ್ಡರ್​ (11) ಗೆ ಪ್ಯಾಟ್ ಕಮಿನ್ಸ್ ಪೆವಿಲಿಯನ್ ಹಾದಿ ತೋರಿಸಿದರೆ, ಜೋಶ್ ಹೇಝಲ್​ವುಡ್ ಎಸೆತದಲ್ಲಿ ಟ್ರಿಸ್ಟನ್ ಸ್ಟಬ್ಸ್ (1) ಔಟಾದರು. ಈ ಮೂಲಕ ಮೊದಲ ದಿನದಾಟ ಮುಕ್ತಾಯದ ವೇಳೆ ಸೌತ್ ಆಫ್ರಿಕಾ ತಂಡವು 4 ವಿಕೆಟ್ ಕಳೆದುಕೊಂಡು ಕೇವಲ 43 ರನ್​ ಮಾತ್ರ ಕಲೆಹಾಕಿದೆ.

ಒಂದೇ ದಿನ 14 ವಿಕೆಟ್​:

ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲ ದಿನವೇ ಬೌಲರ್​ಗಳು ಪರಾಕ್ರಮ ಮರೆದಿರುವ ಕಾರಣ, ಫೈನಲ್ ಫೈಟ್​ ಮತ್ತಷ್ಟು ರೋಚಕತೆಯನ್ನು ಸೃಷ್ಟಿಸಿದೆ. ಅದರಲ್ಲೂ ಉಭಯ ತಂಡಗಳಲ್ಲೂ ಅತ್ಯುತ್ತಮ ಬೌಲರ್​ಗಳಿರುವಾಗ ಕಾರಣ ಈ ಪಂದ್ಯವು 5ನೇ ದಿನದಾಟಕ್ಕೆ ಕಾಲಿಡಲಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ಮೊದಲ ದಿನದಾಟದಲ್ಲಿ ಸೌತ್ ಆಫ್ರಿಕಾ ಆಸ್ಟ್ರೇಲಿಯಾ ತಂಡದ 10 ವಿಕೆಟ್ ಕಬಳಿಸಿದರೆ, ಕೇವಲ 22 ಓವರ್​ಗಳಲ್ಲಿ ಆಸ್ಟ್ರೇಲಿಯಾ ತಂಡವು ಸೌತ್ ಆಫ್ರಿಕಾ ತಂಡದ 4 ವಿಕೆಟ್ ಉರುಳಿಸಿದೆ. ಹೀಗಾಗಿ ಮೊದಲ ಇನಿಂಗ್ಸ್​ಗಳಲ್ಲಿ ಮುನ್ನಡೆ ಸಾಧಿಸಿದ ಬೇಕಿದ್ದರೆ ದ್ವಿತೀಯ ದಿನದಾಟದಲ್ಲಿ ಸೌತ್ ಆಫ್ರಿಕಾ ಪರ ಬ್ಯಾಟರ್​ಗಳು ಕ್ರೀಸ್ ಕಚ್ಚಿ ನಿಲ್ಲಲೇಬೇಕು.

ಉಭಯ ತಂಡಗಳ ಪ್ಲೇಯಿಂಗ್ 11:

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ರಯಾನ್ ರಿಕೆಲ್ಟನ್ , ಟ್ರಿಸ್ಟನ್ ಸ್ಟಬ್ಸ್ , ಟೆಂಬಾ ಬವುಮಾ (ನಾಯಕ) , ಡೇವಿಡ್ ಬೆಡಿಂಗ್ಹ್ಯಾಮ್ , ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್) , ವಿಯಾನ್ ಮುಲ್ಡರ್ , ಮಾರ್ಕೊ ಯಾನ್ಸೆನ್ , ಕೇಶವ್ ಮಹಾರಾಜ್ , ಕಗಿಸೊ ರಬಾಡ , ಲುಂಗಿ ಎನ್ಗಿಡಿ.

ಇದನ್ನೂ ಓದಿ: ಐಪಿಎಲ್​ನ 3 ತಂಡಗಳು ಬ್ಯಾನ್, 2 ಟೀಮ್​​ಗಳು ಕ್ಯಾನ್ಸಲ್

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್ , ಕ್ಯಾಮರೋನ್ ಗ್ರೀನ್ , ಸ್ಟೀವನ್ ಸ್ಮಿತ್ , ಟ್ರಾವಿಸ್ ಹೆಡ್ , ಬ್ಯೂ ವೆಬ್‌ಸ್ಟರ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ನಾಥನ್ ಲಿಯಾನ್ , ಜೋಶ್ ಹೇಝಲ್​ವುಡ್.