ಭಾರತವನ್ನು ಎರಡೆರಡು ಮಾದರಿಗಳಲ್ಲಿ ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2000 ನೇ ಇಸವಿಯಲ್ಲಿ ಭಾರತ ಕ್ರಿಕೆಟ್ಗೆ ಕಾಲಿಟ್ಟಿದ್ದ ಯುವಿ 2007 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಹಾಗೂ 2011 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಅನ್ನು ಟೀಂ ಇಂಡಿಯಾ ಗೆದ್ದುಕೊಳ್ಳುವಲ್ಲಿ ಸಾಕಷ್ಟು ಕೊಡುಗೆ ನೀಡಿದ್ದರು. ಈ ಎರಡು ವಿಶ್ವಕಪ್ಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ಯುವಿ ಅಮೋಘ ಪ್ರದರ್ಶನ ನೀಡಿದ್ದರು. ಅದರಲ್ಲೂ ಬ್ಯಾಟಿಂಗ್ನಲ್ಲಿ ಸುನಾಮಿಯನ್ನೇ ಎಬ್ಬಿಸಿದ್ದ ಯುವಿ ರನ್ಗಳ ಗುಡ್ಡೆ ಹಾಕಿದ್ದರು. ಆದಾಗ್ಯೂ ಕೇವಲ 3 ವರ್ಷಗಳ ನಂತರ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ತಮ್ಮ ಆಮೆಗತಿಯ ಬ್ಯಾಟಿಂಗ್ನಿಂದಾಗಿ ತಂಡದ ಸೋಲಿಗೆ ಯುವಿ ಕಾರಣರಾಗಿದ್ದರು. ಇದರಿಂದಾಗಿ ಅವರ ಮನೆಯ ಮೇಲೆ ಅಭಿಮಾನಿಗಳು ಕಲ್ಲು ತೂರಾಟ ಕೂಡ ನಡೆಸಿದ್ದರು.
ವಾಸ್ತವವಾಗಿ ಕ್ರಿಕೆಟ್ ಲೋಕದಲ್ಲಿ ಯುವರಾಜ್ ಸಿಂಗ್ ಅವರನ್ನು ಸಿಕ್ಸರ್ ಕಿಂಗ್ ಎಂದು ಕರೆಯಲಾಗುತ್ತದೆ. 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದಾಖಲೆ ಅವರ ಹೆಸರಿನಲ್ಲಿದೆ. ಅಲ್ಲದೆ ಅವರು ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ದಾಖಲೆಯನ್ನೂ ನಿರ್ಮಿಸಿದ್ದಾರೆ. ಆದರೆ ಏಪ್ರಿಲ್ 6, 2014 ರ ರಾತ್ರಿ, ಬಹುಶಃ ಯುವರಾಜ್ ಸಿಂಗ್ ಅವರ ವೃತ್ತಿಜೀವನದ ಕೆಟ್ಟ ದಿನವಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಅಂದು ಮೀರ್‌ಪುರದ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ನಡೆದಿತ್ತು. ಇದೇ ಪಂದ್ಯದಲ್ಲಿ ಯುವರಾಜ್ ಸಿಂಗ್ ತಮ್ಮ ಆಮೆಗತಿಯ ಬ್ಯಾಟಿಂಗ್ನಿಂದಾಗಿ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಟಿ20 ಮಾದರಿಯಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈಯುತ್ತಿದ್ದ ಯುವರಾಜ್ ಸಿಂಗ್ ಅಂದು ಶ್ರೀಲಂಕಾ ವಿರುದ್ಧ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮಾತ್ರ ಬರೋಬ್ಬರಿ 21 ಎಸೆತಗಳನ್ನು ಆಡಿ 52.38 ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 11 ರನ್ ಗಳಿಸಿದ್ದರು. ಅಚ್ಚರಿಯೆಂದರೆ ಈ ಪಂದ್ಯದಲ್ಲಿ 11 ನೇ ಓವರ್‌ನಲ್ಲೇ ಕ್ರೀಸ್‌ಗೆ ಬಂದ ಯುವಿ, ಅಂತಿಮವಾಗಿ 19ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಈ ನಡುವೆ 21 ಎಸೆತಗಳನ್ನಾಡಿದ ಯುವಿ ಬರೋಬ್ಬರಿ 9 ಡಾಟ್ ಬಾಲ್‌ಗಳನ್ನು ಆಡಿದ್ದರು.
ಮೇಲೆ ಹೇಳಿದಂತೆ ಯುವಿ19 ನೇ ಓವರ್‌ನಲ್ಲಿ ಔಟಾದರು. ಆದಾಗ್ಯೂ ಯುವಿ ಇಷ್ಟು ದೀರ್ಘಾವಧಿ ಬ್ಯಾಟಿಂಗ್ ಮಾಡಿದರಾದರೂ ಅವರಿಗೆ ಒಂದೇ ಒಂದು ಬೌಂಡರಿ ಹೊಡೆಯಲು ಸಾಧ್ಯವಾಗಲಿಲ್ಲ. ಯುವರಾಜ್ ಅವರ ನಿಧಾನಗತಿಯ ಬ್ಯಾಟಿಂಗ್‌ನ ಪರಿಣಾಮವೆಂದರೆ ಟೀಂ ಇಂಡಿಯಾ 20 ಓವರ್‌ಗಳಲ್ಲಿ ಕೇವಲ 130 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಇನ್ನು 13 ಎಸೆತಗಳು ಬಾಕಿ ಇರುವಂತೆಯೇ ಕೇವಲ 4 ವಿಕೆಟ್ ಕಳೆದುಕೊಂಡು ಟಿ20 ವಿಶ್ವಕಪ್ ಗೆದ್ದುಕೊಂಡಿತು.
ಮಿರ್‌ಪುರದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋತ ಕೂಡಲೇ ಕೋಪಗೊಂಡ ಭಾರತೀಯ ಅಭಿಮಾನಿಗಳು ಯುವರಾಜ್ ಮನೆಗೆ ಮುತ್ತಿಗೆ ಹಾಕಿದ್ದರು. ಚಂಡೀಗಢದಲ್ಲಿರುವ ಯುವರಾಜ್ ಸಿಂಗ್ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಅಲ್ಲದೆ ಈ ಸೋಲಿನ ಹೊಣೆಯನ್ನು ಹೊತ್ತುಗೊಂಡಿದ್ದ ಯುವರಾಜ್ ಸಿಂಗ್, ಈ ಸೋಲಿಗೆ ನಾನೇ ಹೊಣೆ. ಆ ದಿನ ನಾನು ಅತ್ಯಂತ ಕಳಪೆಯಾಗಿ ಆಡಿದ್ದೆ. ನಾನು ಒಂದು ಅಥವಾ ಎರಡು ಓವರ್‌ಗಳಲ್ಲಿ ಸಾಕಷ್ಟು ಡಾಟ್ ಬಾಲ್‌ಗಳನ್ನು ಆಡಿದೆ. ಆ ದಿನ ಮಾಲಿಂಗ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದರು.
ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಕೂಡ ಅವರನ್ನು ಸರಿಯಾಗಿ ಆಡಲು ಸಾಧ್ಯವಾಗಲಿಲ್ಲ. ನಾನು ಕಳಪೆಯಾಗಿ ಆಡಿದ್ದೇನೆ ಎಂದು ನಾನೇ ಒಪ್ಪಿಕೊಳ್ಳುತ್ತೇನೆ. ದುರದೃಷ್ಟಕರ ಸಂಗತಿಯೆಂದರೆ ಅದು ಟಿ20 ವಿಶ್ವಕಪ್ ಫೈನಲ್ ಆಗಿತ್ತು. ಬೇರೆ ಯಾವುದೇ ಪಂದ್ಯವಾಗಿದ್ದರೆ ಇಷ್ಟು ವ್ಯತ್ಯಾಸ ಇರುತ್ತಿರಲಿಲ್ಲ. ಇದರಿಂದ ಅನೇಕ ಜನರು ನನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದರು. ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರು ನನ್ನ ಮೇಲೆ ಕೂಗಾಡುತ್ತಿದ್ದರು. ನನ್ನ ಮನೆಗೆ ಕಲ್ಲು ತೂರಲಾಯಿತು. ಆ ದಿನ ನಾನು ಮನೆಗೆ ತಲುಪಿದಾಗ, ನಾನು 6 ಸಿಕ್ಸರ್‌ಗಳನ್ನು ಹೊಡೆದ ನನ್ನ ಬ್ಯಾಟ್‌ನತ್ತ ನೋಡುತ್ತಿದ್ದೆ. ನಾನು ಅದರ ಮೇಲೆ ನನ್ನ ಇಂಡಿಯಾ ಕ್ಯಾಪ್ ಅನ್ನು ಸಹ ನೋಡುತ್ತಿದ್ದೆ. ಆ ದಿನ ನನ್ನ ಕೆರಿಯರ್ ಮುಗಿದೇ ಹೋಯ್ತು ಅನ್ನಿಸಿತು ಎಂದು ಯುವಿ ಹೇಳಿಕೊಂಡಿದ್ದರು.
ಇಷ್ಟೆಲ್ಲಾ ವಿಷಯಗಳ ನಡುವೆಯೂ ಯುವರಾಜ್ ಸಿಂಗ್ ಛಲ ಬಿಡಲಿಲ್ಲ. 2017 ರವರೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಯುವಿ ಐಪಿಎಲ್‌ನಲ್ಲೂ ಮ್ಯಾಜಿಕ್ ಮಾಡಿದ್ದರು. ಅದೇ ವರ್ಷದಲ್ಲಿ ಯುವರಾಜ್ ಅವರ ಕಾರಣದಿಂದಾಗಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಸೋತಿತು ಎಂಬ ಆರೋಪ ಬಂದಾಗಲೂ ಆರ್ಸಿಬಿ ಅವರನ್ನು ಐಪಿಎಲ್‌ನಲ್ಲಿ 14 ಕೋಟಿ ರೂ.ಗೆ ದಾಖಲೆ ಬೆಲೆಗೆ ಖರೀದಿಸಿತು. ಅಷ್ಟೇ ಅಲ್ಲ, 2015ರಲ್ಲಿಯೇ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ 16 ಕೋಟಿ ರೂ.ಗೆ ದಾಖಲೆ ಬೆಲೆಗೆ ಖರೀದಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:11 pm, Thu, 12 December 24