ಸುಮಾರು ದಿನಗಳಿಂದ ಕೇಳಿಬರುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ (Yuzvendra Chahal) ಹಾಗೂ ಧನಶ್ರೀ ವರ್ಮಾ (Dhanashree Verma) ಅವರ ವಿಚ್ಛೇದನ ವದಂತಿಗೆ ಕೊನೆಗೂ ತೆರೆ ಬಿದ್ದಿದೆ. ದಂಪತಿಗಳಿಬ್ಬರಿಗೆ ಇಂದು ಅಧಿಕೃತವಾಗಿ ವಿಚ್ಛೇದನ ಸಿಕ್ಕಿದೆ. ಸುಮಾರು ಎರಡೂವರೆ ವರ್ಷಗಳಿಂದ ಬೇರೆ ಬೇರೆ ವಾಸುತ್ತಿದ್ದ ಈ ಜೋಡಿಯ ವಿಚ್ಛೇದನ ಮೇಲ್ಮನವಿಯನ್ನು ಬಾಂದ್ರಾದ ಕೌಟುಂಬಿಕ ನ್ಯಾಯಾಲಯ ಅಂಗೀಕರಿಸಿದೆ. ಇದರೊಂದಿಗೆ, ಪ್ರೀತಿಸಿ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದ ಈ ಪ್ರಣಯ ಪಕ್ಷಿಗಳ ದಾಂಪತ್ಯ ಜೀವನ 4 ವರ್ಷ 3 ತಿಂಗಳಿಗೆ ಮುರಿದುಬಿದ್ದಿದೆ.
ಮಾರ್ಚ್ 20 ರ ಗುರುವಾರ, ಮುಂಬೈನ ಬಾಂದ್ರಾ ಕುಟುಂಬ ನ್ಯಾಯಾಲಯವು ವಿಚ್ಛೇದನದ ಕುರಿತು ಅಂತಿಮ ತೀರ್ಪು ನೀಡಿದೆ. ಈ ವಿಚಾರಣೆಗೆ ಚಾಹಲ್ ಮತ್ತು ಧನಶ್ರೀ ಪ್ರತ್ಯೇಕವಾಗಿ ಹಾಜರಿದ್ದರು. ಈ ಸಮಯದಲ್ಲಿ, ಇಬ್ಬರ ಪ್ರತಿಕ್ರಿಯೆಯನ್ನು ಪಡೆಯಲು ಮಾಧ್ಯಮದವರ ಗುಂಪು ಜಮಾಯಿಸಿತು. ಆದರೆ ಯಾರೂ ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ನಿರ್ಗಮಿಸಿದ್ದಾರೆ ಎಂದು ವರದಿಯಾಗಿದೆ.
ಡಿಸೆಂಬರ್ 24, 2020 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಚಾಹಲ್ ಮತ್ತು ಧನಶ್ರೀ ಮೂರು-ನಾಲ್ಕು ತಿಂಗಳ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದರು. ಅಂದಿನಿಂದ ಈ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಕೇಳಿಬರಲಾರಂಭಿಸಿದ್ದವು. ಆದಾಗ್ಯೂ ಈ ಸಂಬಂಧ ಯಾರೂ ಏನನ್ನು ಹೇಳದಿರುವಾಗ ವಿಚ್ಛೇದನ ವದಂತಿಗೆ ಪುಷ್ಠಿ ಸಿಕ್ಕಿತು. ಕಳೆದ ತಿಂಗಳಷ್ಟೇ ಈ ಇಬ್ಬರೂ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಮನವಿ ಸಲ್ಲಿಸಿದ್ದರು. ಇಬ್ಬರೂ 6 ತಿಂಗಳ ಕೂಲಿಂಗ್-ಆಫ್ ಅವಧಿಯಿಂದ ವಿನಾಯಿತಿ ನೀಡುವಂತೆ ಕೋರಿದ್ದರು, ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿತು.
ಚಾಹಲ್- ಧನಶ್ರೀ ವಿಚ್ಛೇದನ: ಮಾಜಿ ಮಡದಿಗೆ ಸಿಕ್ಕ ಜೀವನಾಂಶ ಎಷ್ಟು?
ಇದಾದ ನಂತರ ಇಬ್ಬರೂ ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಸಂಬಂಧ ಮಾರ್ಚ್ 19 ರ ಬುಧವಾರದಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಾರ್ಚ್ 20 ರಂದು ಈ ವಿಷಯವನ್ನು ಇತ್ಯರ್ಥಪಡಿಸುವಂತೆ ಬಾಂದ್ರಾ ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಿತ್ತು. ಅಲ್ಲದೆ ಕಳೆದ ಎರಡೂವರೆ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಎಂದು ಹೇಳಿದ್ದರಿಂದ ಹೈಕೋರ್ಟ್ ಅವರಿಬ್ಬರಿಗೂ ಕೂಲಿಂಗ್-ಆಫ್‌ನಿಂದ ವಿನಾಯಿತಿ ನೀಡಿತ್ತು. ಈ ವಿಚ್ಛೇದನಕ್ಕೆ ಪ್ರತಿಯಾಗಿ, ಚಹಾಲ್ ಧನಶ್ರೀಗೆ 4.75 ಕೋಟಿ ರೂಪಾಯಿಗಳನ್ನು ಜೀವನಾಂಶವಾಗಿ ನೀಡುವ ಒಪ್ಪಂದವೂ ಇತ್ತು. ಅದರಲ್ಲಿ 50 ಪ್ರತಿಶತದಷ್ಟು ಹಣವನ್ನು ಚಾಹಲ್ ಈಗಾಗಲೇ ಧನಶ್ರೀಗೆ ನೀಡಿದ್ದು, ಉಳಿದ ಹಣವನ್ನು ವಿಚ್ಛೇದನದ ಬಳಿಕ ನೀಡುವುದಾಗಿ ಒಡಂಬಡಿಕೆ ಆಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Thu, 20 March 25