ಐಪಿಎಲ್ 2022ರ (IPL 2022) ಮೆಗಾ ಹರಾಜಿಗೂ ಮುನ್ನ ಪ್ರಕಟಿಸಿದ ರಿಟೇನ್ ಆಟಗಾರರ ಪಟ್ಟಿಯಲ್ಲಿ ಕಂಡುಬಂದ ಅತಿ ದೊಡ್ಡ ಶಾಕಿಂಗ್ ವಿಷಯ ಎಂದರೆ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್‌ರನ್ನು (Yuzvendra Chahal) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಬಿಟ್ಟಿದ್ದು. 2014ರ ಐಪಿಎಲ್ ನಂತರ 2021 ಐಪಿಎಲ್ ವರೆಗೆ ಚಹಾಲ್ ಆರ್‌ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿ ಟೀಮ್ ಇಂಡಿಯಾಗೂ ಎಂಟ್ರಿಕೊಟ್ಟರು. ಐಪಿಎಲ್ನಲ್ಲಿ ಆರ್‌ಸಿಬಿ (RCB) ಪರ ಮಿಂಚುಹರಿಸಿದ ಚಹಾಲ್ ಒಟ್ಟು 113 ಪಂದ್ಯಗಳಿಂದ 139 ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಗುರುತಿಸಿಕೊಳ್ಳುವುದರೊಂದಿಗೆ ಕೊಹ್ಲಿಯ ನಂಬಿಕೆಯ ಬೌಲರ್ ಆಗಿದ್ದರು. ಆದರೆ, ಐಪಿಎಲ್ 2022ರ ವೇಳೆಗೆ ಅಚ್ಚರಿ ಎಂಬಂತೆ ಆರ್‌ಸಿಬಿ ಇವರನ್ನು ದಿಢೀರ್ ಆಗಿ ಕೈಬಿಟ್ಟಿತು. ಇದು ಸ್ವತಃ ಚಹಾಲ್ ಅವರಿಗೂ ನೋವುಂಟು ಮಾಡಿದೆ. ಇದೀಗ ಇದೇ ವಿಚಾರದ ಬಗ್ಗೆ ಚಹಾಲ್ ಮಾತನಾಡಿದ್ದು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.
ಚಹಾಲ್ ಅವರಿಗೆ ಆರ್‌ಸಿಬಿ ಕೇವಲ ಒಂದು ತಂಡವಾಗಿ ಇರಲಿಲ್ಲ. ಬೆಂಗಳೂರು ಅಭಿಮಾನಿಗಳ ಪ್ರೋತ್ಸಾಹ, ಸತತವಾಗಿ ಪಂದ್ಯವನ್ನು ಸೋತರು ಕೈಬಿಡದ ಫ್ಯಾನ್ಸ್ ನಿಯತ್ತಿಗೆ ಮನಸೋತಿದ್ದರು. ಇದಕ್ಕಾಗಿಯೆ ಈ ಹಿಂದೆ ಚಹಾಲ್ ಅವರು, ಆರ್‌ಸಿಬಿ ಹಾಗೂ ನನ್ನ ನಡುವೆ ವಿಶೇಷ ಸಂಬಂಧವಿದೆ, ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದಿದ್ದರು. ಪ್ರತಿ ಐಪಿಎಲ್ನಲ್ಲಿ ಆರ್ಸಿಬಿಗೆ ಬ್ರೇಕ್ ತಂದುಕೊಡುತ್ತಿದ್ದ ಬೌಲರ್ ಅನ್ನು ಫ್ರಾಂಚೈಸಿ ಹರಾಜಿನಲ್ಲೂ ಖರೀದಿಸಲು ಮಸಸ್ಸು ಮಾಡಲಿಲ್ಲ. ಈ ಬಗ್ಗೆ ಇದೀಗ ಚಹಾಲ್ ಬೇಸರ ಹೊರಹಾಕಿದ್ದಾರೆ.
“ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ತಂಡ ನನ್ನ ಬಳಿಕ ರಿಟೇನ್ ಆಗುವಿರಾ ಎಂದೂ ಕೇಳಲಿಲ್ಲ. ಕೇಳಿದ್ದರೆ ನಾನು ಕಣ್ಣುಮುಚ್ಚಿ ಇರಲು ಒಪ್ಪುತ್ತಿದ್ದೆ. ಹಣಕ್ಕಿಂತ ನನಗೆ ತಂಡದ ಜತೆಗಿನ ಬಾಂಧವ್ಯವೇ ಮುಖ್ಯವಾಗಿತ್ತು. ಆದರೆ ನನ್ನನ್ನು ರಿಟೇನ್ ಮಾಡಿಕೊಳ್ಳದೆ, ಹರಾಜಿನಲ್ಲಿ ಮರಳಿ ಖರೀದಿಸುವೆವು ಎಂದು ತಿಳಿಸಿದ್ದರು. ಹಣವೇ ಮುಖ್ಯವಾಯಿತೇ ಎಂದು ಆರ್‌ಸಿಬಿ ಫ್ಯಾನ್ಸ್ ಈಗಲೂ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಆರ್‌ಸಿಬಿ ತಂಡದಿಂದ ನನ್ನ ಜೀವನ ಸಾಕಷ್ಟು ಬದಲಾಗಿದೆ. ತಂಡದ ಅಭಿಮಾನಿಗಳೂ ಸಾಕಷ್ಟು ಪ್ರೀತಿ ನೀಡಿದ್ದರು. 2010ರಲ್ಲಿ ನಾನು ಐಪಿಎಲ್‌ನಲ್ಲಿ ಮೊದಲ ಬಾರಿ ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯನಾಗಿದ್ದೆ. ಹೀಗಾಗಿ ಮತ್ತೆ ಅಲ್ಲಿಗೇ ಮರಳಿರುವ ಖುಷಿಯೂ ಇದೆ,” ಎಂದು ಚಹಾಲ್ ಹೇಳಿದ್ದಾರೆ.
ಕಳೆದ 8 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಲ್ಲಿದ್ದ ಭಾರತದ ಅಗ್ರ ಸ್ಪಿನ್ನರ್ ಯಜ್ವೇಂದ್ರ ಚಹಾಲ್‌ರನ್ನು ರಾಜಸ್ಥಾನ್ ರಾಯಲ್ಸ್ ತಂಡ ಹರಾಜಿನಲ್ಲಿ 6.50 ಕೋಟಿ ರೂ.ಗೆ ಖರೀದಿಸಿತ್ತು. ಈ ಮೂಲಕ 8 ವರ್ಷಗಳ ಆರ್ಸಿಬಿಯೊಂದಗಿನ ಒಡನಾಟ 2022ಕ್ಕೆ ಅಂತ್ಯವಾಯಿತು. ಚಹಾಲ್ 2014ರಲ್ಲಿ ಮೂಲಬೆಲೆ 10 ಲಕ್ಷ ರೂ. ಗಳಿಗೆ ಆರ್‌ಸಿಬಿ ಸೇರಿದ್ದರು. ನಂತರ ಅದೇ ಮೊತ್ತಕ್ಕೆ 2017ರವರೆಗೂ ಆಡಿದ್ದ ಸ್ಪಿನ್ನರ್ 2018 ರಲ್ಲಿ 6 ಕೋಟಿ ರೂ. ಪಡೆದಿದ್ದರು.ಆದರೆ, 2022ರ ಆವೃತ್ತಿಗೂ ಮುನ್ನ ಬೆಂಗಳೂರು ಫ್ರಾಂಚೈಸಿ ಚಹಾಲ್‌ರನ್ನು ರಿಟೈನ್ ಮಾಡಿಕೊಂಡಿರಲಿಲ್ಲ. ಇವರ ಬದಲು ಆರ್‌ಸಿಬಿ ಹರಾಜಿನಲ್ಲಿ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಅವರನ್ನು 10.75 ಕೋಟಿ ರೂ. ಖರೀದಿ ಮಾಡಿತು. ಇವರು ಕಳೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ದುಬಾರಿ ಆಗಿದ್ದರು.
ಚಹಾಲ್ ತಂಡ ಇಂದು ಕಣಕ್ಕೆ:
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ನಡೆಯಲಿರುವ ಐದನೇ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ರೈಸರ್ಸ್ ಹೈದರಾಬಾದ್ ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಮುಖಾಮುಖಿ ಆಗಲಿದೆ. ಉಭಯ ತಂಡಗಳಿಗೂ ಇದು ಐಪಿಎಲ್ 2022ರ ಚೊಚ್ಚಲ ಪಂದ್ಯವಾಗಿದ್ದು ಯಾರು ಗೆಲುವಿನ ಆರಂಭ ಪಡೆದುಕೊಳ್ಳುತ್ತಾರೆ ಎಂಬುದು ನೋಡಬೇಕಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಯುಜ್ವೇಂದ್ರ ಚಹಾಲ್ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಮುಂಬರುವ ಟಿ20 ವಿಶ್ವಕಪ್‌ಗೆ ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡುವ ದೃಷ್ಟಿಯಿಂದ ಚಹಾಲ್ಗೆ ವೈಯಕ್ತಿಕವಾಗಿ ಈ ಟೂರ್ನಿ ಬಹುಮುಖ್ಯವಾಗಿದೆ.
SRH vs RR: ಐಪಿಎಲ್ನಲ್ಲಿಂದು ಹೈದರಾಬಾದ್-ರಾಜಸ್ಥಾನ್ ಮುಖಾಮುಖಿ: ಸಂಜು ಸ್ಯಾಮ್ಸನ್ ಮೇಲೆ ಎಲ್ಲರ ಕಣ್ಣು
IPL 2022, GT vs LSG: ಹಾರ್ದಿಕ್ ಮ್ಯಾಜಿಕ್: ಮೊದಲ ಪಂದ್ಯದಲ್ಲೇ ಕೆಎಲ್ ರಾಹುಲ್ ನಾಯಕನಾಗಿ ಫೇಲ್