ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra chahal) ಅವರ ಪತ್ನಿ ಧನಶ್ರೀ ವರ್ಮಾ (Dhanashree Verma) ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆಸ್ಪತ್ರೆಯಲ್ಲಿನ ಫೋಟೋ ಶೇರ್ ಮಾಡುವ ಮೂಲಕ ಈ ಬಗ್ಗೆ ಧನಶ್ರೀ ಮಾಹಿತಿ ನೀಡಿದ್ದಾರೆ. ಈ ಹಿಂದೆ ಡ್ಯಾನ್ಸ್ ಮಾಡುವ ವೇಳೆ ಧನಶ್ರೀ ಜಾರಿ ಬಿದ್ದಿದ್ದರು. ಇದರಿಂದ ಮೊಣಕಾಲಿಗೆ ಗಂಭೀರ ಗಾಯವಾಗಿತ್ತು. ಅಲ್ಲದೆ ಅಸ್ಥಿರಜ್ಜು ಮುರಿದಿದ್ದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದರು. ಇದೀಗ ಯಶಸ್ವಿ ಸರ್ಜರಿ ಮಾಡಲಾಗಿದೆ ಎಂದು ಧನಶ್ರೀ ವರ್ಮಾ ತಿಳಿಸಿದ್ದಾರೆ.
“ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಜೀವನದಲ್ಲಿ ಹಿನ್ನಡೆಯು ಪುನರಾಗಮನಕ್ಕೆ ಉತ್ತಮ ವೇದಿಕೆಯಾಗಿದೆ. ನಾನು ಸಹ ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡುತ್ತೇನೆ. ಇದು ದೇವರ ಇಚ್ಛೆ. ನಿಮ್ಮ ಪ್ರಾರ್ಥನೆಗಾಗಿ ಧನ್ಯವಾದಗಳು” ಎಂದು ಧನಶ್ರೀ ವರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇನ್ನು ಪತ್ನಿಯ ಈ ಪೋಸ್ಟ್ಗೆ ಚಹಾಲ್ ಕೂಡ ಕಾಮೆಂಟ್ ಮಾಡಿದ್ದಾರೆ. ಹೃದಯದ ಎಮೋಜಿಯನ್ನು ಪೋಸ್ಟ್ ಮಾಡುವ ಮೂಲಕ ‘ಬೇಗ ಗುಣಮುಖರಾಗಿ’ ಎಂದು ಯುಜ್ವೇಂದ್ರ ಚಹಾಲ್ ತಿಳಿಸಿದ್ದಾರೆ. ಇದಲ್ಲದೇ ಭಾರತದ ಸ್ಟಾರ್ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್, ಅಶ್ವಿನ್ ಪತ್ನಿ ಪ್ರೀತಿ ನಾರಾಯಣ್, ಯಶಸ್ವಿ ಜೈಸ್ವಾಲ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಕಾಮೆಂಟ್ ಮಾಡಿದ್ದಾರೆ.
ಚಹಾಲ್ ಡೈವೋರ್ಸ್ ವದಂತಿ:
ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಬಹುಚರ್ಚಿತ ಜೋಡಿಗಳಲ್ಲಿ ಒಂದಾದ ಯುಜ್ವೇಂದ್ರ ಚಹಾಲ್ (Yuzvendra Chahal ) ಮತ್ತು ಧನಶ್ರೀ ವರ್ಮಾ (Dhanashree Verma) ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಯಾಗಿತ್ತು. ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ‘ಚಹಾಲ್’ ಎಂಬ ಉಪನಾಮವನ್ನು ತೆಗೆದುಹಾಕಿದ್ದರು. ಮತ್ತೊಂದೆಡೆ ಚಹಾಲ್ “ಹೊಸ ಜೀವನವು ಲೋಡ್ ಆಗುತ್ತಿದೆ…” ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು. ಇದರೊಂದಿಗೆ ಚಹಾಲ್ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ. ಇಬ್ಬರೂ ದೂರವಾಗುತ್ತಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು.
ಈ ಊಹಾಪೋಹಗಳು ಮಹತ್ವ ಪಡೆದುಕೊಳ್ಳುತ್ತಿದ್ದಂತೆ, ನಮ್ಮ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವದಂತಿಗಳನ್ನು ನಂಬಬೇಡಿ ಎಂದು ಚಹಾಲ್ ತಿಳಿಸಿದ್ದರು. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ, ಸುಳ್ಳು ಸುದ್ದಿಗಳನ್ನು ಹರಬೇಡಿ ಎಂದು ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದರು. ಅಲ್ಲದೆ ಇಂತಹ ಸುಳ್ಳು ಸುದ್ದಿಯನ್ನು ಹರಿಬಿಡಬೇಡಿ ಎಂದು ಧನಶ್ರೀ ವರ್ಮಾ ಕೂಡ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಮನವಿ ಮಾಡಿದ್ದರು.