IPL 2023: ಐಪಿಎಲ್ ಆರಂಭಕ್ಕೂ ಮುನ್ನವೇ SRH ತಂಡದಲ್ಲಿ ಪ್ರಮುಖ ಬದಲಾವಣೆ..!
IPL 2023: ಐಪಿಎಲ್ 2023 ರ ಆರಂಭಕ್ಕೂ ಮುನ್ನವೇ ಕೆಕೆಆರ್ ತಂಡವು ಹೊಸ ಕೋಚ್ ಅನ್ನು ನೇಮಿಸಿದೆ. ಕಳೆದ ಬಾರಿ ಕೋಚ್ ಆಗಿದ್ದ ಬ್ರೆಂಡನ್ ಮೆಕಲಂ ಬದಲಿಗೆ ಚಂದ್ರಕಾಂತ್ ಪಂಡಿತ್ಗೆ ಹೊಸ ಜವಾಬ್ದಾರಿವಹಿಸಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಸೀಸನ್ 16 ಆರಂಭಕ್ಕೂ ಮುನ್ನವೇ ಪ್ರತಿ ತಂಡಗಳಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ. ಈಗಾಗಲೇ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಮ್ಮ ಕೋಚ್ಗಳನ್ನು ಬದಲಿಸಿದೆ. ಇದೀಗ ಈ ಪಟ್ಟಿಗೆ ಸನ್‌ರೈಸರ್ಸ್ ಹೈದರಾಬಾದ್ ಕೂಡ ಸೇರ್ಪಡೆಯಾಗಿದೆ. ಎಸ್ಆರ್ಹೆಚ್ ಫ್ರಾಂಚೈಸಿಯು ತಂಡದ ಮುಖ್ಯ ಕೋಚ್ ಸ್ಥಾನದಿಂದ ಆಸ್ಟ್ರೇಲಿಯಾದ ಟಾಮ್ ಮೂಡಿ ಅವರನ್ನು ವಜಾಗೊಳಿಸಿದೆ. ಇದರೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಕೂಡ ಹೊಸ ಕೋಚ್ ಕಾಣಿಸಿಕೊಳ್ಳುವುದು ಖಚಿತವಾಗಿದೆ.
ಟಾಮ್ ಮೂಡಿ ಇತ್ತೀಚೆಗೆ ಐಎಲ್‌ಟಿ-20 ಲೀಗ್ನಲ್ಲಿ ಡೆಸರ್ಟ್ ವೈಪರ್ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಯುಎಇಯ ಈ ಟಿ20 ಲೀಗ್ 2023ರ ಜನವರಿಯಿಂದ ಆರಂಭವಾಗಲಿದೆ. ಇದರ ಬೆನ್ನಲ್ಲೇ ಇದೀಗ ಎಸ್ಆರ್ಹೆಚ್ ತಂಡವು ಮೂಡಿ ಅವರನ್ನು ಕೈ ಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಈ ಹಿಂದೆ ಎಸ್ಆರ್ಹೆಚ್ ತಂಡದ ಕೋಚ್ ಆಗಿದ್ದ ಮೂಡಿ 2013 ರಿಂದ 2019ರವರೆಗೆ ಬಲಿಷ್ಠ ತಂಡವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ 2016 ರಲ್ಲಿ ಎಸ್ಆರ್ಹೆಚ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಮೂಡಿ ಪಾತ್ರ ಮಹತ್ವದ್ದಾಗಿತ್ತು. ಇದಾಗ್ಯೂ 2019ರ ಬಳಿಕ ತಮ್ಮ ಕೋಚ್ ಸ್ಥಾನವನ್ನು ತ್ಯಜಿಸಿದ್ದರು.
ಆದರೆ 2021 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಟಾಮ್ ಮೂಡಿ ಅವರನ್ನು ಮತ್ತೆ ಕರೆಸಿಕೊಂಡಿತು. ಅಲ್ಲದೆ ಕೋಚ್ ಸ್ಥಾನದಿಂದ ಟ್ರೆವರ್ ಬೇಲಿಸ್ ತೆಗೆದುಹಾಕುವ ಮೂಲಕ ಮತ್ತೆ ಸಂಪೂರ್ಣ ಜವಾಬ್ದಾರಿವಹಿಸಲಾಗಿತ್ತು. ಆದರೆ 2021 ಹಾಗೂ 2022 ರಲ್ಲಿ ಎಸ್ಆರ್ಹೆಚ್ ತಂಡವು ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ಇದೀಗ ಎಸ್ಆರ್ಹೆಚ್ ಫ್ರಾಂಚೈಸಿ ಕೋಚ್ ಸ್ಥಾನದಿಂದ ಟಾಮ್ ಮೂಡಿಯನ್ನು ವಜಾಗೊಳಿಸಲಾಗಿದೆ.
ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಹೊಸ ಕೋಚ್ ರೇಸ್ನಲ್ಲಿ ವೆಸ್ಟ್ ಇಂಡೀಸ್ನ ದಂತಕಥೆ ಬ್ರಿಯಾನ್ ಲಾರಾ ಹೆಸರು ಮುಂಚೂಣಿಯಲ್ಲಿದೆ. ಸದ್ಯ ಎಸ್ಆರ್ಹೆಚ್ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ಲಾರಾ ಅವರೇ ಮುಂಬರುವ ಸೀಸನ್ನಲ್ಲಿ ಎಸ್ಆರ್ಹೆಚ್ ತಂಡದ ಮುಖ್ಯ ಕೋಚ್ ಆಗುವ ಸಾಧ್ಯತೆಯಿದೆ.
ಕೆಕೆಆರ್-ಪಂಜಾಬ್ ಕಿಂಗ್ಸ್ ಕೋಚ್ಗಳ ಬದಲಾವಣೆ:
ಐಪಿಎಲ್ 2023 ರ ಆರಂಭಕ್ಕೂ ಮುನ್ನವೇ ಕೆಕೆಆರ್ ತಂಡವು ಹೊಸ ಕೋಚ್ ಅನ್ನು ನೇಮಿಸಿದೆ. ಕಳೆದ ಬಾರಿ ಕೋಚ್ ಆಗಿದ್ದ ಬ್ರೆಂಡನ್ ಮೆಕಲಂ ಬದಲಿಗೆ ಚಂದ್ರಕಾಂತ್ ಪಂಡಿತ್ಗೆ ಹೊಸ ಜವಾಬ್ದಾರಿವಹಿಸಲಾಗಿದೆ. ಇನ್ನು ಪಂಜಾಬ್ ಕಿಂಗ್ಸ್ ಕೂಡ ಮುಖ್ಯ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆಯನ್ನು ಕೈಬಿಟ್ಟಿದೆ. ಮುಂದಿನ ಸೀಸನ್ಗಾಗಿ ಪಂಜಾಬ್ ಕಿಂಗ್ಸ್ ಕುಂಬ್ಳೆ ಅವರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಹೀಗಾಗಿ ಪಂಜಾಬ್ ಪರ ಕೂಡ ಹೊಸ ಕೋಚ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.