SCO Vs ZIM: ಸೂಪರ್-12 ಸುತ್ತಿಗೆ ಎಂಟ್ರಿಕೊಟ್ಟ ಜಿಂಬಾಬ್ವೆ; ಟೀಂ ಇಂಡಿಯಾ ಇರುವ ಗುಂಪಿಗೆ ಎಂಟ್ರಿ

T20 World Cup 2022: ಹೋಬರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ 5 ವಿಕೆಟ್‌ಗಳಿಂದ ಸ್ಕಾಟ್‌ಲೆಂಡ್‌ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್‌ನ ಮುಂದಿನ ಸುತ್ತಿಗೆ ಟಿಕೆಟ್ ಪಡೆದುಕೊಂಡಿದೆ.

SCO Vs ZIM: ಸೂಪರ್-12 ಸುತ್ತಿಗೆ ಎಂಟ್ರಿಕೊಟ್ಟ ಜಿಂಬಾಬ್ವೆ; ಟೀಂ ಇಂಡಿಯಾ ಇರುವ ಗುಂಪಿಗೆ ಎಂಟ್ರಿ
ಜಿಂಬಾಬ್ವೆ ತಂಡ
Edited By:

Updated on: Oct 21, 2022 | 5:30 PM

8ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ (T20 World Cup 2022) ಜಿಂಬಾಬ್ವೆ (Zimbabwe) ತಂಡ ಮೊದಲ ಸುತ್ತಿನಲ್ಲಿ ಅಮೋಘ ಆಟ ಪ್ರದರ್ಶಿಸಿ ಸೂಪರ್‌-12 ಸುತ್ತಿಗೆ ಪ್ರವೇಶಿಸಿದೆ. ಹೋಬರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ 5 ವಿಕೆಟ್‌ಗಳಿಂದ ಸ್ಕಾಟ್‌ಲೆಂಡ್‌ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್‌ನ ಮುಂದಿನ ಸುತ್ತಿಗೆ ಟಿಕೆಟ್ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 132 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ತಂಡ 18.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು. 54 ಎಸೆತಗಳಲ್ಲಿ 58 ರನ್ ಗಳಿಸಿದ ಜಿಂಬಾಬ್ವೆ ನಾಯಕ ಕ್ರೇಗ್ ಎರ್ವಿನ್ ಗೆಲುವಿನ ಹೀರೋ ಎನಿಸಿಕೊಂಡರು. ಮತ್ತೊಮ್ಮೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸಿಕಂದರ್ ರಜಾ 23 ಎಸೆತಗಳಲ್ಲಿ 40 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಪಂದ್ಯದಲ್ಲಿ 170 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ ಸಿಕಂದರ್ ರಜಾ, ಬೌಲಿಂಗ್​ನಲ್ಲೂ ಕಮಾಲ್ ಮಾಡಿ, ಓವರ್‌ಗಳಲ್ಲಿ ಕೇವಲ 20 ರನ್‌ ನೀಡಿ ಒಂದು ವಿಕೆಟ್ ಪಡೆದರು. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಟಿ20 ವಿಶ್ವಕಪ್ ಇತಿಹಾಸಲ್ಲಿ ಜಿಂಬಾಬ್ವೆ ತಂಡ ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಮುಂದಿನ ಸುತ್ತಿಗೆ ಪ್ರವೇಶಿಸಿರುವುದು ದಾಖಲೆಯಾಗಿದೆ.

ಜಿಂಬಾಬ್ವೆಯ ಬಿಗಿ ಬೌಲಿಂಗ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾಟ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ತಂಡದ ಆರಂಭ ತೀರ ಕಳಪೆಯಾಗಿತ್ತು. ಮೊದಲ ಓವರ್‌ನಲ್ಲಿಯೇ ಆರಂಭಿಕ ಮೈಕೆಲ್ ಜೋನ್ಸ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಐದನೇ ಓವರ್​ನಲ್ಲಿ ಕ್ರಾಸ್ ವಿಕೆಟ್ ಉರುಳುವ ಮೂಲಕ ಸ್ಕಾಟ್ಲೆಂಡ್​ಗೆ ಎರಡನೇ ಆಘಾತ ಎದುರಾಯಿತು. ಆದರೆ ಮತ್ತೊಂದು ಬದಿಯಿಂದ ರನ್ ಕಲೆಹಾಕಿದ ಮಾನ್ಸೆ 51 ಎಸೆತಗಳಲ್ಲಿ 54 ರನ್ ಗಳಿಸಿ, ತಂಡವನ್ನು ಮುಜುಗರದಿಂದ ಪಾರು ಮಾಡಿದರು. ಇವರನ್ನು ಹೊರತುಪಡಿಸಿ ಇನ್ನುಳಿದಂತೆ ಬ್ಯಾರಿಂಗ್ಟನ್, ಮೆಕ್ಲಿಯೋಡ್, ಲಿಸ್ಕ್​ಗೆ ಹೆಚ್ಚು ರನ್​ ಗಳಿಸಲು ಸಾಧ್ಯವಾಗಲಿಲ್ಲ. ಜಿಂಬಾಬ್ವೆ ಪರ ತೆಂಡೈ ಚಟಾರಾ ಮತ್ತು ನಾಗರ್ವಾ ತಲಾ 2 ವಿಕೆಟ್ ಪಡೆದರೆ, ಮುಜರ್ಬಾನಿ, ಸಿಕಂದರ್ ರಜಾ ತಲಾ ಒಂದೊಂದು ವಿಕೆಟ್ ಪಡೆದರು.

ಇದನ್ನೂ ಓದಿ:T20 World Cup 2022: ಈ ಬಾರಿಯ ಟಿ20 ವಿಶ್ವಕಪ್​ ಆಡುತ್ತಿರುವ ಅತ್ಯಂತ ಹಿರಿಯ ಕ್ರಿಕೆಟಿಗರಿವರು..

ಪಂದ್ಯ ಗೆಲ್ಲಿಸಿದ ಮಧ್ಯಮ ಕ್ರಮಾಂಕ

ಕೇವಲ 133 ರನ್​ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡದ ಆರಂಭವೂ ಕೂಡ ಕಳಪೆಯಾಗಿತ್ತು. 7 ರನ್ ಗಳಿಸುವಷ್ಟರಲ್ಲೇ ತಂಡದ 2 ವಿಕೆಟ್​ಗಳು ಉರುಳಿದವು. ಆದರೆ ನಾಯಕ ಕ್ರೇಗ್ ಎರ್ವಿನ್ ಮತ್ತು ಸಿಕಂದರ್ ರಜಾ ನಾಲ್ಕನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟದೊಂದಿಗೆ ಜಿಂಬಾಬ್ವೆಯನ್ನು ಸೋಲಿನ ದವಡೆಯಿಂದ ಪಾರು ಮಾಡಿದರು. ಇಬ್ಬರೂ 34 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರೆ, ಅಂತಿಮವಾಗಿ ಇಬ್ಬರೂ 43 ಎಸೆತಗಳಲ್ಲಿ 64 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡು ಸ್ಕಾಟ್ಲೆಂಡ್‌ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಗಟ್ಟಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Fri, 21 October 22