AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಸ್ಸಿಯನ್ನು ಹಿಂದಿಕ್ಕಿ B.O.A.T ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೊ ರೊನಾಲ್ಡೊ

ಫುಟ್‌ಬಾಲ್ ಲೋಕದ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ನಡುವಿನ ಪೈಪೋಟಿಗೆ ಈಗ ಹೊಸದೊಂದು ಅಧ್ಯಾಯ ಸೇರ್ಪಡೆಯಾಗಿದೆ. ಫ್ರಾನ್ಸ್ ಫುಟ್‌ಬಾಲ್ ಇತ್ತೀಚೆಗೆ ಆಯೋಜಿಸಿದ್ದ ಸಾರ್ವಕಾಲಿಕ ಶ್ರೇಷ್ಠ ಬ್ಯಾಲನ್ ಡಿ'ಓರ್ ಪ್ರಶಸ್ತಿಗಾಗಿ ನಡೆದ ಜಾಗತಿಕ ಅಭಿಮಾನಿಗಳ ಮತದಾನದಲ್ಲಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಐತಿಹಾಸಿಕ ಜಯ ಸಾಧಿಸಿದ್ದಾರೆ. 

ಮೆಸ್ಸಿಯನ್ನು ಹಿಂದಿಕ್ಕಿ B.O.A.T ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೊ ರೊನಾಲ್ಡೊ
Messi - RonaldoImage Credit source: Ballon d'Or
ಝಾಹಿರ್ ಯೂಸುಫ್
|

Updated on: Oct 29, 2026 | 12:11 PM

Share

ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಯಾರು ಎಂಬ ದಶಕಗಳ ವಿವಾದಕ್ಕೆ ಅಭಿಮಾನಿಗಳು ಕೊನೆಗೂ ತೀರ್ಪು ನೀಡಿದ್ದಾರೆ. ಲಿಯೋನೆಲ್ ಮೆಸ್ಸಿ ವಿರುದ್ಧದ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಭರ್ಜರಿ ಜಯ ಸಾಧಿಸುವ ಮೂಲಕ ಚೊಚ್ಚಲ ಸಾರ್ವಕಾಲಿಕ ಶ್ರೇಷ್ಠ ಬ್ಯಾಲನ್ ಡಿ’ಓರ್ (Ballon d’Or of All Time – B.O.A.T.) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬ್ಯಾಲನ್ ಡಿ’ಓರ್ ಪ್ರಶಸ್ತಿಯ 70ನೇ ವರ್ಷಾಚರಣೆಯ ನೆನಪಿಗಾಗಿ ಫ್ರಾನ್ಸ್ ಫುಟ್‌ಬಾಲ್ ಮತ್ತು UEFA ಜಂಟಿಯಾಗಿ ಈ ವಿಶೇಷ ಜಾಗತಿಕ ಡಿಜಿಟಲ್ ಮತದಾನವನ್ನು ಆಯೋಜಿಸಿದ್ದವು. ಇತಿಹಾಸದಲ್ಲೇ ಅತ್ಯಂತ ವೈಭವಯುತ ಪ್ರದರ್ಶನ ನೀಡಿದ 10 ದಿಗ್ಗಜ ಆಟಗಾರರ ಶಾರ್ಟ್‌ಲಿಸ್ಟ್‌ನಲ್ಲಿ, ಅಭಿಮಾನಿಗಳು ರೊನಾಲ್ಡೊ ಅವರ ಸಾಂಪ್ರದಾಯಿಕ ಸೀಸನ್ ಅನ್ನು ಜಗತ್ತಿನ ಶ್ರೇಷ್ಠ ಅಭಿಯಾನ ಎಂದು ಆರಿಸಿದ್ದಾರೆ.

ರೊನಾಲ್ಡೊ ಮ್ಯಾಚೆಂಸ್ಟರ್ ಮ್ಯಾಜಿಕ್:

ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ವೃತ್ತಿಜೀವನದ ಮೊದಲ ಬ್ಯಾಲನ್ ಡಿ’ಓರ್ ಗೆದ್ದಿದ್ದ ಮ್ಯಾಂಚೆಸ್ಟರ್ ಯುನೈಟೆಡ್‌ನ 2007-08ರ ಅದ್ಭುತ ಸೀಸನ್‌ಗಾಗಿ ಅತಿ ಹೆಚ್ಚು ಮತಗಳನ್ನು ಪಡೆದು ಮೊದಲ ಸ್ಥಾನಕ್ಕೇರಿದ್ದಾರೆ. ಆ ಸೀಸನ್‌ನಲ್ಲಿ ರೊನಾಲ್ಡೊ ಒಟ್ಟು 42 ಗೋಲುಗಳನ್ನು ಬಾರಿಸಿದ್ದಲ್ಲದೆ, ಕ್ಲಬ್‌ಗೆ ಪ್ರೀಮಿಯರ್ ಲೀಗ್ ಮತ್ತು UEFA ಚಾಂಪಿಯನ್ಸ್ ಲೀಗ್ ಎರಡೂ ಟ್ರೋಫಿಗಳನ್ನು ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ಮತ್ತೊಂದೆಡೆ, ಅರ್ಜೆಂಟೀನಾದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಅವರು ಬಾರ್ಸಿಲೋನಾ ಕ್ಲಬ್ ಪರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ದಾಖಲೆಯ 91 ಗೋಲುಗಳನ್ನು ಹೊಡೆದಿದ್ದ 2012ರ ಅಭಿಯಾನಕ್ಕಾಗಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅಂದರೆ ಕ್ರಿಸ್ಟಿಯಾನೊ ರೊನಾಲ್ಡೊ 2008ರ ಮ್ಯಾಂಚೆಸ್ಟರ್ ಯುನೈಟೆಡ್​ನಲ್ಲಿನ ಪರಾಕ್ರಮಕ್ಕೆ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ. ಈ ಮೂಲಕ ಸಾರ್ವಕಾಲಿಕ ಶ್ರೇಷ್ಠ ಬ್ಯಾಲನ್ ಡಿ’ಓರ್ ಪ್ರಶಸ್ತಿಗೆ ರೊನಾಲ್ಡೊ ಅವರನ್ನು ಆಯ್ಕೆ ಮಾಡಿದ್ದಾರೆ.

ಟಾಪ್ 10 ಶ್ರೇಯಾಂಕ:

ವಿಶ್ವದ ಫುಟ್‌ಬಾಲ್ ಪ್ರೇಮಿಗಳ ಸಾರ್ವಜನಿಕ ಮತದಾನದ ಮೂಲಕ ನಿರ್ಧಾರವಾದ ಅಂತಿಮ ಫಲಿತಾಂಶದ ಪಟ್ಟಿ ಇಲ್ಲಿದೆ:

ಶ್ರೇಯಾಂಕ ಆಟಗಾರ ಮತ್ತು ಆ ವರ್ಷದ ಪ್ರದರ್ಶನ
1 ಕ್ರಿಸ್ಟಿಯಾನೊ ರೊನಾಲ್ಡೊ (2008)
2 ಲಿಯೋನೆಲ್ ಮೆಸ್ಸಿ (2012)
3 ಕ್ರಿಸ್ಟಿಯಾನೊ ರೊನಾಲ್ಡೊ (2017)
4 ಲಿಯೋನೆಲ್ ಮೆಸ್ಸಿ (2023)
5 ಕ್ರಿಸ್ಟಿಯಾನೊ ರೊನಾಲ್ಡೊ (2016)
6 ಕ್ರಿಸ್ಟಿಯಾನೊ ರೊನಾಲ್ಡೊ (2014)
7 ಲಿಯೋನೆಲ್ ಮೆಸ್ಸಿ (2015)
8 ಕ್ರಿಸ್ಟಿಯಾನೊ ರೊನಾಲ್ಡೊ (2013)
9 ಲಿಯೋನೆಲ್ ಮೆಸ್ಸಿ (2011)
10 ಲಿಯೋನೆಲ್ ಮೆಸ್ಸಿ (2009)

ಪ್ರಶಸ್ತಿಯ ರೋಚಕ ನಿಯಮಗಳು:

  • ಪತ್ರಕರ್ತರ ಸಮಿತಿಯು ನಿರ್ಧರಿಸುವ ಸಾಂಪ್ರದಾಯಿಕ ಬ್ಯಾಲನ್ ಡಿ’ಓರ್ ಪ್ರಶಸ್ತಿಯಂತಲ್ಲದೆ, ಈ ‘B.O.A.T.’ ಪ್ರಶಸ್ತಿಯನ್ನು ಸಂಪೂರ್ಣವಾಗಿ ಜಾಗತಿಕ ಅಭಿಮಾನಿಗಳ ಡಿಜಿಟಲ್ ಮತಗಳ ಆಧಾರದ ಮೇಲೆ ನೀಡಲಾಗಿದೆ.
  • ಇತಿಹಾಸದಲ್ಲಿ ಕನಿಷ್ಠ 2 ಅಥವಾ ಅದಕ್ಕಿಂತ ಹೆಚ್ಚು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ಗೆದ್ದ ಆಟಗಾರರನ್ನು ಮಾತ್ರ ಈ ಸ್ಪರ್ಧೆಗೆ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. (ಉದಾಹರಣೆಗೆ: ರೊನಾಲ್ಡೊ, ಮೆಸ್ಸಿ, ರೊನಾಲ್ಡೊ ನಝರಿಯೋ, ಜೋಹಾನ್ ಕ್ರೈಫ್ ಮುಂತಾದ 10 ದೈತ್ಯ ಆಟಗಾರರು).
  • ಈ ವೋಟಿಂಗ್‌ನಲ್ಲಿ ಭಾಗವಹಿಸಲು ಅಭಿಮಾನಿಗಳಿಗೆ ಪ್ರತಿ ಮತಕ್ಕೆ €1 (ಸುಮಾರು 90 ರೂಪಾಯಿ) ಶುಲ್ಕ ನಿಗದಿಪಡಿಸಲಾಗಿತ್ತು. ನೆಚ್ಚಿನ ಆಟಗಾರನನ್ನು ಗೆಲ್ಲಿಸಲು ಸಾವಿರಾರು ಅಭಿಮಾನಿಗಳು ಹಲವು ಬಾರಿ ಹಣ ಪಾವತಿಸಿ ಮತ ಚಲಾಯಿಸಿದ್ದಾರೆ!
  • ಈ ಸ್ಪರ್ಧೆಗೆ ಯಾವುದೇ ಭೌತಿಕ ಟ್ರೋಫಿ ಇರುವುದಿಲ್ಲ. ಆದರೆ ವೋಟ್ ಮಾಡಿದ ಅದೃಷ್ಟಶಾಲಿ ಅಭಿಮಾನಿಗಳಿಗೆ 2027ರ ಬ್ಯಾಲನ್ ಡಿ’ಓರ್ ಪ್ರಶಸ್ತಿ ಪ್ರದಾನ ಸಮಾರಂಭದ ಎರಡು ಉಚಿತ ಟಿಕೆಟ್‌ಗಳನ್ನು ಗೆಲ್ಲುವ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಹೊಸ ಚರಿತ್ರೆ… RCB ಅಲ್ಲ, ಮುಂಬೈ ಇಂಡಿಯನ್ಸ್ ನಂಬರ್ 1

ಒಟ್ಟಿನಲ್ಲಿ, ಮೈದಾನದ ಒಳಗೆ ಮತ್ತು ಹೊರಗೆ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ನಡುವಿನ ಪೈಪೋಟಿ ಎಂದಿಗೂ ಮುಗಿಯದ ಒಂದು ಅದ್ಭುತ ಕಾವ್ಯ. ಪತ್ರಕರ್ತರು ಮತ್ತು ಕ್ರೀಡಾ ತಜ್ಞರ ದೃಷ್ಟಿಯಲ್ಲಿ ಮೆಸ್ಸಿ ಹೆಚ್ಚು ಪ್ರಶಸ್ತಿಗಳೊಂದಿಗೆ ಮುಂದಿರಬಹುದು. ಆದರೆ, ತಮ್ಮ ನೆಚ್ಚಿನ ಆಟಗಾರನಿಗಾಗಿ ಹಣ ಪಾವತಿಸಿ ಮತ ಚಲಾಯಿಸುವ ಹಂತಕ್ಕೆ ಬಂದು ನಿಂತಾಗ, ಕ್ರಿಸ್ಟಿಯಾನೊ ರೊನಾಲ್ಡೊ ಹೊಂದಿರುವ ಜಾಗತಿಕ ಅಭಿಮಾನಿ ಬಳಗದ ಶಕ್ತಿ ಮತ್ತು ಕ್ರೇಝ್ ಎಂಥದ್ದು ಎಂಬುದನ್ನು ಈ ‘B.O.A.T’ ಪ್ರಶಸ್ತಿ ಮತ್ತೊಮ್ಮೆ ಜಗತ್ತಿಗೆ ಸಾಬೀತುಪಡಿಸಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More