ನೀವಿಲ್ಲಿ ನೋಡುತ್ತಿರುವುದು ಒಬ್ಬ ಬೌದ್ಧ ಭಿಕ್ಷು ಅಥವಾ ಸಮರಕಲೆಗಳ (ಮಾರ್ಷಲ್ ಆರ್ಟ್ಸ್) ಗುರುವೊಬ್ಬರನ್ನು ಅಂದುಕೊಂಡಿರಾ? ನಿಮ್ಮ ಅನಿಸಿಕೆ ಖಂಡಿತ ತಪ್ಪು. ಮತ್ತೊಮ್ಮೆ ಗಮನವಿಟ್ಟು ನೋಡಿ. ಹೌದು ನೀವೀಗ ಸರಿ. ಅದು ನಿಸ್ಸಂದೇಹವಾಗಿ ಭಾರತದ ಮಾಜಿ ನಾಯಕ, ಚೆನೈ ಸೂಪರ್ ಕಿಂಗ್ಸ್ನ ಎವರ್ಗ್ರೀನ್ ನಾಯಕ ಮತ್ತು ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದಂತ ಕ್ಯಾಪ್ಟನ್ ಕೂಲ್ ಎಂದು ಹೆಸರಾಗಿರುವ ಮಹೇಂದ್ರಸಿಂಗ್ ಧೋನಿ!
39 ವರ್ಷ ವಯಸ್ಸಿನ ಧೋನಿ ಈ ಹೊಸ ಆವತಾರದಲ್ಲಿ ಯಾಕೆ ಕಾಣಿಸಿಕೊಂಡಿದ್ದಾರೆ ಎನ್ನುವುದು ಮಾತ್ರ ನಿಗೂಢ. ಹಾಗೆಯೇ, ಈ ಫೋಟೋ ಶೂಟ್ ಎಲ್ಲಿ ನಡೆದಿರಬಹುದು ಎನ್ನುವ ಬಗ್ಗೆ ಕೂಡ ಮಾಹಿತಿಯಿಲ್ಲ. ಅವರ ಕೆಲ ಅಭಿಮಾನಿಗಳು ದಕ್ಷಿಣ ಭಾರತದಲ್ಲಿ ಶೂಟ್ ಅಗಿದೆ ಅಂತ ಹೇಳುತ್ತಿದ್ದಾರೆ. ಅದು ಎಲ್ಲೇ ಆಗಿರಲಿ, ಧೋನಿ ಅವರ ಇದುವರೆಗಿನ ಲುಕ್ಗಳಿಗಿಂತ ಇದು ಬಹಳ ಭಿನ್ನವಾಗಿದೆ. ವಿಶ್ವದೆಲ್ಲೆಡೆ ಹಬ್ಬಿರುವ ತಮ್ಮ ಅಭಿಮಾನಿಗಳಿಗೆ ವಿಭಿನ್ನವಾದ ಲುಕ್ಸನಿಂದ ಚಕಿತಗೊಳಿಸುವುದನ್ನು ಅಭ್ಯಾಸ ಮಾಡಿಕೊಂಡಿರುವ ಧೋನಿ ಈ ಬಾರಿ ಅವರನ್ನು ಮತ್ತೂ ಹೆಚ್ಚಿನ ಆಶ್ಚರ್ಯಕ್ಕೊಳಪಡಿಸಿದ್ದಾರೆ. ಈ ಇಮೇಜನಲ್ಲಿ ಎದ್ದು ಕಾಣುತ್ತಿರುವ ಅಂಶವೆಂದರೆ ನುಣ್ಣಗೆ ಬೋಳಿಸಿರುವ ಅವರ ತಲೆ!
ದಕ್ಷಿಣ ಭಾರತದ ಯಾವುದೋ ಒಂದು ಪ್ರಾಜೆಕ್ಟ್ಗೆ ಧೋನಿ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಚೆನೈನ ದತ್ತು ಪುತ್ರ ಆ ಪ್ರಾಜೆಕ್ಟ್ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ ಈ ಪ್ರಾಜೆಕ್ಟ್ ಅನ್ನು ನಿಗೂಢವಾಗಿ ಮಾಡಲಾಗುತ್ತಿದೆ ಮತ್ತು ಮಾಧ್ಯಮದವರಿಗಾಗಲೀ ಅಥವಾ ಜಾಹಿರಾತು ಏಜೆನ್ಸಿಗಳಿಗಾಗಲೀ ಯಾವುದೇ ವಿಷಯವನ್ನು ಸೋರಿಕೆ ಮಾಡಿಲ್ಲ.
ಒಂದು ಮೂಲದ ಪ್ರಕಾರ ಈ ಫೋಟೋವನ್ನು ದಕ್ಷಿಣ ಬಾರತದ ಯಾವುದೋ ಯುದ್ಧಕಲೆಗಳ ತರಬೇತಿ ಶಿಬಿರದಲ್ಲಿ ಶೂಟ್ ಮಾಡಲಾಗಿದೆ.
ಅದೇನೆ ಇರಲಿ, ಈ ಹೊಸ ಲುಕ್ನಲ್ಲಿ ಧೋನಿ ಮಾತ್ರ ಅದ್ಭುತವಾಗಿ ಕಾಣುತ್ತಿದ್ದಾರೆ.
ಹಾಗೆ ನೋಡಿದರೆ, ಚೆನೈ ಸೂಪರ್ ಕಿಂಗ್ಸ್ ನಾಯಕ ತಂಡದ ಇತರ ಸದಸ್ಯರೊಂದಿಗೆ ಇಂಡಿಯನ್ ಪ್ರಿಮೀಯರ್ ಲೀಗ್ನ 14ನೇ ಸೀಸನ್ಗೆ ಅಣಿಯಾಗುತ್ತಿದ್ದಾರೆ. ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಕ್ರಿಕೆಟ್ನ ಅತ್ಯಂತ ಜನಪ್ರಿಯ ಟೂರ್ನಿಗೆ ತಯಾರಿ ಆರಂಭಿಸಿದ ಮೊದಲ ತಂಡವೆಂದರೆ ಸಿಎಸ್ಕೆ.
ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ಹಾಗೆ ಕಳೆದ ಬಾರಿಯ ಸೀಸನ್ನಲ್ಲಿ ಮೂರು ಸಲ ಚಾಂಪಿಯನ್ಸಿಪ್ ಗೆದ್ದಿರುವ ಸಿಎಸ್ಕೆ ಅತ್ಯಂತ ಕಳಪೆ ಪ್ರದರ್ಶನ ನೀಡಿ ಪಾಯಿಂಟ್ಸ್ ಪಟ್ಟಿಯಲ್ಲಿ 7 ನೇ ಸ್ಥಾನಕ್ಕಿಳಿದಿತ್ತು. ಖುದ್ದು ಕ್ಯಾಪ್ಟನ್ ಕೂಲ್ ಬಹಳ ಕೆಟ್ಟದ್ದಾಗಿ ವಿಫಲರಾಗಿದ್ದರು.
ಕಳೆದ ವರ್ಷ ಸ್ವಾತಂತ್ರ್ಯೋತ್ಸವ ದಿನದಂದು ಅಂತರರಾಷ್ಟ್ರೀಯ ಕ್ರಿಕೆಟ್ (ಸೀಮಿತ ಓವರರ್ಗಳ ಆವೃತ್ತಿಗಳು) ಘೋಷಿಸಿದ ಧೋನಿ ಕೇವಲ ಐಪಿಲ್ನಲ್ಲಿ ಮಾತ್ರ ಆಡುವುದನ್ನು ಮುಂದುವರೆಸಿದ್ದಾರೆ. ಸಾಮಾನ್ಯವಾಗಿ ಈ ಟೂರ್ನಿಯಲ್ಲಿ ಅವರು ವಿಫಲರಾಗುವುದಿಲ್ಲ. ಹಾಗಾಗಿ ಕಳೆದ ಸೀಸನ್ ವೈಫಲ್ಯಗಳನ್ನು ಈ ಬಾರಿ ಉತ್ತಮ ಪ್ರದರ್ಶನಗಳನ್ನು ನೀಡಿ ಸರಿದೂಗಿಸಲಿದ್ದಾರೆ ಆಂತ ಅವರ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಅದೇನೇ ಇರಲಿ, ಧೋನಿಯ ಈ ಹೊಸ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸುವುದು ಮಾತ್ರ ನಿಶ್ಚಿತ.
ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲೂ ಧೋನಿಯದ್ದೇ ಹವಾ..! ಅತೀ ಹೆಚ್ಚು ಫಾಲೋವರ್ಸ್ ಪಡೆದ 2ನೇ ಭಾರತೀಯ ಕ್ರಿಕೆಟಿಗ ಕ್ಯಾಪ್ಟನ್ ಕೂಲ್..