ಮೊಣಕೈಗೆ ಗಾಯ, ವಿಲಿಯಮ್ಸನ್ ಎರಡನೇ ಟೆಸ್ಟ್​ನಿಂದ ಹೊರಗೆ; ಟಾಮ್ ಲಾಥಮ್​ಗೆ ನ್ಯೂಜಿಲೆಂಡ್​ ಸಾರಥ್ಯ

| Updated By: Digi Tech Desk

Updated on: Jun 10, 2021 | 4:31 PM

ವಿಲಿಯಮ್ಸನ್ ಅವರ ಸ್ಥಾನದಲ್ಲಿ ಇಂಗ್ಲಿಷ್ ಕೌಂಟಿ ಡುರ್ಹಮ್ ಪರ ಆಡುವ ಮತ್ತು ಪ್ರಸಕ್ತ ಸೀಸನ್​ನಲ್ಲಿ ಎರಡು ಶತಕ ಬಾರಿಸಿರುವ ವಿಲ್ ಯಂಗ್ ಅವರು ಆಡಲಿದ್ದಾರೆ ಎಂದು ನ್ಯೂಜಿಲೆಂಡ್​ ಟೀಮ್ ಮ್ಯಾನೇಜ್ಮೆಂಟ್​ ಹೇಳಿದೆ.

ಮೊಣಕೈಗೆ ಗಾಯ, ವಿಲಿಯಮ್ಸನ್ ಎರಡನೇ ಟೆಸ್ಟ್​ನಿಂದ ಹೊರಗೆ; ಟಾಮ್ ಲಾಥಮ್​ಗೆ ನ್ಯೂಜಿಲೆಂಡ್​ ಸಾರಥ್ಯ
ಕೇನ್ ವಿಲಿಯಮ್ಸನ್
Follow us on

ಮೊಣಕೈಗೆ ಅಗಿರುವ ಗಾಯ ನ್ಯೂಜಿಲೆಂಡ್​ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಗುರುವಾರದಿಂದ ಇಂಗ್ಲೆಂಡ್ ವಿರುದ್ಧ ಎಜ್​ಬ್ಯಾಸ್ಟನ್​ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್​ನಿಂದ ಹೊರಗಿರುವಂತೆ ಮಾಡಿದೆ. ಆದರೆ, ಭಾರತದ ವಿರುದ್ಧ ಜೂನ್​ 18ರಿಂದ ಸೌತಾಂಪ್ಟ್​ನ ಏಜಿಸ್ ಬೋಲ್​ನಲ್ಲಿ ನಡೆಯಬೇಕಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಸಿಪ್​ಗೆ ಮೊದಲು ಅವರು ಗುಣಮುಖರಾಗವರೆಂಬ ಆಶಾಭಾವನೆಯನ್ನು ನ್ಯೂಜಿಲೆಂಡ್​ ಶಿಬಿರ ತಳೆದಿದೆ. ಅವರ ಸ್ಥಾನದಲ್ಲಿ ಎಡಗೈ ಆರಂಭ ಆಟಗಾರ ಟಾಮ್ ಲಾಥಮ್ ಅವರು ಪ್ರವಾಸಿ ಟೀಮಿನ ನಾಯಕತ್ವ ವಹಿಸಲಿದ್ದಾರೆ.

‘ಎರಡನೇ ಟೆಸ್ಟ್​ನಲ್ಲಿ ಆಡದಿರುವ ನಿರ್ಧಾರ ತೆಗೆದುಕೊಳ್ಳವುದು ಕೇನ್ ಸುಲಭವಾಗಿರಲಿಲ್ಲ, ಆದರೆ ಅದು ಒಳ್ಳೆಯ ನಿರ್ಧಾರವೆಂದು ಟೀಮು ಭಾವಿಸುತ್ತದೆ,’ ಎಂದು ನ್ಯೂಜಿಲೆಂಡ್​ ಕೋಚ್​ ಗ್ಯಾರಿ ಸ್ಟೆಡ್ ಬುಧವಾರ ಹೇಳಿದರು.

‘ಕಳೆದ ವಾರ ಲಾರ್ಡ್ಸ್​ನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಮೊದ ಟೆಸ್ಟ್​ ಪಂದ್ಯದಲ್ಲಿ ಕಿವೀಸ್​ ತಂಡದ ನಾಯಕತ್ವ ವಹಿಸಿದ್ದ ವಿಲಿಯಮ್ಸನ್ ಅವರು ಮಾರ್ಚ್​ ತಿಂಗಳಿನಿಂದ ಮೊಣಕೈ ಬಾಧೆ ಅನುಭವಿಸುತ್ತಿದ್ದಾರೆ. ಎರಡನೆ ಟೆಸ್ಟ್ ಆರಂಭಕ್ಕೆ ಮುನ್ನಾ ದಿನವಾಗಿರುವ ಬುಧವಾರದಂದು ಅವರು ಟೆಸ್ಟ್​ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದರು.

‘ಬ್ಯಾಟ್​ ಮಾಡುವಾಗ ಆಗುತ್ತಿದ್ದ ನೋವನ್ನು ನೀಗಿಸಿಕೊಳ್ಳಲು ಕೇನ್ ಮೊಣಕೈಗೆ ಇಂಜೆಕ್ಷನ್ ತೆಗೆದುಕೊಂಡಿದ್ದರು. ಆದರೆ, ಅವರಿಗೆ ಈಗ ಸಿಗಲಿರುವ ವಿಶ್ರಾಂತಿ ಮತ್ತು ರಿಹ್ಯಾಬ್ ಚೇತರಿಕೆ ಪ್ರಮಾಣವನ್ನು ಹೆಚ್ಚಿಸಲಿದೆ,’ ಎಂದು ಸ್ಟೆಡ್ ಹೇಳಿದರು.

‘ಭಾರತದ ವಿರುದ್ಧ ಜೂನ್​ 18ರಿಂದ ಸೌತಾಂಪ್ಟ್​ನ ಏಜಿಸ್ ಬೋಲ್​ನಲ್ಲಿ ನಡೆಯಬೇಕಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಕೇನ್​ಗೆ ವಿಶ್ರಾಂತಿ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆ ಮಹತ್ವದ ಪಂದ್ಯಕ್ಕೆ ಮೊದಲು ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಭರವಸೆ ನಮಗಿದೆ,’ ಎಂದು ಸ್ಟೆಡ್ ಹೇಳಿದ್ದಾರೆ.

ವಿಲಿಯಮ್ಸನ್ ಅವರ ಸ್ಥಾನದಲ್ಲಿ ಇಂಗ್ಲಿಷ್ ಕೌಂಟಿ ಡುರ್ಹಮ್ ಪರ ಆಡುವ ಮತ್ತು ಪ್ರಸಕ್ತ ಸೀಸನ್​ನಲ್ಲಿ ಎರಡು ಶತಕ ಬಾರಿಸಿರುವ ವಿಲ್ ಯಂಗ್ ಅವರು ಆಡಲಿದ್ದಾರೆ ಎಂದು ನ್ಯೂಜಿಲೆಂಡ್​ ಟೀಮ್ ಮ್ಯಾನೇಜ್ಮೆಂಟ್​ ಹೇಳಿದೆ.

ಬೆರಳಿಗೆ ಗಾಯಮಾಡಿಕೊಂಡಿರುವ ನ್ಯೂಜಿಲೆಂಡ್​ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಸಹ ಎರಡನೇ ಟೆಸ್ಟ್​ ಆಡುತ್ತಿಲ್ಲ. ಹೀಗಾಗಿ, ಟೀಮ್ ಮ್ಯಾನೇಜ್ಮೆಂಟ್​ಗೆ ಮೊದಲ ಟೆಸ್ಟ್​ ಆಡಿದ ತಂಡದಲ್ಲಿ ಕನಿಷ್ಟ ಎರಡು ಬದಲಾವಣೆಗಳನ್ನು ಮಾಡುವ ಅನಿವಾರ್ಯತೆ ಎದುರಾಗಿದೆ.

ಆದರೆ, ಇಂಡಿಯನ್ ಪ್ರಿಮೀಯರ್ ಲೀಗ್ ಅರ್ಧಕ್ಕೆ ಸ್ಥಗಿತಗೊಂಡ ನಂತರ ಸ್ವದೇಶಕ್ಕೆ ವಾಪಸ್ಸು ಹೋಗಿ ಕುಟುಂಬದ ಜೊತೆ ಸಮಯ ಕಳೆಯುಲು ಮೊದಲ ಟೆಸ್ಟ್​ನಿಂದ ಹೊರಗುಳಿದಿದ್ದ ಅನುಭವಿ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ತಂಡಕ್ಕೆ ವಾಪಸ್ಸಾಗುವುದು ಖಚಿತವಾಗಿದೆ.

ಇದನ್ನೂ ಓದಿ: WTC Final: ಇಂಗ್ಲೆಂಡ್ ತಲುಪಿದ ಟೀಂ ಇಂಡಿಯಾಕ್ಕೆ ಶಾಕ್; ಒಬ್ಬರನ್ನೊಬ್ಬರು ಭೇಟಿಯಾಗದಂತೆ ಸೂಚನೆ.. ಕಾರಣವೇನು?

Published On - 12:04 am, Thu, 10 June 21