WTC 21 Final: ಕನ್ನಡಿಗ ಕೆಎಲ್​ ರಾಹುಲ್​ ಸೇರಿದಂತೆ ಈ ಐದು ಆಟಗಾರರು ವಿಶ್ವ ಟೆಸ್ಟ್​ ಫೈನಲ್​ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ! ಯಾಕೆ?

|

Updated on: Jun 16, 2021 | 11:00 AM

World Test Championship final ಪಂದ್ಯಕ್ಕೆ (Ageas Bowl, Southampton) ಇನ್ನು ಮೂರು ದಿನಗಳಿರುವಾಗ ಬಿಸಿಸಿಐ 15 ಆಟಗಾರರ ಭಾರತ ತಂಡವನ್ನು ನಿನ್ನೆ ಪ್ರಕಟಿಸಿದೆ. ವಿರಾಟ್​ ಕೊಹ್ಲಿ ನಾಯಕನಾಗಿ ಅಜಿಂಕ್ಯ ರಹಾನೆ ಉಪ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಕಟಿತ ತಂಡದಲ್ಲಿ ಆಟಗಾರರ ಆಯ್ಕೆ ಬಗ್ಗೆ ಆಶ್ಚರ್ಯಗಳೇನೂ ಇಲ್ಲವಾದರೂ ಈ ಐದು ಆಟಗಾರರ ಹಿಂದಿನ ಪರ್ಫಾರ್ಮೆನ್ಸ್​ ಅನ್ನು ತೂಕ ಹಾಕುವುದಾದರೆ...

WTC 21 Final: ಕನ್ನಡಿಗ ಕೆಎಲ್​ ರಾಹುಲ್​ ಸೇರಿದಂತೆ ಈ ಐದು ಆಟಗಾರರು ವಿಶ್ವ ಟೆಸ್ಟ್​ ಫೈನಲ್​ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ! ಯಾಕೆ?
WTC 21 Final: ಕನ್ನಡಿಗ ಕೆಎಲ್​ ರಾಹುಲ್​ ಸೇರಿದಂತೆ ಈ 5 ಆಟಗಾರರು ವಿಶ್ವ ಟೆಸ್ಟ್​ ಫೈನಲ್​ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ! ಯಾಕೆ?
Follow us on

ಎಜ್​ಬಾಸ್ಟನ್ (ಇಂಗ್ಲೆಂಡ್)​: ಹಾಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಚಾಂಪಿಯನ್​ ತಂಡ ಯಾವುದು ಎಂಬುದು ಜೂನ್​ 18 ರಿಂದ ನಡೆಯುವ ಟೆಸ್ಟ್​ ಪಂದ್ಯದಲ್ಲಿ ಫೈನಲ್​ ಆಗಲಿದೆ. ಆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ (World Test Championship final) ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಸೆಣಸಲಿವೆ. ಉಭಯ ತಂಡಗಳೂ ಅದಾಗಲೇ ತಂಡಗಳನ್ನು ಪ್ರಕಟಿಸಿದೆ. ಭಾರತ ತಂಡವೂ ಪ್ರಕಟವಾಗಿದೆ. ಆದರೆ… ಕನ್ನಡಿಗ ಕೆಎಲ್​ ರಾಹುಲ್​ ಆಯ್ಕೆಯಾಗಿಲ್ಲ ಎಂಬ ಕೊರಗೂ ಸೇರಿದಂತೆ ಐದು ಆಟಗಾರರು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೆ ಆಯ್ಕೆ ಆಗಲಿಲ್ಲ! ಯಾಕೆ? ಎಂಬ ಪ್ರಶ್ನೆ ಕಾಡತೊಡಗಿದೆ.

World Test Championship final ಪಂದ್ಯಕ್ಕೆ (Ageas Bowl, Southampton) ಇನ್ನು ಮೂರು ದಿನಗಳಿರುವಾಗ ಬಿಸಿಸಿಐ 15 ಆಟಗಾರರ ಭಾರತ ತಂಡವನ್ನು ನಿನ್ನೆ ಪ್ರಕಟಿಸಿದೆ. ವಿರಾಟ್​ ಕೊಹ್ಲಿ ನಾಯಕನಾಗಿ ಅಜಿಂಕ್ಯ ರಹಾನೆ ಉಪ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಕಟಿತ ತಂಡದಲ್ಲಿ ಆಟಗಾರರ ಆಯ್ಕೆ ಬಗ್ಗೆ ಆಶ್ಚರ್ಯಗಳೇನೂ ಇಲ್ಲವಾದರೂ ಈ ಐದು ಆಟಗಾರರ ಹಿಂದಿನ ಪರ್ಫಾರ್ಮೆನ್ಸ್​ ಅನ್ನು ತೂಕ ಹಾಕುವುದಾದರೆ…

ಈಗಿನ ಪ್ರಕಟಿತ ತಂಡದಲ್ಲಿ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಶುಭ್​​ಮನ್​ ಗಿಲ್​, ಚೇತೇಶ್ವರ ಪೂಜಾರ ಮತ್ತಿತರರು ಬಲಿಷ್ಠ ಬ್ಯಾಟಿಂಗ್​ ಅನ್ನು ಕಾಯ್ದುಕೊಳ್ಳಬಲ್ಲರು. ಆರ್​ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸ್ಪಿನ್​ ಬೌಲಿಂಗ್​ ಆಲ್​ರೌಂಡರ್​​ ರೂಪದಲ್ಲಿ ವಿರಾಜಮಾನರಾಗಿದ್ದಾರೆ. ಇನ್ನು ಇಶಾಂತ್​ ಶರ್ಮಾ, ಜಸ್ಪ್ರೀತ್​​ ಬುಮ್ರಾ, ಮೊಹಮದ್​ ಶಮಿ, ಉಮೇಶ್​ ಯಾದವ್​ ಹಾಗೂ ಮೊಹಮದ್​ ಸಿರಾಜ್​ ಕೈಯಲ್ಲಿ ಬಾಲ್​ ಹಿಡಿದು ಸನ್ನದ್ಧರಾಗಿದ್ದಾರೆ. ರಿಶಬ್​ ಪಂತ್​ ಮತ್ತು ವೃದ್ಧಿಮಾನ್​ ಸಹ ಇಬ್ಬರು ವಿಕೆಟ್​​ ಹಿಂದೆ ನಿಲ್ಲಲು ನಾಮುಂದು ತಾಮುಂದು ಎಂದು ನಿಂತಿದ್ದಾರೆ. ಗಮನಾರ್ಹವೆಂದರೆ ಐತಿಹಾಸಿಕ ವಿಶ್ವ ಟೆಸ್ಟ್​ ಫೈನಲ್​ ಪಂದ್ಯಕ್ಕೆ ಈ 15 ಮಂದಿ ಆಟಗಾರರೇ ಅಂತಿಮ ಅಂತಲ್ಲ. ಆದರೂ ಈ ಸಂದರ್ಭದಲ್ಲಿ ಬೆಂಚ್​ ಕಾಯಿಸುತ್ತಿರುವ ಆ ಪಂಚ ಪಾಂಡವರನ್ನು ಒಬ್ಬೊಬ್ಬರಾಗಿ ನೋಡಿದಾಗ…

ಕನ್ನಡಿಗ ಕೆಎಲ್​ ರಾಹುಲ್​ (KL Rahul)

15 ಆಟಗಾರರ ಭಾರತ ಟೆಸ್ಟ್ ತಂಡದಲ್ಲಿ ಕನ್ನಡಿಗ ಕೆಎಲ್​ ರಾಹುಲ್ ಸ್ಥಾನ ಪಡೆದಿಲ್ಲ ಎಂಬುದು ಕೊಂಚ ಬೇಸರವೇ ಆದರೂ… ಈ ಬಲಗೈ ಬ್ಯಾಟ್ಸ್​ಮನ್​ಗೆ ಅನೇಕ ಛಾನ್ಸ್​​ಗಳನ್ನು ನೀಡಲಾಗಿತ್ತಾದರೂ ರಾಹುಲ್​ ಅದನ್ನು ಸದುಪಯೋಗಪಡಿಸಿಕೊಂಡಿಲ್ಲ ಎಂಬುದು ಖೇದಕರ. 2019 ರಿಂದೀಚೆಗೆ ಕೆಂಪು ಬಾಲ್ ಮ್ಯಾಚ್​​ಗಳನ್ನು ಆಡಿಲ್ಲ. ಇದನ್ನು ಮತ್ತೊಂದು ಆಯಾಮದಿಂದ ನೋಡಿದಾಗ​ ಈಗ ಭಾರತ ತಂಡದಲ್ಲಿ ಬ್ಯಾಟ್ಸ್​ಮನ್​ಗಳಾಗಿ ಸ್ಥಾನ ಪಡೆದಿರುವ ಆಟಗಾರರು ಬಲಿಷ್ಠರಾಗಿದ್ದಾರೆ. ಅವರ ಎದುರು ಇತ್ತೀಚೆಗೆ ಟೆಸ್ಟ್​ ಪಂದ್ಯಗಳನ್ನು ಆಡದೇ ಇರುವ ರಾಹುಲ್​ ಪೇಲವವಾಗುತ್ತಾರೆ. ಗೊತ್ತಿಲ್ಲ.. ಕೊನೆಯ ಘಳಿಗೆಯಲ್ಲಿ ಛಾನ್ಸ್​ ಸಿಕ್ಕಿದರೆ ಮಯಾಂಕ್​ ಅಗರ್ವಾಲ್​ ಆದ ಮೇಲೆ ಕೆಎಲ್​ ರಾಹುಲ್ ಅವರನ್ನೇ ಪರಿಗಣಿಸಬಹುದು.

ಶಾರ್ದೂಲ್​ ಠಾಕೂರ್ (Shardul Thakur)

ವೇಗಿ ಆಲ್​​ರೌಂಡರ್​ ಶಾರ್ದೂಲ್​ ಠಾಕೂರ್ ಐತಿಹಾಸಿಕ ಟೆಸ್ಟ್​ ಫೈನಲ್​​ ಪಂದ್ಯಕ್ಕೆ ಆಯ್ಕೆಯಾಗಲಿಲ್ಲ ಎಂಬುದು ಶೋಚನೀಯ. ಇದರರ್ಥ ಭಾರತ ತಂಡವು ಕೇವಲ ವೇಗಿ ಬೌಲರ್​​ಗಳನ್ನೇ ಅಪ್ಪಿಕೊಂಡಿದೆ. ವೇಗಿ ಆಲ್​​ರೌಂಡರ್​ಗೆ ಮಣೆ ಹಾಕಿಲ್ಲ ಅಷ್ಟೇ. ಉಮೇಶ್​ ಯಾದವ್ ಒಂದಷ್ಟು ಬ್ಯಾಟ್​​ ಬೀಸುವುದೂ ಆತನ ಆಯ್ಕೆಗೆ ಪೂರಕವಾಗಿದೆ ಅನ್ನಬಹುದು. ಆಲ್​​ರೌಂಡರ್​ ಶಾರ್ದೂಲ್​ ಠಾಕೂರ್ ಈ ಹಿಂದೆ 2018ರ ಇಂಗ್ಲೆಂಡ್​ ಸರಣಿಯಲ್ಲಿ ಭಾರತ ತಂಡದಲ್ಲಿದ್ದರು ಎಂಬ ಕಾರಣಕ್ಕೆ ಫೈನಲ್​ ಆದ ಮೇಲಿನ ಐದು ಟೆಸ್ಟ್​ ಮ್ಯಾಚ್​​ಗಳ ಸರಣಿಗೆ ಸ್ಥಾನ ಪಡೆಯಬಹುದು ಎಂಬ ಆಶಾಭಾವ ಇದೆ.

ವಾಷಿಂಗ್ಟನ್​ ಸುಂದರ್ (Washington Sundar)

ವಾಷಿಂಗ್ಟನ್​ ಸುಂದರ್ ಆಯ್ಕೆ ಆಗದಿರುವುದಕ್ಕೆ ಸಕಾರಣವಿದೆ. ಆತ ಆರ್​ ಅಶ್ವಿನ್​ಗೆ ಅಸಿಸ್ಟಂಟ್​ ಆಗಿ, ತದನಂತರ ಕಾಣಿಸಿಕೊಳ್ಳುವವರು. ಅಶ್ವಿನ್​ಗೆ ರೆಸ್ಟ್​ ಬೇಕು ಅಂದ್ರೆ ಅಥವಾ ಮೈದಾನದಿಂದ ಹೊರಗುಳಿಯುವಂತಾದರೆ ಮಾತ್ರ ವಾಷಿಂಗ್ಟನ್​ ಸುಂದರ್ ಮೈದಾನಕ್ಕೆ ಇಳಿಯುವರು! ಇದು ಇಬ್ಬರಿಗೂ ಹೊಸದೇನೂ ಅಲ್ಲ. ಅಶ್ವಿನ್ ಅವರ ಕೆಚ್ಚೆದೆಯ ಆಟವನ್ನು ನೋಡಿದರೆ ರವೀಂದ್ರ ಜಡೇಜಾರನ್ನೂ ಪಕ್ಕಕ್ಕಿಟ್ಟು ಅಶ್ವಿನ್​ಗೆ ವಿರಾಟ್​ ಕೊಹ್ಲಿ ಮಣೆ ಹಾಕಬಹುದು. ಹಾಗಿದೆ ಅಶ್ವಿನ್​ ಎದಯಲ್ಲಿನ ಕಿಚ್ಚು.

ಅಕ್ಸರ್​ ಪಟೇಲ್ (Axar Patel)

ಭಾರತ-ಇಂಗ್ಲೆಂಡ್​ ಪ್ರವಾಸದಲ್ಲಿ ಅಕ್ಸರ್​ ಪಟೇಲ್ ಸ್ಮರಣೀಯ ಪಾದಾರ್ಪಣೆ ಮಾಡಿದರಾದರೂ ಅಕ್ಸರ್​ ರವೀಂದ್ರ ಜಡೇಜಾ ನಂತರವೇ ಎಂಬುದು ಮನನೀಯ. ಟೆಸ್ಟ್​ ಪಂದ್ಯಗಳಲ್ಲಿ ಆಡಬೇಕು ಅಂದ್ರೆ ಅಕ್ಸರ್​ ಪಟೇಲ್ ಇನ್ನೂ ಕಾಯಬೇಕಾದೀತು! ಆರ್​ ಅಶ್ವಿನ್​ ಮಾದರಿಯಲ್ಲಿ ರವೀಂದ್ರ ಜಡೇಜಾ ನುರಿತ ಮೌಲ್ಯಯುತ ಆಟಗಾರ. ಹಾಗಾಗಿ ಅಕ್ಸರ್​, ರವೀಂದ್ರ ಜಡೇಜಾ ನಂತರವೇ ಎಂಬುದು ದಾಖಲಾರ್ಹ. ಅಕ್ಸರ್​ ಪಟೇಲ್​ಗೆ ಒಂದೇ ಆಶಾಭಾವ ಅಂದ್ರೆ ಅಕ್ಸರ್​ ಕೌಂಟಿ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ತಂಡಕ್ಕೆ ಆಯ್ಕೆಯಾಗುವ ವೇಳೆ ವಾಷಿಂಗ್ಟನ್​ ಸುಂದರ್​ಗಿಂತ ತುಸು ಮುಂದಿರಲು ಇದು ಅನುಕೂಲವಾಗಲಿದೆ. ಜೊತೆಗೆ, ತಂಡದಲ್ಲಿ ಎಕ್ಸ್​ಟ್ರಾ ಆಲ್​​ರೌಂಡರ್ ಒಬ್ಬರಿರಲಿ ಅಂತ ಬಿಸಿಸಿಐ ಚಿಂತಕರ ಚಾವಡಿ ಚಿಂತನೆ ನಡೆಸಿದರೆ ಅಕ್ಸರ್​ ಪಟೇಲ್​ಗೆ ಮಣೆ ಹಾಕಬಹುದು.

ಮಯಾಂಕ್​ ಅಗರ್ವಾಲ್ (Mayank Agarwal)

ರೋಹಿತ್​ ಶರ್ಮಾ ಮತ್ತು ಶುಭ್​​ಮನ್​ ಗಿಲ್​ ಅದಾಗಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಅಂದರೆ ನನಗೆ ಎಲ್ಲಿಯ ಸ್ಥಾನ ಅಲ್ವಾ? ಎಂಬಂತಾಗಿದೆ ಮಯಾಂಕ್​ ಅಗರ್ವಾಲ್​ ಸ್ಥಿತಿ. ಮಯಾಂಕ್​ ಅಗರ್ವಾಲ್ ಸಹ ತಮಗೆ ದಕ್ಕಿದ್ದ ಛಾನ್ಸ್​ಗಳನ್ನು ಅಷ್ಟಾಗಿ ಸದುಪಯೋಗಪಡಿಸಿಕೊಳ್ಳಲಿಲ್ಲ ಎಂಬುದು ಗಮನಾರ್ಹ. ಇತ್ತೀಚಿನ ಭಾರತ-ಇಂಗ್ಲೆಂಡ್​ ಸರಣಿಯಲ್ಲಿ ಇತರೆ ಬ್ಯಾಟ್ಸ್​​ಮನ್​ಗಳು ತಂಡದಿಂದ ಹೊರಗುಳಿದಾಗಲಷ್ಟೇ ಮಯಾಂಕ್​ ಅಗರ್ವಾಲ್ ನಾಲ್ಕನೆಯ ಟೆಸ್ಟ್​ಗೆ ಆಯ್ಕೆಗೊಂಡಿದ್ದು. ಈ ಬಾರಿಯೂ ಅಷ್ಟೇ ಶುಭ್​​ಮನ್​ ಗಿಲ್​ ಬ್ಯಾಟ್​ ಮಾಡತನಾಡುತ್ತಾ ಹೋದರೆ ಮಯಾಂಕ್​ ಅಗರ್ವಾಲ್ ಮೌನವಾಗಿ ಉಳಿಯಬೇಕಾಗುತ್ತದೆ. ಅಗತ್ಯಬಿದ್ದರಷ್ಟೇ ಮಧ್ಯಮ ಕ್ರಮಾಂಕದಲ್ಲಿ ಆಡಲು ಮಯಾಂಕ್​ ಅಗರ್ವಾಲ್ ಆಯ್ಕೆಗೊಳ್ಳಬಹುದು.

(five players who failed to make the cut for World Test Championship final against New Zealand)