ಗಂಗೂಲಿ ಆರೋಗ್ಯ ಸ್ಥಿರವಾಗಿದೆ, ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ: ಜಯ್ ಶಾ

|

Updated on: Jan 02, 2021 | 10:04 PM

ಇಂದು ಬೆಳಗ್ಗೆ ಲಘು ಹೃದಯಾಘಾತಕ್ಕೊಳಗಾಗಿ ಕೊಲ್ಕತ್ತಾದ ಆಸ್ಪತ್ರೆಯೊಂದಕ್ಕೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರ ಅರೋಗ್ಯ ಸ್ಥಿರವಾಗಿದ್ದು, ಬೇಗ ಗುಣಮುಖರಾಗುವಂತೆ ಮಾಜಿ ಮತ್ತು ಹಾಲಿ ಆಟಗಾರರು ಹಾರೈಸಿದ್ದಾರೆ.

ಗಂಗೂಲಿ ಆರೋಗ್ಯ ಸ್ಥಿರವಾಗಿದೆ, ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ: ಜಯ್ ಶಾ
ಸೌರವ್ ಗಂಗೂಲಿ
Follow us on

ಶನಿವಾರ ಬೆಳಗ್ಗೆ ತಮ್ಮ ಜಿಮ್​ನಲ್ಲಿ ವ್ಯಾಯಾಮ ಮಾಡುವಾಗ ಎದೆನೋವು ಕಾಣಿಸಿಕೊಂಡು ಕೊಲ್ಕತ್ತಾದ ವುಡ್​ಲ್ಯಾಂಡ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದೆಯೆಂದು ಮಂಡಳಿಯ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಟ್ವೀಟ್ ಮೂಲಕ ಶಾ, ‘ಗಂಗೂಲಿ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ, ನಾನು ಅವರ ಕುಟುಂಬದೊಂದಿಗೆ ಮಾತಾಡಿದ್ದೇನೆ,’ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಮಧ್ಯಾಹ್ನ ಅಸ್ಪತ್ರೆಗೆ ಭೇಟಿ ನೀಡಿ ಗಂಗೂಲಿಯವರ ಅರೋಗ್ಯ ವಿಚಾರಿಸಿದರು.

ಜಯ್ ಶಾ ಮತ್ತು ಸೌರವ್ ಗಂಗೂಲಿ

ಏತನ್ಮಧ್ಯೆ, ಗಂಗೂಲಿ ಅನಾರೋಗ್ಯದ ವಿಷಯ ಕೇಳಿ ಆತಂಕಕ್ಕೊಳಗಾಗಿರುವ ಭಾರತದ ಮಾಜಿ ಮತ್ತು ಹಾಲಿ ಆಟಗಾರರು ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಗಂಗೂಲಿಯೊಂದಿಗೆ ಅನೇಕ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ ಲೆಜೆಂಡರಿ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್, ‘ಈಗಷ್ಟೇ ನಿಮ್ಮ ಅನಾರೋಗ್ಯದ ಬಗ್ಗೆ ಗೊತ್ತಾಯಿತು ಸೌರವ್, ಪ್ರತಿದಿನ ನಿಮ್ಮ ಆರೋಗ್ಯದಲ್ಲಿ ಹೆಚ್ಚೆಚ್ಚು ಸುಧಾರಣೆ ಕಂಡುಬರಲಿ ಎಂದು ಹಾರೈಸುವೆ, ಗೆಟ್ ವೆಲ್ ಸೂನ್,’ ಎಂದು ಟ್ವೀಟ್ ಮಾಡಿದ್ದಾರೆ.

ಪಿತೃತ್ವ ರಜೆ ಪಡೆದು ಅಸ್ಟ್ರೇಲಯಾದಿಂದ ವಾಪಸ್ಸು ಬಂದಿರುವ ವಿರಾಟ್ ಕೊಹ್ಲಿ, ‘ನೀವು ಆದಷ್ಟು ಬೇಗ ಗುಣಮುಖರಾಗುವಂತೆ ಪ್ರಾರ್ಥಿಸುತ್ತಿದ್ದೇನೆ. ಗೆಟ್ ವೆಲ್ ಸೂನ್,’ ಅಂತ ಟ್ವೀಟ್ ಮಾಡಿದ್ದಾರೆ.

ಕಾಮೆಂಟರಿ ಬಾಕ್ಸ್​ನಲ್ಲಿ ಗಂಗೂಲಿ ಜೊತೆ ಸೆಹ್ವಾಗ್, ಸಚಿನ್

ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್ ವಿರೇಂದ್ರ ಸೆಹ್ವಾಗ್, ‘ದಾದಾ ಬೇಗ ಗುಣಮುಖರಾಗಿರಿ, ಶೀಘ್ರವಾಗಿ ಗುಣಹೊಂದಿ ಎಂದು ಪ್ರಾರ್ಥಿಸುತ್ತಿರುವೆ.’ ಎಂದಿದ್ದಾರೆ.

ಆರಂಭ ಆಟಗಾರ ಶಿಖರ್ ಧವನ್ ತಮ್ಮ ಟ್ವೀಟ್​ನಲ್ಲಿ, ‘ಬೇಗ ಚೇತರಿಸಿಕೊಳ್ಳಿ, ಗುಣಮುಖರಾಗಿರಿ ಅಂತ ಪ್ರಾರ್ಥಿಸುತ್ತಿದ್ದೇನೆ ದಾದಾ,’ ಅಂತ ಬರೆದುಕೊಂಡಿದ್ದಾರೆ.

ಖ್ಯಾತ ಕಾಮೆಂಟೇಟರ್ ಹರ್ಷ ಭೋಗ್ಲೆ, ಗಂಗೂಲಿಗೆ ಶುಭ ಹಾರೈಸುತ್ತಾ, ‘ಬೇಗ ಗುಣ ಹೊಂದಿ’ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ಟ್ವೀಟ್​ನಲ್ಲಿ, ‘ಭಾರತದ ಮಾಜಿ ಕ್ಯಾಪ್ಟನ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ಲಘು ಹೃದಯಾಘಾತಕ್ಕೊಳಗಾಗಿದ್ದಾರೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ.
ಶೀಘ್ರವಾಗಿ ಗುಣಮುಖರಾಗಿರೆಂದು ಅವರಿಗೆ ಹಾರೈಸುತ್ತಿದ್ದೇವೆ,’ ಅಂತ ಹೇಳಿದೆ.

ಟೀಮ್ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ, ‘ಬೇಗ ಗುಣಮುಖರಾಗಿರಿ ದಾದಾ, ನಿಮ್ಮ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇನೆ,’ ಅಂತ ಟ್ವೀಟ್ ಮಾಡಿದ್ದಾರೆ.

ಗಂಗೂಲಿ ನಾಯಕತ್ವದಲ್ಲಿ ಟೆಸ್ಟ್ ಆಡಲಾರಂಭಿಸಿದ ಹರ್ಭಜನ್ ಸಿಂಗ್, ‘ದಾದಾ ಗೆಟ್ ವೆಲ್ ಸೂನ್’ ಅಂತ ಹೇಳಿದ್ದಾರೆ.

ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾದ BCCI ಅಧ್ಯಕ್ಷ ಸೌರವ್​ ಗಂಗೂಲಿ

Published On - 9:59 pm, Sat, 2 January 21