FIFA World Cup 2026: ಪೆನಾಲ್ಟಿ ಶೂಟೌಟ್‌ನಲ್ಲಿ 2 ಬಲಿಷ್ಠ ತಂಡಗಳು ಕಿಕ್ ಔಟ್..!

FIFA World Cup 2026: ಫಿಫಾ ವಿಶ್ವಕಪ್​ನ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿದ್ದ ಜರ್ಮನಿ ಹಾಗೂ ನೆದರ್​ಲ್ಯಾಂಡ್ಸ್ ದ್ವಿತೀಯ ಸುತ್ತಿನಲ್ಲೇ ಹೊರಬಿದ್ದಿದೆ. ಈ ಎರಡು ಬಲಿಷ್ಠ ಪಡೆಗಳು ಹೊರಬಿದ್ದಿದ್ದು ಪೆನಾಲ್ಟಿ ಶೂಟೌಟ್ ಮೂಲಕ ಎಂಬುದು ವಿಶೇಷ. ಇನ್ನು ಈ ತಂಡಗಳಿಗೆ ಸೋಲುಣಿಸಿ ಮೊರಾಕೊ ಹಾಗೂ ಪರಾಗ್ವೆ ತಂಡಗಳು ರೌಂಡ್ ಆಫ್ 16 ಸುತ್ತಿಗೆ ಪ್ರವೇಶಿಸಿದೆ.

FIFA World Cup 2026: ಪೆನಾಲ್ಟಿ ಶೂಟೌಟ್‌ನಲ್ಲಿ 2 ಬಲಿಷ್ಠ ತಂಡಗಳು ಕಿಕ್ ಔಟ್..!
Netherlands And Germany
Image Credit source: FIFA

Updated on: Jun 30, 2026 | 10:16 AM

ಫಿಫಾ ವಿಶ್ವಕಪ್​ ರೌಂಡ್ ಆಫ್ 32 ಸುತ್ತಿನಲ್ಲಿ ಭರ್ಜರಿ ಪೈಪೋಟಿ ಮುಂದುವರೆದಿದೆ. ಈ ಪೈಪೋಟಿಯೊಂದಿಗೆ ವಿಶ್ವಕಪ್ ಅಂಗಳದ ಎರಡು ಬಲಿಷ್ಠ ತಂಡಗಳಾದ ಜರ್ಮನಿ ಹಾಗೂ ನೆದರ್​ಲ್ಯಾಂಡ್ಸ್ ತಂಡಗಳು ಹೊರಬಿದ್ದಿವೆ. ಸದಾ ವಿಶ್ವಕಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಈ ಯುರೋಪಿಯನ್ ಬಲಿಷ್ಠ ತಂಡಗಳಿಗೆ ಕ್ರಮವಾಗಿ ಪರಾಗ್ವೆ ಮತ್ತು ಮೊರಾಕೊ ತಂಡಗಳು ಸೋಲುಣಿಸಿವೆ.

ಜರ್ಮನಿಗೆ ಬಿಗ್ ಶಾಕ್!

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತಿರುವುದು ಇದೇ ಮೊದಲು. ಫಿಲಡೆಲ್ಫಿಯಾ ಸ್ಟೇಡಿಯಂ ನಲ್ಲಿ ನಡೆದ ಈ ಪಂದ್ಯದಲ್ಲಿ ಪರಾಗ್ವೆ ಮತ್ತು ಜರ್ಮನಿ ನಡುವೆ ಭರ್ಜರಿ ಪೈಪೋಟಿ ಕಂಡು ಬಂದಿತ್ತು. ಪರಾಗ್ವೆ ಪರ ಜೂಲಿಯೊ ಎನ್ಸಿಸೊ (42ನೇ ನಿಮಿಷ) ಗೋಲು ಗಳಿಸಿದರೆ, ಜರ್ಮನಿಯ ಕೈ ಹಾವರ್ಟ್ಜ್ (54ನೇ ನಿಮಿಷ) ಪಂದ್ಯವನ್ನು ಸಮಬಲಕ್ಕೆ ತಂದರು.

1-1 ಅಂತರದಿಂದ ಸಾಗಿದ ಈ ಪಂದ್ಯವು ಆ ಬಳಿಕ ಪೆನಾಲ್ಟಿ ಶೂಟೌಟ್​ನತ್ತ ಮುಖ ಮಾಡಿತು. ಆದರೆ ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿಯ ಅದೃಷ್ಟ ಕೈಕೊಟ್ಟಿತು. ತಂಡದ ಸ್ಟಾರ್ ಆಟಗಾರರಾದ ಕೈ ಹಾವರ್ಟ್ಜ್ ಮತ್ತು ನಿಕ್ ವೋಲ್ಟಮೇಡ್ ಪೆನಾಲ್ಟಿ ಕಿಕ್‌ಗಳನ್ನು ಮಿಸ್ ಮಾಡಿಕೊಂಡರು. ಅಂತಿಮವಾಗಿ ಪರಾಗ್ವೆ ತಂಡ 4-3 ಅಂತರದಿಂದ ಜರ್ಮನಿಯ ಹೆಡೆಮುರಿ ಕಟ್ಟಿ ಐತಿಹಾಸಿಕ ಜಯ ದಾಖಲಿಸಿತು.

  • ಜರ್ಮನಿ ತಂಡದ ಫಿಫಾ ರ್ಯಾಂಕ್: 12
  • ಪರಾಗ್ವೆ ತಂಡದ ಫಿಫಾ ರ್ಯಾಂಕ್: 34

ಡಚ್ಚರ ಕನಸು ಭಗ್ನ!

ಹೂಸ್ಟನ್ ಸ್ಟೇಡಿಯಂ ನಲ್ಲಿ ನಡೆದ ಮತ್ತೊಂದು ರೋಮಾಂಚಕ ಪಂದ್ಯದಲ್ಲಿ ಮಾಜಿ ರನ್ನರ್-ಅಪ್ ನೆದರ್​ಲ್ಯಾಂಡ್ಸ್ ತಂಡವನ್ನು ಮೊರಾಕೊ ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಅಂತರದಿಂದ ಮಣಿಸಿದೆ.  ಈ ಪಂದ್ಯದ 72ನೇ ನಿಮಿಷದಲ್ಲಿ ನೆದರ್​ಲ್ಯಾಂಡ್ಸ್‌ನ ಕೋಡಿ ಗ್ಯಾಕ್ಪೋ ಗೋಲು ಬಾರಿಸಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು.

ಆದರೆ ಪಂದ್ಯ ಮುಗಿಯಲು ಕೇವಲ ಕೆಲವೇ ಸೆಕೆಂಡುಗಳು ಬಾಕಿ ಇರುವಾಗ (91ನೇ ನಿಮಿಷ) ಮೊರಾಕೊದ ಇಸ್ಸಾ ಡಿಯಾಪ್ ಗೋಲು ಹೊಡೆದು ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ವಿಸ್ತರಿಸಿದರು. ಹೆಚ್ಚುವರಿ ಸಮಯದಲ್ಲಿ ಗೋಲುಗಳು ದಾಖಲಾದ ಕಾರಣ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಬೇಕಾಯಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ಮೊರಾಕೊ ಗೋಲ್‌ಕೀಪರ್ ಯಾಸಿನ್ ಬೋನೊ ತಂಡದ ಒಂದು ಗೋಲು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವಹಿಸಿತು. ಡಚ್ ಆಟಗಾರ ಕ್ರಿಸೆನ್ಸಿಯೊ ಸಮ್ಮರ್‌ವಿಲ್ಲೆ ಅವರ ನಿರ್ಣಾಯಕ ಕಿಕ್ ಅನ್ನು ಬೋನೊ ತಡೆದರೆ, ಮೊರಾಕೊ ಇಸ್ಮಾಯಿಲ್ ಸೈಬಾರಿ ವಿನ್ನಿಂಗ್ ಗೋಲು ಬಾರಿಸಿ 3-2 ಅಂತರದಿಂದ ತಂಡಕ್ಕೆ ಗೆಲುವು ತಂದು ಕೊಟ್ಟರು.

  • ನೆದರ್​ಲ್ಯಾಂಡ್ಸ್​ ತಂಡದ ಫಿಫಾ ರ್ಯಾಂಕ್: 7
  • ಮೊರಾಕೊ ತಂಡದ ಫಿಫಾ ರ್ಯಾಂಕ್: 6

ಈ  ಗೆಲುವುಗಳೊಂದಿಗೆ ಮೊರಾಕೊ ಹಾಗೂ ಪರಾಗ್ವೆ ತಂಡಗಳು ಪ್ರೀ-ಕ್ವಾರ್ಟರ್ ಫೈನಲ್‌ಗೇರಿದೆ. ಅಲ್ಲದೆ ಮುಂದಿನ ಪಂದ್ಯದಲ್ಲಿ ಮೊರಾಕೊ ತಂಡ ಕೆನಡಾವನ್ನು ಎದುರಿಸಿದರೆ, ಪರಾಗ್ವೆ ತಂಡ ಸ್ವೀಡನ್ ವಿರುದ್ಧ ಕಣಕ್ಕಿಳಿಯಲಿದೆ.

 

 

Published On - 10:15 am, Tue, 30 June 26

Follow Us