AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಬಾಪೆ, ಯಮಾಲ್​ನ ಹಿಂದಿಕ್ಕಿ ಬ್ಯಾಲನ್ ಡಿ’ಓರ್ ಗೆದ್ದ ಹ್ಯಾರಿ ಕೇನ್!

ಬ್ಯಾಲನ್ ಡಿ’ಓರ್ ಎಂಬುದು ಫುಟ್‌ಬಾಲ್ ಜಗತ್ತಿನಲ್ಲಿ ಒಬ್ಬ ಆಟಗಾರ ಪಡೆಯಬಹುದಾದ ಅತ್ಯುನ್ನತ ವೈಯಕ್ತಿಕ ಪ್ರಶಸ್ತಿಯಾಗಿದೆ.ಪ್ರತಿ ವರ್ಷ ಜಗತ್ತಿನಾದ್ಯಂತ ಅತ್ಯುತ್ತಮ ಪ್ರದರ್ಶನ ನೀಡಿದ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಫುಟ್‌ಬಾಲ್ ತಾರೆಗೆ ಈ ಗೌರವವನ್ನು ನೀಡಲಾಗುತ್ತದೆ. ಅದರಂತೆ ಈ ಬಾರಿ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬ್ಯಾಲನ್ ಡಿ’ಓರ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಎಂಬಾಪೆ, ಯಮಾಲ್​ನ ಹಿಂದಿಕ್ಕಿ ಬ್ಯಾಲನ್ ಡಿ’ಓರ್ ಗೆದ್ದ ಹ್ಯಾರಿ ಕೇನ್!
Mbappe - Harry Kane - YamalImage Credit source: GettyImages
ಝಾಹಿರ್ ಯೂಸುಫ್
|

Updated on: Oct 27, 2026 | 9:01 AM

Share

ಫುಟ್‌ಬಾಲ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈಯಕ್ತಿಕ ಗೌರವವಾದ 2026ರ ಸಾಲಿನ ‘ಬ್ಯಾಲನ್ ಡಿ’ಓರ್’ ಪ್ರಶಸ್ತಿಯನ್ನು ಇಂಗ್ಲೆಂಡ್ ತಂಡದ ನಾಯಕ ಹಾಗೂ ಬಾಯರ್ನ್ ಮ್ಯೂನಿಚ್ ಕ್ಲಬ್‌ನ ಮುಂಚೂಣಿ ಆಟಗಾರ ಹ್ಯಾರಿ ಕೇನ್ ಮುಡಿಗೇರಿಸಿಕೊಂಡಿದ್ದಾರೆ. ಲಂಡನ್‌ನ ಪ್ರತಿಷ್ಠಿತ ಪಲ್ಲಾಡಿಯಮ್‌ನಲ್ಲಿ ನಡೆದ 70ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಮೂಲಕ 25 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಬಿದ್ದಿದ್ದು, 2001ರಲ್ಲಿ ಮೈಕಲ್ ಓವನ್ ನಂತರ ಈ ಪ್ರಶಸ್ತಿ ಗೆದ್ದ ಮೊದಲ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೆ ಕೇನ್ ಪಾತ್ರರಾಗಿದ್ದಾರೆ.

ಈ ಬಾರಿಯ ಬ್ಯಾಲನ್ ಡಿ’ಓರ್ ರೇಸ್‌ನಲ್ಲಿ ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ಮತ್ತು ಸ್ಪೇನ್‌ನ ಲಾಮಿನ್ ಯಮಾಲ್ ಮುಂಚೂಣಿಯಲ್ಲಿದ್ದರು. ಆದರೆ, ಇವರಿಬ್ಬರ ತೀವ್ರ ಪೈಪೋಟಿಯನ್ನು ಸಮರ್ಥವಾಗಿ ಹಿಂದಿಕ್ಕುವಲ್ಲಿ ಯಶಸ್ವಿಯಾಗಿರುವ ಹ್ಯಾರಿ ಕೇನ್, ಚೊಚ್ಚಲ ಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

2026ರ ಬ್ಯಾಲನ್ ಡಿ’ಓರ್ ಟಾಪ್ 5 ಆಟಗಾರರು:

ಸ್ಥಾನ ಆಟಗಾರ ಕ್ಲಬ್ / ದೇಶ
1 ಹ್ಯಾರಿ ಕೇನ್ ಬಾಯರ್ನ್ ಮ್ಯೂನಿಚ್ / ಇಂಗ್ಲೆಂಡ್
2 ಕಿಲಿಯನ್ ಎಂಬಾಪೆ ರಿಯಲ್ ಮ್ಯಾಡ್ರಿಡ್ / ಫ್ರಾನ್ಸ್
3 ಲಾಮಿನ್ ಯಮಾಲ್ ಬಾರ್ಸಿಲೋನಾ / ಸ್ಪೇನ್
4 ರೊಡ್ರಿ ಮ್ಯಾಂಚೆಸ್ಟರ್ ಸಿಟಿ / ಸ್ಪೇನ್
5 ಲಿಯೋನೆಲ್ ಮೆಸ್ಸಿ ಇಂಟರ್ ಮಿಯಾಮಿ / ಅರ್ಜೆಂಟೀನಾ

ಕೇನ್​ಗೆ ಪ್ರಶಸ್ತಿ ಒಲಿದದ್ದು ಹೇಗೆ?

ಕಳೆದ 2025–26ರ ಸೀಸನ್‌ನಲ್ಲಿ ಕ್ಲಬ್ ಮತ್ತು ದೇಶದ ಪರವಾಗಿ ಬರೊಬ್ಬರಿ 73 ಗೋಲುಗಳನ್ನು ಬಾರಿಸುವ ಮೂಲಕ ಹ್ಯಾರಿ ಕೇನ್ ಅತಿರಥ ಮಹಾರಥರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. ಬಾಯರ್ನ್ ಮ್ಯೂನಿಚ್ ತಂಡವು ಡೊಮೆಸ್ಟಿಕ್ ಟ್ರೆಬಲ್ (ಮೂರು ಪ್ರಮುಖ ಟ್ರೋಫಿ) ಗೆಲ್ಲುವಲ್ಲಿ ಮತ್ತು ಇಂಗ್ಲೆಂಡ್ ತಂಡವು ಫಿಫಾ ವಿಶ್ವಕಪ್‌ನ ಸೆಮಿಫೈನಲ್ ತಲುಪುವಲ್ಲಿ ಇವರ ಪಾತ್ರ ಅನನ್ಯವಾಗಿತ್ತು. ಈ ಮೂಲಕ ಕಿಲಿಯನ್ ಎಂಬಾಪೆ ಮತ್ತು ಲಾಮಿನ್ ಯಮಾಲ್​ರನ್ನು ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಕೇನ್​ಗೆ ಡಬಲ್ ಧಮಾಕಾ!

ಇದೇ ಸಮಾರಂಭದಲ್ಲಿ ಹ್ಯಾರಿ ಕೇನ್ ಅವರು ಬ್ಯಾಲನ್ ಡಿ’ಓರ್ ಮತ್ತು ಗರ್ಡ್ ಮುಲ್ಲರ್ ಟ್ರೋಫಿ (ವರ್ಷದ ಅತ್ಯುತ್ತಮ ಸ್ಟ್ರೈಕರ್) ಎರಡನ್ನೂ ಒಂದೇ ರಾತ್ರಿ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಮೂಲಕ ಸದಾ ರನ್ನರ್ಸ್-ಅಪ್ ಪ್ರಶಸ್ತಿಗಳಿಗಷ್ಟೇ ಸೀಮಿತ ಆಟಗಾರ ಎಂಬ ಟೀಕೆಗಳಿಗೆ ಕೇನ್ ತಮ್ಮ ಅಮೋಘ ಪ್ರದರ್ಶನದ ಮೂಲಕ ಸೂಕ್ತ ಉತ್ತರ ನೀಡಿದ್ದಾರೆ.

ಏನಿದು ಬ್ಯಾಲನ್ ಡಿ’ಓರ್?

ಬ್ಯಾಲನ್ ಡಿ’ಓರ್ ಎಂಬುದು ಫುಟ್‌ಬಾಲ್ ಜಗತ್ತಿನಲ್ಲಿ ಒಬ್ಬ ಆಟಗಾರ ಪಡೆಯಬಹುದಾದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ವೈಯಕ್ತಿಕ ಪ್ರಶಸ್ತಿಯಾಗಿದೆ. ಸರಳವಾಗಿ ಹೇಳಬೇಕೆಂದರೆ, ಇದು ಫುಟ್‌ಬಾಲ್ ಪ್ರಪಂಚದ “ಆಸ್ಕರ್” ಪ್ರಶಸ್ತಿಯಿದ್ದಂತೆ.

ಫ್ರೆಂಚ್ ಭಾಷೆಯಲ್ಲಿ ‘ಬ್ಯಾಲನ್ ಡಿ’ಓರ್’ ಎಂದರೆ “ಚಿನ್ನದ ಚೆಂಡು” ಎಂದರ್ಥ. ಪ್ರಶಸ್ತಿ ವಿಜೇತರಿಗೆ ಚಿನ್ನದ ಬಣ್ಣದ ಫುಟ್‌ಬಾಲ್ ಮಾದರಿಯ ಟ್ರೋಫಿಯನ್ನು ನೀಡಲಾಗುತ್ತದೆ. ಹೀಗಾಗಿ ಇದನ್ನು ‘ಬ್ಯಾಲನ್ ಡಿ’ಓರ್’ ಎಂದು ಕರೆಯಲಾಗುತ್ತದೆ.

ಪ್ರಶಸ್ತಿ ನೀಡುವವರು ಯಾರು?

ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಫ್ರಾನ್ಸ್‌ನ ಪ್ರಖ್ಯಾತ ಕ್ರೀಡಾ ನಿಯತಕಾಲಿಕೆ ಆದ ‘ಫ್ರಾನ್ಸ್ ಫುಟ್‌ಬಾಲ್’ 1956ರಿಂದ ನೀಡುತ್ತಾ ಬಂದಿದೆ.

ಪ್ರಶಸ್ತಿ ಯಾರಿಗೆ ಸಿಗುತ್ತದೆ?

ಪ್ರತಿ ವರ್ಷ (ಒಂದು ಸೀಸನ್‌ನಲ್ಲಿ) ಜಗತ್ತಿನಾದ್ಯಂತ ಅತ್ಯುತ್ತಮ ಪ್ರದರ್ಶನ ನೀಡಿದ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಫುಟ್‌ಬಾಲ್ ತಾರೆಗೆ ಈ ಗೌರವವನ್ನು ನೀಡಲಾಗುತ್ತದೆ.

ವಿಜೇತರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

ಜಗತ್ತಿನ ವಿವಿಧ ದೇಶಗಳ ಅಗ್ರ ಕ್ರೀಡಾ ಪತ್ರಕರ್ತರು, ರಾಷ್ಟ್ರೀಯ ತಂಡಗಳ ತರಬೇತುದಾರರು ಮತ್ತು ನಾಯಕರು ಮತ ಚಲಾಯಿಸುವ ಮೂಲಕ ಅತ್ಯುತ್ತಮ ಆಟಗಾರನನ್ನು ಆಯ್ಕೆ ಮಾಡುತ್ತಾರೆ. ಅದರಂತೆ ಈ ಬಾರಿ ಹ್ಯಾರಿ ಕೇನ್ ಅತ್ಯಧಿಕ ಮತ ಪಡೆಯುವ ಮೂಲಕ ಚೊಚ್ಚಲ ‘ಬ್ಯಾಲನ್ ಡಿ’ಓರ್’  ಮುಡಿಗೇರಿಸಿಕೊಂಡಿದ್ದಾರೆ.

ಅತೀ ಹೆಚ್ಚು ‘ಬ್ಯಾಲನ್ ಡಿ’ಓರ್’ ಪಡೆದ ಆಟಗಾರರು:

ಸ್ಥಾನ ಆಟಗಾರ ದೇಶ ಒಟ್ಟು ಪ್ರಶಸ್ತಿಗಳು ಗೆದ್ದ ವರ್ಷಗಳು
1 ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ 8 2009, 2010, 2011, 2012, 2015, 2019, 2021, 2023
2 ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್ 5 2008, 2013, 2014, 2016, 2017
3 ಮೈಕೆಲ್ ಪ್ಲಾಟಿನಿ ಫ್ರಾನ್ಸ್ 3 1983, 1984, 1985
4 ಜೋಹಾನ್ ಕ್ರೈಫ್ ನೆದರ್ಲ್ಯಾಂಡ್ಸ್ 3 1971, 1973, 1974
5 ಮಾರ್ಕೊ ವಾನ್ ಬಾಸ್ಟನ್ ನೆದರ್ಲ್ಯಾಂಡ್ಸ್ 3 1988, 1989, 1992

ಇದನ್ನೂ ಓದಿ: ಹೋಯ್ತಾ ಇರು… CSK ಯನ್ನು ಟ್ರೋಲ್ ಮಾಡಿದ ಪೊಲಾರ್ಡ್​!

ಫುಟ್‌ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ‘ಬ್ಯಾಲನ್ ಡಿ’ಓರ್’ ಪ್ರಶಸ್ತಿ ಗೆದ್ದ ವಿಶ್ವ ದಾಖಲೆ ಕಾಲ್ಚೆಂಡು ಚತುರ ಲಿಯೋನೆಲ್ ಮೆಸ್ಸಿ (8) ಹೆಸರಿನಲ್ಲಿದೆ. ಈ ವಿಶ್ವ ದಾಖಲೆಯ ಸಮೀಪದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ (5) ಇದ್ದಾರಾದರೂ, ಮೆಸ್ಸಿ ನಿರ್ಮಿಸಿರುವ ಈ ಅಪರೂಪದ ದಾಖಲೆಯನ್ನು ಮುರಿಯುವುದು ಮುಂದಿನ ದಿನಗಳಲ್ಲಿ ಅಸಾಧ್ಯ ಎಂದೇ ಹೇಳಬಹುದು.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More