Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಹೈಜಂಪ್​ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್!

Tokyo Paralympics: ನಿಶಾದ್ ಕುಮಾರ್ ಪುರುಷರ ಟಿ 47 ಎತ್ತರ ಜಿಗಿತದಲ್ಲಿ 2.06 ಮೀಟರ್ ಜಿಗಿದು ಭಾರತಕ್ಕೆ ಪದಕ ಗೆದ್ದಿದ್ದಾರೆ. ಅವರು ಎರಡನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದರು.

Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಹೈಜಂಪ್​ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್!
ನಿಶಾದ್ ಕುಮಾರ್
Updated By: ಪೃಥ್ವಿಶಂಕರ

Updated on: Aug 29, 2021 | 5:48 PM

ಟೋಕಿಯೊ ಪ್ಯಾರಾಲಿಂಪಿಕ್ಸ್ -2020 ರಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದೆ. ಹೈಜಂಪ್ ಆಟಗಾರ ನಿಶಾದ್ ಕುಮಾರ್ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದಾರೆ. ನಿಶಾದ್ ಕುಮಾರ್ ಪುರುಷರ ಟಿ 47 ಎತ್ತರ ಜಿಗಿತದಲ್ಲಿ 2.06 ಮೀಟರ್ ಜಿಗಿದು ಭಾರತಕ್ಕೆ ಪದಕ ಗೆದ್ದಿದ್ದಾರೆ. ನಿಶಾದ್ ತಮ್ಮ ಎರಡನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದರು. ಈ ಜಿಗಿತದೊಂದಿಗೆ, ಅವರು ಏಷ್ಯನ್ ದಾಖಲೆಯನ್ನು ಸರಿಗಟ್ಟಿದರು. ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಎರಡನೇ ಪದಕವಾಗಿದೆ. ನಿಶಾದ್​ಗೂ ಮೊದಲು, ಭಾರತೀಯ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾಬೆನ್ ಪಟೇಲ್ ಕೂಡ ಬೆಳ್ಳಿ ಪದಕ ಗೆದ್ದಿದ್ದರು. ಅಮೆರಿಕದ ಟೌನ್ಸೆಂಡ್ ರೋಡೆರಿಕ್ 2.15 ಮೀಟರ್ ಎತ್ತರದ ವಿಶ್ವ ದಾಖಲೆಯ ಜಿಗಿತದೊಂದಿಗೆ ಚಿನ್ನದ ಪದಕ ಗೆದ್ದರು. ಮೂರನೇ ಸ್ಥಾನವನ್ನು 2.06 ಮೀಟರ್ ಜಿಗಿದ ಅಮೆರಿಕದ ವೆಸೆ ಡಲ್ಲಾಸ್ ಪಡೆದುಕೊಂಡರು.

ರಾಂಪಾಲ್​ಗೆ ಐದನೇ ಸ್ಥಾನ
ನಿಶಾದ್ ಹೊರತುಪಡಿಸಿ, ಇನ್ನೊಬ್ಬ ಭಾರತೀಯ ಆಟಗಾರ ರಾಂಪಾಲ್ ಕೂಡ ಕ್ರೀಡಾಕೂಟದ ಈ ವಿಭಾಗದಲ್ಲಿ ಭಾಗವಹಿಸಿದ್ದರು. ಅವರು 1.94 ಮೀಟರ್ ಎತ್ತರ ಜಿಗಿಯುವುದರ ಮೂಲಕ ಐದನೇ ಸ್ಥಾನ ಪಡೆದರು.ಇದು ಅವರ ವೈಯಕ್ತಿಕ ಅತ್ಯುತ್ತಮ ದಾಖಲೆಯಾಗಿದೆ.

ಪಿಎಂ ಅಭಿನಂದನೆ
ನಿಶಾದ್ ಯಶಸ್ಸಿನ ನಂತರ, ಪಿಎಂ ನರೇಂದ್ರ ಮೋದಿ ಕೂಡ ಅವರನ್ನು ಅಭಿನಂದಿಸಿದ್ದಾರೆ. ಪಿಎಂ ಟ್ವೀಟ್ ಮಾಡಿ, “ಟೋಕಿಯೊದಿಂದ ಮತ್ತೊಂದು ಒಳ್ಳೆಯ ಸುದ್ದಿ ಬಂದಿದೆ. ಪುರುಷರ ಹೈಜಂಪ್ ಟಿ 47 ವಿಭಾಗದಲ್ಲಿ ನಿಶಾದ್ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರು ಹೋಲಿಸಲಾಗದ ಸಾಮರ್ಥ್ಯ ಹೊಂದಿರುವ ಅತ್ಯಂತ ಪ್ರತಿಭಾವಂತ ಆಟಗಾರ. ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

Published On - 5:37 pm, Sun, 29 August 21