ಇಂಗ್ಲೆಂಡ್ ವಿರುದ್ಧ ಇಂದು ಅಹಮದಾಬಾದಿನಲ್ಲಿ ಶುರುವಾದ ಟಿ20 ಕ್ರಿಕೆಟ್ ಸರಣಿಯಲ್ಲಿ ಭಾರತ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ನಿಜ. ಆದರೆ, ಮಿಡ್ಲ್ ಆರ್ಡರ್ ಬ್ಯಾಟ್ಸಮನ್ ಹಾರ್ದಿಕ್ ಪಾಂಡ್ಯ ಅವರು ಆಡಿದ ಒಂದು ಹೊಡೆತ ಕ್ರಿಕೆಟ್ ಪ್ರೇಮಿಗಳಿಗೆ ದಿಗಿಲು ಮೂಡಿಸುವ ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಹ ಪ್ರತಿಕ್ರಿಯಿಸುವಂಥ ಸಂದರ್ಭ ಸೃಷ್ಟಿಸಿದೆ. ಭಾರತದ ವಿಕೆಟ್ಕೀಪರ್/ಬ್ಯಾಟ್ಸ್ಮನ್ ರಿಷಭ್ ಪಂತ್ ವೇಗದ ಬೌಲರ್ ಜೊಫ್ರಾ ಆರ್ಚರ್ಗೆ ರಿವರ್ಸ್ ಸ್ಕೂಪ್ ಹೊಡೆತದ ಮೂಲಕ ಸಿಕ್ಸರ್ ಬಾರಿಸಿ ದಿಟ್ಟತನ ಪ್ರದರ್ಶಿಸಿದರು.
ಆದರೆ, ಪಾಂಡ್ಯ ಆಡಿದ ಶಾಟ್ ಮಾತ್ರ ಬಣ್ಣನೆಗೆ ಸಿಗದಂಥಧ್ದು. ಆ ಸನ್ನಿವೇಶ ಸೃಷ್ಟಿಯಾಗಿದ್ದು 15ನೇ ಓವರ್ನಲ್ಲಿ ಮತ್ತು ಅದನ್ನು ಬೌಲ್ ಮಾಡಿದ್ದು ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್. ಆ ವಿಚಿತ್ರವಾದ ಶಾಟ್ ಆಡುವುದಕ್ಕಿಂತ ಮೊದಲಿನ ಎಸೆತವನ್ನು ಪಾಂಡ್ಯ ಸಿಕ್ಸರ್ಗೆ ಎತ್ತಿದ್ದರು. ನಾವು ಚರ್ಚಿಸುತ್ತಿರುವ ನಿರ್ದಿಷ್ಟವಾದ ಎಸೆತವನ್ನು ಸ್ಟೋಕ್ಸ್ ಶಾರ್ಟ್ ಆಗಿ ಪಿಚ್ ಮಾಡಿದರು. ಪ್ರಾಯಶಃ ಇದನ್ನು ನಿರೀಕ್ಷಿಸಿದ್ದ ಬಲಗೈ ಬ್ಯಾಟ್ಸ್ಮನ್ ಪಾಂಡ್ಯ ಚೆಂಡಿನ ಮೇಲಿನ ತಮ್ಮ ದೃಷ್ಟಿಯನ್ನು ಸರಿಸಿ ಡಕ್ ಮಾಡಿದರಾದರೂ ತಮ್ಮ ಬ್ಯಾಟನ್ನು ಮಾತ್ರ ಚೆಂಡಿನ ಲೈನಲ್ಲೇ ಇಟ್ಟರು. ಸ್ಟೋಕ್ಸ್ ಅವರ ಎಸೆತ ಅವರ ಬ್ಯಾಟಿಗೆ ತಾಕಿ ವಿಕೆಟ್ ಕೀಪರ್ ತಲೆ ಮೇಲಿಂದ ಬೌಂಡರಿಗೆ ಚಿಮ್ಮಿತು!
ಹೊಡೆತವನ್ನು ನೋಡಿ ಬೆರಗಾಗಿರುವ ಐಸಿಸಿ, ಈ ಶಾಟ್ಗೊಂದು ಹೆಸರು ನೀಡಿ ಅಂತ ಟ್ವೀಟ್ ಮಾಡಿದೆ.
Name this shot from @hardikpandya7 ?#INDvENG pic.twitter.com/4AwJzMTbxa
— ICC (@ICC) March 12, 2021
ದುರದೃಷ್ಟವಶಾತ್ ಉತ್ತಮ ಫಾರ್ಮ್ನಲ್ಲಿ ಕಾಣುತ್ತಿದ್ದ ಪಾಂಡ್ಯ ಬಹಳ ಹೊತ್ತು ಕ್ರೀಸಿನಲ್ಲಿ ಉಳಿಯದೆ ಕೇವಲ 19ರನ್ ಗಳಿಸಿ ವೇಗದ ಬೌಲರ್ ಕ್ರಿಸ್ ಜೋರ್ಡನ್ಗೆ ವಿಕೆಟ್ ಒಪ್ಪಿಸಿದರು. ಭಾರತದ ಪರ ಶ್ರೇಯಸ್ ಅಯ್ಯರ್ (67, 48 ಎಸೆತ 8 ಬೌಂಡರಿ,1 ಸಿಕ್ಸ್) ಮಾತ್ರ ಚೆನ್ನಾಗಿ ಆಡಿದರು.
ಟೆಸ್ಟ್ ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತೀಯ ತಂಡದ ಬ್ಯಾಟ್ಸ್ಮನ್ಗಳು ಉಡಾಫೆ ಮನೋಭಾವ ಪ್ರದರ್ಶಿಸಿ ವಿಕೆಟ್ ಕಳೆದುಕೊಂಡರು. ಇದನ್ನು ಆರಂಭಿಸಿದ್ದು ಖುದ್ದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರ ಎಸೆತವೊಂದನ್ನು ಆಫ್ಸೈಡ್ನಲ್ಲಿ ಎಳೆದು ಬಾರಿಸುವ ಪ್ರಯತ್ನ ಮಾಡಿದ ಕೊಹ್ಲಿ ಮಿಡ್ ಆಫ್ನಲ್ಲಿದ್ದ ಕ್ರಿಸ್ ಜೊರ್ಡನ್ಗೆ ಸುಲಭ ಕ್ಯಾಚ್ ನೀಡಿದರು. ಅವರ ಹೊಡೆತ ನೆಟ್ಸ್ನಲ್ಲಿ ಕ್ಯಾಚಿಂಗ್ ಅಭ್ಯಾಸ ಮಾಡಿಸಿದಂತಿತ್ತು.
ಮೊದಲ ಪಂದ್ಯವನ್ನು ಪ್ರವಾಸಿ ತಂಡ 8 ವಿಕೆಟ್ಗಳಿಂದ ಸುಲಭವಾಗಿ ಗೆದ್ದಿದೆ. ಎರಡನೇ ಪಂದ್ಯ ಇದೇ ಮೈದಾನದಲ್ಲಿ ರವಿವಾರದಂದು ನಡೆಯಲಿದೆ.
Published On - 10:57 pm, Fri, 12 March 21