ಪುರುಷರ ವಿಶ್ವಕಪ್ ಕ್ರಿಕೆಟ್ 2027 ಮತ್ತು 2031ರಲ್ಲಿ ಮತ್ತೊಮ್ಮೆ 14-ತಂಡಗಳ ಈವೆಂಟ್ ಆಗಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಂಗಳವಾರದಂದು ಘೋಷಣೆ ಮಾಡಿದೆ. 2024 ರಿಂದ 2031 ರವರೆಗಿನ ಜಾಗತಿಕ ಕ್ರಿಕೆಟ್ ಶೆಡ್ಯೂಲ್ ಅನ್ನು ಬಿಡುಗಡೆ ಮಾಡಿದ ನಂತರ ಐಸಿಸಿ, 2027 ಮತ್ತು 2031 ರ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಲಿರುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಪ್ರಕಟಿಸಿತು. ಹಾಗೆಯೇ, ಮಿನಿ ವಿಶ್ವಕಪ್ ಎಂದು ಕರೆಸಿಕೊಳ್ಳುವ ಚಾಂಪಿಯನ್ಸ್ ಟ್ರೋಫಿಯನ್ನು ಪುನರುಜ್ಜೀವಗೊಳಿಸುವ ಕುರಿತು ಸಹ ಐಸಿಸಿ ಹೇಳಿಕೆ ನೀಡಿದೆ. ಈ ಟೂರ್ನಮೆಂಟ್ 2025 ಮತ್ತು 2029ರಲ್ಲಿ ಆಯೋಜಿಸಲಾಗುವುದು ಮತ್ತು ಅದು 8-ತಂಡಗಳು ಭಾಗವಹಿಸಲಿರುವ ಈವೆಂಟ್ ಆಗಲಿದೆ ಎಂದು ಐಸಿಸಿ ಹೇಳಿದೆ. 2017ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಅತಿಥೇಯ ತಂಡವನ್ನು ಸೋಲಿಸಿ ಗೆದ್ದಿತ್ತು.
ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರುವ ಹಾಗೆ, 2019ರಲ್ಲಿ ನಡೆದ ವಿಶ್ವಕಪ್ನಲ್ಲಿ 10 ರಾಷ್ಟ್ರಗಳು ಭಾಗವಹಿಸಿದ್ದವು. ಅದಕ್ಕೆ ಮೊದಲು ಅಂದರೆ 2015ರಲ್ಲಿ ನಡೆದ ವಿಶ್ವಕಪ್ನಲ್ಲಿ 14 ತಂಡಗಳು ಭಾಗವಹಿಸಿದ್ದವು.
ಐಸಿಸಿ ಆಡಳಿತ ಮಂಡಳಿ ಮಂಗಳವಾರದಂದು ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ 2027 ಮತ್ತು 2031ರಲ್ಲಿ ನಡೆಯುವ ಪುರುಷರ ವಿಶ್ವಕಪ್ ಪಂದ್ಯಾವಳಿಗಳು 14 ತಂಡಗಳು ಭಾಗವಹಿಸುವ, ಒಟ್ಟು 54-ಪಂದ್ಯಗಳ ಈವೆಂಟ್ ಆಗಲಿವೆ ಮತ್ತು 2024, 2026, 2028 ಮತ್ತು 2030ರ ಟಿ20 ವಿಶ್ವಕಪ್ ಟೂರ್ನಿಗಳು 20 ತಂಡಗಳು ಭಾಗವಹಿಸಲಿರುವ 55-ಪಂದ್ಯಗಳ ಈವೆಂಟ್ ಆಗಲಿವೆ.
2015 ರಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ನಲ್ಲಿ ನಡೆದ ವಿಶ್ವಕಪ್ನಲ್ಲಿ 14 ತಂಡಳು ಭಾಗವಹಿಸಿದ್ದವು ಆದರೆ 2019 ರಲ್ಲಿ ನಡೆದ ವಿಶ್ವಕಪ್ನಲ್ಲಿ ಆವುಗಳ ಸಂಖ್ಯೆಯನ್ನು 10ಕ್ಕೆ ಇಳಿಸಿದ ಐಸಿಸಿಯ ನಿರ್ಧಾರ ವಿವಾದ ಹುಟ್ಟು ಹಾಕಿತ್ತು. ಕ್ರಿಕೆಟ್ ಜಾಗತಕವಾಗಿ ಬೆಳೆಯುತ್ತಿರುವುದನ್ನು ಐಸಿಸಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ ಐಸಿಸಿಯ ಅಧಿಕಾರಿಗಳು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಪಂದ್ಯಗಳ ಪ್ರಸರಣದ ಹಕ್ಕನ್ನು ಪಡೆದಿದ್ದ ಸಂಸ್ಥೆಗಳು ಟೀಮುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬಯಸಿದ್ದವು ಮತ್ತು ಫಾರ್ಮಾಟನ್ನು ಸ್ಟ್ರೀಮ್ಲೈನ್ ಮಾಡಿ ಒಂದು ದುರ್ಬಲ ತಂಡ ಸಶಕ್ತ ತಂಡದ ವಿರುದ್ಧ ಆಡಿದಾಗ ಆಗುವ ಮಿಸ್ಮ್ಯಾಚ್ ತಪ್ಪಿಸುವುದು ಐಸಿಸಿಯ ಉದ್ದೇಶವಾಗಿತ್ತು ಅಂತ ಅವರು ಹೇಳಿದ್ದರು.
ಐಸಿಸಿ ಆಡಳಿತ ಮಂಡಳಿಯು ನಿರ್ವಹಣಾ ಸಮಿತಿಗೆ ಮನವಿಯೊಂದನ್ನು ಮಾಡಿ ಯುಎಇಯಲ್ಲಿ ಆಯೋಗಜಿಸಲಾಗುವ 2021 ಟಿ20 ವಿಶ್ವಕಪ್ ಟೂರ್ನಿಗೆ ಮಧ್ಯ ಪ್ರಾಚ್ಯದಲ್ಲೊಂದು ಸ್ಥಳ ಸಿಗಬಹುದಾದ ಸಾಧ್ಯತೆ ಬಗ್ಗೆ ಗಮನ ಹರಿಸುವಂತೆ ಹೇಳಿದೆ.
‘ಟೂರ್ನಿಯನ್ನು ಯಾರು ಆಯೋಜಿಸಲಿದ್ದಾರೆ ಎನ್ನುವ ಬಗ್ಗೆ ಅಂತಿಮ ನಿರ್ಧಾರವನ್ನು ಈ ತಿಂಗಳು ಕಳೆದ ನಂತರ ತೆಗೆದುಕೊಳ್ಳಲಾಗುವುದು. ಟೂರ್ನಿ ಎಲ್ಲೇ ನಡೆದರೂ ಬಿಸಿಸಿಐಯೇ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಅದರ ಆಯೋಜಕವೆನಿಸಿಕೊಳ್ಳುವುದು,’ ಎಂದು ತನ್ನ ಅಧಿಕೃತ ಪ್ರಕಟಣೆಯಲ್ಲಿ ಐಸಿಸಿ ತಿಳಿಸಿದೆ.
1975ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ನಲ್ಲಿ ಆಯೋಜನೆಗೊಂಡ ಪುರುಷರ ವಿಶ್ವಕಪ್ ಇದುವರೆಗೆ 12 ಬಾರಿ ನಡೆದಿದೆ. ಭಾರತದಲ್ಲಿ ಅದು ಮೂರು ಬಾರಿ (1987, 1996 ಮತ್ತು 2011) ನಡೆದಿದೆ.
ಇದನ್ನೂ ಓದಿ: ICC Rankings: ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲೇ ಉಳಿದ ಕೊಹ್ಲಿ, ರೋಹಿತ್ ಸ್ಥಾನ ಯಾವುದು?