ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ತನ್ನ ಎದುರಾಳಿಗಳಲ್ಲಿ ನಡುಕವನ್ನುಂಟು ಮಾಡುವ ಆಟಗಾರನೆಂದು ಎಲ್ಲರಿಗು ಗೊತ್ತಿರುವ ವಿಚಾರವೆ. ರಾವಲ್ಪಿಂಡಿ ಎಕ್ಸ್ಪ್ರೆಸ್ ಎಂದು ಕರೆಯಲ್ಪಡುವ ಈ ಬೌಲರ್, ಬ್ಯಾಟ್ಸ್ಮನ್ಗಳಿಗೆ ಹಲವು ಬಾರಿ ತಮ್ಮ ಘಾತಕ ವೇಗದ ಮೂಲಕ ಭಯವನ್ನುಂಟು ಮಾಡುತ್ತಿದ್ದರು. ಜೊತೆಗೆ ಶೋಯೆಬ್ ಅಖ್ತರ್ ಅವರ ಬೌನ್ಸರ್ ಎಷ್ಟು ಅಪಾಯಕಾರಿ ಆಗಿರುತ್ತಿತ್ತೆಂದರೆ ಅದರ ಸಹಾಯದಿಂದ ಅವರು ಅನೇಕ ಆಟಗಾರರನ್ನು ಗಾಯಗೊಳಿಸಿದ್ದರು. ಈ ಭಯಕ್ಕೆ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಒಳಗಾಗಿದ್ದರು. ಈ ವಿಚಾರವನ್ನು ಇತ್ತೀಚೆಗೆ ಉತ್ತಪ್ಪ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಶೋಯೆಬ್ ಅಖ್ತರ್ ಪಂದ್ಯದ ಸಮಯದಲ್ಲಿ ಹೇಗೆ ಬೆದರಿಕೆ ಹಾಕಿದ್ದರೆಂದು ಹೇಳಿದ್ದಾರೆ.
ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನಡೆದ ಘಟನೆಯನ್ನು ರಾಬಿನ್ ಯೂಟ್ಯೂಬ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದು, ರಾಬಿನ್‌ಗೆ ಅಖ್ತರ್ ಹೇಗೆ ಬೆದರಿಕೆ ಹಾಕಿದ್ದರು ಎಂಬುದನ್ನು ವಿವರಿಸಿದ್ದಾರೆ. ಆ ಸಮಯದಲ್ಲಿ ಪಾಕಿಸ್ತಾನದ ತಂಡ ಭಾರತ ಪ್ರವಾಸದಲ್ಲಿತ್ತು. ಈ ಪಂದ್ಯವನ್ನು ಎರಡೂ ತಂಡಗಳು ಗುವಾಹಟಿಯಲ್ಲಿ ಆಡುತ್ತಿದ್ದವು. ಭಾರತ ಗೆಲ್ಲಲು 25 ಎಸೆತಗಳಲ್ಲಿ 12 ರನ್ ಗಳಿಸಬೇಕಿತ್ತು. ಈ ವೇಳೆ ರಾಬಿನ್ ಮತ್ತು ಇರ್ಫಾನ್ ಪಠಾಣ್ ಬ್ಯಾಟಿಂಗ್ ಮಾಡುತ್ತಿದ್ದರು.
ಶೋಯೆಬ್ ಎಸೆತದಿಂದ ರಾಬಿನ್ ಆಘಾತ
ನನಗೆ ತುಂಬಾ ಚೆನ್ನಾಗಿ ನೆನಪಿದೆ, ನಾನು ಬ್ಯಾಟಿಂಗ್ ಮಾಡುವಾಗ ಶೋಯೆಬ್ ನನಗೆ ಯಾರ್ಕರ್ ಅನ್ನು ಎಸೆದರು, ಅದರೆ ಆ ಎಸೆತವನ್ನು ದಂಡಿಸುವಲ್ಲಿ ನಾನು ವಿಫಲನಾದೆ. ಆದರೆ ಆ ಚೆಂಡನ್ನು ಅಲ್ಲಿಯೇ ಡಿಫೆಂಡ್ ಮಾಡುವಲ್ಲಿ ನಾನು ಯಶಸ್ವಿಯಾಗಿದ್ದೆ. ಆ ಚೆಂಡಿನ ವೇಗ ಗಂಟೆಗೆ 154 ಕಿಲೋಮೀಟರ್ ಆಗಿತ್ತು. ಇದರ ನಂತರ, ನಾನು ಅವರ ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದ್ದೆ. ನಂತರ ನಮಗೆ ಗೆಲ್ಲಲು 3 ಅಥವಾ 4 ರನ್ಗಳು ಬೇಕಾಗಿದ್ದವು. ಅಖ್ತರ್ ಎಸೆದ ಮುಂದಿನ ಎಸೆತವನ್ನು ನಾನು ಬೌಂಡರಿ ಬಾರಿಸಿದ್ದೆ. ಈ ಮೂಲಕ ತಂಡಕ್ಕೆ ಗೆಲುವು ಸಹ ಸಿಕ್ಕಿತ್ತು.
ರಾಬಿನ್‌ಗೆ ಬೆದರಿಕೆ ಹಾಕಿದ ಶೋಯೆಬ್
ಪಂದ್ಯದ ನಂತರ ತಂಡ ಹೋಟೆಲ್‌ಗೆ ಮರಳಿತು. ಮುಂದಿನ ಪಂದ್ಯ ಗ್ವಾಲಿಯರ್‌ನಲ್ಲಿತ್ತು. ಹೋಟೆಲ್ನಲ್ಲಿ ಊಟದ ವೇಳೆ ರಾಬಿನ್ ಬಳಿಗೆ ಹೋದ ಶೋಯೆಬ್ ಅಖ್ತರ್, ರಾಬಿನ್ ನೀವು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೀರಿ ಮತ್ತು ನೀವು ನನ್ನ ಎಸೆತಗಳನ್ನು ಸರಿಯಾಗಿಯೇ ದಂಡಿಸಿದ್ದೀರಿ. ಆದರೆ ಮುಂದಿನ ಬಾರಿ ನೀವು ಹಾಗೆ ಮಾಡಿದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿಲ್ಲ. ನೀವು ವಿಕೆಟ್ನಿಂದ ಮುಂದೆ ಬಂದು ಆಡಿದರೆ, ನಾನು ಚೆಂಡನ್ನು ನೇರವಾಗಿ ನಿಮ್ಮ ತಲೆಯ ಮೇಲೆ ಎಸೆಯಬಹುದು ಎಂದು ಎಚ್ಚರಿಸಿದರಂತೆ. ಆದರಿಂದ ಈ ಘಟನೆಯ ನಂತರ ನಾನು ಅವರ ವಿರುದ್ಧ ವಿಕೆಟ್ನಿಂದ ಮುಂದೆ ಆಡುವುದನ್ನು ನಿಲ್ಲಿಸಿದೆ ಎಂದು ಉತ್ತಪ್ಪ ಹೇಳಿದರು.