
ಇಂದಿನಿಂದ ಅಂದರೆ ಆಗಸ್ಟ್ 29 ರ ಶುಕ್ರವಾರದಿಂದ ಬಿಹಾರದ ರಾಜ್‌ಗಿರ್‌ನಲ್ಲಿ 2025 ರ ಹಾಕಿ ಏಷ್ಯಾಕಪ್ (Hockey Asia Cup 2025) ಆರಂಭವಾಗಿದೆ. ಬಿಹಾರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಆತಿಥೇಯ ಭಾರತ ತಂಡ ಚೀನಾ ತಂಡವನ್ನು 4-3 ಗೋಲುಗಳ ಅಂತರದಿಂದ ಮಣಿಸಿ ಟೂರ್ನಿಯಲ್ಲಿ ಗೇಲುವಿನ ಶುಭಾರಂಭ ಮಾಡಿದೆ. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಹರ್ಮನ್ ಪ್ರೀತ್ ಸಿಂಗ್ (Harmanpreet Singh) ಈ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದರು. ಅವರು ಪಂದ್ಯದ 20, 33 ಮತ್ತು 47ನೇ ನಿಮಿಷಗಳಲ್ಲಿ ಗೋಲುಗಳನ್ನು ಬಾರಿಸಿದರು. ಉಳಿದಂತೆ ಜುಗ್ರಾಜ್ ಸಿಂಗ್ ತಂಡದ ಪರ ಏಕೈಕ ಗೋಲು ದಾಖಲಿಸಿದರು.
ಇಂದು ನಡೆದ ಈ ಪೂಲ್-ಎ ಪಂದ್ಯದಲ್ಲಿ ಚೀನಾ ಮೊದಲ ಗೋಲು ಗಳಿಸಿತು, ಪಂದ್ಯದ 12 ನೇ ನಿಮಿಷದಲ್ಲಿ ಡು ಶಿಹಾವೊ ಪೆನಾಲ್ಟಿ ಕಾರ್ನರ್ ಮೂಲಕ ಖಾತೆ ತೆರೆದು ಚೀನಾಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆದರೆ ಚೀನಾದ ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ. ಪಂದ್ಯದ 18 ನೇ ನಿಮಿಷದಲ್ಲಿ ಭಾರತದ ಜುಗ್ರಾಜ್ ಸಿಂಗ್ ಗೋಲು ಬಾರಿಸಿ ಗೋಲನ್ನು 1-1 ರಿಂದ ಸಮಗೊಳಿಸಿದರು. ಇದಾದ ನಂತರ ಪಾರುಪತ್ಯ ಮೇರೆದ ಭಾರತ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್, ಪಂದ್ಯದ 20 ಮತ್ತು 33 ನೇ ನಿಮಿಷಗಳಲ್ಲಿ 2 ಪೆನಾಲ್ಟಿ ಕಾರ್ನರ್ಗಳನ್ನು ಗೋಲಾಗಿ ಪರಿವರ್ತಿಸಿ ಗೋಲುಗಳ ಅಂತರವನ್ನು 3-1ಕ್ಕೆ ಹೆಚ್ಚಿಸಿದರು.
𝐀𝐬𝐢𝐚 𝐂𝐮𝐩 𝐇𝐨𝐜𝐤𝐞𝐲 𝐂𝐡𝐚𝐦𝐩𝐢𝐨𝐧𝐬𝐡𝐢𝐩 –
🇮🇳 4-3 🇨🇳
Indian hockey team beats China 4-3 in their opening Pool A match of the Asia Cup in Rajgir, Bihar.#HockeyIndia #IndiaKaGame #HumSeHaiHockey #HeroAsiaCupRajgir pic.twitter.com/KUUzU5yLZx
— All India Radio News (@airnewsalerts) August 29, 2025
ಆದರೆ ಚೀನಾ ಸುಲಭವಾಗಿ ಸೋಲೊಪ್ಪಿಕೊಳ್ಳದೆ ಮುಂದಿನ 2 ಗೋಲುಗಳನ್ನು ಗಳಿಸಿ ಪಂದ್ಯವನ್ನು 3-3 ರಲ್ಲಿ ಸಮಬಲಗೊಳಿಸಿತು. ಹೀಗಾಗಿ ಮೂರನೇ ಕ್ವಾರ್ಟರ್ 3-3 ರಿಂದ ಡ್ರಾದಲ್ಲಿ ಕೊನೆಗೊಂಡಿತು. ಆದರೆ ಕೊನೆಯ ಕ್ವಾರ್ಟರ್ನ 47 ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ನಾಯಕ ಹರ್ಮನ್‌ಪ್ರೀತ್ ಮತ್ತೊಮ್ಮೆ ಗೋಲಾಗಿ ಪರಿವರ್ತಿಸಿ ತಂಡಕ್ಕೆ 4-3 ರ ನಿರ್ಣಾಯಕ ಮುನ್ನಡೆಯನ್ನು ನೀಡಿದಲ್ಲದೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಪೂಲ್ ಎ ನ ಮತ್ತೊಂದು ಪಂದ್ಯದಲ್ಲಿ ಜಪಾನ್ ಕೂಡ ಅದ್ಭುತ ಆರಂಭವನ್ನು ಕಂಡಿತು. ಮೊದಲ ಪ್ರಶಸ್ತಿ ಗೆಲ್ಲುವ ಭರವಸೆಯೊಂದಿಗೆ ಟೂರ್ನಿಗೆ ಪ್ರವೇಶಿಸಿರುವ ಜಪಾನ್ ತಂಡವು ಕಜಕಿಸ್ತಾನ್ ತಂಡವನ್ನು 7-0 ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿತು. ಪೂಲ್ ಬಿ ನಲ್ಲೂ ದಕ್ಷಿಣ ಕೊರಿಯಾ, ಚೈನೀಸ್ ತೈಪೆಯನ್ನು 7-0 ಅಂತರದಿಂದ ಸೋಲಿಸಿತು. ಆದರೆ ಪಾಕಿಸ್ತಾನದ ಬದಲಿಗೆ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿರುವ ಬಾಂಗ್ಲಾದೇಶ ತಂಡವು ಮಲೇಷ್ಯಾ ವಿರುದ್ಧ 1-4 ಅಂತರದಿಂದ ಸೋಲೊಪ್ಪಿಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ