
ಒಂದೆಡೆ ಬಿಹಾರದ ರಾಜ್‌ಗಿರ್‌ನಲ್ಲಿ ಪುರುಷರ ಹಾಕಿ ಏಷ್ಯಾಕಪ್ ನಡೆಯುತ್ತಿದ್ದು, ಆತಿಥೇಯ ಭಾರತ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಫೈನಲ್ನತ್ತ ಹೆಜ್ಜೆ ಇಟ್ಟಿದೆ. ಇನ್ನೊಂದೆಡೆ ಚೀನಾದಲ್ಲಿ ಇಂದಿನಿಂದ ಮಹಿಳಾ ಹಾಕಿ ಏಷ್ಯಾಕಪ್ (Women’s Hockey Asia Cup 2025) ಆರಂಭವಾಗಿದೆ. ಈ ಟೂರ್ನಿಯಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ತನ್ನ ಮೊದಲ ಪಂದ್ಯದಲ್ಲಿ ಥೈಲ್ಯಾಂಡ್ ತಂಡವನ್ನು 11-0 ಗೋಲುಗಳಿಂದ ಸೋಲಿಸಿ ಗೆಲುವಿನ ಶುಭಾರಂಭ ಮಾಡಿದೆ. ಗೊಂಗ್ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಹಾಕಿ ಫೀಲ್ಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ ಆಕ್ರಮಣಕಾರಿಯಾಗಿ ಆಟವಾಡಿ ಥೈಲ್ಯಾಂಡ್ ತಂಡವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತು.
ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಕೆಳ ಶ್ರೇಯಾಂಕದ ಥೈಲ್ಯಾಂಡ್ ವಿರುದ್ಧದ ಗೆಲುವು ತಂಡದ ಮನೋಬಲವನ್ನು ಹೆಚ್ಚಿಸಿದೆ. ಏಕೆಂದರೆ ಅನುಭವಿ ಗೋಲ್‌ಕೀಪರ್ ಸವಿತಾ, ಡ್ರ್ಯಾಗ್ ಫ್ಲಿಕರ್ ಮತ್ತು ಸ್ಟಾರ್ ಫಾರ್ವರ್ಡ್ ದೀಪಿಕಾ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದ ಕಾರಣ ಭಾರತ ತಂಡ ದುರ್ಬಲವಾಗಿ ಕಾಣುತ್ತಿತ್ತು. ಆದರೆ ಮುಮ್ತಾಜ್ ಖಾನ್, ಉದಿತಾ ಮತ್ತು ಬ್ಯೂಟಿ ಡಂಗ್ ಡಂಗ್ ಅವರ ಅತ್ಯುತ್ತಮ ಪ್ರದರ್ಶನದಿಂದಾಗಿ, ಭಾರತ ತಂಡ ಸುಲಭ ಗೆಲುವು ದಾಖಲಿಸಿತು.
ಭಾರತ ಆರಂಭದಿಂದಲೂ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿತು. ಮುಮ್ತಾಜ್ ಖಾನ್, ಉದಿತಾ ಮತ್ತು ಬ್ಯೂಟಿ ಡಂಗ್ ಡಂಗ್ ತಲಾ ಎರಡು ಗೋಲುಗಳನ್ನು ಗಳಿಸಿದರೆ, ಸಂಗೀತಾ ಕುಮಾರಿ, ನವನೀತ್ ಕೌರ್, ಲಾಲ್ರೆಮ್ಸಿಯಾಮಿ, ಶರ್ಮಿಳಾ ದೇವಿ ಮತ್ತು ರುತುಜಾ ದಾದಾಸೊ ಪಿಸಲ್ ತಲಾ ಒಂದು ಗೋಲು ಬಾರಿಸಿದರು. ಹೀಗಾಗಿ ಮೊದಲಾರ್ಧದಲ್ಲಿ ಭಾರತ 5-0 ಮುನ್ನಡೆ ಸಾಧಿಸಿತು. ಇದರ ನಂತರ, ದ್ವಿತೀಯಾರ್ಧದಲ್ಲಿಯೂ ಪಾರುಪತ್ಯ ಮುಂದುವರೆಸಿದ ಭಾರತ ಪಂದ್ಯದ ಅಂತ್ಯದ ವೇಳೆಗೆ 11 ಗೋಲುಗಳನ್ನು ಗಳಿಸಿತು.
𝐄𝐥𝐞𝐯𝐞𝐧 𝐠𝐨𝐚𝐥𝐬, 𝐭𝐰𝐨 𝐡𝐚𝐥𝐯𝐞𝐬, 𝐭𝐨𝐭𝐚𝐥 𝐜𝐨𝐧𝐭𝐫𝐨𝐥. 💪
From 5–0 at Half-Time to 11–0 at the final whistle, India register a thumping win over Thailand in Pool B of the Women’s Asia Cup 2025.#HockeyIndia #IndiaKaGame #WomensAsiaCup pic.twitter.com/lc1AAECC9I
— Hockey India (@TheHockeyIndia) September 5, 2025
ಭಾರತ ತಂಡವು ಏಷ್ಯಾಕಪ್ ಚಾಂಪಿಯನ್ ಜಪಾನ್, ಥೈಲ್ಯಾಂಡ್ ಮತ್ತು ಸಿಂಗಾಪುರ್ ತಂಡಗಳನ್ನು ಒಳಗೊಂಡ ಪೂಲ್ ಬಿ ನಲ್ಲಿ ಸ್ಥಾನ ಪಡೆದಿದ್ದರೆ, ಪೂಲ್ ಎ ನಲ್ಲಿ ಆತಿಥೇಯ ಚೀನಾ, ಕೊರಿಯಾ, ಮಲೇಷ್ಯಾ ಮತ್ತು ಚೈನೀಸ್ ತೈಪೆ ತಂಡಗಳು ಸ್ಥಾನ ಪಡೆದಿವೆ. ಈ ಪಂದ್ಯಾವಳಿಯು ಸೆಪ್ಟೆಂಬರ್ 5 ರಿಂದ 14, 2025 ರವರೆಗೆ ನಡೆಯಲಿದೆ. ಥೈಲ್ಯಾಂಡ್ ನಂತರ, ಭಾರತವು ಈಗ ಶನಿವಾರ ಜಪಾನ್ ಮತ್ತು ಸೆಪ್ಟೆಂಬರ್ 8 ರಂದು ಸಿಂಗಾಪುರವನ್ನು ಎದುರಿಸಲಿದೆ. ಮುಂದಿನ ವರ್ಷ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಈಗ ನಡೆಯುತ್ತಿರುವ ಏಷ್ಯಾಕಪ್ ಅರ್ಹತಾ ಪಂದ್ಯಾವಳಿಯಾಗಿದೆ. ಹೀಗಾಗಿ ಈ ಟೂರ್ನಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಕಿರೀಟ ಅಲಂಕರಿಸಿದರೆ, ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ