ಪಿಡಬ್ಲ್ಯುಐ ಇಂಡಿಯಾ ಮಾಸ್ಟರ್ಸ್ ಆಯೋಜಿಸಿರುವ ಪಿಕಲ್‌ಬಾಲ್ ಪಂದ್ಯಾವಳಿಯಲ್ಲಿ ಭಾರತದ ಯುವ ಪಿಕಲ್‌ಬಾಲ್ ಆಟಗಾರ ಅರ್ಮಾನ್ ಭಾಟಿಯಾ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದು, ಪಂದ್ಯಾವಳಿಯಲ್ಲಿ ಬರೋಬ್ಬರಿ ಮೂರು ಈವೆಂಟ್ಗಳಲ್ಲಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅರ್ಮಾನ್ ಭಾಟಿಯಾ ಕ್ರಮವಾಗಿ ಮಿಶ್ರ ಡಬಲ್ಸ್, ಪುರುಷರ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್ ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿದ್ದು ಪ್ರಶಸ್ತಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿದ್ದಾರೆ.
ಸಿಂಗಲ್ಸ್ ವಿಭಾಗದಲ್ಲಿ ಆದಿತ್ಯ ರುಹೇಲಾ ಅವರನ್ನು ಎದುರಿಸಿದ ಅರ್ಮಾನ್ ಭಾಟಿಯಾ ಈ ಪಂದ್ಯವನ್ನು 11-10, 9-11, 11-5ರಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಭಾಟಿಯಾ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ವಿಲ್ಲಿ ಚುಂಗ್ ಅವರನ್ನು 11-4, 11-1 ಸೆಟ್‌ಗಳಿಂದ ಸೋಲಿಸಿ ಫೈನಲ್ ತಲುಪಿದ್ದಾರೆ. ಇದೀಗ ಅರ್ಮಾನ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಡಸ್ಟಿ ಬೋಯರ್ ಅವರನ್ನು ಎದುರಿಸಲಿದ್ದಾರೆ. ಇತ್ತ ಬೋಯರ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಟಾಮ್ ಇವಾನ್ಸ್ ಅವರನ್ನು 11-7, 4-11, 11-8 ಸೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಇದೀಗ ಈ ಇಬ್ಬರ ನಡುವಿನ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.
ಹಾಗೆಯೇ ಮಿಶ್ರ ಡಬಲ್ಸ್ ವಿಭಾಗದಲ್ಲೂ ಫೈನಲ್ ಪ್ರವೇಶಿಸಿರುವ ಅರ್ಮಾನ್ ಭಾಟಿಯಾ ತಮ್ಮ ಜೊತೆಗಾತಿ ನೆದರ್ಲೆಂಡ್ಸ್‌ನ ರೂಸ್ ವ್ಯಾನ್ ರೀಕ್ ಅವರೊಂದಿಗೆ ಇಂದು ನಡೆಯಲ್ಲಿರುವ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜಾರ್ಜ್ ವಾಲ್ ಮತ್ತು ಡ್ಯಾನಿ ಟೌನ್‌ಸೆಂಡ್ ಜೋಡಿಯನ್ನು ಎದುರಿಸಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜೋಡಿಯಾದ ಕೈಟ್ಲಿನ್ ಹಾರ್ಟ್ ಮತ್ತು ಮಿಚೆಲ್ ಹಾರ್ಗ್ರೀವ್ಸ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ್ದ ಭಾಟಿಯಾ ಹಾಗೂ ವ್ಯಾನ್ರಿಕ್ ಜೋಡಿ, ಆ ಬಳಿಕ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾದ ಜೋಡಿಯಾದ ವಿಶಾಲ್ ಮಸಂದ್ ಮತ್ತು ಸಾರಾ ಬರ್ ಅವರನ್ನು 11-5, 11-1 ಸೆಟ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶ ಪಡೆದಿದೆ.
ಪಿಕಲ್‌ಬಾಲ್ ಆಟ, ಟೆನಿಸ್ ಮತ್ತು ಬ್ಯಾಡ್ಮಿಂಟನ್‌ನ ಮಿಶ್ರ ರೂಪವಾಗಿದೆ. ಈ ಆಟವನ್ನು ಸಣ್ಣ ಸಣ್ಣ ರಂಧ್ರಗಳಿರುವ ಪ್ಲಾಸ್ಟಿಕ್ ಬಾಲ್ ಮತ್ತು ರಾಕೆಟ್‌ನ ಸಹಾಯದಿಂದ ಆಡಲಾಗುತ್ತದೆ. ಹಾಗೆಯೇ ಈ ಆಟವನ್ನು 44*20 ಚದರ ಅಡಿಗಳ ಅಂಕಣದಲ್ಲಿ ಆಡಲಾಗುತ್ತದೆ. ಈ ಆಟದಲ್ಲಿ ಟೆನಿಸ್ನಂತೆ ಸಿಂಗಲ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಕೂಡ ಇರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Sun, 27 October 24