ಬೃಹತ್ ಮೊತ್ತ ಬೆನ್ನತ್ತಿ ಟಿ20 ಸರಣಿ ಗೆದ್ದ ಭಾರತಕ್ಕೆ ‘ಹಾರ್ದಿಕ’ ಅಭಿನಂದನೆಗಳು

|

Updated on: Dec 06, 2020 | 6:57 PM

ಗೆಲ್ಲುವ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ ಅಬ್ಬರದ ಆಟವಾಡಿದ ಪಾಂಡ್ಯ 3 ಫೋರ್, 2 ಸಿಕ್ಸ್ ಬಾರಿಸಿ 22 ಎಸೆತದಲ್ಲಿ 42 ರನ್​ ಗಳಿಸಿದರು. ಕೊನೆಯ ಓವರ್​ನಲ್ಲಿ 14 ರನ್​ ಬೇಕಿರುವಾಗ ಧೃಡವಾಗಿ ನಿಂತ ಪಾಂಡ್ಯ ಅನಾಯಾಸವಾಗಿ 2 ಸಿಕ್ಸರ್ ಸಿಡಿಸಿ ಗೆಲುವಿಗೆ ಕಾರಣರಾದರು.

ಬೃಹತ್ ಮೊತ್ತ ಬೆನ್ನತ್ತಿ ಟಿ20 ಸರಣಿ ಗೆದ್ದ ಭಾರತಕ್ಕೆ ‘ಹಾರ್ದಿಕ’ ಅಭಿನಂದನೆಗಳು
ರೋಚಕ ಗೆಲುವು ಪಡೆದ ಖುಷಿಯಲ್ಲಿ ಪಾಂಡ್ಯ, ಶ್ರೇಯಸ್​ ಅಯ್ಯರ್
Follow us on

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದೆ. ಟಿ20 ಸರಣಿಯಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆರಿಸಿಕೊಂಡಿದ್ದ ಭಾರತಕ್ಕೆ ಆಸಿಸ್​ ಬ್ಯಾಟ್ಸ್​ಮನ್​ ಆರಂಭದಲ್ಲೇ ಆಘಾತ ನೀಡಿದರು. ಫಿಂಚ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದ ಮ್ಯಾಥ್ಯೂ ವೇಡ್ 32 ಎಸೆತಗಳಲ್ಲಿ 58 ರನ್​ ಬಾರಿಸಿ ಅತ್ಯದ್ಭುತ ಆರಂಭ ನೀಡಿದರು.

ಆಸಿಸ್​ ಪರವಾಗಿ ಡಿ ಆರ್ಕಿ ಶಾರ್ಟ್​ ಒಬ್ಬರನ್ನು ಹೊರತುಪಡಿಸಿದರೆ ಕ್ರೀಸ್​ಗೆ ಬಂದ ಎಲ್ಲಾ ಆಟಗಾರರು ಭಾರತೀಯ ಬೌಲರ್ಸ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ ಭರ್ಜರಿ 194 ರನ್​ ಕಲೆಹಾಕಿದ ಕಾಂಗರೂ ಪಡೆ ಭಾರತಕ್ಕೆ ದೊಡ್ಡ ಮಟ್ಟದ ಸವಾಲನ್ನೇ ನೀಡಿತು.

ಬೃಹತ್ ಮೊತ್ತದ ಸವಾಲನ್ನು ಬೆನ್ನಟ್ಟಿ ಹೊರಟ ಭಾರತಕ್ಕೆ ಆರಂಭಿಕ ಆಟಗಾರರಾಗಿ ಕೆ.ಎಲ್​.ರಾಹುಲ್ ಮತ್ತು ಶಿಖರ್​ ಧವನ್ ಜೊತೆಯಾದರು. ಮೊದಲ ಓವರ್​ ಅಂತ್ಯಕ್ಕೆ 5 ರನ್ ಪಡೆದ ಜೋಡಿ 2ನೇ ಓವರ್ ಮುಗಿಸುವಾಗ 9 ರನ್ ಕಲೆಹಾಕಿತು.

ಆರಂಭಿಕ ಓವರ್​ಗಳಲ್ಲಿ ರಾಹುಲ್​ ಮತ್ತು ಧವನ್​ ಬೌಂಡರಿ ಸಿಡಿಸುವ ಅವಕಾಶಕ್ಕಾಗಿ ಎಷ್ಟೇ ಹವಣಿಸಿದರೂ ಆಸಿಸ್ ಪರವಾದ ಬೌಲರ್ಸ್​ ಉತ್ತಮ ದಾಳಿ ನಡೆಸಿ ಅವರಿಬ್ಬರನ್ನೂ ಕಟ್ಟಿಹಾಕಿದರು. ಮೇಲಾಗಿ ಉತ್ತಮವಾದ ಫೀಲ್ಡಿಂಗ್ ಇದ್ದ ಕಾರಣ ದೊಡ್ಡ ಮೊತ್ತ ಗಳಿಸಲು ಅವಕಾಶ ಸಿಗಲಿಲ್ಲ.

ಆದರೆ, ಮೂರನೇ ಓವರ್​ನಲ್ಲಿ ಆಂಡ್ರ್ಯೂ ಟೈ ಎಸೆದ ನೋ ಬಾಲ್ ಭಾರತ ತಂಡಕ್ಕೆ ವರದಾನವಾಯಿತು. ನಂತರದ ಫ್ರೀ ಹಿಟ್​ನಲ್ಲಿ ರಾಹುಲ್​ ಸಿಕ್ಸರ್ ಸಿಡಿಸಿದರೆ ಅದೇ ಓವರ್​ನ ಕೊನೆಯ ಎಸೆತದಲ್ಲಿ ಧವನ್ ಫೋರ್ ಬಾರಿಸುವ ಮೂಲಕ ತಂಡದ ವೇಗ ಹೆಚ್ಚಲು ಕಾರಣರಾದರು.

ನಾಲ್ಕನೇ ಓವರ್​ನಲ್ಲಿ 2 ಫೋರ್, 1 ಸಿಕ್ಸ್ ಸಿಡಿಸಿ ಉತ್ತಮ ಜೊತೆಯಾಟ ಆರಂಭಿಸಿದ ರಾಹುಲ್ ಮತ್ತು ಧವನ್​ 5ನೇ ಓವರ್​ ಮುಗಿಯುವಾಗ 56 ರನ್​ ಗಳಿಸಿದ್ದರು. 22 ಎಸೆತದಲ್ಲಿ 30 ರನ್​ ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಕೆ.ಎಲ್​.ರಾಹುಲ್​ ಆಂಡ್ರ್ಯೂ ಟೈ ಎಸೆತದಲ್ಲಿ ಸ್ವೆಪ್ಸನ್ ಕೈಗೆ ಕ್ಯಾಚ್ ನೀಡುವ ಮೂಲಕ ಔಟ್​ ಆದರು.

ನಂತರ ಧವನ್​ಗೆ ಜೊತೆಯಾದ ವಿರಾಟ್ ಕೊಹ್ಲಿ ಅಬ್ಬರಿಸಲು ಪ್ರಯತ್ನಿಸಿದರೂ ಆಸಿಸ್​ ಬೌಲರ್ಸ್​ ಬಿಗಿ ದಾಳಿ ನಡೆಸಿದ ಪರಿಣಾಮ ಕೊಂಚ ಕಠಿಣ ಪರಿಸ್ಥಿತಿ ಎದುರಾಯಿತು. ಆ ಸಂದರ್ಭವನ್ನೂ ಸಮರ್ಥವಾಗಿ ನಿಭಾಯಿಸಿದ ಶಿಖರ್, ಕೊಹ್ಲಿ ಜೋಡಿ ಉತ್ತಮ ಜೊತೆಯಾಟ ನೀಡಿದರು. 34 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ ಧವನ್ ಮತ್ತಷ್ಟು ಬಲ ತುಂಬಿದರು.

11ನೇ ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವು 94/1 ರನ್​ ಆಗಿತ್ತು. ನಂತರದ ಓವರ್​ನಲ್ಲಿ ಆ್ಯಡಮ್ ಝಂಪಾ ಎಸೆತವನ್ನು ಎದುರಿಸಿದ ಧವನ್​ ಕ್ಯಾಚ್​ ನೀಡುವ ಮೂಲಕ ನಿರ್ಗಮಿಸಿದರು. ಧವನ್ ಒಟ್ಟು 4 ಫೋರ್ ಹಾಗೂ 2 ಸಿಕ್ಸ್ ಸಿಡಿಸಿ ತಂಡಕ್ಕೆ ನೆರವಾಗಿದ್ದರು.

ಬಳಿಕ ಬಂದ ಸಂಜು ಸ್ಯಾಮ್ಸನ್ 15 (10) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ನಂತರ ಬಂದ ಹಾರ್ದಿಕ್​ ಪಾಂಡ್ಯ ಕೊಹ್ಲಿಗೆ ಉತ್ತಮ ಜೊತೆಯಾಟ ನೀಡಿದರು. 24 ಎಸೆತಗಳಲ್ಲಿ 40 ರನ್​ ಗಳಿಸಿ ಕೊಹ್ಲಿ ನಿರ್ಗಮಿಸುವ ಹೊತ್ತಿನಲ್ಲಿ ತಂಡದ ಮೊತ್ತ 16ನೇ ಓವರ್ ಅಂತ್ಯಕ್ಕೆ 149 ಆಗಿತ್ತು.

23 ಎಸೆತಕ್ಕೆ 46 ರನ್​ ಬೇಕಿರುವಾಗ ಪಾಂಡ್ಯಗೆ ಜೊತೆಯಾದ ಶ್ರೇಯಸ್​ ಅಯ್ಯರ್​ ಉತ್ತಮ ಪ್ರದರ್ಶನ ನೀಡಿದರು. 5 ಎಸೆತಗಳಲ್ಲಿ 1 ಫೋರ್, 1 ಸಿಕ್ಸ್ ಸಿಡಿಸುವ ಮೂಲಕ 12 ರನ್​ ಗಳಿಸಿದ ಶ್ರೇಯಸ್​ ಚೇತರಿಕೆ ನೀಡಿದರು.

ತಂಡಕ್ಕೆ ಆಸರೆಯಾದ ಪಾಂಡ್ಯ
ಶ್ರೇಯಸ್​ ಅಯ್ಯರ್​ ಜೊತೆಯಾಗುವ ವೇಳೆಗೆ 6 ಎಸೆತದಲ್ಲಿ 8 ರನ್ ಗಳಿಸಿದ್ದ ಪಾಂಡ್ಯ ನಂತರದಲ್ಲಿ ಅಕ್ಷರಶಃ ಆರ್ಭಟಿಸಿದರು. ಗೆಲ್ಲುವ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ ಅಬ್ಬರದ ಆಟವಾಡಿದ ಪಾಂಡ್ಯ 3 ಫೋರ್, 2 ಸಿಕ್ಸ್ ಬಾರಿಸಿ 22 ಎಸೆತದಲ್ಲಿ 42 ರನ್​ ಗಳಿಸಿದರು.

ಕೊನೆಯ ಓವರ್​ನಲ್ಲಿ 14 ರನ್​ ಬೇಕಿರುವಾಗ ಧೃಡವಾಗಿ ನಿಂತ ಪಾಂಡ್ಯ ಅನಾಯಾಸವಾಗಿ 2 ಸಿಕ್ಸರ್ ಸಿಡಿಸಿ ಗೆಲುವಿಗೆ ಕಾರಣರಾದರು. ಆ ಮೂಲಕ ಕೊನೆಯ 2 ಎಸೆತ ಇರುವಾಗಲೇ ಬೃಹತ್ ಮೊತ್ತವನ್ನು ಭೇದಿಸಿದ ಭಾರತ ಆಸಿಸ್ ವಿರುದ್ಧ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಟಿ20 ಸರಣಿಯನ್ನು 2-0 ಮೂಲಕ ತನ್ನದಾಗಿಸಿಕೊಂಡಿತು.

India vs Australia 2020, 2nd T20, LIVE Scores : ಟಿ20 ಸರಣಿ ಭಾರತದ ಪಾಲು

Published On - 6:52 pm, Sun, 6 December 20