India vs Australia Test Cricket 2020: ಕಾಂಗರೂಗಳಿಗೆ ಬಾಕ್ಸಿಂಗ್​ ಡೆ ‘ಪಂಚ್’.. ಟೀಂ ಇಂಡಿಯಾಗೆ ಸಿಗುತ್ತಾ ಗೆಲುವು?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 28, 2020 | 10:47 PM

ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಬೀಸಲು ಆರಂಭಿಸಿದ ಆಸ್ಟ್ರೇಲಿಯಾಗೆ ಮತ್ತೆ ಭಾರತೀಯ ಬೌಲರ್​ಗಳು ಶಾಕ್​ ನೀಡಿದ್ದಾರೆ. ಕೇವಲ 133 ರನ್​ಗಳಿಗೆ ಆಸ್ಟ್ರೇಲಿಯಾ 6 ವಿಕೆಟ್​ ಕಳೆದುಕೊಂಡಿದೆ. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಎರಡು ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ.

India vs Australia Test Cricket 2020: ಕಾಂಗರೂಗಳಿಗೆ ಬಾಕ್ಸಿಂಗ್​ ಡೆ ‘ಪಂಚ್’.. ಟೀಂ ಇಂಡಿಯಾಗೆ ಸಿಗುತ್ತಾ ಗೆಲುವು?
ವಿಕೆಟ್​ ಕಿತ್ತ ಖುಷಿಯಲ್ಲಿ ಟೀಂ ಇಂಡಿಯಾ ಆಟಗಾರರು
Follow us on

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ ಎರಡನೇ ಟೆಸ್ಟ್​ ಮ್ಯಾಚ್​​ನಲ್ಲಿ ಭಾರತ ಗೆಲುವಿನ ಸನಿಹಕ್ಕೆ ಬಂದಿದೆ. ಭಾರತೀಯ ಬೌಲರ್​ಗಳ ಅದ್ಭುತ ಬೌಲಿಂಗ್​ ಪ್ರದರ್ಶನದಿಂದ ಆಸ್ಟ್ರೇಲಿಯಾ ಬ್ಯಾಟ್ಸ್​​ಮನ್​ಗಳು ನಲುಗಿ ಹೋಗಿದ್ದಾರೆ. ಮೂರನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ 133 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು, ಎರಡು ರನ್​ ಮುನ್ನಡೆ ಸಾಧಿಸಿದೆ.

ಮೆಲ್ಬೋರ್ನ್​ನಲ್ಲಿ ಶನಿವಾರ ಮ್ಯಾಚ್​ ಆರಂಭಗೊಂಡಿತ್ತು. ಟಾಸ್​ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತ್ತು. ಆದರೆ, ಭಾರತೀಯ ಬೌಲರ್​ಗಳ ಮಾರಕ ದಾಳಿಗೆ ಕಾಂಗರೂ ಪಡೆ ತತ್ತರಿಸಿ ಹೋಗಿತ್ತು. ಆಸ್ಟ್ರೇಲಿಯಾ ಕೇವಲ 195 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ ಒಪ್ಪಿಸಿತ್ತು.

ಜಸ್​ಪ್ರೀತ್​ ಬೂಮ್ರಾ 4 ವಿಕೆಟ್​ ಕಿತ್ತರೆ, ಸ್ಪಿನ್​ ಮಾಂತ್ರಿಕ ಆರ್​​. ಅಶ್ವಿನ್​ 3 ವಿಕೆಟ್​ ಪಡೆದರು. ಈ ಪಂದ್ಯದ ಮೂಲಕ ಟೆಸ್ಟ್​ಗೆ ಪಾದಾರ್ಪಣೆ ಮಾಡಿರುವ ಮೊಹಮದ್​ ಸಿರಾಜ್​ ಎರಡು ವಿಕೆಟ್​ ಪಡೆದು ಗಮನ ಸೆಳೆದರು. ರವೀಂದ್ರ ಜಡೇಜಾ ಒಂದು ವಿಕೆಟ್​ ಪಡೆದರು.

ನಂತರ ಬ್ಯಾಟಿಂಗ್​ಗೆ ಇಳಿದ ಭಾರತ ಕೂಡ ಆರಂಭ ಆಘಾತ ಅನುಭವಿಸಿತ್ತು. ಆದರೆ, ಅಜಿಂಕ್ಯ ರಹಾನೆ ಶತಕ ಹಾಗೂ ಜಡೇಜಾ ಅರ್ಧ ಶತಕದ ನೆರವಿನಿಂದ ಭಾರತ 326 ರನ್​ ಗಳಿಸಿ, 131ರನ್​ಗಳ ಲೀಡ್​ ಪಡೆದುಕೊಂಡಿತ್ತು.

ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಬೀಸಲು ಆರಂಭಿಸಿದ ಆಸ್ಟ್ರೇಲಿಯಾಗೆ ಮತ್ತೆ ಭಾರತೀಯ ಬೌಲರ್​ಗಳು ಶಾಕ್​ ನೀಡಿದ್ದಾರೆ. ಕೇವಲ 133 ರನ್​ಗಳಿಗೆ ಆಸ್ಟ್ರೇಲಿಯಾ 6 ವಿಕೆಟ್​ ಕಳೆದುಕೊಂಡಿದೆ. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಕೇವಲ ಎರಡು ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ಬ್ಯಾಟಿಂಗ್​ನಲ್ಲಿ ಮಿಂಚಿದ್ದ ಜಡೇಜಾ 2 ವಿಕೆಟ್​ ಕಿತ್ತು ಆಲ್​ರೌಂಡರ್​ ಪ್ರದರ್ಶನ ತೋರಿದರು. ಆರ್​​. ಅಶ್ವಿನ್​, ಮೊಹಮದ್​ ಸಿರಾಜ್​, ಉಮೇಶ್​ ಯಾದವ್​ ಹಾಗೂ ಜಸ್​ಪ್ರೀತ್​ ಬೂಮ್ರಾ ತಲಾ ಒಂದು ವಿಕೆಟ್​ ಪಡೆದು ತಂಡಕ್ಕೆ ನೆರವಾದರು.

ಗಾಯಕ್ಕೆ ತುತ್ತಾದ ಉಮೇಶ್​ ಯಾದವ್​
ಎರಡನೇ ಇನ್ನಿಂಗ್ಸ್​ನ ಆರಂಭದಲ್ಲೇ ಉಮೇಶ್​ ಯಾದವ್​ ಜೋ ಬರ್ನ್ಸ್​ ಅವರ ವಿಕೆಟ್​ ಪಡೆದಿದ್ದರು. ಈ ಮೂಲಕ ಆಸ್ಟ್ರೇಲಿಯಾಗೆ ದುಸ್ವಪ್ನವಾಗಿ ಕಾಡಲು ಸಿದ್ಧವಾಗಿದ್ದರು. ಆದರೆ, ನಾಲ್ಕನೇ ಓವರ್ ಎಸೆಯುವಾಗ ಅವರಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನಾಳೆ (ಡಿ.29) ನಡೆಯುವ ನಾಲ್ಕನೇ ದಿನದ ಟೆಸ್ಟ್​ನಲ್ಲಿ ಅವರು ಪಾಲ್ಗೊಳ್ಳಲಿದ್ದಾರೋ ಅಥವಾ ಇಲ್ಲವೋ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಭಾರತಕ್ಕೆ ಸುಲಭ ಗೆಲುವು?
ಮೊದಲ ಟೆಸ್ಟ್​ನಲ್ಲಿ ಹೀನಾಯ ಸೋಲಿನ ನಂತರ ಪುಟಿದೆದ್ದಿರುವ ಭಾರತ ಎರಡನೇ ಟೆಸ್ಟ್​ನಲ್ಲಿ ಗೆಲುವು ದಾಖಲಿಸುವ ಆಶಾಭಾವ ಹೊಂದಿದೆ. ಕಾಂಗರೂ ಪಡೆ ಕೇವಲ 133 ರನ್​ಗಳಿಗೆ ಆರು ಪ್ರಮುಖ ವಿಕೆಟ್​ ಕಳೆದುಕೊಂಡಿದೆ. ಅಲ್ಲದೆ 2 ರನ್​ ಲೀಡ್ ಕಾಯ್ದುಕೊಂಡಿದೆ. ನಾಲ್ಕನೇ ದಿನದಾಟದಲ್ಲಿ ಭಾರತ ಇನ್ನು ನೂರು ರನ್​ ಒಳಗೆ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಿದರೆ ಭಾರತಕ್ಕೆ ಸುಲಭವಾಗಿ ಗೆಲುವು ಲಭಿಸಲಿದೆ.

ಮ್ಯಾಚ್​ ಡ್ರಾಗೆ ಇದೆ ಆಯ್ಕೆ?
ಒಂದೊಮ್ಮೆ ಏಳನೇ ವಿಕೆಟ್​ ಜೊತೆಯಾಟದಲ್ಲಿ ಪ್ಯಾಟ್​ ಕಮ್ಮಿನ್ಸ್​ ಹಾಗೂ ಕ್ಯಾಮರೂನ್​ ಗ್ರೀನ್​​ ಸ್ಕ್ರೀಸ್​ ಕಚ್ಚಿ ನಿಂತರೆ ಮ್ಯಾಚ್​ ಡ್ರಾ ಆಗಲೂಬಹುದು. ಐದನೇ ದಿನದವರೆಗೂ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳು ವಿಕೆಟ್​ ಉಳಿಸಿಕೊಂಡು ಆಡಬೇಕು. ಆದರೆ, ಇದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಭಾರತ ಈ ಪಂದ್ಯದಲ್ಲಿ ಗೆಲುವು ದಾಖಲಿಸಲಿದೆ ಎನ್ನುವುದು ಕ್ರಿಕೆಟ್​ ಪಂಡಿತರ ಲೆಕ್ಕಾಚಾರ.

ಏನಾಗಲಿದೆ ಮುಂದಿನ ಪಂದ್ಯ
ಇಂದಿನ ಪಂದ್ಯ ಭಾರತ ಗೆದ್ದರೆ ಸರಣಿಯಲ್ಲಿ ಸಮಬಲ ಸಾಧಿಸಿದಂತಾಗುತ್ತದೆ. ನಂತರ ಎರಡು ಟೆಸ್ಟ್​ಗಳು ಬಾಕಿ ಉಳಿಯಲಿವೆ. ಮೂರನೇ ಟೆಸ್ಟ್​​ಗೆ ರೋಹಿತ್​ ಶರ್ಮಾ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಹೀಗಾಗಿ, ಬ್ಯಾಟಿಂಗ್​ ಬಲಕ್ಕೆ ಹೊಸ ಬಲ ಸಿಗಲಿದೆ. ಮುಂದಿನ ಒಂದು ಟೆಸ್ಟ್​ ಗೆದ್ದು ಮತ್ತೊಂದು ಡ್ರಾ ಆದರೂ ಟೀಂ ಇಂಡಿಯಾಗೆ ಸರಣಿ ಒಲಿಯಲಿದೆ.

India vs Australia Test Cricket 2020 | ಬಾಕ್ಸಿಂಗ್​ ಡೇ ಟೆಸ್ಟ್​; 195 ರನ್​ಗಳಿಗೆ ಸರ್ವಪತನಗೊಂಡ ಟೀಂ ಆಸ್ಟ್ರೇಲಿಯಾ

Published On - 2:05 pm, Mon, 28 December 20