ಅಹಮದಾಬಾದ: ಭಾರತ ಮತ್ತು ಇಂಗ್ಲೆಂಡ್ ನಡುವೆ ಅಹಮದಾಬಾದಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಮೂರನೇ ಪಂದ್ಯವನ್ನು ಪ್ರವಾಸಿ ತಂಡ 8 ವಿಕೆಟ್ಗಳ ಅಧಿಕಾರಯುತವಾಗಿ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಗೆಲ್ಲಲು 157 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಜಯಿಸಿತು. ಆರಂಭ ಆಟಗಾರ ಜೋಸ್ ಬಟ್ಲರ್ ಅಜೇಯ 83 (52 ಎಸೆತ, 5 ಬೌಂಡರಿ 4 ಸಿಕ್ಸ್) ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಜಾನಿ ಬೇರ್ಸ್ಟೋ 28 ಎಸೆತಗಳಲ್ಲಿ ಅಜೇಯ 40 ರನ್ ಬಾರಿಸಿದರು, ಇವರಿಬ್ಬರ ಜೊತೆಯಾಟದಲ್ಲಿ 78 ರನ್ ಬಂದವು,
ಭಾರತದ ಪರ ಸ್ಪಿನ್ನರ್ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಯುಜ್ವೇಂದ್ರ ಚಹಲ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲು ಬಂದ ಭಾರತದ ಆರಂಭ ಕೆಟ್ಟದ್ದಾಗಿತ್ತು. ಮೊದಲ 6 ಓವರ್ಗಳಲ್ಲಿ 3 ವಿಕೆಟ್ಗಳ ಪತನವಾಯಿತು. ನಾಯಕ ಕೊಹ್ಲಿ ಮತ್ತು ರಿಷಭ್ ಪಂತ್ ನಡುವೆ ಉತ್ತಮ ಜೊತೆಯಾಟ ಬರುತ್ತಿದ್ದಾಗಲೇ ಪಂತ್ 25 ರನ್ ಗಳಿಸಿ ಔಟಾದರು. ಮೊದಲ ಪಂದ್ಯದಲ್ಲಿ ಅದ್ಭುತ ಆಟವಾಡಿದ್ದ ಶ್ರೇಯಸ್ ಅಯ್ಯರ್ ಕೇವಲ 9 ರನ್ ಗಳಿಸಿ ಔಟಾದರು.
ಅದರೆ 6ನೇ ವಿಕೆಟ್ಗೆ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಬಿರುಗಾಳಿ ವೇಗದಲ್ಲಿ ರನ್ ಗಳಿಸಿ ತಂಡದ ಮೊತ್ತವನ್ನು 156/6 ತಲುಪಿಸಿದರು. ಸತತ ಎರಡನೇ ಅರ್ಧ ಶತಕ ಬಾರಿಸಿದ ಕೊಹ್ಲಿ ಅಂತಿಮವಾಗಿ 77 ರನ್ ( 46 ಎಸೆತ, 8 ಬೌಂಡರಿ 4 ಸಿಕ್ಸ್ ) ಗಳಿಸಿ ಅಜೇಯರಾಗಿ ಉಳಿದರು. 2 ಸಿಕ್ಸ್ ಬಾರಿಸಿದ ಪಾಂಡ್ಯ 17 ರನ್ ಗಳಿಸಿ ಇನ್ನಿಂಗ್ಸ್ ಕೊನೆಯ ಎಸೆತದಲ್ಲಿ ಔಟಾದರು.
ಈ ಪಂದ್ಯಕ್ಕೆ ವಾಪಸ್ಸು ಬಂದ ವೇಗದ ಬೌಲರ್ ಮಾರ್ಕ್ ವುಡ್ 31 ರನ್ಗೆ 3 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿದರು. ಕ್ರಿಸ್ ಜೊರ್ಡನ್ 2 ವಿಕೆಟ್ ಪಡೆದರು.
ಸರಣಿಯ ನಾಲ್ಕನೇ ಪಂದ್ಯ ಇದೇ ಮೈದಾನದಲ್ಲಿ ಗುರುವಾರದಂದು ನಡೆಯಲಿದೆ.
ಇದನ್ನೂ ಓದಿ: India vs England | ಧೋನಿಯೊಂದಿಗೆ ಹೋಲಿಸುವ ಮಟ್ಟಕ್ಕೆ ಪಂತ್ ಮತ್ತು ಕಿಷನ್ ಬೆಳೆದದ್ದು ಹೆಮ್ಮೆಯ ವಿಚಾರ: ಸಬಾ ಕರೀಮ್
Published On - 10:39 pm, Tue, 16 March 21