India vs England 4th Test, Day 1 Live: ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಆರಂಭವಾಗಿರುವ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನದಾಟ ಕೊನೆಗೊಂಡಾಗ ಭಾರತ 1 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿತ್ತು. ರೋಹಿತ್ ಶರ್ಮ 8 ಮತ್ತು ಚೇತೇಶ್ವರ್ ಪೂಜಾರಾ 15 ರನ್ ಗಳಿಸಿ ಆಡುತ್ತಿದ್ದಾರೆ. ಆರಂಭ ಆಟಗಾರ ಶುಭ್ಮನ್ ಗಿಲ್ ತಮ್ಮ ಖಾತೆ ತೆರೆಯಲು ವಿಫಲರಾಗಿ ಭಾರತದ ಇನ್ನಿಂಗ್ಸ್ನ ಮೊದಲ ಓವರಿನಲ್ಲೇ ವೇಗದ ಬೌಲರ್ ಜಿಮ್ಮಿ ಆಂಡರ್ಸನ್ ಅವರಿಗೆ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 205 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಪ್ರವಾಸಿ ತಂಡದ ಆರಂಭ ಆಟಗಾರರು ಟೀಮಿಗೆ ಉತ್ತಮ ಆರಂಭ ಕೊಡಿಸಲು ಮತ್ತೊಮ್ಮೆ ವಿಫಲರಾದರು. ಹಾಗೆಯೇ ಮೊದಲ ಟೆಸ್ಟ್ನಲ್ಲಿ ಡಬಲ್ ಸೆಂಚುರಿ ಬಾರಿಸಿದ್ದ ನಾಯಕ ಜೋ ರೂಟ್ ಕೇವಲ 5 ರನ್ ಗಳಿಸಿ ಮೊಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದರು.
ಮೂರನೇ ಟೆಸ್ಟ್ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಅಕ್ಷರ್ ಪಟೇಲ್ ಈ ಪಂದ್ಯದಲ್ಲೂ ಉತ್ಕೃಷ್ಟ ಪ್ರದರ್ಶನ ನೀಡಿ 68 ರನ್ಗಳಿಗೆ 4 ವಿಕೆಟ್ ಪಡೆದರು.
ವಿಶ್ವದ ಅಗ್ರಮಾನ್ಯ ಆಲ್ರೌಂಡರ್ಗಳಲ್ಲಿ ಒಬ್ಬರೆನಿಸಿಕೊಂಡಿರುವ ಬೆನ್ ಸ್ಟೋಕ್ಸ್ ಅರ್ಧ ಶತಕ (55, 6 ಬೌಂಡರಿ, 2 ಸಿಕ್ಸ್ ) ಬಾರಿಸಿ ಇಂಗ್ಲೆಂಡ್ಗೆ ಆಸರೆಯಾದರು. ಭಾರತಕ್ಕೆ ಸ್ಟೋಕ್ಸ್ ಅಪಾಯಕಾರಿಯಾಗುತ್ತಿದ್ದ ಸಮಯದಲ್ಲೇ ವಾಷಿಂಗ್ಟನ್ ಸುಂದರ್ ಅವರನ್ನು ಎಲ್ ಬಿ ಬಲೆಗೆ ಕೆಡವಿದರು. ಡೇನಿಯಲ್ ಲಾರೆನ್ಸ್ ಉಪಯುಕ್ತ 46 (8 ಬೌಂಡರಿ) ರನ್ಗಳ ಕಾಣಿಕೆ ನೀಡಿದರು.
ದಿನದಾಟದ ಮೂರನೇ ಸೆಷನ್ನಲ್ಲಿ ವಿಕೆಟ್ ಪಡೆಯುವಲ್ಲಿ ಸಫಲರಾದ ರವಿಚಂದ್ರನ್ ಅಶ್ವಿನ್, ಒಟ್ಟು 3 ವಿಕೆಟ್ಗಳನ್ನು ಬುಟ್ಟಿಗೆ ಹಾಕಿಕೊಂಡರು. ವೇಗದ ಬೌಲರ್ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರೆ ಮತ್ತೊಂದು ವಿಕೆಟ್ ಅನ್ನು ವಾಷಿಂಗ್ಟನ್ ಸುಂದರ್ ಪಡೆದರು.
ಭಾರತ ಆಡುವ ಇಲೆವೆನ್ನಲ್ಲಿ ಒಂದು ಬದಲಾವಣೆ ಮಾಡಿದೆ, ಜಸ್ಪ್ರೀತ್ ಅವರ ಸ್ಥಾನದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಆಡಿಸುತ್ತಿದೆ.
ಅತ್ತ, ಇಂಗ್ಲೆಂಡ್ ಮೂರನೇ ಟೆಸ್ಟ್ನಲ್ಲಾಡಿದ ಇಬ್ಬರು ವೇಗದ ಬೌಲರ್ಗಳು- ಸ್ಟುವರ್ಟ್ ಬ್ರಾಡ್ ಮತ್ತು ಜೊಫ್ರಾ ಆರ್ಚರ್ ಸ್ಥಾನದಲ್ಲಿ ಆಫ್-ಸ್ಪಿನ್ನರ್ ಡಾಮ್ ಬೆಸ್ ಮತ್ತು ಬ್ಯಾಟಿಂಗ್ ಆಲ್ರೌಂಡರ್ ಡೇನಿಯಲ್ ಲಾರೆನ್ಸ್ ಅವರನ್ನು ಆಡಿಸುತ್ತಿದೆ.
4-ಟೆಸ್ಟ್ಗಳ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುಂದಿದ್ದು ಸದರಿ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಜೂನ್ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಡುವ ಅರ್ಹತೆ ಗಿಟ್ಟಿಸಲಿದೆ. ಒಂದು ಪಕ್ಷ ಭಾರತ ಈ ಪಂದ್ಯವನ್ನು ಸೋತರೆ ಆಸ್ಟ್ರೇಲಿಯಾ ಅರ್ಹತೆ ಗಿಟ್ಟಿಸಿಬಿಡುತ್ತದೆ. ನ್ಯೂಜಿಲೆಂಡ್ ಈಗಾಗಲೇ ಫೈನಲ್ ಪ್ರವೇಶಿಸಿದೆ.
ಸಂಕ್ಷಿಪ್ತ ಸ್ಖೋರ್: ಇಂಗ್ಲೆಂಡ್ (ಮೊದಲ ಇನ್ನಿಂಗ್ಸ್) 205 ( ಬೆನ್ ಸ್ಟೋಕ್ಸ್ 55, ಡೇನಿಯಲ್ ಲಾರೆನ್ಸ್ 46 ಓಲ್ಲೀ ಪೋಪ್ 29, ಜಾನಿ ಬೇರ್ ಸ್ಟೋ 28, ಅಕ್ಷರ್ ಪಟೇಲ್ 4|68, ರವಿಚಂದ್ರನ್ ಅಶ್ವಿನ್ 3/47, ಮೊಹಮ್ಮದ್ ಸಿರಾಜ್ 2/45)
ಭಾರತ (ಮೊದಲ ಇನ್ನಿಂಗ್ಸ್) 24/1 (ರೋಹಿತ್ ಶರ್ಮ ಬ್ಯಾಟಿಂಗ್ 8, ಚೇತೇಶ್ವರ್ ಪೂಜಾರಾ ಬ್ಯಾಟಿಂಗ್ 15, ಜಿಮ್ಮಿ ಆಂಡರ್ಸನ್ 0/1)
Published On - 4:58 pm, Thu, 4 March 21