India vs England: ಫಾರ್ಮ್ನಲ್ಲಿಲ್ಲದಿದ್ದರೂ ಗಿಲ್ಗೆ ಅವಕಾಶಗಳ ಮೇಲೆ ಅವಕಾಶ.. ಕನ್ನಡಿಗ ರಾಹುಲ್, ಮಾಯಾಂಕ್ಗೆ ಬೆಂಚ್ ಕಾಯುವ ಕೆಲಸ
India vs England: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತಮ್ಮ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಶುಭ್ಮನ್ ಗಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ದಿನದಾಟಕ್ಕೆ ಇಂಡಿಯಾ 1 ವಿಕೆಟ್ ನಷ್ಟಕ್ಕೆ 24 ರನ್ಗಳಿಸಿದೆ.
ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 4 ಟೆಸ್ಟ್ ಸರಣಿಯ ಅಂತಿಮ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡುತ್ತಿದೆ. ಪಂದ್ಯ ಮೊದಲ ದಿನವೇ ಕುತೂಹಲಕಾರಿ ಘಟ್ಟ ತಲುಪಿದೆ. ಇಂಗ್ಲೆಂಡ್ ನೀಡಿರುವ 205 ರನ್ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿರುವ ಟೀಂ ಇಂಡಿಯಾಕ್ಕೆ ಮೊದಲ ಓವರ್ನಲ್ಲಿಯೇ ಆಘಾತ ಎದುರಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತಮ್ಮ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಶುಭ್ಮನ್ ಗಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ದಿನದಾಟಕ್ಕೆ ಇಂಡಿಯಾ 1 ವಿಕೆಟ್ ನಷ್ಟಕ್ಕೆ 24 ರನ್ಗಳಿಸಿದೆ. ಆದರೆ ವಿಷಯ ಇರುವುದು ಪಂದ್ಯದ ಬಗೆಗಲ್ಲಾ. ಬದಲಿಗೆ, ಸತತವಾಗಿ ವೈಫಲ್ಯ ಕಾಣುತ್ತಿದ್ದರೂ ಆ ಆಟಗಾರನಿಗೆ ತಂಡದಲ್ಲಿ ಸ್ಥಾನ ಸಿಗುತ್ತಿರುವ ಬಗ್ಗೆ.
ಹೌದು.. ನಾವು ಹೇಳ ಹೊರಟಿರುವುದು ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಬಗ್ಗೆ. ಆಸಿಸ್ ವಿರುದ್ಧದ ಸರಣಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಗಿಲ್ ಕ್ರಿಕೆಟ್ ಪಂಡಿತರ ಮನ ಗೆದ್ದಿದ್ದರು. ಹಾಗಾಗಿ ಅವರ ಉತ್ತಮ ಪ್ರದರ್ಶನವನ್ನು ಅರಿತ ಬಿಸಿಸಿಐ, ಗಿಲ್ಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಅವಕಾಶ ನೀಡಿತು. ಆದರೆ ಆಯ್ಕೆದಾರರ ನಂಬಿಕೆಯನ್ನು ಉಳಿಸಿಕೊಳ್ಳದ ಗಿಲ್, ತಮ್ಮ ಕಳಪೆ ಫಾರ್ಮ್ನಿಂದಾಗಿ ತಂಡಕ್ಕೆ ಆರಂಭದಲ್ಲಿಯೇ ಆಘಾತ ನೀಡುತ್ತಿದ್ದಾರೆ. ಹೀಗಿದ್ದರೂ ತಂಡದಲ್ಲಿ ಗಿಲ್ಗೆ ಪದೇಪದೇ ಅವಕಾಶ ಸಿಗುತ್ತಿದೆ. ಹಾಗಂತ ಗಿಲ್ ಅವರಲ್ಲಿರುವ ಕ್ರಿಕೆಟ್ ಸಾಮರ್ಥ್ಯವನ್ನು ಅಲ್ಲಗಳೆಯುವಂತೆಯೂ ಇಲ್ಲ. ಗಿಲ್ ಅವರ ಅಪಾರ ಪರಿಶ್ರಮದಿಂದಾಗಿ ಅವರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ಆಡುವ ಹನ್ನೊಂದರೊಳಗೆ ಮಾತ್ರ ಅವಕಾಶ ಸಿಗಲಿಲ್ಲ.. ಐಪಿಎಲ್‌ನಲ್ಲಿ ಕೋಲ್ಕತ್ತಾ ತಂಡದಲ್ಲಿ ಆಡುವ ಗಿಲ್ ಕಳೆದ ಬಾರಿಯ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಅದರ ಫಲವಾಗಿ ಗಿಲ್ ರಾಷ್ಟ್ರೀಯ ತಂಡಕ್ಕೆ ಆಯ್ಕೆದಾರರು. ಗಿಲ್ ಒಬ್ಬ ಯುವ ಉದಯೋನ್ಮುಖ ಆಟಗಾರ, ಹಾಗಾಗಿ ಅವರಿಗೆ ಹಲವು ಅವಕಾಶಗಳನ್ನು ನೀಡುತ್ತಿರುವುದಕ್ಕೆ ಯಾವುದೇ ತಕರಾರಿಲ್ಲ. ಆದರೆ ಮೇಲಿಂದ ಮೇಲೆ ಅವಕಾಶಗಳನ್ನು ನೀಡುವ ಭರದಲ್ಲಿ ನಿಜವಾದ ಪ್ರತಿಭೆಗಳಿಗೆ ಮೋಸ ಆಗುತ್ತಿರುವುದನ್ನು ಸಹ ಅಲ್ಲಗಳೆಯುವಂತಿಲ್ಲ. ಕನ್ನಡಿಗ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಈ ಸರಣಿಯುದಕ್ಕೂ ಕೇವಲ ಬೆಂಚ್ ಕಾದಿದ್ದೇ ಬಂತು. ಆದರೆ ಆಡುವ ಹನ್ನೊಂದರೊಳಗೆ ಮಾತ್ರ ಅವಕಾಶ ಸಿಗಲಿಲ್ಲ. ಹೀಗಾಗಿ ನಿಜವಾದ ಪ್ರತಿಭೆಯುಳ್ಳ ಆಟಗಾರರಿಗೆ ಇದರಿಂದ ಮೋಸವಾಗುತ್ತಿದೆ ಎಂಬುದನ್ನು ಬೇರ್ಯಾರು ಹೇಳಬೇಕಾದ ಅವಶ್ಯಕತೆಯಿಲ್ಲ.
ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಗಿಲ್ ಪ್ರದರ್ಶನ.. ಚೆನ್ನೈನಲ್ಲಿ ನಡೆದ ಮೊದಲೆರಡು ಟೆಸ್ಟ್ಗಳಲ್ಲಿ ಗಿಲ್ ಪ್ರದರ್ಶನ ಅಷ್ಟಕ್ಕಷ್ಟೇ, ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 29 ರನ್ಗಳಿಸಿದ್ದ ಗಿಲ್, 2ನೇ ಇನ್ನಿಂಗ್ಸ್‌ನಲ್ಲಿ 50 ರನ್ಗಳಿಗೆ ಸುಸ್ತಾದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋಲಬೇಕಾಯಿತು. 2ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭದಲ್ಲಿಯೇ ವಿಕೆಟ್ ಒಪ್ಪಿಸಿದ ಗಿಲ್ ಶೂನ್ಯಕ್ಕೆ ತಮ್ಮ ಆಟ ಮುಗಿಸಿದರು. 2ನೇ ಇನ್ನಿಂಗ್ಸ್‌ನ್ನಲಾದರೂ ಉತ್ತಮ ಇನ್ನಿಂಗ್ಸ್ ಕಟ್ಟುತ್ತಾರೆ ಎಂಬ ನಿರೀಕ್ಷೆ ಇಟ್ಟಿದ್ದ ಅಭಿಮಾನಿಗಳಿಗೆ ಗಿಲ್, ಅಲ್ಲೂ ಸಹ ಮೋಸ ಮಾಡಿದರು. ಕೇವಲ 14 ರನ್ಗಳಿಗೆ ಗಿಲ್ ತಮ್ಮ ವಿಕೆಟ್ ಒಪ್ಪಿಸಿದರು. ಆದರೆ ಬೌಲರ್ಗಳ ಉತ್ತಮ ಆಟದಿಂದಾಗಿ ಟೀಂ ಇಂಡಿಯಾ 2ನೇ ಪಂದ್ಯದಲ್ಲಿ ಗೆದ್ದು ಬೀಗಿತ್ತು.
2ನೇ ಟೆಸ್ಟ್ನ ಕಳಪೆ ಪ್ರದರ್ಶನದ ಹೊರತಾಗಿಯೂ ಗಿಲ್ಗೆ 3ನೇ ಟೆಸ್ಟ್ನಲ್ಲಿ ಅವಕಾಶ ನೀಡಲಾಯಿತು. ಆದರೆ ತಮ್ಮ ಕಳಪೆ ಫಾರ್ಮ್ನಿಂದ ಹೊರಬಾರದ ಗಿಲ್ ಈ ಪಂದ್ಯದಲ್ಲೂ ಮಾಡಿದ್ದು ಕಳೆದ ಪಂದ್ಯದ ತಪ್ಪುಗಳನ್ನೇ. 3ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 11 ರನ್ಗಳಿಸಿದ್ದ ಗಿಲ್ 2ನೇ ಇನ್ನಿಂಗ್ಸ್‌ನಲ್ಲಿ 15 ರನ್ಗೆ ವಿಕೆಟ್ ಒಪ್ಪಿಸಿ ಬೇಗನೇ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಕಳಪೆ ಫಾರ್ಮ್ನಲ್ಲಿರುವ ಗಿಲ್ ಬದಲು 4ನೇ ಪಂದ್ಯದಲ್ಲಿ ಕನ್ನಡಿಗ ರಾಹುಲ್ಗೆ ಅವಕಾಶ ನೀಡುತ್ತಾರೆಂಬ ಭರವಸೆಗಳಿದ್ದವು. ಆದರೆ ಆ ಭರವಸೆ ಸಹ ಅಂತಿಮ ಪಂದ್ಯದಲ್ಲಿ ಸುಳ್ಳಾಗಿದೆ. ರಾಹುಲ್ಗೆ ಅಂತಿಮ ಪಂದ್ಯದಲ್ಲೂ ಬೆಂಚ್ ಕಾಯುವ ಕೆಲಸವನ್ನು ನೀಡಲಾಗಿದೆ. ಇತ್ತ ಗಿಲ್, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಮತ್ತೊಮ್ಮೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: India vs England: ಸಿರಾಜ್ ಬೆಂಬಲಕ್ಕೆ ನಿಂತ ಕ್ಯಾಪ್ಟನ್ ಕೊಹ್ಲಿಯಿಂದ ಬೆನ್ ಸ್ಟೋಕ್ಸ್ಗೆ ಮೈದಾನದಲ್ಲೇ ಅವಾಜ್