India vs England: ಮೊದಲ ಪಂದ್ಯದಲ್ಲೇ ಮಿಂಚಿದ ಇಶಾನ್​ ಕಿಶನ್ ತಮ್ಮ ತಂದೆಯನ್ನು ನೆನೆದು ಭಾವುಕರಾಗಿದ್ಯಾಕೆ?

|

Updated on: Mar 15, 2021 | 12:37 PM

India vs England: ನನ್ನ ತಂದೆಗೋಸ್ಕರ ಕನಿಷ್ಠ ಅರ್ಧಶತಕವಾದರೂ ಗಳಿಸಬೇಕೆಂದು ನನ್ನ ಕೋಚ್‌ ಹೇಳಿದ್ದರು ಹಾಗೂ ಇದನ್ನು ಸಾಬೀತುಪಡಿಸಬೇಕೆಂದು ನಿರ್ಧರಿಸಿದ್ದೆ. ಇಂದು ನನ್ನ ಆ ಕನಸು ನನಸಾಗಿದೆ.

India vs England: ಮೊದಲ ಪಂದ್ಯದಲ್ಲೇ ಮಿಂಚಿದ ಇಶಾನ್​ ಕಿಶನ್ ತಮ್ಮ ತಂದೆಯನ್ನು ನೆನೆದು ಭಾವುಕರಾಗಿದ್ಯಾಕೆ?
ಇಶಾನ್​ ಕಿಶನ್
Follow us on

ಅಹಮದಬಾದ್​: ಇಶಾನ್ ಕಿಶನ್.. ಟೀಂ ಇಂಡಿಯಾದ ಉದಯೋನ್ಮುಖ ಎಡಗೈ ಬ್ಯಾಟ್ಸ್‌ಮನ್. ಇಷ್ಟು ದಿನ ಮಿಲಿಯನ್ ಡಾಲರ್​ ಟೂರ್ನಿ ಐಪಿಎಲ್​ ಪಂದ್ಯಾವಳಿಗಳಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಪರ ಮಿಂಚು ಹರಿಸುತ್ತಿದ್ದ ಈ ಯುವ ಕ್ರಿಕೆಟಿಗ, ಕೇವಲ ರಾತ್ರಿ ಕಳೆದು ಹಗಲಾಗುವುದರೊಳಗೆ ಕ್ರಿಕೆಟ್​ ಪ್ರೇಮಿಗಳ ಹೃದಯ ಸಿಂಹಾಸನದ ಮೇಲೆ ಕುಳಿತುಬಿಟ್ಟಿದ್ದಾನೆ. ಭಾರತದ ಪರ ಎರಡನೇ ಟಿ 20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಕಿಶನ್ ಮೊದಲ ಪಂದ್ಯದಲ್ಲಿಯೇ ಅಬ್ಬರಿಸಿದ್ದಾರೆ. 32 ಎಸೆತಗಳಲ್ಲಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 56 ರನ್ ಗಳಿಸಿದ ಕಿಶನ್ ಭಾರತಕ್ಕೆ ಸುಲಭ ಜಯ ದಕ್ಕುವುದರಲ್ಲಿ ಪ್ರಮುಖ ಪಾತ್ರವಹಿಸಿದರು. ಇದರಿಂದಾಗಿ ಇಶಾನ್ ಕಿಶನ್ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಅದೇ ಸಮಯದಲ್ಲಿ, ಇಶಾನ್ ತಮ್ಮ ಇನ್ನಿಂಗ್ಸ್ ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ತಮ್ಮ ತರಬೇತುದಾರರಾದ ಅವರ ತಂದೆಗೆ ಅರ್ಪಿಸಿದರು.

ಇಂದು ನನ್ನ ಆ ಕನಸು ನನಸಾಗಿದೆ..
ಈ ಬಗ್ಗೆ ಮಾತಾನಾಡಿದ ಕಿಶನ್​, ನನ್ನ ಕ್ರಿಕೆಟ್​ ಬದುಕಿಗೆ ಮಾರ್ಗದರ್ಶಕರಾಗಿದ್ದ ನನ್ನ ತಂದೆ ಇತ್ತೀಚೆಗೆ ನಿಧನರಾದರು. ಆದರಿಂದ ಇವತ್ತಿನ ನನ್ನ ಈ ಸಾಧನೆಯನ್ನು ನಾನು ಅವರಿಗೆ ಸಮರ್ಪಿಸಲು ಬಯಸುತ್ತೇನೆ. ನನ್ನ ತಂದೆಗೋಸ್ಕರ ಕನಿಷ್ಠ ಅರ್ಧಶತಕವಾದರೂ ಗಳಿಸಬೇಕೆಂದು ನನ್ನ ಕೋಚ್‌ ಹೇಳಿದ್ದರು ಹಾಗೂ ಇದನ್ನು ಸಾಬೀತುಪಡಿಸಬೇಕೆಂದು ನಿರ್ಧರಿಸಿದ್ದೆ. ಇಂದು ನನ್ನ ಆ ಕನಸು ನನಸಾಗಿದೆ. ಹೀಗಾಗಿ ಇಂದು ನಾ ಗಳಿಸಿರುವ ಮೊದಲ ಈ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನನ್ನ ತಂದೆಗೆ ಸಮರ್ಪಿಸುತ್ತೇನೆ ಎಂದು ಭಾವುಕರಾದರು.

ತನ್ನ ಕ್ರಿಕೆಟ್​ ಜೀವನಕ್ಕೆ ಸಾಕಷ್ಟು ಕೊಡುಗೆ ನೀಡಿದ ಮುಂಬೈ ಇಂಡಿಯನ್ಸ್ ತಂಡವನ್ನು ಈ ವೇಳೆ ಸ್ಮರಿಸಿದ ಇಶಾನ್‌ ಕಿಶಾನ್‌, ಮಂಬೈ ತಂಡದ ಹಲವು ಹಿರಿಯ ಆಟಗಾರರು ನನಗೆ ಹಲವು ಸಲಹೆಗಳನ್ನು ನೀಡಿದ್ದರು. ಅವುಗಳೆಲ್ಲವು ನಾನು ಈ ಸ್ಥಾನಕ್ಕೆ ಬರಲು ಸಹಾಯಕವಾದವು ಎಂದರು. ಮುಂಬೈ ಫ್ರಾಂಚೈಸಿ ಸಂಕಷ್ಟದಲ್ಲಿ ಸಿಲುಕಿದ್ದ ಹಲವು ಸಂದರ್ಭಗಳಲ್ಲಿ ಇಶಾನ್‌ ನಿರ್ಣಾಯಕ ಪ್ರದರ್ಶನ ತೋರಿದ್ದರು. ಅದರಂತೆ ಭಾನುವಾರ ತಂಡದ ಭರವಸೆಯ ಆಟಗಾರ ರಾಹುಲ್​ ಶೂನ್ಯಕ್ಕೆ ವಿಕೆಟ್‌ ಕಳೆದುಕೊಂಡ ವೇಳೆ ಎಡಗೈ ಬ್ಯಾಟ್ಸ್‌ಮನ್‌ ನಿರ್ಣಾಯಕ ಪ್ರದರ್ಶನ ತೋರಿದ್ದಲ್ಲದೆ ವಿರಾಟ್‌ ಕೊಹ್ಲಿ ಜೊತೆ ಮುರಿಯದ 2ನೇ ವಿಕೆಟ್‌ಗೆ 94 ರನ್‌ ಜತೆಯಾಟವಾಡಿದ್ದರು. ಆ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು.

ಅರ್ಧಶತಕ ಸಿಡಿಸುವುದು ಸುಲಭದ ಮಾತಲ್ಲ..
ವಿಶ್ವ ನಂ.1 ಟಿ20 ತಂಡವಾದ ಇಂಗ್ಲೆಂಡ್‌ ವಿರುದ್ಧ ಚೊಚ್ಚಲ ಪಂದ್ಯದಲ್ಲಿಯೇ ಅರ್ಧಶತಕ ಸಿಡಿಸುವುದು ಸುಲಭದ ಮಾತಲ್ಲ. ನಿನ್ನೆಯ ಪಂದ್ಯವನ್ನು ವೀಕ್ಷಿಸಿದವರೆಲ್ಲಾ ಹೇಳಿದ್ದು ಒಂದೇ ಮಾತು. ಅದೆನೆಂದರೆ, ನಿನ್ನೆಯ ಪಂದ್ಯದಲ್ಲಿ ಇಶಾನ್‌ ಕಿಶಾನ್‌ ಅನುಭವಿ ಆಟಗಾರನ ರೀತಿ ಭಯಮುಕ್ತರಾಗಿ ಬ್ಯಾಟ್‌ ಬೀಸಿದರು ಎಂಬುದು. ಆರಂಭದಿಂದಲೂ ಭಯಮುಕ್ತರಾಗಿ ಬ್ಯಾಟಿಂಗ್‌ ಮಾಡಿದ ಕಿಶನ್​ ಇಂಗ್ಲೆಂಡ್‌ನ‌ ಹಲವು ವೇಗಿಗಳನ್ನು ಸರಿಯಾಗಿ ದಂಡಿಸಿದರು. ಈ ಮೂಲಕ ತಾವೊಬ್ಬ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂಬುದನ್ನು ಕಿಶಾನ್‌ ಸಾಬೀತುಪಡಿಸಿದ್ದರು.

ಆದಿಲ್‌ ರಶೀದ್‌ಗೆ ಬ್ಯಾಕ್‌ ಟು ಸಿಕ್ಸರ್‌ ಸಿಡಿಸಿ 28ನೇ ಎಸೆತದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಇಶಾನ್‌ ಕಿಶಾನ್‌, ಅದೇ ಓವರ್‌ನಲ್ಲಿ ಸ್ಪಿನ್ನರ್‌ಗೆ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಈ ಬಗ್ಗೆ ಮಾತನಾಡಿ, ಪಂದ್ಯವನ್ನು ಮುಗಿಸಲು ಇಷ್ಟಪಡುತ್ತೇನೆ, ಆದರೆ ಮೊದಲನೇ ಪಂದ್ಯದಲ್ಲಿ ಅತ್ಯುತ್ತಮ ಇನಿಂಗ್ಸ್ ಆಡಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದರು.

ಪಂದ್ಯ ಮುಗಿಸಿಲ್ಲವೆಂಬ ಬೇಸರ ನನ್ನಲ್ಲಿ ಉಂಟಾಗುತ್ತಿದೆ..
ನಾನು ಪಂದ್ಯವನ್ನು ಕೊನೆಯವರೆಗು ಇದ್ದು ಮುಗಿಸಬೇಕಾಗಿತ್ತು. ಹಾಗೆಯೇ ಮತ್ತೊಂದು ತುದಿಯಲ್ಲಿ ವಿರಾಟ್‌ ಕೊಹ್ಲಿ ಕೂಡ ಅತ್ಯುತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದ್ದಾರೆಂಬ ಬಗ್ಗೆಯೂ ನನಗೆ ಗೊತ್ತಿತ್ತು. ಪಂದ್ಯ ಮುಗಿಸಿಲ್ಲವೆಂಬ ಬೇಸರ ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆದರೆ, ಭಾರತ ತಂಡವನ್ನು ಮೊದಲ ಬಾರಿ ಪ್ರತಿನಿಧಿಸುತ್ತಿದ್ದೇನೆಂಬ ಭಾವನೆ ಮತ್ತೊಮ್ಮೆ ಪಡೆಯಲಿದ್ದೇನೆಂದು ನನಗೆ ಗೊತ್ತಿಲ್ಲ. ಆದರೆ, ನಮ್ಮ ಕೋಚ್‌ಗಳು, ಹಿರಿಯ ಆಟಗಾರರು ಸೇರಿದಂತೆ ತಂಡದ ಪ್ರತಿಯೊಬ್ಬರು ನನಗೆ ಸಹಾಯ ಮಾಡಿದ್ದಾರೆ. ಎಂದು ಇಶಾನ್‌ ಕಿಶಾನ್‌ ತಿಳಿಸಿದರು.

ಇದನ್ನೂ ಓದಿ: India vs England 2021, 2nd T20, LIVE Score: ಕಿಶನ್​- ಕೊಹ್ಲಿ ಅಬ್ಬರಕ್ಕೆ ಮಂಡಿಯೂರಿದ ಇಂಗ್ಲೆಂಡ್​​.. ಭಾರತಕ್ಕೆ 7 ವಿಕೆಟ್​ ಜಯ