India vs England: ರಾಹುಲ್ ಶೂನ್ಯಕ್ಕೆ ಔಟ್! 2016 ರಲ್ಲಿ ನಡೆದಿದ್ದ ಆ ಘಟನೆ, ನಿನ್ನೆಯ ಪಂದ್ಯದಲ್ಲೂ ಮರುಕಳಿಸಿತು..!
India vs England: 2016 ರಲ್ಲಿ ಜಿಂಬಾಬ್ವೆ ವಿರುದ್ಧದ ಟಿ 20 ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರೊಂದಿಗೆ ಮಂದೀಪ್ ಸಿಂಗ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಇದು ಮಂದೀಪ್ ಅವರ ಮೊದಲ ಪಂದ್ಯವಾಗಿತ್ತು. ಆಗಲೂ ರಾಹುಲ್ ಖಾತೆ ತೆರೆಯದೆ ಔಟ್ ಆಗಿದ್ದರು.
ಅಹಮದಾಬಾದ್: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಏಕೈಕ ಆಟಗಾರ ಕನ್ನಡಿಗ ಕೆ ಎಲ್ ರಾಹುಲ್ ಕಳೆದ ಕೆಲವು ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿರುವ ರಾಹುಲ್, ಕಳೆದ ಆವೃತ್ತಿಯಲ್ಲಿ ತಾವು ತೋರಿದ ಅದ್ಭುತ ಆಟದಿಂದಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಆದರೆ ಇತ್ತೀಚೆಗೆ ಅದ್ಯಾಕೋ ರಾಹುಲ್ ಅವರ ನಸೀಬು ಸರಿ ಇಲ್ಲ ಎಂದು ಕಾಣುತ್ತದೆ. ಟೀಂ ಇಂಡಿಯಾ ಪರ ಆರಂಭಿಕನಾಗಿ ಬ್ಯಾಟಿಂಗ್ಗೆ ಇಳಿಯುವ ರಾಹುಲ್ ಎರಡಂಕಿ ದಾಟಲಾಗದೆ ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ತೆರಳುತ್ತಿದ್ದಾರೆ. ಇದಕ್ಕೆ ರಾಹುಲ್ ಅವರ ಕಳೆದ 3 ಇನ್ನಿಂಗ್ಸ್ಗಳೇ ಸಾಕ್ಷಿ ಆಗಿವೆ. ರಾಹುಲ್ ಕಳೆದ 3 ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 0,1,0 ರನ್ ಗಳಿಸಿದ್ದಾರೆ.
ರಾಹುಲ್ ಬ್ಯಾಟ್ ಸದ್ದು ಮಾಡಲಿಲ್ಲ.. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡನೇ ಪಂದ್ಯದಲ್ಲಿ ರಾಹುಲ್ ಬ್ಯಾಟ್ ಸದ್ದು ಮಾಡಲಿಲ್ಲ. ಕೆ. ಎಲ್ ರಾಹುಲ್ ಮತ್ತೊಮ್ಮೆ ಎರಡು ಅಂಕಿಗಳನ್ನು ದಾಟಲು ವಿಫಲರಾದರು. ಎರಡನೇ ಟಿ20 ಪಂದ್ಯದಲ್ಲಿ ರಾಹುಲ್ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಈ ರೀತಿಯಾಗಿ, ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ರಾಹುಲ್ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಅವರು ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ 0,1 ಮತ್ತು 0 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಯಲ್ಲಿ ರಾಹುಲ್ ಕೇವಲ 1 ರನ್ಗೆ ಸುಸ್ತಾದರು.
ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.. ಎರಡನೇ ಟಿ20 ಪಂದ್ಯದಲ್ಲಿ ಕೆ. ಎಲ್ ರಾಹುಲ್ ಅವರನ್ನು ಮೊದಲ ಓವರ್‌ನ ಐದು ಎಸೆತಗಳಲ್ಲಿ ಸ್ಯಾಮ್ ಕರನ್ ರನ್ ನೀಡದೆ ಕಟ್ಟಿಹಾಕಿದರು. ಮೊದಲ ಐದು ಎಸೆತಗಳನ್ನು ಇನ್ಸ್ವಿಂಗ್ ಬೌಲಿಂಗ್ ಮಾಡಿದ ಕರನ್ ಕೊನೆಯ ಎಸೆತವನ್ನು ಔಟ್ಸ್ವಿಂಗ್ ಮಾಡಿದರು. ಕರನ್ ಅವರ ಈ ತಂತ್ರವನ್ನು ಅರಿಯದ ರಾಹುಲ್, ಬಾಲನ್ನು ಡಿಫೆಂಡ್ ಮಾಡಲು ಹೋಗಿ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು. ತಮ್ಮ ಕಳಪೆ ಆಟದಿಂದ ತೀರ ನೋವಿಗೊಳಗಾದ ರಾಹುಲ್ ಪೆವಿಲಿಯನ್ಗೆ ತೆರಳುವವರೆಗೂ ತಮ್ಮ ತಲೆಯನ್ನು ಅಲ್ಲಾಡಿಸುತ್ತಾ ನಡೆದು ಸಾಗಿದರು. ರಾಹುಲ್ ತಮ್ಮ ವೃತ್ತಿಜೀವನದ ಮೊದಲ 40 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಶೂನ್ಯಕ್ಕೆ ಔಟ್ ಆಗಿದ್ದರು. ಆದರೆ ಈಗ ಅವರ ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ ಖಾತೆ ತೆರೆಯದೆ ಎರಡು ಬಾರಿ ಔಟಾಗಿದ್ದಾರೆ.
ರಾಹುಲ್ ಶೂನ್ಯ ಸಂಪಾದನೆ ಹಿಂದಿರುವ ಅದ್ಭುತ ಕಥೆ ಶೂನ್ಯಕ್ಕೆ ಔಟಾದ ನಂತರ ರಾಹುಲ್ ಕಳಪೆ ದಾಖಲೆ ನಿರ್ಮಿಸಿದರು. ಆರು ಎಸೆತಗಳನ್ನು ಆಡಿದ ನಂತರವೂ ಅವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ಅತಿ ಹೆಚ್ಚು ಬಾಲ್ಗಳನ್ನು ಎದುರಿಸಿ ರನ್ ಗಳಿಸದೆ ಔಟಾದ ಆಟಗಾರನೆಂಬ ಕುಖ್ಯಾತಿಗೆ ರಾಹುಲ್ ಭಾಜನರಾದರು. ರಾಹುಲ್ ಹಿಂದೆ ವಿರಾಟ್ ಕೊಹ್ಲಿ, ಸುರೇಶ್ ರೈನಾ, ಆಶಿಶ್ ನೆಹ್ರಾ ಮತ್ತು ರೋಹಿತ್ ಶರ್ಮಾ ಈ ದಾಖಲೆ ಮಾಡಿದ್ದಾರೆ.
ಒಂದು ಕುತೂಹಲಕಾರಿ ಸಂಗತಿ ಎಂದರೆ, 2016 ರಲ್ಲಿ ಜಿಂಬಾಬ್ವೆ ವಿರುದ್ಧದ ಟಿ 20 ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರೊಂದಿಗೆ ಮಂದೀಪ್ ಸಿಂಗ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಇದು ಮಂದೀಪ್ ಅವರ ಮೊದಲ ಪಂದ್ಯವಾಗಿತ್ತು. ಆಗಲೂ ರಾಹುಲ್ ಖಾತೆ ತೆರೆಯದೆ ಔಟ್ ಆಗಿದ್ದರು. ಈಗ ಇಶಾನ್ ಕಿಶನ್ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿ, ರಾಹುಲ್ ಜೊತೆ ಇನ್ನಿಂಗ್ಸ್ ಪ್ರಾರಂಭಿಸಿದರು. ಇಲ್ಲಿಯೂ ರಾಹುಲ್ ಶೂನ್ಯ ಸುತ್ತಿದರು.