India vs England: ಕಿಂಗ್ ಕೊಹ್ಲಿ ಕಿರೀಟಕ್ಕೆ ಮತ್ತೊಂದು ಗರಿ.. T20 ಯಲ್ಲಿ 3000 ರನ್ ಬಾರಿಸಿದ ಮೊದಲ ಆಟಗಾರ ನಮ್ಮ ವಿರಾಟ್!
India vs England : ದ್ವಿತೀಯ ಟಿ20ಯಲ್ಲಿ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ ಅಜೇಯ 73 ರನ್ ಬಾರಿಸಿದರು. ಹೀಗಾಗಿ ಟಿ20 ಮಾದರಿಯಲ್ಲಿ 3000 ರನ್ ಬಾರಿಸಿದ ಮೊದಲ ಕ್ರಿಕೆಟಿಗನಾಗಿ ಕೊಹ್ಲಿ ದಾಖಲೆ ಪಟ್ಟಿ ಸೇರಿದ್ದಾರೆ.
ಅಹಮದಾಬಾದ್: ಕಳೆದು ಕೆಲವು ಪಂದ್ಯಗಳಿಂದ ತಮ್ಮ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೆನ್ನೆಯ ಪಂದ್ಯದಲ್ಲಿ ಇದುವರೆಗೆ ಯಾವ ಆಟಗಾರನೂ ಮಾಡಿರದ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ನೆನ್ನೆಯ ಪಂದ್ಯದಲ್ಲಿ ಅಜೇಯ ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ ಕೊಹ್ಲಿ, ನೆನ್ನೆಯ ಆ ಅದ್ಭುತ ಇನ್ನಿಂಗ್ಸ್ನಿಂದಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 3,000 ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 5 ಟಿ20 ಪಂದ್ಯಗಳ ಸರಣಿಯ ದ್ವಿತೀಯ ಟಿ20ಯಲ್ಲಿ ವಿರಾಟ್ ಕೊಹ್ಲಿ 49 ಎಸೆತಗಳಲ್ಲಿ ಅಜೇಯ 73 ರನ್ ಬಾರಿಸಿದರು. ಹೀಗಾಗಿ ಟಿ20 ಮಾದರಿಯಲ್ಲಿ 3000 ರನ್ ಬಾರಿಸಿದ ಮೊದಲ ಕ್ರಿಕೆಟಿಗನಾಗಿ ಕೊಹ್ಲಿ ದಾಖಲೆ ಪಟ್ಟಿ ಸೇರಿದ್ದಾರೆ.
ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಕ್ಯಾಪ್ಟನ್ ಕೊಹ್ಲಿ.. ಕಳೆದ ಐದು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಕ್ಯಾಪ್ಟನ್ ಕೊಹ್ಲಿ, ಮೋದಿ ಮೈದಾನದಲ್ಲಿ ಬೊಂಬಾಟ್ ಬ್ಯಾಟಿಂಗ್ ಮಾಡಿದ್ರು. 49 ಬಾಲ್ಗಳನ್ನ ಎದುರಿಸಿದ ವಿರಾಟ್ 5 ಬೌಂಡರಿ ಮತ್ತು 3 ಸಿಕ್ಸರ್ ಸಹಿತ ಅಜೇಯ 73 ರನ್ಗಳಿಸಿದ್ರು. ಭಾನುವಾರದ ಪಂದ್ಯದೊಂದಿಗೆ ಟಿ20 ಪಂದ್ಯದಲ್ಲಿ 86 ಪಂದ್ಯಗಳನ್ನಾಡಿರುವ ಕೊಹ್ಲಿ 50.86 ಸರಾಸರಿಯಲ್ಲಿ 3001 ಒಟ್ಟು ರನ್ ಗಳಿಸಿದ್ದಾರೆ. ಇದರಲ್ಲಿ 26 ಅರ್ಧ ಶತಕಗಳು ಸೇರಿವೆ. ಟಿ20 ಪಂದ್ಯದಲ್ಲಿ ಕೊಹ್ಲಿ ಒಟ್ಟು 270 ಬೌಂಡರಿ ಹಾಗೂ 84 ಸಿಕ್ಸರ್‌ಗಳ ದಾಖಲೆ ಹೊಂದಿದ್ದಾರೆ.
ನೆನ್ನೆಯ ಪಂದ್ಯದ ಹೈಲೆಟ್ಸ್.. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ಗೆ ಮೊದಲ ಓವರ್ನಲ್ಲೇ ಭುವನೇಶ್ವರ್ ಕುಮಾರ್ ಶಾಕ್ ನೀಡಿದ್ರು. ಇನ್ನು ಖಾತೆ ತೆರೆಯದ ಜೋಷ್ ಬಟ್ಲರ್ನನ್ನ ಎಲ್ಬಿ ಬಲೆಗೆ ಕೆಡವಿದ್ರು. ಆದ್ರೆ 2ನೇ ವಿಕೆಟ್ಗೆ ಜೊತೆಯಾದ ಜೇಸನ್ ರಾಯ್ ಮತ್ತು ಡೇವಿಡ್ ಮಲನ್ 61 ರನ್ಗಳ ಜೊತೆಯಾಟವಾಡಿದ್ರು.
ಡೇವಿಡ್ ಮಲನ್ 24 ರನ್ಗಳಿಸಿದ್ರೆ, ನಂತರ ಬಂದ ಜಾನಿ ಬೇರಿಸ್ಟೋ 20 ರನ್ಗಳಿಸಿದ್ರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮಾಡಿದ ರಾಯ್, 46 ರನ್ಗಳಿಸಿದ್ರು. ಇನ್ನು ಮಿಡಲ್ ಆರ್ಡರ್ನಲ್ಲಿ ನಾಯಕ ಮಾರ್ಗನ್ 28 ಮತ್ತು ಬೆನ್ ಸ್ಟೋಕ್ಸ್ 24 ರನ್ಗಳಿಸಿ ಪೈಪೋಟಿ ಮೊತ್ತ ಕಲೆಹಾಕಲು ಕಾರಣವಾದ್ರು. ಅಂತಿಮವಾಗಿ ಇಂಗ್ಲೆಂಡ್ ನಿಗದಿತ 20 ಓವರ್ಗಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ಗಳಿಸಿತು. ಟೀಮ್ ಇಂಡಿಯಾ ಪರ ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದು ಮಿಂಚಿದ್ರು.
ಸಾಲಿಡ್ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್.. ಇಂಗ್ಲೆಂಡ್ ನೀಡಿದ 165 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾಕ್ಕೂ ಆಘಾತವಾಯ್ತು. ಖಾತೆ ತೆರೆಯೋಕು ಮುನ್ನವೇ ಕನ್ನಡಿಗ ಕೆ.ಎಲ್.ರಾಹುಲ್ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಆದ್ರೆ ಪದಾರ್ಪಣೆ ಪಂದ್ಯದಲ್ಲೇ ಸಾಲಿಡ್ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್, ಕೊಹ್ಲಿ ಜೊತೆ ಸೇರಿ ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಿದರು. ಮೋದಿ ಮೈದಾನದಲ್ಲಿ ಅಬ್ಬರಿಸಿದ ಇಶಾನ್ ಕಿಶನ್, ಕೇವಲ 32 ಬಾಲ್ನಲ್ಲಿ 5 ಬೌಂಡರಿ 4 ಸಿಕ್ಸರ್ ಸಹಿತ 56 ರನ್ಗಳಿಸಿ ಮಿಂಚಿದ. ಇಶಾನ್ ಔಟಾದ ಬಳಿಕ ಪಂತ್ ಜೊತೆಗೆ ಬೊಂಬಾಟ್ ಬ್ಯಾಟಿಂಗ್ ಮಾಡಿದ ಕ್ಯಾಪ್ಟನ್ ಕೊಹ್ಲಿ ಕೂಡ ಆಕರ್ಷಕ ಅರ್ಧಶತಕ ಸಿಡಿಸಿದ್ರು.
ಕೊಹ್ಲಿ ಘರ್ಜನೆಗೆ ಇಂಗ್ಲೆಂಡ್ ತಂಡಕ್ಕೆ ಮಿಸುಕಾಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ 17.5 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ಪದಾರ್ಪಣೆ ಪಂದ್ಯದಲ್ಲೇ ಬೊಂಬಾಟ್ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್, ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದ್ರು. ಇದರೊಂದಿಗೆ ಐದು ಪಂದ್ಯಗಳ ಟಿಟ್ವೆಂಟಿ ಸರಣಿ 1-1ರ ಅಂತರದಲ್ಲಿ ಸಮಬಲಗೊಂಡಿದ್ದು, ಇನ್ನಷ್ಟು ರೋಚಕತೆ ಪಡೆಯುವಂತೆ ಮಾಡಿದೆ.