India vs England: ಭಾರತ vs ಇಂಗ್ಲೆಂಡ್​ ನಾಲ್ಕನೇ ಟೆಸ್ಟ್​ಗೆ ಪಿಚ್​ ಭಿನ್ನವಾಗೇನೂ ಇರದು: ಅಜಿಂಕ್ಯಾ ರಹಾನೆ

| Updated By: Digi Tech Desk

Updated on: Mar 03, 2021 | 9:30 AM

India vs England Test Series: ಸಾಮಾನ್ಯವಾಗಿ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತಾಡಲು ಇಚ್ಛಿಸದ ರಹಾನೆ ಮೊದಲ ಬಾರಿಗೆ ಭಾರತದ ಪಿಚ್​ಗಳನ್ನು ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಅಹಮದಾಬಾದಿನಲ್ಲಿ ಮಂಗಳವಾರದಂದು ನಡೆದ ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.

India vs England: ಭಾರತ vs ಇಂಗ್ಲೆಂಡ್​ ನಾಲ್ಕನೇ ಟೆಸ್ಟ್​ಗೆ ಪಿಚ್​ ಭಿನ್ನವಾಗೇನೂ ಇರದು: ಅಜಿಂಕ್ಯಾ ರಹಾನೆ
ಆಜಿಂಕ್ಯಾ ರಹಾನೆ
Follow us on

ಅಹಮದಾಬಾದ್: ಭಾರತದಲ್ಲಿನ ಸ್ಪಿನ್ನರ್-ಸ್ನೇಹಿ ಪಿಚ್​ಗಳನ್ನು ಕುರಿತು ಎದ್ದಿರುವ ಟೀಕೆ ಮತ್ತು ವಿವಾದಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲವೆಂದು ಹೇಳಿರುವ ಟೀಮ್ ಇಂಡಿಯಾದ ಉಪ-ನಾಯಕ ಅಜಿಂಕ್ಯಾ ರಹಾನೆ, ಅಹಮದಾಬಾದಿನ ಮೊಟೆರಾದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಸರಣಿಯ 4 ಮತ್ತು ಕೊನೆಯ ಟೆಸ್ಟ್​ ಪಂದ್ಯಕ್ಕೆ ಪಿಚ್​ ಭಿನ್ನವಾಗೇನೂ ಇರದು ಎಂದಿದ್ದಾರೆ. ಚೆನೈನ ಚೆಪಾಕ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್​ ಮತ್ತು ಮೊಟೆರಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯಗಳಿಗೆ ತಯಾರು ಮಾಡಿದ್ದ ಪಿಚ್​​ಗಳ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

‘ನಾಲ್ಕನೇ ಟೆಸ್ಟ್​ ನಡೆಯುವ ಪಿಚ್ ಚೆಪಾಕ್​ನಲ್ಲಿ ಎರಡನೇ ಟೆಸ್ಟ್​ಗೆ ಉಪಯೋಗಿಸಿದ ಪಿಚ್​ನಂತಿರಲಿದೆ ಎಂದು ನಾನು ಭಾವಿಸುತ್ತೇನೆ. ಹೌದು, ಮೂರನೇ ಟೆಸ್ಟ್​ನಲ್ಲಿ ಪಿಂಕ್ ಬಣ್ಣದ ಬಾಲ್ ಪಿಚ್​ ಆದ ಮೇಲೆ ಕೆಂಪು ಚೆಂಡಿಗಿಂತ ವೇಗವಾಗಿ ನುಗ್ಗುತ್ತಿದ್ದುದ್ದರಿಂದ ಬ್ಯಾಟ್ಸ್​ಮನ್​ಗಳಿಗೆ ಆಡುವುದು ಕಷ್ಟವಾಯಿತು. ನಾಲ್ಕನೇ ಟೆಸ್ಟ್​ ನಡೆಯುವ ಪಿಚ್​ ಸಹ ಕೊನೆಯೆರಡು ಟೆಸ್ಟ್​ ಪಂದ್ಯಗಳಿಗೆ ಉಪಯೋಗಿಸಿದ ಪಿಚ್​ಗಳಂತೆಯೇ ಇರಲಿದೆ’ ಎಂದು ರಹಾನೆ ಹೇಳಿದರು.

ಸಾಮಾನ್ಯವಾಗಿ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತಾಡಲು ಇಚ್ಛಿಸದ ರಹಾನೆ ಮೊದಲ ಬಾರಿಗೆ ಭಾರತದ ಪಿಚ್​ಗಳನ್ನು ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಅಹಮದಾಬಾದಿನಲ್ಲಿ ಮಂಗಳವಾರದಂದು ನಡೆದ ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು. ಪಿಚ್​ಗಳನ್ನು ತೀವ್ರವಾಗಿ ಖಂಡಿಸಿರುವ ಇಂಗ್ಲೆಂಡಿನ ಹಾಲಿ ಮತ್ತು ಮಾಜಿ ಆಟಗಾರರು, ಬಿಸಿಸಿಐ ವಿರುದ್ಧ ಕ್ರಮ ಜರುಗಿಸುವಂತೆ ಐಸಿಸಿಗೆ  ಆಗ್ರಹಿಸಿದ್ದಾರೆ.

‘ಅವರೆಲ್ಲ ಏನು ಬೇಕಾದರೂ ಮಾತಾಡಿಕೊಳ್ಳಲಿ. ನಾವು ಬೇರೆ ದೇಶಗಳಿಗೆ ಹೋದಾಗ ಅಲ್ಲಿನ ಸೀಮಿಂಗ್ ವಿಕೆಟ್​ಗಳ ಕುರಿತು ಯಾರೂ ಚಕಾರವೆತ್ತಲ್ಲ. ಆಗೆಲ್ಲ ಅವರು, ಭಾರತೀಯ ಬ್ಯಾಟ್ಸ್​ಮನ್​ಗಳ ಟೆಕ್ನಿಕ್​ ಬಗ್ಗೆ ಮಾತಾಡುತ್ತಾರೆ. ಹಾಗಾಗಿ ಅವರು ಮಾಡುತ್ತಿರುವ ಟೀಕೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ’ ಎಂದು ರಹಾನೆ ಖಾರವಾಗಿ ಹೇಳಿದರು.

ಇದನ್ನೂ ಓದಿ: ಪಿಚ್​ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರ ತಕರಾರಿಗೆ ವಿವಿಯನ್ ರಿಚರ್ಡ್ಸ್ ಉತ್ತರ

ಉಮೇಶ್ ಯಾದವ್

‘ನಾವು ವಿದೇಶಗಳಲ್ಲಿ ಆಡುವಾಗ ಟೆಸ್ಟ್​ ಪಂದ್ಯವೊಂದರ ಮೊದಲ ದಿನ ಪಿಚ್​ನಲ್ಲಿ ತೇವಾಂಶವಿರುತ್ತದೆ. ನಂತರ ಹುಲ್ಲು ಕಾಣಿಸಲಾರಂಭಿಸಿ ಪಿಚ್​ನಲ್ಲಿ ಚೆಂಡಿನ ನೆಗೆತ ಒಂದೇ ತೆರನಾಗಿರುವುದಿಲ್ಲ. ಆಗ ಬ್ಯಾಟ್ಸ್​ಮನ್​​ಗಳಿಗೆ ಪಿಚ್​ ಅಪಾಯಕಾರಿ ಪರಿಣಮಿಸುತ್ತದೆ. ಹಾಗಂತ ನಾವು ಯಾವತ್ತೂ ಪಿಚ್​ಗಳ ಬಗ್ಗೆ ದೂರಿಲ್ಲ’ ಎಂದು ರಹಾನೆ ಹೇಳಿದರು.

ಮೂರನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ಅಟಗಾರರು ಅವಮಾನಕರ ರೀತಿಯಲ್ಲಿ ಸೋಲು ಅನುಭವಿಸಿದರೂ ಎದುರಾಳಿ ಅಟಗಾರರು ಪುಟಿದೇಳುವ ಸಾಧ್ಯತೆ ಬಗ್ಗೆ ರಹಾನೆ ಗೌರವದಿಂದ ಮಾತಾಡಿದರು.

‘ನಾಲ್ಕನೇ ಟೆಸ್ಟ್​ ನಡೆಯುವ ಪಿಚ್​ ಭಿನ್ನವಾಗೇನೂ ಇರುವುದಿಲ್ಲ, ಆದರೆ ಅದು ಹೇಗೆ ವರ್ತಿಸಲಿದೆ ಅನ್ನೋದು ನನಗೆ ಗೊತ್ತಿಲ್ಲ. ನಾವು ಕಾದು ನೋಡಬೇಕಿದೆ. ಇಂಗ್ಲೆಂಡ್​ ತಂಡದ ಬಗ್ಗೆ ನಮಗೆ ಬಹಳ ಗೌರವವಿದೆ. ಅವರದ್ದು ಒಂದು ಉತ್ತಮ ತಂಡ. ಹಿಂದಿನೆರಡು ಪಂದ್ಯಗಳಲ್ಲಿ ನಾವು ಚೆನ್ನಾಗಿ ಆಡಿದ್ದೇವೆ, ಅದರೆ ಮೊದಲ ಟೆಸ್ಟ್​ನಲ್ಲಿ ಅವರು ಅದ್ಭುತವಾದ ಪ್ರದರ್ಶನ ನೀಡಿದರು. ಅವರನ್ನು ನಾವು ಹಗುರವಾಗಿ ಪರಿಗಣಿಸುತ್ತಿಲ್ಲ. ಎರಡು ತಂಡಗಳೂ ಮೈದಾನದಲ್ಲಿ ತಮ್ಮ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನಗಳನ್ನು ನೀಡುವುದು ಮಾತ್ರ ನಿಶ್ಚಿತ’ ಎಂದು ಅವರು ಹೇಳಿದರು.

ನಾಲ್ಕನೇ ಟೆಸ್ಟ್​ನಲ್ಲಿ ಹಿರಿಯ ವೇಗದ ಬೌಲರ್ ಉಮೇಶ್ ಯಾದವ್ ಆಡುವ ಸಾಧ್ಯತೆ ಬಗ್ಗೆ ರಹಾನೆ ಸುಳಿವು ನೀಡಿದರು. ‘ಅವರು (ಉಮೇಶ್ ಯಾದವ್) ಆಡಲು ಕಾತುರರಾಗಿದ್ದಾರೆ. ನೆಟ್ಸ್​ನಲ್ಲಿ ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಉತ್ತಮ ರಿದಮ್​ನಲ್ಲಿ ಕಂಡುಬರುತ್ತಿದ್ದಾರೆ. ಅವರು ತಂಡಕ್ಕೆ ವಾಪಸ್ಸಾಗಿರುವುದು ನಮಗೆಲ್ಲ ಸಂತೋಷವಾಗಿದೆ,’ ಎಂದು ರಹಾನೆ ಕೊನೆಯಲ್ಲಿ ಹೇಳಿದರು.

ಇದನ್ನೂ ಓದಿ: ಪಿಚ್​ ಬಗ್ಗೆ ICC ನಿರ್ಧಾರ ಮಾಡಬೇಕಿದೆ: ರೂಟ್

Published On - 10:16 pm, Tue, 2 March 21