India vs England: ಈ ಒಂದು ಸೋಲು ನಾವೇನೆಂಬುದನ್ನ ವ್ಯಾಖ್ಯಾನಿಸುವುದಿಲ್ಲ.. ಪಿಚ್​ ಬಗ್ಗೆ ICC ನಿರ್ಧಾರ ಮಾಡಬೇಕಿದೆ: ರೂಟ್

India vs England: ಈ ಪಿಚ್​ನಲ್ಲಿ ರನ್​ಗಳಿಸುವುದು ಅಷ್ಟೊಂದು ಸುಲಭವಾಗಿಲ್ಲ ಎಂದು ರೂಟ್ ಒಪ್ಪಿಕೊಂಡರು. ಜೊತೆಗೆ ಪಿಚ್‌ನ ಫಿಟ್‌ನೆಸ್ ಬಗ್ಗೆ ಐಸಿಸಿ ಮಾತ್ರ ನಿರ್ಧರಿಸಬಹುದು ಎಂದು ರೂಟ್ ಹೇಳಿಕೊಂಡರು.

India vs England: ಈ ಒಂದು ಸೋಲು ನಾವೇನೆಂಬುದನ್ನ ವ್ಯಾಖ್ಯಾನಿಸುವುದಿಲ್ಲ.. ಪಿಚ್​ ಬಗ್ಗೆ ICC ನಿರ್ಧಾರ ಮಾಡಬೇಕಿದೆ: ರೂಟ್
ಜೋ ರೂಟ್​
Follow us
ಪೃಥ್ವಿಶಂಕರ
|

Updated on:Feb 26, 2021 | 11:53 AM

ಅಹಮದಾಬಾದ್‌: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಕೇವಲ 12 ಗಂಟೆಗಳಲ್ಲಿ ಮುಗಿದ ಬಳಿಕ ಕ್ರಿಕೆಟ್​ ಪಂಡಿತರು ಮತ್ತೊಮ್ಮೆ ಪಿಚ್‌ನತ್ತ ಬೆರಳು ಮಾಡಿದ್ದಾರೆ. ಕೇವಲ ಎರಡು ದಿನಗಳಲ್ಲಿ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂ ಪಿಚ್‌ನಲ್ಲಿ ನಾಲ್ಕು ಇನ್ನಿಂಗ್ಸ್​​ಗಳಲ್ಲಿ ಬರೋಬ್ಬರಿ 30 ವಿಕೆಟ್‌ಗಳು ಬಿದ್ದವು. ಅದರಲ್ಲಿ 28 ವಿಕೆಟ್‌ಗಳು ಸ್ಪಿನ್ನರ್‌ಗಳ ಖಾತೆಗೆ ಸೇರಿವೆ. ಎರಡನೇ ದಿನವೇ 17 ವಿಕೆಟ್‌ಗಳು ಬಿದ್ದಿದ್ದು ಇನ್ನೂ ಕುತೂಹಲಕಾರಿಯಾಗಿದೆ. ಮೊದಲ ಸೆಷನ್‌ನಲ್ಲಿ ಭಾರತ 7 ವಿಕೆಟ್‌ಗಳನ್ನು ಕಳೆದುಕೊಂಡರೆ, ಎರಡನೇ ಸೆಷನ್‌ನಲ್ಲಿ ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್ ಮುಗಿದು ಹೋಯಿತು. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಅನುಭವಿಗಳು ಪಿಚ್ ಅನ್ನು ದೂರುತ್ತಿದ್ದಾರೆ. ಆದರೆ ಇಂಗ್ಲೆಂಡ್ ನಾಯಕ ಜೋ ರೂಟ್ ಮಾತ್ರ ಪಿಚ್ ಅನ್ನು ದೂಷಿಸುವ ಬದಲು ತಂಡದ ಬ್ಯಾಟಿಂಗ್ ಅನ್ನು ದೂಷಿಸಿದ್ದರು. ಜೊತೆಗೆ ಪಿಚ್ ಬಗ್ಗೆ ಯಾವುದೇ ನಿರ್ಧಾರವನ್ನು ಆಟಗಾರರಿಗಿಂತ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತೆಗೆದುಕೊಳ್ಳುವುದು ಸೂಕ್ತ ಎಂದರು.

ಫೆಬ್ರವರಿ 24 ರ ಬುಧವಾರ ಅಹಮದಾಬಾದ್‌ನ ಹೊಸ ಕ್ರೀಡಾಂಗಣದಲ್ಲಿ ಪ್ರಾರಂಭವಾದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಗುಲಾಬಿ ಚೆಂಡು ತನ್ನ ಕರಾಮತ್ತು ತೋರಿತು. ಮೊದಲ ದಿನ ಇಂಗ್ಲೆಂಡ್ ತಂಡವನ್ನು ಕೇವಲ 112 ರನ್‌ಗಳಿಗೆ ಆಲ್​ಔಟ್​ ಮಾಡಲಾಯಿತು. ಇದಕ್ಕೆ ಪ್ರತಿಯಾಗಿ, ಭಾರತವು ಸಹ ಎರಡನೇ ದಿನದ ಮೊದಲ ಸೆಷನ್​ನಲ್ಲಿಯೇ 145 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್​ ಮುಗಿಸಿತು. ಇಂಗ್ಲೆಂಡ್‌ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 81 ರನ್ ಗಳಿಸಿದ ನಂತರ, ಭಾರತವು ಕೇವಲ 49 ರನ್‌ಗಳ ಗುರಿಯನ್ನು ಪಡೆದುಕೊಂಡಿತು. ಇದರ ಪರಿಣಾಮವಾಗಿ ಭಾರತ ಮೂರನೇ ಸೆಷನ್‌ನ ಮೊದಲ ಅರ್ಧ ಗಂಟೆಯಲ್ಲಿಯೇ ವಿಕೆಟ್‌ಗಳನ್ನು ಕಳೆದುಕೊಳ್ಳದೆ 10 ವಿಕೆಟ್‌ಗಳಿಂದ ಜಯಗಳಿಸಿತು.

ಪಿಚ್ ಫಿಟ್‌ನೆಸ್‌ ತೀರ್ಮಾನ ಐಸಿಸಿಗೆ ಬಿಟ್ಟಿದ್ದು.. ಪಂದ್ಯದ ನಂತರ, ಇಂಗ್ಲೆಂಡ್‌ ತಂಡದ ನಾಯಕ ರೂಟ್‌ ಅವರನ್ನು ತಂಡದ ಸಾಧನೆ ಮತ್ತು ಪಿಚ್ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಈ ಪಿಚ್​ನಲ್ಲಿ ರನ್ ​ಗಳಿಸುವುದು ಅಷ್ಟೊಂದು ಸುಲಭವಾಗಿಲ್ಲ ಎಂದು ರೂಟ್ ಒಪ್ಪಿಕೊಂಡರು. ಜೊತೆಗೆ ಪಿಚ್‌ನ ಫಿಟ್‌ನೆಸ್ ಬಗ್ಗೆ ಐಸಿಸಿ ಮಾತ್ರ ನಿರ್ಧರಿಸಬಹುದು ಎಂದು ರೂಟ್ ಹೇಳಿಕೊಂಡರು.

ಈ ಬಗ್ಗೆ ಮಾತಾನಾಡಿದ ರೂಟ್​, ಈ ಪಿಚ್ ತುಂಬಾ ಸವಾಲಿನದು ಎಂದು ನಾನು ಭಾವಿಸುತ್ತೇನೆ. ಇದರ ಮೇಲೆ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟ. ಪಿಚ್ ತಮ್ಮ ಆಟಕ್ಕೆ ಸರಿಹೊಂದುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವುದು ಆಟಗಾರರ ಕೆಲಸವಲ್ಲ. ಪಿಚ್​ ಬಗೆಗಿನ ತೀರ್ಮಾನ ಏನಿದ್ದರೂ ಐಸಿಸಿಗೆ ಬಿಟ್ಟಿದ್ದು. ಆಟಗಾರನಾಗಿ, ನಮ್ಮ ಮುಂದೆ ಇರುವ ಪ್ರತಿಯೊಂದು ಪರಿಸ್ಥಿತಿಯನ್ನು ಎದುರಿಸಲು ನಾವು ಪ್ರಯತ್ನಿಸುತ್ತೇವೆ ಎಂದರು.

ನಿರಾಶಾದಾಯಕ ಸೋಲಿನಿಂದ ಕಲಿಯಿರಿ ಈ ಸೋಲಿನಿಂದ ತಂಡವು ಸಾಕಷ್ಟು ಕಲಿಯುವುದಿದೆ. ಹೀನಾಯ ಸೋಲನ್ನ ಸ್ವೀಕರಿಸಲು ತಂಡ ಸಿದ್ಧವಾಗಿದೆ ಎಂದು ರೂಟ್ ಹೇಳಿದರು. ಈ ಪಂದ್ಯದಿಂದ ನಾವು ಸಕಾರಾತ್ಮಕ ವಿಷಯಗಳನ್ನು ತೆಗೆದುಕೊಂಡು ಅದರಿಂದ ಕಲಿಯುತ್ತೇವೆ. ಈ ಒಂದು ಸೋಲು ನಮ್ಮ ತಂಡ ಏನೆಂಬುದನ್ನು ವ್ಯಾಖ್ಯಾನಿಸುವುದಿಲ್ಲ. ನಾವು ಈ ಸೋಲನ್ನು ಸ್ವೀಕರಿಸಿ ಮುಂದೆ ಸಾಗಬೇಕು ಮತ್ತು ಮುಂದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಬೇಕು ಎಂದರು.

ಅಕ್ಷರ್ ಪರಿಸ್ಥಿತಿಯ ಲಾಭವನ್ನು ಪಡೆದರು ಪರಿಸ್ಥಿತಿಯನ್ನು ಚೆನ್ನಾಗಿ ಲಾಭ ಮಾಡಿಕೊಂಡ ಭಾರತದ ಬೌಲರ್‌ಗಳನ್ನು ಇಂಗ್ಲೆಂಡ್ ನಾಯಕ ರೂಟ್​ ಹೊಗಳಿದರು. ಗುಲಾಬಿ ಚೆಂಡು ಪಿಚ್‌ನಲ್ಲಿ ವೇಗವನ್ನು ಪಡೆದುಕೊಂಡಿತು. ಆದರೆ ಭಾರತವು ಪ್ರತಿಯೊಂದು ವಿಭಾಗದಲ್ಲೂ ನಮಗಿಂತ ಅದ್ಭುತವಾಗಿ ಆಡಿತು. ಅಕ್ಷರ್ ಈ ಪಿಚ್‌ನ ಲಾಭವನ್ನು ಪಡೆದುಕೊಂಡು, ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡರು. ಆದರೆ ಕೆಲವು ಆಟಗಾರರಿಗೆ ಇದು ಕಷ್ಟಕರವಾಗಿರುತ್ತದೆ ಎಂದು ಅಕ್ಷರ್ ಪಟೇಲ್​ ಅವರ ಪ್ರದರ್ಶನವನ್ನು ರೂಟ್​ ಕೊಂಡಾಡಿದರು.

4ನೇ ಟೆಸ್ಟ್​ ಹಾಗೂ 5 ಟಿ20 ಪಂದ್ಯಗಳು ಇಲ್ಲೇ ನೆಡೆಯಲಿವೆ. ಈಗಾಗಲೇ ನಡೆದಿರುವ 1 ಟೆಸ್ಟ್​ ಪಂದ್ಯದಲ್ಲಿಯೇ ಈ ಮೈದಾನದ ಪಿಚ್​ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಈಗ ಇದು ಸಾಲದೆಂಬಂತೆ ಮಾರ್ಚ್ 4ರಿಂದ ಆರಂಭವಾಗುವ 4ನೇ ಟೆಸ್ಟ್​ ಸಹ ಇದೇ ಮೈದಾನದಲ್ಲಿ ನಡೆಯಲ್ಲಿದೆ. ಇದರ ಜೊತೆಗೆ ಇಂಡಿಯಾ-ಇಂಗ್ಲೆಂಡ್​ ನಡುವೆ ಮುಂದೆ ನಡೆಯಲ್ಲಿರುವ 5 ಟಿ20 ಪಂದ್ಯಗಳು ಸಹ ಇದೇ ಮೈದಾನದಲ್ಲಿ ನಡೆಯಲ್ಲಿದ್ದು BCCI ಗೆ, ಈ ಪಿಚ್​ನಿಂದ ಮುಂದೆ ಇನ್ನ್ಯಾವ ರೀತಿಯ ತಲೆ ನೋವು ಎದುರಾಗಲಿದೆಯೋ ಕಾದು ನೋಡಬೇಕಿದೆ.

ಇದನ್ನೂ ಓದಿ:India vs England: 3ನೇ ಟೆಸ್ಟ್ ಗೆದ್ದ ಭಾರತ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಕನಸು​ ಇನ್ನೂ ಜೀವಂತ

Published On - 11:44 am, Fri, 26 February 21