India vs England: 3ನೇ ಟೆಸ್ಟ್ ಗೆದ್ದ ಭಾರತ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಕನಸು​ ಇನ್ನೂ ಜೀವಂತ

India vs England: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

India vs England: 3ನೇ ಟೆಸ್ಟ್ ಗೆದ್ದ ಭಾರತ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಕನಸು​ ಇನ್ನೂ ಜೀವಂತ
ಟೀಂ ಇಂಡಿಯಾ​
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 25, 2021 | 8:50 PM

ಅಹಮದಾಬಾದ್‌: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಅಕ್ಷರ್​ ಪಟೇಲ್​ 2 ಇನ್ನಿಂಗ್ಸ್​ ಸೇರಿ 11 ವಿಕೆಟ್ ಪಡೆದರೆ, ಅಶ್ವಿನ್ 7 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್​ ನೀಡಿದ 49 ರನ್​ಗಳ ಸುಲಭ ಗುರಿಯನ್ನು ಟೀಂ ಇಂಡಿಯಾ ಯಾವುದೇ ವಿಕೆಟ್​ ನಷ್ಟವಿಲ್ಲದೆ ಮುಟ್ಟಿತು. ರೂಟ್ ಅವರ​ ಓವರ್​ನಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್​ನೊಂದಿಗೆ ರೋಹಿತ್​ ಶರ್ಮಾ ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ ಪ್ರವೇಶದ ಸಾಧ್ಯತೆ ಭಾರತ ಉಳಿಯಿತು. ಇಂಗ್ಲೆಂಡ್​ ತಂಡಕ್ಕೆ ಅವಕಾಶದ ಬಾಗಿಲು ಮುಚ್ಚಿದಂತಾಯಿತು.

ಇಂಗ್ಲೆಂಡ್‌ ದಾಂಡಿಗರ ಪೆವಿಲಿಯನ್ ಪರೇಡ್ ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಲು ನಿರ್ಧರಿಸಿದ ಇಂಗ್ಲೆಂಡ್​ಗೆ ಆರಂಭದಿಂದಲೇ ಆಘಾತ ಎದುರಾಯಿತು. ಆರಂಭಿಕನಾಗಿ ಕಣಕ್ಕಿಳಿದ ಸಿಬ್ಲಿ ಶೂನ್ಯಕ್ಕೆ ಔಟಾದರೆ ನಂತರ ಬಂದ ಬೈರ್​ಸ್ಟೋವ್​ ಸಹ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಶೂನ್ಯಕ್ಕೆ ಪೆವಿಲಿಯನ್​ಗೆ ಮರಳಿದರು. ನಾಯಕ ರೂಟ್​ ಸಹ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. 17 ರನ್​ಗಳಿಸಿ ರೂಟ್​ ಪೆವಿಲಿಯನ್​ ಸೇರಿದರೆ, ರೂಟ್​ ನಂತರ ಬಂದ ಯಾವೊಬ್ಬ ಆಟಗಾರನೂ ನಿಂತು ಆಡುವ ಗೋಜಿಗೆ ಹೋಗಲಿಲ್ಲ. ಆದರೆ ಆರಂಭಿಕನಾಗಿ ಕಣಕ್ಕಿಳಿದ ಕ್ರಾವ್ಲೆ 53 ರನ್​ ಸಿಡಿಸಿ ತಂಡಕ್ಕೆ ನೆರವಾದರು. ಉಳಿದಂತೆ ಎಲ್ಲರೂ ಪೆವಿಲಿಯನ್​ ಪರೇಡ್​ ನಡೆಸಿದರು. ಇದರ ಫಲವಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್‌ 112 ರನ್​ಗಳಿಗೆ ಸರ್ವಪತನವಾಯಿತು.

ಮಿಂಚಿದ ಅಕ್ಷರ್, ಅಶ್ವಿನ್ ಟಾಸ್​ ಸೋತು ಬೌಲಿಂಗ್​ಗೆ ಇಳಿದ ಭಾರತಕ್ಕೆ ಆರಂಭದಲ್ಲೇ ಇಶಾಂತ್​ ಶರ್ಮಾ ಯಶಸ್ಸು ತಂದುಕೊಟ್ಟರು. ಶೂನ್ಯಕ್ಕೆ ಸಿಬ್ಲಿ ವಿಕೆಟ್​ ತೆಗೆಯುವ ಮೂಲಕ ತಂಡಕ್ಕೆ ನೆರವಾದರು. ಉಳಿದಂತೆ ಬೌಲಿಂಗ್​ನಲ್ಲಿ ಮೆರೆದಿದ್ದು ಅಕ್ಷರ್​ ಪಟೇಲ್​ ಹಾಗೂ ಅಶ್ವಿನ್​. ತಾನು ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್​ ಪಡೆಯುವಲ್ಲಿ ಅಕ್ಷರ್​ ಯಶಸ್ವಿಯಾದರು. ಆರಂಭದಿಂದಲೂ ಇಂಗ್ಲೆಂಡ್‌ ಬ್ಯಾಟ್ಸ್​ಮನ್​ಗಳ ಮೇಲೆ ಸವಾರಿ ಮಾಡಿದ ಅಕ್ಷರ್​ ಪಟೇಲ್​ ಪ್ರಮುಖ 6 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಇನ್ನೊಂದೆಡೆ ಇಂಗ್ಲೆಂಡ್‌ ದಾಂಡಿಗರನ್ನು ಇನ್ನಿಲ್ಲದಂತೆ ಕಾಡಿದ ಅಶ್ವಿನ್​ ಪ್ರಮುಖ 3 ವಿಕೆಟ್​ ಪಡೆದು ಮಿಂಚಿದರು.

ಭಾರತಕ್ಕೆ ಮೊದಲ ಇನ್ನಿಂಗ್ಸ್​ ಮುನ್ನಡೆ ಇಂಗ್ಲೆಂಡ್‌ ನೀಡಿದ 112 ರನ್​ಗಳ ಅಲ್ಪ ಮೊತ್ತವನ್ನು ಬೆನ್ನತ್ತಿದ ಭಾರತದ ಆರಂಭವೂ ಅಷ್ಟೇನೂ ಉತ್ತಮವಾಗಿರಲಿಲ್ಲ. ಶುಭಮನ್ ಗಿಲ್​ 11 ರನ್​ ಗಳಿಸಿ ಔಟಾದರೆ, ನಂತರ ಬಂದ ಪೂಜಾರ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ರೋಹಿತ್​ ಜೊತೆಯಾದ ನಾಯಕ ಕೊಹ್ಲಿ 27 ರನ್​ ಸಿಡಿಸಿ ಔಟಾದರು. ಕೊಹ್ಲಿ ಬಳಿಕ ಬಂದ ಉಳಿದ ಆಟಗಾರರು ಹೆಚ್ಚು ಪ್ರತಿರೋಧ ತೋರದೆ ಬೇಗನೆ ಪೆವಿಲಿಯನ್​ ಸೇರಿದರು. ಅಂತಿಮವಾಗಿ ರೋಹಿತ್ ಶರ್ಮಾ​ ಅವರ ಅಮೋಘ 66 ರನ್​ಗಳ ಕೊಡುಗೆಯಿಂದಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 32 ರನ್​ಗಳ ಮುನ್ನಡೆ ಪಡೆಯಿತು.

ಇಂಗ್ಲೆಂಡ್​ಗೆ‌ 2ನೇ ಇನ್ನಿಂಗ್ಸ್​ನಲ್ಲಿಯೂ ಆಘಾತ ಟೀಂ ಇಂಡಿಯಾದ 32 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ಗೆ ಆರಂಭದಿಂದಲೇ ಆಘಾತ ಎದುರಾಯಿತು. ಶೂನ್ಯಕ್ಕೆ ಇಬ್ಬರು ಆಟಗಾರರು ಔಟಾದರು. ನಂತರ ಜೊತೆಯಾದ ರೂಟ್​ ಹಾಗೂ ಸ್ಟೋಕ್ಸ್​ ಕೊಂಚ ಪ್ರತಿರೋಧ ತೋರಿದರಾದರೂ ತಂಡಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ರೂಟ್​ 17 ರನ್​ಗಳಿಸಿ ಔಟಾದರೆ, ಸ್ಟೋಕ್ಸ್​ 25 ರನ್​ಗಳಿಸಿದರು. ಸ್ಟೋಕ್ಸ್​ ಗಳಿಸಿದ 25 ರನ್​ಗಳೇ ತಂಡದ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ರನ್​ ಆಯಿತು. ಉಳಿದಂತೆ ಎಲ್ಲಾ ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿಕೊಂಡರು. ಅಂತಿಮವಾಗಿ ಇಂಗ್ಲೆಂಡ್ 81 ರನ್‌ಗಳಿಗೆ 2ನೇ ಇನ್ನಿಂಗ್ಸ್ ಮುಗಿಸಿತು.

2ನೇ ಇನ್ನಿಂಗ್ಸ್​ನಲ್ಲೂ ಮಿಂಚಿದ್ದು ಅಕ್ಷರ್ ಮೊದಲನೇ ಇನ್ನಿಂಗ್ಸ್​ನಂತೆ 2ನೇ ಇನ್ನಿಂಗ್ಸ್​ನಲ್ಲೂ ಅಬ್ಬರಿಸಿದ ಅಕ್ಷರ್​ ಎಸೆದ ಮೊದಲ ಓವರ್​ನಲ್ಲಿಯೇ 2 ವಿಕೆಟ್​ ತೆಗೆಯುವುದರಲ್ಲಿ ಯಶಸ್ವಿಯಾದರು. ಆರಂಭದಲ್ಲೇ 2 ವಿಕೆಟ್​ ಕಳೆದುಕೊಂಡ ಇಂಗ್ಲೆಂಡ್ ಚೇತರಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಅಕ್ಷರ್​ ಹಾಗೂ ಅಶ್ವಿನ್​ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ದಾಂಡಿಗರು ಪೆವಿಲಿಯನ್ ಪರೇಡ್  ನಡೆಸಿದರು. 2ನೇ ಇನ್ನಿಂಗ್ಸ್ ಬರಿ ಸ್ಪಿನ್ನರ್​ಗಳ ಅಬ್ಬರದಲ್ಲೇ ಮುಗಿದು ಹೋಯಿತು. ಅಕ್ಷರ್​ 5 ವಿಕೆಟ್‌ ಪಡೆದರೆ, ಅಶ್ವಿನ್​ 4 ವಿಕೆಟ್​, ಹಾಗೂ ಸುಂದರ್​ 1 ವಿಕೆಟ್​ ಪಡೆದು ಮಿಂಚಿದರು.

ಭಾರತಕ್ಕೆ ಸುಲಭದ ಜಯ ಕೇವಲ 49 ರನ್​ಗಳ ಅಲ್ಪ ಮೊತ್ತದ ಸವಾಲು ಪಡೆದ ಟೀಂ ಇಂಡಿಯಾ ಸುಲಭವಾಗಿ ಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಹಾಗೂ ಗಿಲ್​ ಅಬ್ಬರದ ಬ್ಯಾಟಿಂಗ್​ ಮಾಡಿ ಭಾರತಕ್ಕೆ ಇಂದೇ ಗೆಲುವಿನ ಮಾಲೆ ತೋಡಿಸಿದರು. ರೋಹಿತ್​ ಭರ್ಜರಿ ಬೌಂಡರಿ ಹಾಗೂ ಸಿಕ್ಸರ್​ ಸಿಡಿಸಿ 25 ರನ್​ಗಳಿಸಿದರೆ, ಗಿಲ್​ 15 ರನ್​ಗಳಿಸಿ ಅಜೇಯರಾಗಿ ಉಳಿದರು. 2 ಇನ್ನಿಂಗ್ಸ್​ನ ಬೌಲಿಂಗ್​ನಲ್ಲಿ ಮಿಂಚಿದ ಅಕ್ಷರ್​ ಪಟೇಲ್​ ಪಂದ್ಯಪುರುಷ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ:India vs England Test Series: ಪಟೇಲ್, ಅಶ್ವಿನ್ ಸ್ಪಿನ್ ಮೋಡಿಗೆ ತರಗೆಲೆಗಳಂತೆ ಉದುರಿದ ಇಂಗ್ಲೆಂಡ್ 112ಕ್ಕೆ ಆಲೌಟ್!

Published On - 8:48 pm, Thu, 25 February 21