India vs England Test Series: ಪಟೇಲ್, ಅಶ್ವಿನ್ ಸ್ಪಿನ್ ಮೋಡಿಗೆ ತರಗೆಲೆಗಳಂತೆ ಉದುರಿದ ಇಂಗ್ಲೆಂಡ್ 112ಕ್ಕೆ ಆಲೌಟ್!

India vs England Test Series: ಪಟೇಲ್, ಅಶ್ವಿನ್ ಸ್ಪಿನ್ ಮೋಡಿಗೆ ತರಗೆಲೆಗಳಂತೆ ಉದುರಿದ ಇಂಗ್ಲೆಂಡ್ 112ಕ್ಕೆ ಆಲೌಟ್!
ಅಕ್ಷರ್​ ಪಟೇಲ್

ಹಾಗೆ ನೋಡಿದರೆ, ಪಿಚ್​ ಬ್ಯಾಟ್ ಮಾಡಲಾರದಷ್ಟು ಅಪಾಯಕಾರಿಯೇನೂ ಅಗಿರಲಿಲ್ಲ, ಆದರೆ, ರೂಟ್ ಅವರ ವಿಕೆಟ್ ಪತನ ಇಂಗ್ಲೆಂಡ್​ ಆಟಗಾರರಲ್ಲಿ ಭೀತಿ ಹುಟ್ಟಿಸಿದ್ದು ನಿಜ.

Arun Belly

|

Feb 24, 2021 | 11:05 PM

ಅಹಮದಾಬಾದ್: ಭಾರತದ ಸ್ಪಿನ್ನರ್​ಗಳು ಇಂಗ್ಲೆಂಡಿನ ಬ್ಯಾಟ್ಸ್​ಮನ್​ಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವುದನ್ನು ಮುಂದುವರೆಸಿದ್ದಾರೆ. ವಿಶ್ವದ ಅತಿದೊಡ್ಡ ಸ್ಟೇಡಿಯಂ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು (ಫೆ.24) ಆರಂಭಗೊಂಡ ಮೂರನೇ ಟೆಸ್ಟ್​ ಪಂದ್ಯದ ಮೊದಲ ದಿನವಾಗಿದ್ದ ಇಂದು ಪ್ರವಾಸಿ ತಂಡದ ಬ್ಯಾಟ್ಸ್​ಮನ್​ಗಳು ಭಾರತದ ಸ್ಪಿನ್ ಜೋಡಿ ಆಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಕರಾರವಾಕ್ ದಾಳಿಗೆ ತರಗೆಲೆಗಳಂತೆ ಉದುರಿ ಡಿನ್ನರ್ ವಿರಾಮಕ್ಕೆ ಸ್ವಲ್ಪ ಮೊದಲು 112 ರನ್​ಗಳಿಗೆ ಆಲೌಟ್​ ಆದರು.

ಕೇವಲ ಎರಡನೇ ಟೆಸ್ಟ್​ ಆಡುತ್ತಿರುವ ನೀಳಕಾಯದ ಪಟೇಲ್ 38 ರನ್​ಗಳಿಗೆ 6 ವಿಕೆಟ್​ ಪಡೆದರೆ, ಅಶ್ವಿನ್ 26ರನ್ ನೀಡಿ 3 ವಿಕೆಟ್ ಕಬಳಿಸಿದರು. ಇಂಗ್ಲೆಂಡ್ ಪರ ಸರಣಿಯಲ್ಲಿ ಮೊದಲ ಟೆಸ್ಟ್​ ಅಡುತ್ತಿರುವ ಜಕ್​ ಕ್ರಾಲೀ ಮಾತ್ರ ಭಾರತದ ಬೌಲರ್​ಗಳನ್ನು ವಿಶ್ವಾಸದಿಂದ ಎದುರಿಸಿ 53 ರನ್ ಬಾರಿಸಿದರು.

ಟೀ ವಿರಾಮಕ್ಕೆ (ದಿನದಾಟದ ಮೊದಲ ಸೆಷನ್) ಸ್ವಲ್ಪ ಮೊದಲು ಇಂಗ್ಲೆಂಡ್ ನಾಯಕ ಜೋ ರೂಟ್ ಅವರನ್ನು ಅಶ್ವಿನ್ ಔಟ್​ ಮಾಡಿದಾಗ ಪ್ರವಾಸಿ ತಂಡದ ಸ್ಕೋರು 3/74 ಅಗಿತ್ತು. ಆದರೆ ವಿರಾಮದ ನಂತರ ಭಾರತದ ಸ್ಪಿನ್ ಜೋಡಿಯು ತನ್ನ ಕೈಚಳಕ ಮೆರೆಯಿತು. ಹಾಗೆ ನೋಡಿದರೆ, ಪಿಚ್​ ಬ್ಯಾಟ್ ಮಾಡಲಾರದಷ್ಟು ಅಪಾಯಕಾರಿಯೇನೂ ಅಗಿರಲಿಲ್ಲ, ಆದರೆ, ರೂಟ್ ಅವರ ವಿಕೆಟ್ ಪತನ ಇಂಗ್ಲೆಂಡ್​ ಆಟಗಾರರಲ್ಲಿ ಭೀತಿ ಹುಟ್ಟಿಸಿದ್ದು ನಿಜ. ಟೀ ವಿರಾಮದ ನಂತರ ಪ್ರವಾಸಿಗರು ಕೇವಲ 38 ರನ್​ಗಳಿಗೆ 7 ವಿಕೆಟ್​ಗಳನ್ನು ಕಳೆದುಕೊಂಡರು. ಅವರು ಬ್ಯಾಟ್​ ಮಾಡಿದ ಪರಿ ನೋಡಿದರೆ, ಪಿಂಕ್-ಬಾಲ್ ಟೆಸ್ಟ್​​ ಕ್ರಿಕೆಟ್​ಗೆ ಇನ್ನೂ ಒಗ್ಗಿಕೊಳ್ಳಬೇಕಿದೆ ಎನ್ನುವುದು ಸ್ಪಷ್ಟವಾಯಿತು.

ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಸ್ಟೇಡಿಯಂ ಅನ್ನು ಉದ್ಘಾಟಿಸಿದ ನಂತರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೂಟ್ ತಮ್ಮ ನಿರ್ಧಾರಕ್ಕೆ ಪರಿತಪಿಸಿರುತ್ತಾರೆ. ಟೆಸ್ಟ್​ ಕರೀಯರ್​ನ 100ನೇ ಪಂದ್ಯವನ್ನು ಇಂದು ಆಡುತ್ತಿರುವ ಇಶಾಂತ್​ ಶರ್ಮ ತಮ್ಮ ಎರಡನೇ ಓವರಿನಲ್ಲೇ ಅರಂಭ ಆಟಗಾರ ಡಾಮಿನಿಕ್ ಸಿಬ್ಲೀ ಅವರನ್ನು ಖಾತೆ ತೆರೆಯುವ ಅವಕಾಶವನ್ನೂ ನೀಡದೆ ಪೆವಲಿಯನ್​ಗೆ ಕಳಿಸಿದರು. ಸ್ಲಿಪ್ಸ್​ನಲ್ಲಿ ಅವರು ನೀಡಿದ ಕ್ಯಾಚನ್ನು ರೋಹಿತ್ ಶರ್ಮ ಹಿಡಿದರು.

Ravichandran Ashwin

ರವಿಚಂದ್ರನ್ ಅಶ್ವಿನ್

ಅವರ ಸ್ಥಾನದಲ್ಲಿ ಆಡಲು ಬಂದ ಜಾನಿ ಬೇರ್​ಸ್ಟೋ ಸಹ ರನ್ ಗಳಿಸದೆ ಪಟೇಲ್​ಗೆ ಮೊದಲ ಬಲಿಯಾದರು. ಮತ್ತೊಂದೆಡೆ ಕ್ರಾಲೀ ಆಕರ್ಷಕ ಬೌಂಡರಿಗಳನ್ನು ಬಾರಿಸುತ್ತಾ ವಿಶ್ವಾಸದ ಪ್ರತಿರೂಪದಂತೆ ಗೋಚರಿಸಿದರು. ರೂಟ್​ರೊಂದಿಗೆ 3ನೇ ವಿಕೆಟ್​ಗೆ ಅವರು 47 ರನ್​ ಸೇರಿಸಿದರು. ಏತನ್ಮಧ್ಯೆ, ಕ್ರಾಲೀ ತಮ್ಮ ಟೆಸ್ಟ್​ ಕರೀಯರ್​ನ 4ನೇ ಅರ್ಧ ಶತಕ ಪೂರೈಸಿದರು. ಅವರ ಡ್ರೈವ್ ಮತ್ತು ಲೆಗ್​ ಸೈಡ್​ನಲ್ಲಿ ಆಡಿದ ಫ್ಲಿಕ್​ಗಳು ಮನಮೋಹಕವಾಗಿದ್ದವು. ರೂಟ್​ ಸಹ ಆತ್ಮವಿಶ್ವಾಸದಿಂದ ಆಡುತ್ತಿದ್ದರಾದರೂ ಅಶ್ವಿನ್ ಅವರ ಎಸೆತವೊಂದು ಅವರನ್ನು ಎಲ್​ಬಿ ಬಲೆಗೆ ಕೆಡವಿತು.

ಟೀ ವಿರಾಮದ ನಂತರ ಮೊದಲು ಔಟಾಗಿದ್ದು ಕ್ರಾಲೀ. 84 ಎಸೆತಗಳಲ್ಲಿ 53 ರನ್ ಬಾರಿಸಿದ (10 ಬೌಂಡರಿಗಳು) ಅವರು ಪಟೇಲ್​ಗೆ ಎರಡನೇ ಬಲಿಯಾದರು. ಅದಾದ ನಂತರ ಇಂಗ್ಲೆಂಡ್​ ಆಟಗಾರರ ಮೆರವಣಿಗೆ ಶುರುವಾಯಿತು. ಪಟೇಲ್ ಮತ್ತು ಆಶ್ವಿನ್ ಹೆಣೆದ ಬಲೆಯಲ್ಲಿ ಒಬ್ಬರಾದ ನಂತರ ಒಬ್ಬರು ಬಿದ್ದರು. ಯಾರಿಂದಲೂ ಉಲ್ಲೇಖಿಸುವಂಥ ಕಾಣಿಕೆ ಬರಲಿಲ್ಲ. ಕೆಲವು ಬ್ಯಾಟ್ಸ್​ಮನ್​ಗಳು ಸ್ಪಿನರ್​ಗಳ ಎಸೆತಗಳನ್ನು ಮೈದಾನದಿಂದ ಆಚೆ ಬಾರಿಸುವ ಪ್ರಯತ್ನದಲ್ಲಿ ವಿಕೆಟ್ ಒಪ್ಪಿಸಿದರು.

ಕೇವಲ ಎರಡನೇ ಟೆಸ್ಟ್​ ಆಡುತ್ತಿರುವ ಎಡಗೈ ಸ್ಪಿನ್ನರ್ ಪಟೇಲ್ ಎರಡನೇ ಬಾರಿ 5 ವಿಕೆಟ್ ಪಡೆಯುವ ಸಾಧನೆಯನ್ನು ಮಾಡಿದರು. ಪಟೇಲ್ ಮತ್ತು ಅಶ್ವಿನ್ ತಮ್ಮ ನಡುವೆ 37.4 ಓವರ್​ಗಳನ್ನು ಬೌಲ್​ ಮಾಡಿ 64 ರನ್​ಗಳನ್ನು ನೀಡಿ 9 ವಿಕೆಟ್​ ಪಡೆದರು. ಡಿನ್ನರ್ ಅವಧಿಗೆ ಕೊಂಚ ಮೊದಲು ಭಾರತದ ಪರ ಬ್ಯಾಟಿಂಗ್ ಆರಂಭಿಸಿದ ಭಾರತೀಯರು ಯಾವುದೇ ಅತಂಕವಿಲ್ಲದೆ ಇಂಗ್ಲೆಂಡ್ ಬೌಲರ್​ಗಳನ್ನು ಎದುರಿಸಿದರು.

ಈವರೆಗಿನ ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ (ಪ್ರಥಮ ಇನ್ನಿಂಗ್ಸ್) 112, (ಜ್ಯಾಕ್ ಕ್ರಾಲೀ 53, ಜೋ ರೂಟ್ 17ಮ ಅಕ್ಷರ್ ಪಟೇಲ್ 6/38 ರವಿಚಂದ್ರನ್ ಅಶ್ವಿನ್ 3/26)

ಇದನ್ನೂ ಓದಿIndia vs England: ಮೊದಲ ಇನ್ನಿಂಗ್ಸ್‌ನಲ್ಲಿ.. ಟೀಂ ಇಂಡಿಯಾ ಇಂದೇ ಮುನ್ನಡೆ ಸಾಧಿಸಲಿದೆಯಾ!?

Follow us on

Related Stories

Most Read Stories

Click on your DTH Provider to Add TV9 Kannada