India vs England Test Series: ಮೊಟೆರಾ ಕ್ರೀಡಾಂಗಣದಲ್ಲಿ ದಾಖಲೆಗಳ ಸರಮಾಲೆಯೊಂದಿಗೆ ಜಡೇಜಾಗೆ ಆತಂಕ ಹುಟ್ಟಿಸಿದ ಅಕ್ಷರ್ ಪಟೇಲ್!

ಮೊಟೆರಾದಲ್ಲಿ ಪಟೇಲ್ ಒಂದು ವಿಶೇಷವಾದ ದಾಖಲೆಯನ್ನು ನಿರ್ಮಿಸಿದ್ದಾರೆ. ಎರಡೂ ಇನ್ನಿಂಗ್ಸ್​ಗಳಲ್ಲಿ ಅವರು ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿರುವುದು ಒಂದು ಅಪೂರ್ವ ದಾಖಲೆಯೇ ಸರಿ.

India vs England Test Series: ಮೊಟೆರಾ ಕ್ರೀಡಾಂಗಣದಲ್ಲಿ ದಾಖಲೆಗಳ ಸರಮಾಲೆಯೊಂದಿಗೆ ಜಡೇಜಾಗೆ ಆತಂಕ ಹುಟ್ಟಿಸಿದ ಅಕ್ಷರ್ ಪಟೇಲ್!
ಅಕ್ಷರ್ ಪಟೇಲ್
Follow us
|

Updated on:Feb 25, 2021 | 10:47 PM

ಅಹಮದಾಬಾದ್: ಅಕ್ಷರ್​ ಪಟೇಲ್ ಅವರನ್ನು ಕೇವಲ ಟಿ-20 ಸ್ಪೆಷಲಿಸ್ಟ್ ಅಂತ ಕೆಲವರು ಜರಿದರು, ಇನ್ನೂ ಕೆಲವರು ಟೀಮಿನ ಪ್ರಮುಖ ಸ್ಪಿನ್ನರ್ ರವೀಂದ್ರ ಜಡೇಜಾ ಗಾಯಗೊಂಡ ಕಾರಣ ಅವರಂತೆಯೇ ಎಡಗೈ ಸ್ಪಿನ್ನರ್ ಆಗಿರುವ ಪಟೇಲ್​ಗೆ ಅವಕಾಶ ಸಿಕ್ಕಿದೆ ಅಂದರು. ಯಾರು ಏನಾದರೂ ಅಂದುಕೊಳ್ಳಲಿ ನನ್ನ ಪ್ರತಿಭೆ ನನ್ನೊಂದಿಗಿರಲಿದೆ, ನನಗೆ ಟೆಸ್ಟ್​ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ, ಈ ಅವಕಾಶವನ್ನು ನಾನು ವ್ಯರ್ಥ ಹೋಗಲು ಬಿಡಲಾರೆ ಎಂಬ ಸಂಕಲ್ಪದೊಂದಿಗೆ ಸಾಂಪ್ರದಾಯಿಕ ಕ್ರಿಕೆಟ್​ಗೆ ಚೆನೈಯಲ್ಲಿ ಪದಾರ್ಪಣೆ ಮಾಡಿದ ಪಟೇಲ್ ಕೇವಲ 2 ಟೆಸ್ಟ್​ಗಳಲ್ಲಿ ಮಾಡಿರುವ ಕರಾಮತ್ತು ನೋಡಿದರೆ ಇವರನ್ನು ನಖಶಿಖಾಂತ ದ್ವೇಷಿಸುವ ವೈರಿಯೂ ‘ಭಲೇ ಪಟೇಲ್!’ ಎನ್ನದಿರಲಾರ. ಹೌದು, ಗುಜರಾತಿನ ನೀಳಕಾಯದ ಅಕ್ಷರ್ ಪಟೇಲ್ ಟೆಸ್ಟ್​ ಕ್ರಿಕೆಟ್ ತಮ್ಮ ಆಗಮನವನ್ನು ಯಾರೂ ಊಹಿಸದ ರೀತಿಯಲ್ಲಿ ಘೋಷಿಸಿದ್ದಾರೆ.

ನಮಗೆಲ್ಲ ಗೊತ್ತಿದೆ. ಇಂಗ್ಲೆಂಡ್​ ವಿರುದ್ಧ ಈಗ ಜಾರಿಯಲ್ಲಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿದ ಪಟೇಲ್, ಚೆನೈ ಮತ್ತು ಇಂದು ಎರಡೇ ದಿನಗಳಲ್ಲಿ ಮೊಟೆರಾ ಸ್ಟೇಡಿಯಂನಲ್ಲಿ ಕೊನೆಗೊಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ನೀಡಿರುವ ಪ್ರದರ್ಶನಗಳಾದರೂ ಎಂಥವು! ಚೆನ್ನೈನಲ್ಲಿ 2/40 ಮತ್ತು 5/60 ಹಾಗೂ ಮೊಟೆರಾದಲ್ಲಿ 6/38 ಮತ್ತು 5/32. ವಿಶ್ವದ ಯಾವುದೇ ಬೌಲರ್ ಇಂಥ ಪ್ರದರ್ಶನಗಳನ್ನು ತನ್ನ ಮೊದಲ ಎರಡು ಟೆಸ್ಟ್​ಗಳಲ್ಲಿ ನೀಡುತ್ತೇನೆಂದು ಕನಸು ಕಂಡಿರಲಾರ.

ಮೊಟೆರಾದಲ್ಲಿ ಪಟೇಲ್ ಒಂದು ವಿಶೇಷವಾದ ದಾಖಲೆಯನ್ನು ನಿರ್ಮಿಸಿದ್ದಾರೆ. ಎರಡೂ ಇನ್ನಿಂಗ್ಸ್​ಗಳಲ್ಲಿ ಅವರು ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿರುವುದು ಒಂದು ಅಪೂರ್ವ ದಾಖಲೆಯೇ. ಪಿಂಕ್-ಬಾಲ್ ಟೆಸ್ಟ್​ ಪಂದ್ಯವೊಂದರಲ್ಲಿ ಅತಿಹೆಚ್ಚು ವಿಕೆಟ್​ಗಳನ್ನು ಪಡೆದ ದಾಖಲೆಯನ್ನೂ ಪಟೇಲ್ ಗುರುವಾರದಂದು ತಮ್ಮ ಹೆಸರಿಗೆ ಬರೆದುಕೊಂಡರು. ಈ ಟೆಸ್ಟ್​ನಲ್ಲಿ ಅವರು 70 ರನ್​ಗಳಿಗೆ 11 ವಿಕೆಟ್ ಪಡೆದರು. ಮೂರನೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಪಡೆಯುವ ಮೂಲಕ ಅವರು ಸತತವಾಗಿ ಮೂರು ಬಾರಿ ಈ ಸಾಧನೆ ಮಾಡಿದಂತಾಗಿದೆ.

Axar Patel

ಜೊತೆ ಆಟಗಾರರಿಂದ ಅಕ್ಷರ್​ಗೆ ಅಭಿನಂದನೆ.

ತಮ್ಮ ಸಾಧನೆಯ ಮೂಲಕ ಪಟೇಲ್ ಟ್ವಿಟ್ಟರ್​ಗೆ ಬಿಡುವಿಲ್ಲದ ಕೆಲಸ ನೀಡಿದ್ದಾರೆ. ಖ್ಯಾತ ಕಾಮೆಂಟೇಟರ್ ಹರ್ಷ ಭೋಗ್ಲೆ, ‘ಅಕ್ಷರ್ ಪಟೇಲ್ ಅವರಿಂದ ಅಮೋಘ ಸಾಧನೆ. ಕಂಡೀಷನ್​ಗಳನ್ನು ಅದ್ಭುತವಾಗಿ ಬಳಸಿಕೊಂಡರು. ಚೆಂಡು ಸ್ಪಿನ್​ ಅಗುತ್ತಿರುವುದನ್ನು ಕೂಡಲೇ ಕಂಡುಕೊಂಡ ಅವರ ಸ್ಕಿಡ್​ ಅಗುವ ಎಸೆತಗಳು ಅಪಾಯಕಾರಿಯಾಗಲಿವೆ ಎನ್ನುವುದು ವಿದಿತವಾಗಿತ್ತು’ ಎಂದಿದ್ದಾರೆ.

ಶ್ರೇಯಾ ಹೆಸರಿನ ಅಭಿಮಾನಿಯೊಬ್ಬರು, ‘ಟೀಮನ್ನು ಅಕ್ಷರ್ ಪಟೇಲ್ ಡ್ರೆಸಿಂಗ್​ ರೂಮಿಗೆ ಲೀಡ್​ ಮಾಡಿದ ದೃಶ್ಯ ಕ್ರಿಕೆಟ್​ನ ಅದ್ಭುತ ಸನ್ನಿವೇಶಗಳಲ್ಲಿ ಒಂದಾಗಿತ್ತು, ನಾಯಕ ಕೊಹ್ಲಿ ಮತ್ತು ಟೀಮಿನ ಸದಸ್ಯರು ಅವರನ್ನು ಬೆಂಬಲಿಸಿದ ರೀತಿ ಮನಸ್ಸಿಗೆ ಉಲ್ಲಾಸವನ್ನು ನೀಡಿತು’ ಎಂದು ಹೇಳಿ ಆ ದೃಶ್ಯದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಮೊಟೆರಾ ಕ್ರೀಡಾಂಗಣದಲ್ಲಿ ಅಕ್ಷರ್ ಪಟೇಲ್​ ಮತ್ತೂ ಕೆಲ ದಾಖಲೆಗಳನ್ನು ಸೃಷ್ಟಿಸಿದರು. ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್​ಗಳನ್ನು ಪಡೆದ ಭಾರತದ 28 ನೇ ಬೌಲರ್ ಮತ್ತು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ ಭಾರತದ 8ನೇ ಬೌಲರ್ ಎನಿಸಿಕೊಂಡರು. ಹಾಗೆಯೇ, ಮೊಟರಾ ಮೈದಾನದಲ್ಲಿ 10 ವಿಕೆಟ್ ಪಡೆದ 5ನೇ ಬೌಲರ್ ಮತ್ತು ಅನಿಲ್ ಕುಂಬ್ಳೆ ನಂತರ ಈ ಸಾಧನೆಯನ್ನು ಪುನರಾವರ್ತಿಸಿದ ಭಾರತದ 2ನೇ ಬೌಲರ್ ಪಟೇಲ್ ಆಗಿರುತ್ತಾರೆ. ಹಾಗೆಯೇ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಪಡೆದ 9ನೇ ಎಡಗೈ ಸ್ಪಿನ್ನರ್ ಎನಿಸಿಕೊಂಡರು.

ಮೊಟೆರಾ ಮೈದಾನದಲ್ಲಿ ಗುರುವಾರದಂದು ಮೂರು ಎಸೆತಗಳಲ್ಲಿ 2 ವಿಕೆಟ್ ಪಡೆದ ಅಕ್ಷರ್ ಪಟೆಲ್ ಕೊಂಚದರಲ್ಲೇ ಹ್ಯಾಟ್ರಿಕ್ ಮಾಡುವ ಸಾಧನೆಯನ್ನು ತಪ್ಪಿಸಿಕೊಂಡರು. ಎರಡನೇ ಇನ್ನಿಂಗ್ಸ್​ನಲ್ಲಿ ಅವರು ಜಕ್ ಕ್ರಾಲೀ (0), ಜಾನಿ ಬೇರ್​ಸ್ಟೋ (0) ಡಾಮ್ ಸಿಬ್ಲೀ (7), ಜೋ ರೂಟ್ (19) ಮತ್ತು ಬೆನ್ ಫೋಕ್ಸ್ (7) ಅವರ ವಿಕೆಟ್​ಗಳನ್ನು ಪಡೆದರು.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರವೀಂದ್ರ ಜಡೇಜಾ ಅವರು ಪಟೇಲ್ ಅವರ ಬೌಲಿಂಗ್ ಪರಾಕ್ರಮವನ್ನು ಮೆಚ್ಚಿದರೂ ತಮ್ಮ ಸ್ಥಾನದ ಬಗ್ಗೆ ಯೋಚಿಸಿ ಬೆಚ್ಚಿರಬಹುದು! ಆದರೆ, ತಂಡದಲ್ಲಿ ಸ್ಥಾನ ಗಿಟ್ಟಿಸಲು ಆರಂಭವಾಗಿರುವ ಆರೋಗ್ಯಕರ ಸ್ಪರ್ಧೆ ಕ್ರಿಕೆಟ್​ ಪ್ರೇಮಿಗಳನ್ನಂತೂ ಖುಷಿಪಡಿಸಿದೆ.

ಇದನ್ನೂ ಓದಿIndia vs England: 3ನೇ ಟೆಸ್ಟ್ ಗೆದ್ದ ಭಾರತ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಕನಸು​ ಇನ್ನೂ ಜೀವಂತ

Published On - 10:46 pm, Thu, 25 February 21