ಅಹಮದಾಬಾದ್: ಭಾರತದ ಸ್ಪಿನ್ನರ್ಗಳು ಇಂಗ್ಲೆಂಡಿನ ಬ್ಯಾಟ್ಸ್ಮನ್ಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವುದನ್ನು ಮುಂದುವರೆಸಿದ್ದಾರೆ. ವಿಶ್ವದ ಅತಿದೊಡ್ಡ ಸ್ಟೇಡಿಯಂ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು (ಫೆ.24) ಆರಂಭಗೊಂಡ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನವಾಗಿದ್ದ ಇಂದು ಪ್ರವಾಸಿ ತಂಡದ ಬ್ಯಾಟ್ಸ್ಮನ್ಗಳು ಭಾರತದ ಸ್ಪಿನ್ ಜೋಡಿ ಆಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಕರಾರವಾಕ್ ದಾಳಿಗೆ ತರಗೆಲೆಗಳಂತೆ ಉದುರಿ ಡಿನ್ನರ್ ವಿರಾಮಕ್ಕೆ ಸ್ವಲ್ಪ ಮೊದಲು 112 ರನ್ಗಳಿಗೆ ಆಲೌಟ್ ಆದರು.
ಕೇವಲ ಎರಡನೇ ಟೆಸ್ಟ್ ಆಡುತ್ತಿರುವ ನೀಳಕಾಯದ ಪಟೇಲ್ 38 ರನ್ಗಳಿಗೆ 6 ವಿಕೆಟ್ ಪಡೆದರೆ, ಅಶ್ವಿನ್ 26ರನ್ ನೀಡಿ 3 ವಿಕೆಟ್ ಕಬಳಿಸಿದರು. ಇಂಗ್ಲೆಂಡ್ ಪರ ಸರಣಿಯಲ್ಲಿ ಮೊದಲ ಟೆಸ್ಟ್ ಅಡುತ್ತಿರುವ ಜಕ್ ಕ್ರಾಲೀ ಮಾತ್ರ ಭಾರತದ ಬೌಲರ್ಗಳನ್ನು ವಿಶ್ವಾಸದಿಂದ ಎದುರಿಸಿ 53 ರನ್ ಬಾರಿಸಿದರು.
ಟೀ ವಿರಾಮಕ್ಕೆ (ದಿನದಾಟದ ಮೊದಲ ಸೆಷನ್) ಸ್ವಲ್ಪ ಮೊದಲು ಇಂಗ್ಲೆಂಡ್ ನಾಯಕ ಜೋ ರೂಟ್ ಅವರನ್ನು ಅಶ್ವಿನ್ ಔಟ್ ಮಾಡಿದಾಗ ಪ್ರವಾಸಿ ತಂಡದ ಸ್ಕೋರು 3/74 ಅಗಿತ್ತು. ಆದರೆ ವಿರಾಮದ ನಂತರ ಭಾರತದ ಸ್ಪಿನ್ ಜೋಡಿಯು ತನ್ನ ಕೈಚಳಕ ಮೆರೆಯಿತು. ಹಾಗೆ ನೋಡಿದರೆ, ಪಿಚ್ ಬ್ಯಾಟ್ ಮಾಡಲಾರದಷ್ಟು ಅಪಾಯಕಾರಿಯೇನೂ ಅಗಿರಲಿಲ್ಲ, ಆದರೆ, ರೂಟ್ ಅವರ ವಿಕೆಟ್ ಪತನ ಇಂಗ್ಲೆಂಡ್ ಆಟಗಾರರಲ್ಲಿ ಭೀತಿ ಹುಟ್ಟಿಸಿದ್ದು ನಿಜ. ಟೀ ವಿರಾಮದ ನಂತರ ಪ್ರವಾಸಿಗರು ಕೇವಲ 38 ರನ್ಗಳಿಗೆ 7 ವಿಕೆಟ್ಗಳನ್ನು ಕಳೆದುಕೊಂಡರು. ಅವರು ಬ್ಯಾಟ್ ಮಾಡಿದ ಪರಿ ನೋಡಿದರೆ, ಪಿಂಕ್-ಬಾಲ್ ಟೆಸ್ಟ್ ಕ್ರಿಕೆಟ್ಗೆ ಇನ್ನೂ ಒಗ್ಗಿಕೊಳ್ಳಬೇಕಿದೆ ಎನ್ನುವುದು ಸ್ಪಷ್ಟವಾಯಿತು.
ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಸ್ಟೇಡಿಯಂ ಅನ್ನು ಉದ್ಘಾಟಿಸಿದ ನಂತರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೂಟ್ ತಮ್ಮ ನಿರ್ಧಾರಕ್ಕೆ ಪರಿತಪಿಸಿರುತ್ತಾರೆ. ಟೆಸ್ಟ್ ಕರೀಯರ್ನ 100ನೇ ಪಂದ್ಯವನ್ನು ಇಂದು ಆಡುತ್ತಿರುವ ಇಶಾಂತ್ ಶರ್ಮ ತಮ್ಮ ಎರಡನೇ ಓವರಿನಲ್ಲೇ ಅರಂಭ ಆಟಗಾರ ಡಾಮಿನಿಕ್ ಸಿಬ್ಲೀ ಅವರನ್ನು ಖಾತೆ ತೆರೆಯುವ ಅವಕಾಶವನ್ನೂ ನೀಡದೆ ಪೆವಲಿಯನ್ಗೆ ಕಳಿಸಿದರು. ಸ್ಲಿಪ್ಸ್ನಲ್ಲಿ ಅವರು ನೀಡಿದ ಕ್ಯಾಚನ್ನು ರೋಹಿತ್ ಶರ್ಮ ಹಿಡಿದರು.
ಅವರ ಸ್ಥಾನದಲ್ಲಿ ಆಡಲು ಬಂದ ಜಾನಿ ಬೇರ್ಸ್ಟೋ ಸಹ ರನ್ ಗಳಿಸದೆ ಪಟೇಲ್ಗೆ ಮೊದಲ ಬಲಿಯಾದರು. ಮತ್ತೊಂದೆಡೆ ಕ್ರಾಲೀ ಆಕರ್ಷಕ ಬೌಂಡರಿಗಳನ್ನು ಬಾರಿಸುತ್ತಾ ವಿಶ್ವಾಸದ ಪ್ರತಿರೂಪದಂತೆ ಗೋಚರಿಸಿದರು. ರೂಟ್ರೊಂದಿಗೆ 3ನೇ ವಿಕೆಟ್ಗೆ ಅವರು 47 ರನ್ ಸೇರಿಸಿದರು. ಏತನ್ಮಧ್ಯೆ, ಕ್ರಾಲೀ ತಮ್ಮ ಟೆಸ್ಟ್ ಕರೀಯರ್ನ 4ನೇ ಅರ್ಧ ಶತಕ ಪೂರೈಸಿದರು. ಅವರ ಡ್ರೈವ್ ಮತ್ತು ಲೆಗ್ ಸೈಡ್ನಲ್ಲಿ ಆಡಿದ ಫ್ಲಿಕ್ಗಳು ಮನಮೋಹಕವಾಗಿದ್ದವು.
ರೂಟ್ ಸಹ ಆತ್ಮವಿಶ್ವಾಸದಿಂದ ಆಡುತ್ತಿದ್ದರಾದರೂ ಅಶ್ವಿನ್ ಅವರ ಎಸೆತವೊಂದು ಅವರನ್ನು ಎಲ್ಬಿ ಬಲೆಗೆ ಕೆಡವಿತು.
ಟೀ ವಿರಾಮದ ನಂತರ ಮೊದಲು ಔಟಾಗಿದ್ದು ಕ್ರಾಲೀ. 84 ಎಸೆತಗಳಲ್ಲಿ 53 ರನ್ ಬಾರಿಸಿದ (10 ಬೌಂಡರಿಗಳು) ಅವರು ಪಟೇಲ್ಗೆ ಎರಡನೇ ಬಲಿಯಾದರು. ಅದಾದ ನಂತರ ಇಂಗ್ಲೆಂಡ್ ಆಟಗಾರರ ಮೆರವಣಿಗೆ ಶುರುವಾಯಿತು. ಪಟೇಲ್ ಮತ್ತು ಆಶ್ವಿನ್ ಹೆಣೆದ ಬಲೆಯಲ್ಲಿ ಒಬ್ಬರಾದ ನಂತರ ಒಬ್ಬರು ಬಿದ್ದರು. ಯಾರಿಂದಲೂ ಉಲ್ಲೇಖಿಸುವಂಥ ಕಾಣಿಕೆ ಬರಲಿಲ್ಲ. ಕೆಲವು ಬ್ಯಾಟ್ಸ್ಮನ್ಗಳು ಸ್ಪಿನರ್ಗಳ ಎಸೆತಗಳನ್ನು ಮೈದಾನದಿಂದ ಆಚೆ ಬಾರಿಸುವ ಪ್ರಯತ್ನದಲ್ಲಿ ವಿಕೆಟ್ ಒಪ್ಪಿಸಿದರು.
ಕೇವಲ ಎರಡನೇ ಟೆಸ್ಟ್ ಆಡುತ್ತಿರುವ ಎಡಗೈ ಸ್ಪಿನ್ನರ್ ಪಟೇಲ್ ಎರಡನೇ ಬಾರಿ 5 ವಿಕೆಟ್ ಪಡೆಯುವ ಸಾಧನೆಯನ್ನು ಮಾಡಿದರು. ಪಟೇಲ್ ಮತ್ತು ಅಶ್ವಿನ್ ತಮ್ಮ ನಡುವೆ 37.4 ಓವರ್ಗಳನ್ನು ಬೌಲ್ ಮಾಡಿ 64 ರನ್ಗಳನ್ನು ನೀಡಿ 9 ವಿಕೆಟ್ ಪಡೆದರು. ಡಿನ್ನರ್ ಅವಧಿಗೆ ಕೊಂಚ ಮೊದಲು ಭಾರತದ ಪರ ಬ್ಯಾಟಿಂಗ್ ಆರಂಭಿಸಿದ ಭಾರತೀಯರು ಯಾವುದೇ ಅತಂಕವಿಲ್ಲದೆ ಇಂಗ್ಲೆಂಡ್ ಬೌಲರ್ಗಳನ್ನು ಎದುರಿಸಿದರು.
.@akshar2026 is the ? with the ball ????
6️⃣ wickets in front of his home crowd ?️@Paytm #INDvENG #TeamIndia #PinkBallTest
Follow the match ? https://t.co/9HjQB6TZyX pic.twitter.com/PzJ2eY8jSV
— BCCI (@BCCI) February 24, 2021
ಈವರೆಗಿನ ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ (ಪ್ರಥಮ ಇನ್ನಿಂಗ್ಸ್) 112, (ಜ್ಯಾಕ್ ಕ್ರಾಲೀ 53, ಜೋ ರೂಟ್ 17ಮ ಅಕ್ಷರ್ ಪಟೇಲ್ 6/38 ರವಿಚಂದ್ರನ್ ಅಶ್ವಿನ್ 3/26)
ಇದನ್ನೂ ಓದಿ: India vs England: ಮೊದಲ ಇನ್ನಿಂಗ್ಸ್‌ನಲ್ಲಿ.. ಟೀಂ ಇಂಡಿಯಾ ಇಂದೇ ಮುನ್ನಡೆ ಸಾಧಿಸಲಿದೆಯಾ!?
Published On - 10:15 pm, Wed, 24 February 21