ಕ್ರಿಕೆಟ್ ಪ್ರೇಮಿಗಳಿಗೆ ಇಂಗ್ಲೆಂಡ್ ತಂಡ ಕಳೆದಬಾರಿ ಅಂದರೆ 2016ರಲ್ಲಿ ಭಾರತ ಪ್ರವಾಸ ಬಂದಿದ್ದು ನೆನಪಿರಬಹುದು. 5ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಪ್ರಮುಖ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರಾ ಮತ್ತು ರವಿಚಂದ್ರನ್ ಅಶ್ವಿನ್ ಮೊದಲಾದವರು ವಿಜೃಂಭಿಸಿದ್ದು ನಿಜ; ಆದರೆ ಅವರೊಂದಿಗೆ ಅಷ್ಟೇನೂ ಖ್ಯಾತರಲ್ಲದ, ಜನಪ್ರಿಯರೂ ಅಲ್ಲದ ಕೆಲ ಆಟಗಾರರು ಸಹ ಉತ್ಕೃಷ್ಟ ಪ್ರದರ್ಶನಗಳನ್ನು ನೀಡಿ ಸರಣಿ ಗೆಲುವಿನಲ್ಲಿ ಮಹತ್ತರ ಕಾಣಿಕೆ ನೀಡಿದರು. ಆದರೆ, ದುರದೃಶ್ಟವಶಾತ್ ಅವರು ನಮ್ಮ ಸ್ಮೃತಿಪಟಲಗಳಿಂದ ಈಗ ಸರಿದು ಹೋಗಿದ್ದಾರೆ. ಇಂಗ್ಲೆಂಡ್ ತಂಡ ಮತ್ತೊಂದು ಸರಣಿ ಅಡಲು ಭಾರತಕ್ಕೆ ಬಂದಿರುವ ಸಂದರ್ಭದಲ್ಲಿ ಅವರನ್ನು ನೆನೆದು ಅವರು ನೀಡಿದ ಪ್ರದರ್ಶನಗಳನ್ನು ಮೆಲಕು ಹಾಕುವುದು ಅತ್ಯಂತ ಪ್ರಸ್ತುತವೆನಿಸುತ್ತಿದೆ.
ರಾಜ್ಕೋಟ್ನಲ್ಲಿ ನಡೆದ ಮೊದಲ ಟೆಸ್ಟ್ ಡ್ರಾನಲ್ಲಿ ಮುಕ್ತಾಯಗೊಂಡ ನಂತರ ಮುಂದಿನ 4 ಟೆಸ್ಟ್ಗಳಲ್ಲಿ ಚಾಂಪಿಯನ್ಗಳಂತೆ ಆಡಿದ ವಿರಾಟ್ ಕೊಹ್ಲಿಯ ಟೀಮ್ ಅವೆಲ್ಲವನ್ನು ಸುಲಭವಾಗಿ ಗೆದ್ದು ಸರಣಿಯನ್ನು 4-0 ಯಿಂದ ತನ್ನದಾಗಿಸಿಕೊಂಡಿತ್ತು.
ಓಕೆ, ಆ ಸರಣಿಯ ಮರೆತುಹೋದ ಹಿರೋಗಳನ್ನು ನೆನಪಿಸಿಕೊಳ್ಳುವ.
ಕರುಣ್ ನಾಯರ್
ನಮ್ಮ ಹುಡುಗ ಕರುಣ್ ನಾಯರ್ನಷ್ಟು ಅದೃಷ್ಟಹೀನ ಕ್ರಿಕೆಟರ್ ವಿಶ್ವದಲ್ಲಿ ಕೇವಲ ಬೆರಳೆಣಿಕೆಯಷ್ಟಿದ್ದಾರು. ಕರುಣ್ ಆ ಸರಣಿಯ 3ನೇ ಟೆಸ್ಟ್ನಲ್ಲಿ ಪಾದಾರ್ಪಣೆ ಮಾಡಿದರು. ಮೊಹಾಲಿಯಲ್ಲಿ ನಡೆದ ಆ ಪಂದ್ಯದಲ್ಲಿ ಅವರು ಕೇವಲ 4 ರನ್ ಗಳಿಸಿ ರನೌಟ್ ಆದರು. ಎರಡನೇ ಇನ್ನಿಂಗ್ಸ್ನಲ್ಲಿ ಅವರಿಗೆ ಬ್ಯಾಟ್ ಮಾಡುವ ಅವಕಾಶ ಸಿಗಲಿಲ್ಲ. ನಂತರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 4 ನೇ ಟೆಸ್ಟ್ನಲ್ಲೂ ಅವರಿಂದ ಹೇಳಿಕೊಳ್ಳುವಂಥ ಸಾಧನೆ ಬರಲಿಲ್ಲ. ನಾಯಕ ವಿರಾಟ್ ಕೊಹ್ಲಿ ಅಮೋಘ ಡಬಲ್ ಸೆಂಚುರಿ ಬಾರಿಸಿದ ಈ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಅವರು ಕೇವಲ 13ರನ್ ಗಳಿಸಿ ಸ್ಪಿನ್ನರ್ ಮೋಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ಬಾರತ ಇನ್ನಿಂಗ್ಸ್ ಅಂತರದ ಜಯ ಸಾಧಿಸಿದ್ದರಿಂದ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡುವ ಅವಕಾಶ ಕರುಣ್ಗೆ ಸಿಗಲಿಲ್ಲ.
ಆದರೆ, ಚೆನೈಯಲ್ಲಿ ನಡೆದ 5ನೇ ಮತ್ತು ಕೊನೆಯ ಟೆಸ್ಟ್ನಲ್ಲಿ ಕರುಣ್ ಚಮತ್ಕಾರ ಮೆರೆದರು. ಅಸಲಿಗೆ ಈ ಟೆಸ್ಟ್ ಇಬ್ಬರು ಕನ್ನಡಿಗರು ವಿಜೃಂಭಿಸಿದರು. ಆರಂಭ ಆಟಗಾರನಾಗಿ ಆಡಿದ ಕೆ ಎಲ್ ರಾಹುಲ್ ಕೇವಲ ಒಂದು ರನ್ನಿಂದ ದ್ವಿಶತಕ ಮಿಸ್ ಮಾಡಿಕೊಂಡರು. ಆದರೆ, ನಾಯರ್ ತಮ್ಮ ಚೊಚ್ಚಲು ಶತಕ ದಾಖಲಿಸಿದ ನಂತರ ನಿಲ್ಲುವ ಸೂಚನೆಯನ್ನೇ ತೋರದೆ ರನ್ ಗಳಿಸುತ್ತಲೇ ಸಾಗಿ ಅಂತಿಮವಾಗಿ ತ್ರಿಶತಕವನ್ನೂ ಪೂರೈಸಿ ಅಜೇಯರಾಗುಳಿದರು. ಆ ಅಪ್ರತಿಮ ಇನ್ನಿಂಗ್ಸ್ ಪಂದ್ಯದ ವ್ಯಕ್ತಿ ಪ್ರಶಸ್ತಿಯನ್ನು ಕರುಣ್ಗೆ ದೊರಕಿಸಿತು.
ಮರುವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಯ ಮೊದಲ ಟೆಸ್ಟ್ಗೆ ಕರುಣ್ರನ್ನು ಡ್ರಾಪ್ ಮಾಡಲಾಯಿತು. ಅವರ ಆಗಿನ ಮನಸ್ಥಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಹಿಂದಿನ ಟೆಸ್ಟ್ನಲ್ಲಿ ತ್ರಿಶತಕ ಬಾರಿಸಿದ ಆಟಗಾರನಿಗೆ ಅಡುವ ಇಲೆವೆನ್ನಲ್ಲಿ ಸ್ಥಾನ ಸಿಗಲಿಲ್ಲ!!
ಸರಣಿಯ ಎರಡನೇ ಟೆಸ್ಟ್ಗೆ ಅವರು ವಾಪಸ್ಸಾದರೂ ಅವರ ಆತ್ಮವಿಶ್ವಾಸಕ್ಕೆ ಭಾರೀ ಧಕ್ಕೆಯಾಗಿತ್ತು, ಅದಾದ ಮೇಲೆ ಅವರನ್ನು 2018ರ ಇಂಗ್ಲೆಂಡ್ ಪ್ರವಾಸಕ್ಕೂ ಕರದೊಯ್ಯಲಾಗಿತ್ತು. ಆದರೆ ಭಾರತ 1-4 ಅಂತರದಿಂದ ಸೋತ ಆ ಸರಣಿಯಲ್ಲಿ ಅವರಿಗೆ ಆಡುವ ಒಂದು ಅವಕಾಶವೂ ಸಿಗಲಿಲ್ಲ.
ಅಲ್ಲಿಂದೀಚೆಗೆ ಕರುಣ್ ತೆರೆಮೆರೆಗೆ ಸರಿದುಬಿಟ್ಟರು. ಕೊನಯ ಬಾರಿ ಅವರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದು ಇಂಡಿಯಾ ‘ಎ’ ಪರವಾಗಿ, ದಕ್ಷಿಣ ಆಫ್ರಿಕಾ ವಿರುದ್ಧ ಮೈಸೂರಿನಲ್ಲಿ ಆಡಿದ ಪ್ರಥಮ ದರ್ಜೆ ಪಂದ್ಯವೊಂದರಲ್ಲಿ. ಅಲ್ಲಿ ಅವರು ಎರಡೂ ಇನ್ನಿಂಗ್ಸ್ಗಳಲ್ಲಿ ಅರ್ಧ ಶತಕ ಬಾರಿಸಿದರಾದರೂ, ಆಯ್ಕೆ ಸಮಿತಿ ಅವರ ಪ್ರದರ್ಶನವನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಜಯಂತ್ ಯಾದವ್
ಅದೇ ಸರಣಿಯಲ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್ ರಂಗಕ್ಕೆ ಪಾದಾರ್ಪಣೆ ಮಾಡಿದ ಜಯಂತ್ ಯಾದವ್ ನಿಮಗೆ ನೆನಪಿದೆಯೇ? ಸದರಿ ಸರಣಿಯಲ್ಲಿ ಈ ಆಫ್-ಸ್ಪಿನ್ನಿಂಗ್ ಅಲ್ರೌಂಡರ್ 29.55 ಸರಾಸರಿಯೊಂದಿಗೆ 9 ವಿಕೆಟ್ ಪಡೆದಿದ್ದೂ ಅಲ್ಲದೆ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದು ಶತಕ ಬಾರಿಸಿ ಸರಣಿಯನ್ನು 73.66 ಸರಾಸರಿಯೊಂದಿಗೆ ಮುಗಿಸಿದರು.
ಆಸ್ಟ್ರೇಲಿಯಾ ವಿರುದ್ಧ ಸರಣಿ ನಡೆಯುತ್ತಿದ್ದಾಗ ತೊಡೆಸ್ನಾಯು ಸೆಳೆತಕ್ಕೊಳಗಾದ ಯಾದವ್ರ ಕರೀಯರ್ ಹಠಾತ್ತಾಗಿ ಕೊನೆಗೊಂಡಿತು. ಆಸ್ಸೀಗಳ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಅವರು ಆಡಿದರಾದರೂ ಅಲ್ಲೂ ಬೆರಳಿಗೆ ಗಾಯಮಾಡಿಕೊಂಡರು. ಅದಾದ ಮೇಲೆ ಯಾದವ್ ನೇಪಥ್ಯಕ್ಕೆ ಸರಿದರು. ಕರುಣ್ ನಾಯರ್ರಂತೆ ಯಾದವ್ ಸಹ ಶ್ರೀಲಂಕಾ ವಿರುದ್ಧ ಭಾರತ ‘ಎ’ ಪರ ಕೊನೆಯ ಬಾರಿಗೆ ಆಡಿದರು.
ಮುರಳಿ ವಿಜಯ್
ಇಂಗ್ಲೆಂಡ್ ವಿರುದ್ಧ 2016ರ ಸರಣಿಯಲ್ಲಿ ಎರಡು ಶತಕ ಬಾರಿಸಿದ ಆರಂಭ ಆಟಗಾರ ಮುರಳಿ ವಿಜಯ್ ತಾಂತ್ರಿಕವಾಗಿ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದರು. ಸರಣಿಯ ಮೊದಲ ಟೆಸ್ಟ್ನಲ್ಲ್ಲಿ ಶತಕ ಬಾರಿಸಿದ ಅವರು ಕೊನೆಯ ಟೆಸ್ಟ್ನಲ್ಲೂ ಶತಕ ದಾಖಲಿಸಿದರು.
2018ರ ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಬಹಳ ಕೆಟ್ಟದ್ದಾಗಿ ವಿಫಲರಾದರು. ಲಾರ್ಡ್ಸ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಶೂನ್ಯಕ್ಕೆ ಔಟಾದ ನಂತರ ಅವರನ್ನು ತಂಡದಿಂದ ಡ್ರಾಪ್ ಮಾಡಲಾಯಿತು. ಅ ಸರಣಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ 6.5 ಆಗಿತ್ತು.
ಪಾರ್ಥೀವ್ ಪಟೇಲ್
ಮೊನ್ನೆಯಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಪಾರ್ಥೀವ್ ಪಟೇಲ್ ಸದರಿ ಸರಣಿಯ ಮೊಹಾಲಿ ಟೆಸ್ಟ್ನಲ್ಲಿ 8 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ಗೆ ಕಮ್ ಬ್ಯಾಕ್ ಮಾಡಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 42 ರನ್ ಬಾರಿಸಿದ ನಂತರ ಎರಡನೆಯದರಲ್ಲಿ ಬಿರುಸಿನ ಅಜೇಯ 54 ರನ್ ಬಾರಿಸಿ ಬಾರತಕ್ಕೆ ದೊರೆತ 8 ವಿಕೆಟ್ಗಳ ಗೆಲುವಿನಲ್ಲಿ ದೊಡ್ಡ ಪಾತ್ರ ನಿರ್ವಹಿಸಿದ್ದರು.
ಚೆನೈಯಲ್ಲಿ ನಡೆದ ಕೊನೆಯ ಟೆಸ್ಟ್ನಲ್ಲಿ ಪಾರ್ಥೀವ್ ಪಟೇಲ್ ತಮ್ಮ ಟೆಸ್ಟ್ ಕರೀಯರ್ನ 6ನೇ ಮತ್ತು ಕೊನೆಯ ಅರ್ಧ ಶತಕ ಬಾರಿಸಿದರು. ಅದಾದ ಮೇಲೆ 2018ರಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ಗಳನ್ನಾಡಿದರು.
ಪ್ರತಿಭಾವಂತರಾಗಿದ್ದ ಅವರನ್ನು ಕೇವಲ ಒಬ್ಬ ಬದಲೀ ವಿಕೆಟ್ಕೀಪರ್-ಬ್ಯಾಟ್ಸ್ಮನ್ನಂತೆ ಬಳಸಿದ್ದು ಅನಿವಾರ್ಯವಾಗಿತ್ತು. ಅವರನ್ನು ಆಡಿಸಬೇಕಾದರೆ ಮಹೇಂದ್ರಸಿಂಗ್ ಧೋನಿಯನ್ನು ಡ್ರಾಪ್ ಮಾಡಬೇಕಿತ್ತು, ಅದು ಸಾಧ್ಯವಿರಲಿಲ್ಲ.
ಕರುಣ್, ಯಾದವ್, ಮುರಳಿ ಮತ್ತು ಪಟೇಲ್ 2016ರ ಸರಣಿಯಲ್ಲಿ ಮಿಂಚಿದವರು. ಅವರು ನಮಗೆ ಒದಗಿಸಿದ ಮನರಂಜನೆಗೆ ಮತ್ತು ದೇಶಕ್ಕೆ ಆಟಗಾರರಾಗಿ ಸಲ್ಲಿಸಿದ ಸೇವೆಗೆ ಧನ್ಯವಾದಗಳನ್ನು ಹೇಳಲೇಬೇಕು.
ಭಾರತ ಮೂಲದ ಟ್ಯಾಕ್ಸಿ ಡ್ರೈವರ್ ಮಗ ಕಾಂಗರೂಗಳ ಪರ ಕ್ರಿಕೆಟ್ ಮೈದಾನಕ್ಕಿಳಿಯಲ್ಲಿದ್ದಾನೆ.. ಯಾರು ಈ 19ರ ಪೋರ?
Published On - 9:21 pm, Tue, 2 February 21