ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ 4ನೇ ಟಿಟ್ವೆಂಟಿ ಪಂದ್ಯ ಟೀಮ್ ಇಂಡಿಯಾ ಪಾಲಿಗೆ, ಪಾಲಿಗೆ ಅಳಿವು ಉಳಿವಿನ ಪಂದ್ಯವಾಗಿದೆ. ಮೊದಲ ಟಿಟ್ವೆಂಟಿಯಲ್ಲಿ ಸೋತು.. 2ನೇ ಟಿಟ್ವೆಂಟಿಯಲ್ಲಿ ಗೆದ್ದು ಬೀಗಿದ ಕೊಹ್ಲಿ ಪಡೆ 3ನೇ ಟಿಟ್ವೆಂಟಿ ಪಂದ್ಯದಲ್ಲಿ ಮತ್ತೊಮ್ಮೆ ಮುಗ್ಗರಿಸಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1ರ ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಇಂದು ನರೇಂದ್ರ ಮೋದಿ ಮೈದಾನದಲ್ಲಿ ನಡೆಯೋ 4ನೇ ಪಂದ್ಯ, ಟೀಮ್ ಇಂಡಿಯಾ ಪಾಲಿಗೆ ಅಳಿವು ಉಳಿವಿನ ಪಂದ್ಯವಾಗಿದೆ.
ಇಂಗ್ಲೆಂಡ್ ವಿರುದ್ಧ ಕೊಹ್ಲಿ ಪಡೆಯ ಅಳಿವು ಉಳಿವಿನ ಪಂದ್ಯ
ಮೋದಿ ಮೈದಾನದಲ್ಲಿ ಟಾಸ್ ಗೆದ್ದವನೇ ಬಾಸ್ ಅನ್ನೋದು ಕಳೆದ ಮೂರು ಪಂದ್ಯಗಳಲ್ಲೂ ಸಾಬೀತಾಗಿದೆ. ಇಂಗ್ಲೆಂಡ್ ಎರಡು ಪಂದ್ಯಗಳಲ್ಲಿ ಟಾಸ್ ಗೆದ್ದು ಗೆಲುವು ದಾಖಲಿಸಿದ್ರೆ, ಟೀಮ್ ಇಂಡಿಯಾ ಒಂದು ಪಂದ್ಯದಲ್ಲಿ ಟಾಸ್ ಗೆದ್ದು ಜಯದ ನಗೆ ಬೀರಿದೆ. ಹೀಗಾಗಿ ಇಂದು ನಡೆಯೋ 4ನೇ ಟಿಟ್ವೆಂಟಿ ಪಂದ್ಯದಲ್ಲಿ, ಟೀಮ್ ಇಂಡಿಯಾ ಗೆಲುವಿಗೆ ಟಾಸ್ ಬಹುಮುಖ್ಯ ಪಾತ್ರ ವಹಿಸಲಿದೆ. ಒಂದು ವೇಳೆ ಕ್ಯಾಪ್ಟನ್ ಕೊಹ್ಲಿ ಟಾಸ್ ಗೆದ್ದಿದ್ದೆ ಆದ್ರೆ, ಇಂಗ್ಲೆಂಡ್ಗೆ ಸೋಲಿನ ರುಚಿ ತೋರಿಸೋದ್ರಲ್ಲಿ ಅನುಮಾನವೇ ಇರೋದಿಲ್ಲ.
ಕಳೆದ ಪಂದ್ಯದ ಸೋಲಿನಿಂದ ವಿಚಲಿತರಾಗದ ಕ್ಯಾಪ್ಟನ್ ಕೊಹ್ಲಿ, ಇಂದು ಆಂಗ್ಲರನ್ನ ಬಗ್ಗು ಬಡಿಯೋಕೆ ರಣತಂತ್ರ ರೂಪಿಸಿದ್ದಾರೆ. ಆರಂಭಿಕ ಕನ್ನಡಿಗ ಕೆ.ಎಲ್.ರಾಹುಲ್ ಕಳೆದ ಮೂರು ಪಂದ್ಯಗಳಲ್ಲಿ ಮುಗ್ಗರಿಸಿದ್ರೂ, ಕೊಹ್ಲಿ ಇಂದಿನ ಪಂದ್ಯದಲ್ಲೂ ರಾಹುಲ್ರನ್ನ ಆರಂಭಿಕನಾಗಿ ಕಣಕ್ಕಿಳಿಸೋದಾಗಿ ತಿಳಿಸಿದ್ದಾರೆ.
ಬೌಲಿಂಗ್ ಕಾಂಬಿನೇಷ್ನಲ್ಲಿ ಕೆಲ ಬದಲಾವಣೆ
ಮತ್ತೊಂದೆಡೆ ಟೀಮ್ ಇಂಡಿಯಾ ಬೌಲರ್ಗಳು ನಿಗದಿತ ಗುರಿ ಕಾಪಾಡಿಕೊಳ್ಳುವಲ್ಲಿ ವಿಫಲರಾಗ್ತಿದ್ದಾರೆ. ಇದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ, ಬೌಲಿಂಗ್ ಕಾಂಬಿನೇಷ್ನಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆಯಿದೆ.
ಇತ್ತ ಇಂಗ್ಲೆಂಡ್ ಸರಣಿ ಗೆಲುವಿಗೆ ಇನ್ನೊಂದೇ ಒಂದು ಗೆಲುವಿನ ಅವಶ್ಯಕತೆಯಿದೆ. ಹೀಗಾಗಿ ಯಾವುದೇ ಒತ್ತಡವಿಲ್ಲದೇ ಕಣಕ್ಕಿಳಿಯುತ್ತಿರುವ ಇಯಾನ್ ಮಾರ್ಗನ್ ಪಡೆ, ಇಂದೇ ಸರಣಿ ಗೆಲುವಿನ ಸಂಭ್ರಮಾಚರಣೆ ಮಾಡೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಒಟ್ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಇಂದಿನ ಪಂದ್ಯ, ಸರಣಿ ಗೆಲುವಿಗೆ ನಿರ್ಣಾಯಕ ಪಂದ್ಯವಾಗಿದೆ. ಹೀಗಾಗಿ ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಇಂಗ್ಲೆಂಡ್ಗೆ ಇಂದು ಮಣ್ಣು ಮುಕ್ಕಿಸಬೇಕು. ಈ ಮೂಲಕ ಕೊನೆ ಪಂದ್ಯದ ಫೈನಲ್ ಹಣಾಹಣಿಯನ್ನ ಜೀವಂತವಾಗಿರಿಸಿ, ಅಭಿಮಾನಿಗಳ ಕುತೂಹಲ ಹೆಚ್ಚಾಗುವಂತೆ ಮಾಡುವ ಜವಾಬ್ದಾರಿ ಕೊಹ್ಲಿ ಪಡೆ ಮೇಲಿದೆ.
ಇದನ್ನೂ ಓದಿ: India vs England: ರಾಹುಲ್ ನಮ್ಮ ಚಾಂಪಿಯನ್ ಬ್ಯಾಟ್ಸ್ಮನ್ ಅಂತ ಹೇಳಿ ಕನ್ನಡಿಗನ ಬೆಂಬಲಕ್ಕೆ ನಿಂತ ಕ್ಯಾಪ್ಟನ್ ವಿರಾಟ್ ಕೊಹ್ಲಿ