ಭಾರತ-ಶ್ರೀಲಂಕಾ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಟೀಮ್ ಇಂಡಿಯಾ 7 ವಿಕೆಟ್ಗಳ ಜಯ ಸಾಧಿಸಿದೆ. ಇನ್ನು ಎರಡು ಪಂದ್ಯಗಳಲ್ಲಿ ಒಂದರಲ್ಲಿ ಜಯಿಸಿದರೂ ಶಿಖರ್ ಧವನ್ ನೇತೃತ್ವದಲ್ಲಿ ಭಾರತ ಸರಣಿ ಗೆಲ್ಲಲಿದೆ. ಆದರೆ ಅತ್ತ ಲಂಕಾ ಪಡೆಗೆ ಉಳಿದ 2 ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಅದರಲ್ಲೂ ಯುವ ಪಡೆಯನ್ನು ಒಳಗೊಂಡಿರುವ ಟೀಮ್ ಇಂಡಿಯಾವನ್ನು ಬಗ್ಗು ಬಡಿಯುವ ಮೂಲಕ ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿ ಶ್ರೀಲಂಕಾ ತಂಡ. ಏಕೆಂದರೆ ಪ್ರಸ್ತುತ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಘಟಾನುಘಟಿಗಳಿಲ್ಲ. ಹೀಗಾಗಿ ಈ ಬಾರಿಯಾದರೂ ಭಾರತದ ವಿರುದ್ದ ಸರಣಿ ಗೆಲ್ಲಲೇಬೇಕೆಂಬ ತುಡಿತದಲ್ಲಿ ದಾಸುನ್ ಶನಕಾ ಪಡೆ.
ಉಭಯ ತಂಡಗಳು ಇದುವರೆಗೆ 159 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಟೀಮ್ ಇಂಡಿಯಾ 91 ಬಾರಿ ಭರ್ಜರಿ ಜಯ ಸಾಧಿಸಿದರೆ, 56 ಬಾರಿ ಶ್ರೀಲಂಕಾ ಗೆಲುವು ದಾಖಲಿಸಿತ್ತು. ಇನ್ನು ಒಂದು ಪಂದ್ಯವು ಟೈ ಆದರೆ, 11 ಪಂದ್ಯಗಳಲ್ಲಿ ಫಲಿತಾಂಶ ಮೂಡಿಬಂದಿರಲಿಲ್ಲ. ಹಾಗೆಯೇ 1985 ರಿಂದ ಭಾರತ-ಶ್ರೀಲಂಕಾ ದ್ವಿಪಕ್ಷೀಯ ಸರಣಿ ಆಡುತ್ತಿದೆ. ಅದರಲ್ಲೂ ಲಂಕಾ ವಿರುದ್ಧ ಭಾರತ ಮೇಲುಗೈ ಹೊಂದಿದೆ. ಇಲ್ಲಿ ವಿಶೇಷ ಎಂದರೆ ಶ್ರೀಲಂಕಾ ತಂಡವು ಭಾರತದ ವಿರುದ್ದ ಏಕದಿನ ಸರಣಿ ಗೆದ್ದು 2 ದಶಕಗಳೇ ಕಳೆದಿವೆ.
ಹೌದು, ಕೊನೆಯ ಬಾರಿ ಶ್ರೀಲಂಕಾ ತಂಡವು ಭಾರತದ ವಿರುದ್ದ ಏಕದಿನ ಸರಣಿ ಗೆದ್ದಿದ್ದು 1997 ರಲ್ಲಿ ಎಂದರೆ ನಂಬಲೇಬೇಕು. 1997ರಲ್ಲಿ ಆಗಸ್ಟ್ 17 ರಿಂದ ಆಗಸ್ಟ್ 23ರವರೆಗೆ ನಡೆದಿದ್ದ 4 ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾ ವಶಪಡಿಸಿಕೊಂಡಿತ್ತು. ಮೊದಲ ಪಂದ್ಯದಲ್ಲಿ ಲಂಕಾ 2 ರನ್ಗಳ ರೋಚಕ ಜಯ ಸಾಧಿಸಿದರೆ, 2ನೇ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ತನ್ನದಾಗಿಸಿಕೊಂಡಿತು. 3ನೇ ಪಂದ್ಯವು ಮಳೆಯ ಕಾರಣ ರದ್ದಾಗಿತ್ತು. 4ನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಸಚಿನ್ ತೆಂಡೂಲ್ಕರ್ ಬೌಲಿಂಗ್ ಆಯ್ದುಕೊಂಡರು. ಶ್ರೀಲಂಕಾದ ಸ್ಪೋಟಕ ಬ್ಯಾಟ್ಸ್ಮನ್ ಅರವಿಂದ ಡಿಸಿಲ್ವಾ (104) ಅವರ ಭರ್ಜರಿ ಶತಕದ ನೆರವಿನಿಂದ ಲಂಕಾ ಅಂದು ನಿಗದಿತ 50 ಓವರ್ನಲ್ಲಿ 264 ರನ್ ಕಲೆಹಾಕಿತು.
ಈ ಸವಾಲಿನ ಮೊತ್ತ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆಯಿತು. ಸಚಿನ್ ತೆಂಡೂಲ್ಕರ್ 32 ಎಸೆತಗಳಲ್ಲಿ 39 ಭಾರತಕ್ಕೆ ಭರ್ಜರಿ ಆರಂಭ ನೀಡಿದರು. ಆದರೆ ಡಿಸಿಲ್ವಾ ಎಸೆತದಲ್ಲಿ ಸೌರವ್ ಗಂಗೂಲಿ (17) ಔಟಾಗುವ ಮೂಲಕ ಬೇಗನೆ ನಿರ್ಗಮಿಸಿದರು. ಆ ಬಳಿಕ ಬಂದ ಅಜಯ್ ಜಡೇಜಾ (22), ರಾಬಿನ್ ಸಿಂಗ್ (28), ರಾಹುಲ್ ದ್ರಾವಿಡ್ (42) ಕೊಂಚ ಪ್ರತಿರೋಧ ತೋರಿದ್ದರು. ಇದಾಗ್ಯೂ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಹಮ್ಮದ್ ಅಜರುದ್ದೀನ್ 65 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆದರೆ ಶ್ರೀಲಂಕಾ ಬೌಲರುಗಳ ಸಾಂಘಿಕ ದಾಳಿ ಮುಂದೆ ಟೀಮ್ ಇಂಡಿಯಾ ಮುಂಡಿಯೂರಲೇಬೇಕಾಯಿತು. ಅದರಂತೆ ಭಾರತ ತಂಡವು 9 ರನ್ಗಳಿಂದ ಸೋಲನುಭವಿಸಿತು. ಈ ಸರಣಿಯನ್ನು 3-0 ಅಂತರದಿಂದ ಗೆಲ್ಲುವ ಮೂಲಕ ಶ್ರೀಲಂಕಾ ಭಾರತವನ್ನು ವೈಟ್‌ವಾಶ್ ಮಾಡಿತು. ಆದರೆ ಆ ವೈಟ್‌ವಾಶ್ ಸೋಲಿನ ಬಳಿಕ ಮತ್ತೆಂದೂ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ದ ಸರಣಿ ಸೋತಿಲ್ಲ ಎಂಬುದೇ ಅಚ್ಚರಿ. ಅಂದರೆ ಕಳೆದ 24 ವರ್ಷಗಳಿಂದ ಭಾರತದ ವಿರುದ್ದ ಶ್ರೀಲಂಕಾ ತಂಡ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿಲ್ಲ.
ಇದೀಗ ದಾಸುನ್ ಶನಕಾ ನೇತೃತ್ವದ ಲಂಕಾ ಪಡೆ ಭಾರತದ ಯುವ ಪಡೆಯನ್ನು ಎದುರಿಸುತ್ತಿದೆ. ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದ್ದು, 2ನೇ ಪಂದ್ಯವನ್ನು ಗೆಲ್ಲುವ ಮೂಲಕ ಶಿಖರ್ ಧವನ್ ನೇತೃತ್ವದ ಯುವಪಡೆ ದ್ವಿಪಕ್ಷೀಯ ಸರಣಿ ಗೆಲುವಿನ ನಾಗಲೋಟವನ್ನು 25ನೇ ವರ್ಷಕ್ಕೆ ಕೊಂಡೊಯ್ಯುವ ವಿಶ್ವಾಸದಲ್ಲಿದೆ.
Published On - 4:14 pm, Tue, 20 July 21