ನಾಳೆಯಿಂದ ಟಿ20 ಸರಣಿ, ಭಾರತ ಆತ್ಮವಿಶ್ವಾಸದಿಂದ ಮೈದಾನಕ್ಕಿಳಿಯಲಿದೆ!

|

Updated on: Dec 03, 2020 | 8:38 PM

ನಾಳೆಯಿಂದ ಟಿ20 ಪಂದ್ಯಗಳ ಆರ್ಭಟ ಶುರುವಾಗಿದೆ. ಈ ಆವೃತ್ತಿಯಲ್ಲಿ ಭಾರತ 50-ಓವರ್​ಗಳ ಪಂದ್ಯಗಳಿಗಿಂತ ಹೆಚ್ಚು ಬಲಶಾಲಿಯೆಂದು ಪರಿಣಿತರು ಹೇಳುತ್ತಾರೆ. ಆದರೆ, ಟೀಮ್ ಆಸ್ಟ್ರೇಲಿಯ ಸಹ ಶಕ್ತಿಶಾಲಿಯಾಗಿರುವುದರ ಜೊತೆಗೆ ತನ್ನ ನೆಲದಲ್ಲೇ ಆಡುತ್ತಿರುವುದರಿಂದ ಅದನ್ನು ಮಣಿಸಲು ಭಾರತ ತನ್ನಿಡೀ ಸಾಮರ್ಥ್ಯವನ್ನು ಪಣಕ್ಕಿಡಬೇಕಿದೆ

ನಾಳೆಯಿಂದ ಟಿ20 ಸರಣಿ, ಭಾರತ ಆತ್ಮವಿಶ್ವಾಸದಿಂದ ಮೈದಾನಕ್ಕಿಳಿಯಲಿದೆ!
Follow us on

ವಾಷಿಂಗ್ಟನ್ ಸುಂದರ್

ಕೆ ಎಲ್ ರಾಹುಲ್

ಒಂದು ದಿನದ ಪಂದ್ಯಗಳ ಸರಣಿ ಈಗ ಇತಿಹಾಸದ ಭಾಗವಾಗಿದೆ. ಕೊನೆಯ ಪಂದ್ಯವನ್ನು 13 ರನ್​ಗಳಿಂದ ಗೆದ್ದ ಭಾರತ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ನಾಳೆಯಿಂದ (ಶುಕ್ರವಾರ) ಆರಂಭವಾಗಲಿರುವ ಮೂರು ಪಂದ್ಯಗಳ ಟಿ20ಕ್ರಿಕೆಟ್ ಸರಣಿಗೆ ಬೇಕಾಗಿದ್ದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಭಾರತಕ್ಕಿರುವ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ, ನಾಳಿನ ಮೊದಲ ಟಿ20 ಕ್ರಿಕೆಟ್ ಪಂದ್ಯ ಸಹ ನಿನ್ನೆ ಕೊಹ್ಲಿ ಪಡೆ ಅತಿಥೇಯರನ್ನು ಮಣಿಸಿದ ಕ್ಯಾನ್​ಬೆರಾದ ಮನೌಕ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಒಂದು ದಿನದ ಪಂದ್ಯಗಳಿಗೆ ಹೋಲಿಸಿದರೆ, ಟೀಮ್ ಇಂಡಿಯ ಹೆಚ್ಚು ಬಲಶಾಲಿಯಾಗಿದೆಯೆಂದರೆ ಉತ್ಪ್ರೇಕ್ಷೆಯೆನಿಸದು. ಈ ಆವೃತ್ತಿಯಲ್ಲಿ ಭಾರತದ ಪ್ರದರ್ಶನಗಳು ಎದುರಾಳಿಗಳನ್ನು ಸ್ವಲ್ಪ ದಿಗಿಲುಗೊಳಿಸುವುದು ನಿಜ. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲೂ ಕಿಂಗ್. ಅಲ್ಲದೆ ಅವರು ಉತ್ತಮ ಫಾರ್ಮ್​ನಲ್ಲಿದ್ದಾರೆ. ನಿನ್ನೆಯ ಅನೌಪಚಾರಿಕ ಪಂದ್ಯದಲ್ಲಿನ ಗೆಲವು ಟೀಮಿಗೆ ಅಗತ್ಯವಿದ್ದ ಬೂಸ್ಟ್ ನೀಡಿದೆಯೆಂದು ಕೊಹ್ಲಿ ಹೇಳಿದ್ದಾರೆ.

ಟೀಮಿನಲ್ಲಿ ಹೆಚ್ಚು ಆಲ್​ರೌಂಡರ್​ಗಳು ಲಭ್ಯವಿರುವುದರಿಂದ ನಾಳೆಯ ಪಂದ್ಯಕ್ಕೆ ಆಡುವ ಎಲೆವೆನ್ ಅಂತಿಮಗೊಳಿಸಲು ಕೊಹ್ಲಿಗೆ ಸಾಕಷ್ಟು ಆಪ್ಷನ್​ಗಳಿವೆ. ಅವರೊಂದಿಗೆ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುವ ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಸೇವೆ ಕೊಹ್ಲಿಗೆ ಸಿಗಲಿದೆ. ಪಾಂಡ್ಯ ಬೌಲ್ ಮಾಡುತ್ತಿಲ್ಲವಾದರೂ ಅಗತ್ಯ ಬಿದ್ದರೆ ಎರಡನೇ ಒಂದು ದಿನದ ಪಂದ್ಯದಲ್ಲಂತೆ ಒಂದೆರಡು ಓವರ್​ಗಳನ್ನು ಎಸೆಯುವುದಾಗಿ ಹೇಳಿದ್ದಾರೆ.

ಆರಂಭ ಆಟಗಾರನ ಸ್ಥಾನಗಳಿಗೂ ಟೀಮಿನಲ್ಲೂ ಸಾಕಷ್ಟು ಸ್ಫರ್ಧೆಯಿದೆ. ಶಿಖರ್ ಧವನ್ ಎಡಚನಾಗಿರುವುದರಿಂದ ಅವರಿಗೆ ಜೊತೆಗಾರನಾಗಿ ಆಡಿಸಲು ಕೆ ಎಲ್ ರಾಹುಲ್, ಮಾಯಾಂಕ್ ಆಗರ್​ವಾಲ್ ಮತ್ತು ಸಂಜು ಸ್ಯಾಮ್ಸನ್ ಇದ್ದಾರೆ. ಆದರೆ, ಸ್ಯಾಮ್ಸನ್ ಮತ್ತು ಮಾಯಾಂಕ್ ಅವರನ್ನು ಆಡಿಸುವುದು ಸಾಧ್ಯವಾಗಲಿಕ್ಕಿಲ್ಲ. ರಾಹುಲ್ ಚೆನ್ನಾಗಿ ಬ್ಯಾಟ್ ಮಾಡುವುದರ ಜೊತೆಗೆ ವಿಕೆಟ್​ಗಳ ಹಿಂದೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಂಬರ್ ಮೂರು ಕೊಹ್ಲಿ, ನಾಲ್ಕು ಶ್ರೇಯಸ್ ಅಯ್ಯರ್, ಐದನೆ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಮತ್ತು ನಂತರದ ಕ್ರಮಾಂಕಗಳಲ್ಲಿ ಪಾಂಡ್ಯ, ಸುಂದರ್ ಮತ್ತು ಜಡೇಜಾ ಅಡುತ್ತಾರೆ.

ಬೌಲಿಂಗ್ ದಾಳಿಯ ವಿಷಯವನ್ನು ನೋಡುವುದಾದರೆ, ಜಸ್ಪ್ರೀತ್ ಬುಮ್ರಾ ಜೊತೆ ಯಾರನ್ನು ಕೊಹ್ಲಿ ಬೌಲಿಂಗ್ ದಾಳಿಗಿಳಿಸುತ್ತಾರೆ ಎನ್ನುವುದು ಕುತೂಹಲಕಾರಿ ಸಂಗತಿಯಾಗಿದೆ. ಸುಂದರ್ ಹೊಸ ಚೆಂಡಿನಿಂದ ಪರಿಣಾಮಕಾರಿಯಾಗಿ ಬೌಲ್ ಮಾಡಬಲ್ಲರು. ವೇಗದ ಬೌಲರ್ ದೀಪಕ್ ಚಹರ್, ಮೊಹಮ್ಮದ್ ಶಮಿ ಮತ್ತು ಯಾರ್ಕರ್ ಪರಿಣಿತ ಟಿ ನಟರಾಜನ್ ಸಹ ಲಭ್ಯರಿರುತ್ತಾರೆ. ಅದಕ್ಕೇ ಹೇಳಿದ್ದು, ಅಂತಿಮ ಇಲೆವೆನ್ ಆಯ್ಕೆಗೆ ಕೊಹ್ಲಿಗೆ ಆರೋಗ್ಯಕರ ತಲೆನೋವು ಎದುರಾಗಲಿದೆ.

ಅತ್ತ, ಅತಿಥೇಯರಿಗೆ, ವಾರ್ನರ್ ಲಭ್ಯರಿಲ್ಲದಿರುವುದರಿಂದ ನಾಯಕ ಆರನ್ ಫಿಂಚ್ ಜೊತೆ ಮಾರ್ನಸ್ ಲಬುಶೇನ್ ಇನ್ನಿಂಗ್ಸ್ ಅರಂಭಿಸಬಹುದು ಇಲ್ಲವೇ ಮಾರ್ಕಸ್ ಸ್ಟಾಯ್ನಿಸ್ ಅವರನ್ನ ಪ್ರಯತ್ನಿಸಬಹುದು. ಒಂದು ದಿನದ ಪಂದ್ಯಗಳ ಸರಣಿ ಗೆದ್ದ ನಂತರ ಟಿ20 ಪಂದ್ಯಗಳ ಸರಣಿ ಶುರುವಾಗುವ ಮೊದಲು ವಿಶ್ರಾಂತಿ ಸಿಗಲೆಂದೇ ಟೀಮಿನ ಪ್ರಮುಖ ಬೌಲರ್​ಗಳಾದ ಪ್ಯಾಟ್​ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರನ್ನು ಮೂರನೆ ಪಂದ್ಯದಲ್ಲಿ ಆಡಿಸಿರಲಿಲ್ಲ.

ಭಾರತದ ಸಾಮರ್ಥ್ಯ ಏನೇ ಆಗಿರಲಿ, ಆಸ್ಸೀಗಳನ್ನ ಅವರ ಹಿತ್ತಲಲ್ಲೇ ಎದುರಿಸುತ್ತಿರುವುದರಿಂದ ಯಾಮಾರುವದಕ್ಕೆ, ರಿಲ್ಯಾಕ್ಸ್ ಆಗುವುದಕ್ಕೆ ಕೊಂಚವೂ ಅವಕಾಶವಿಲ್ಲ.

ಟೀಮ್ ಆಸ್ಟ್ರೇಲಿಯ